ಬೈಂದೂರು : ಮುಂದಿನ ಎರಡು ವರ್ಷಗಳಲ್ಲಿ ಬೈಂದೂರಿನ ಎಲ್ಲಾ ರಸ್ತೆಗಳು ಕಾಂಕ್ರೇಟಿಕರಣ, ಶ್ರೀಸೇನೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಎಲ್ಲರ ಸಹಭಾಗಿತ್ವದಲ್ಲಿ ಬೈಂದೂರನ್ನು ಮಾದರಿಯನ್ನಾಗಿಸಲು ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಸೂಚನೆ ಮೇರೆಗೆ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಮುಂದಾಳತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾಸ್ಟರ್ ಫ್ಲಾನ್ ಸಿದ್ಧವಾಗಿದೆ ಎಂದು ತಾಪಂ ಸದಸ್ಯ ಎಸ್.ರಾಜು ಪೂಜಾರಿ ಹೇಳಿದರು.
ಬೈಂದೂರು ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಾರದಾ ವೇದಿಕೆಯಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸುರಭಿ ಸಂಸ್ಥೆ ಆಯೋಜಿಸಿದ ಸುರಭಿ ಕಲಾಸಿರಿ ನಾಟ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ತಮ್ಮ ಊರಿನ ಅಭಿವೃದ್ಧಿ ಕಾರ್ಯಗಳಿಗೆ ಜನಸಾಮಾನ್ಯರೂ ಕೈಜೋಡಿಸಬೆಕು ಎಂದ ಅವರು ಇಂದಿನ ಈ ಕಾರ್ಯಕ್ರಮ ಜಾತ್ರೆಗೆ ವಿಶೇಷ ಕಳೆಕೊಟ್ಟಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವಂತಾಗಬೇಕು ಎಂದರು.
ಸೌಖ್ಯ ಸಮುಹ ಶಿಕ್ಷಣ ಸಂಸ್ಥೆ ಆಡಳಿತ ನಿರ್ದೇಶಕ ರಿಯಾಜ್ ಅಹಮದ್ ಮಾತನಾಡಿ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಬೈಂದೂರಿನ ಜನ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಇಂದಿನವರೆಗೂ ಯವೂದೇ ಕೊಮುಗಲಭೆ, ಅಹಿತಕರ ಘಟನೆ ಸಂಭವಿಸಲಿಲ್ಲ. ಮೂರು ಧರ್ಮಿಯರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬೆರೆತು ಬಾಳುತ್ತಿರುವುದು ಈ ದೇಶಕ್ಕೆ ಮಾದರಿ ಎನ್ನಬಹುದು. ಸೇನೇಶ್ವರ ದೇವರ ರಥೋತ್ಸವದ ಆಮಂತ್ರಣವನ್ನು ವಾದ್ಯಘೋಷದೊಂದಿಗೆ ಮಸೀದಿಗೆ ಬಂದು ನೀಡುವ ಸಂಪ್ರದಾಯ ಪರಂಪರಗತವಾಗಿ ಇಂದಿಗೂ ನಡೆದುಕೊಂಡು ಬಂದಿರುವುದು ಎರಡು ಧರ್ಮಗಳ ಧಾರ್ಮಿಕ ಬೆಸುಗೆಯಾಗಿದೆ ಎಂದರು.
ಶಾಸಕ ಕೆ.ಗೋಪಾಲ ಪೂಜಾರಿ ಸಾಂಸ್ಕೃತಿಕ ಕಲಾಸಿರಿ ಉದ್ಘಾಟಿಸಿದರು. ಶ್ರೀಸೇನೇಶ್ವರ ದೇವಳದ ಆಡಳಿತ ಧರ್ಮದರ್ಶಿ ಚೆನ್ನಕೇಶವ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ಸುರಭಿ ನಿರ್ದೇಶಕ ಗಣಪತಿ ಹೊಳೀದಾರ್ ಪ್ರಾಸ್ತಾವಿಸಿದರು. ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷಣ ಕೊರಗ ವಂದಿಸಿದರು. ಸುಧಾಕರ ಪಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ನೃತ್ಯ ನಿಕೇತನ ಕೊಡವೂರು ಇವರಿಂದ ನಾಟ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.