ಆ ಮಹಾ ವಿಜಯೋತ್ಸವದ ಹರ್ಷ, ವೀರಸೈನಿಕರ ತ್ಯಾಗ ಬಲಿದಾನ ಸ್ಮರಿಸಿ ನೆನೆಸಿ ವಂದಿಸುವ ಸುದಿನ.
“ಏ ಮೇರೆ ವತನ್ ಕೇ ಲೊಗೋ
ತುಮ್ ಖುಬ್ ಲಗಾಲೊ ನಾರಾ
ಯೇ ಶುಭ್ ದಿನ್ ಹೈ ಹಮ್ ಸಬ್ಕಾ
ಲೆಹೆರಾ ತಿರಂಗಾ ಪ್ಯರಾ
ಪರ ಮತ ಭೂಲೋ ಸೀಮಾ ಪರ್
ವೀರೋನೇ ಹೈ ಪ್ರಾಣ ಗವಾಯೇ
ಕುಚ್ ಯಾದ್ ಉನ್ಹೆ ಭೀ ಕರ್ಲೋ
ಜೋ ಲೌಟ್ ಕೇ ಘರ್ ನಾ ಆಯೇ….
ಹೌದು; ಕಾರ್ಗಿಲ್ ವಿಜಯ ದಿನ ಈ ಹಾಡು ಎಲ್ಲರ ಬಾಯಲ್ಲಿಯೂ ಬರುವುದು. ಅಂತಹ ವಿಶೇಷ ದಿನ ಅಲ್ವಾ..
ಅದನ್ನು ಯುದ್ಧವೆನ್ನಿ ಅಥವಾ ಕಾರ್ಯಾಚರಣೆ ಎಂದಾದರೂ ಅನ್ನಿ ಅದರ ವಿಜಯಕ್ಕೆ, ಅದರ ಮೌಲ್ಯಕ್ಕೆ, ಅದರ ಗೌರವಕ್ಕೆ, ಅದರ ಆದರ್ಶಕ್ಕೆ ಚ್ಯುತಿಯಾಗದು. ಧರ್ಮಕ್ಕಾಗಿ ನಡೆದ ಯಾವ ಯುದ್ಧಗಳೂ ಹೆಸರಿನಿಂದ ಖ್ಯಾತವಾದ ಉದಾಹರಣೆಗಳು ಇತಿಹಾಸದಲ್ಲಿಲ್ಲ. ಧರ್ಮಕ್ಕಾಗಿ ನಡೆದ ಯಾವುದೂ ವಿಜಯದಿಂದಲೇ ಸ್ಮಾರಕಗಳಾಗುತ್ತವೆ. ಹಾಗಾಗಿ ನಮಗೆ ಮಹಾಭಾರತಕ್ಕೆ ಪರ್ಯಾಯವಾಗಿ ಕುರುಕ್ಷೇತ್ರ ನೆನಪಾಗುತ್ತದೆ ನಮಗೆ. ಕಾರ್ಗಿಲ್ ನೆನಪಾಗುವುದೂ ಹಾಗೆಯೇ.
ಅದು ದೇಶದ ಎಷ್ಟೋ ಹೋರಾಟಗಳಿಗಿಂತ ವಿಭಿನ್ನ ಎಷ್ಟೋ ಕಾರ್ಯಾಚರಣೆಗಳಿಗಿಂತ ಪರಾಕ್ರಮ. ಎಷ್ಟೋ ಯುದ್ಧಗಳಿಗಿಂತ ಹಲವು ಕಾರಣಗಳಿಂದ ವಿಶಿಷ್ಠ. ಅದು ಇತಿಹಾಸದ ದಿಟ್ಟ ಹೆಜ್ಜೆ. ಕಾರ್ಗಿಲ್ ಪರದೆಯಾಚೆಗೂ ಹೀರೋಗಳಿರುತ್ತಾರೆ ಎಂದು ಸಾರಿದ ಹೆಸರು. ಕಾರ್ಗಿಲ್ ತಿರಂಗಾ ಇಷ್ಟೊಂದು ಎತ್ತರದಲ್ಲೂ ಹಾರಬಹುದು ಎಂದು ತಿಳಿಸಿದ ಹೆಸರು. ಕಾರ್ಗಿಲ್ ನಾಲ್ಕು ಪರಮವೀರ ಚಕ್ರಗಳು ಸೃಷ್ಟಿಸಿದ ಹೆಸರು. ಕಾರ್ಗಿಲ್ ಬಲಿದಾನಕ್ಕೆ ಹೊಸ ಭಾಷ್ಯ ರಚಿಸಿದ ಹೆಸರು. ಕಾರ್ಗಿಲ್ ಭಾರತದ ಹೆಸರಾಂತ ಸಮರ ಕಾವ್ಯಗಳಲ್ಲೊಂದು. ಕಾರ್ಗಿಲ್ ಸ್ವಾಭಿಮಾನ, ತ್ಯಾಗ ಮತ್ತು ಪರಾಕ್ರಮಕ್ಕೆ ಮತ್ತೊಂದು ಹೆಸರು. ಕಾರ್ಗಿಲ್ ಅರೆಶತಮಾನದ ಸೇಡು ತೀರಿದ ಸಮಾಧಾನ.
ಕಾರ್ಗಿಲ್ ಎಂದರೆ ಟೈಗರ್ ಹಿಲ್. ಕಾರ್ಗಿಲ್ ಎಂದರೆ ಕಪಟಕ್ಕೆ ಉತ್ತರ. ಕಾರ್ಗಿಲ್ ಎಂದರೆ ರಾಷ್ಟ್ರೀಯತೆ. ಕಾರ್ಗಿಲ್ ಎಂದರೆ ಧರ್ಮಯುದ್ಧ. ಅಂತಿಮವಾಗಿ ಕಾರ್ಗಿಲ್ ಎಂದರೆ ನವರಾತ್ರಿಗಿಂತ ಸಾಕಷ್ಟು ಮೊದಲೇ ಬಂದ ವಿಜಯದಶಮಿ.
ದೇಶ ಎಷ್ಟೋ ಕಾರ್ಯಾಚರಣೆಗಳನ್ನು ನಡೆಸಿರಬಹುದು. ಮಹಾನ್ ಪರಾಕ್ರಮಗಳನ್ನು ಮೆರೆದಿರಬಹುದು. ಆದರೆ ನಮ್ಮ ಸ್ವಾಭಿಮಾನದ ದಿನ “ವಿಜಯ ದಿವಸ್” ಒಂದೇ ಅದು ಕಾರ್ಗಿಲ್ ವಿಜಯ ದಿನ. ಈ ಮೊದಲಿನ ಮಹಾ ಪರಾಕ್ರಮಗಳು ದೇಶ ಕಟ್ಟಲೆಂದೇ ನಡೆದಿದ್ದರೆ ಈ ಹೋರಾಟ ಅಸ್ತಿತ್ವಕ್ಕಾಗಿ, ಸ್ವಾಭಿಮಾನಕ್ಕಾಗಿ ನಡೆದಿರುವುದನ್ನು ದೇಶ ಇಂದಿಗೂ ಮರೆತಿಲ್ಲ. ಜಾಗತೀಕರಣಾ ನಂತರದ ಪೀಳಿಗೆಗೆ ದೇಶಭಕ್ತಿಯನ್ನು ಕಟ್ಟಿಕೊಟ್ಟ ಕಾರ್ಗಿಲ್ ಕಾರ್ಯಾಚರಣೆ ದೇಶದ ಇತಿಹಾಸದಲ್ಲಿ ಮಹತ್ವದಾದದ್ದು. ಎಷ್ಟೆಂದರೆ ದೇಶವಾಸಿಗಳಿಗೆ ಉಳಿದೆಲ್ಲಾ ಯುದ್ಧಗಳಿಗಿಂತ ಕಾರ್ಗಿಲ್ ಯುದ್ಧ ಹೆಚ್ಚು ಪರಿಚಿತವಾಗುವಷ್ಟು ಕಾರ್ಗಿಲ್ ಎಂದರೆ ತೀರ್ಥಕ್ಷೇತ್ರವಾಗುವಷ್ಟು ಕಾರ್ಯಾಚರಣೆಯ ನಂತರ ಹಲವು ಚಿತ್ರಗಳನ್ನು ಉಳಿಸಿಹೋದ ಶ್ರೇಯಸ್ಸೂ ಕಾರ್ಗಿಲ್ನದ್ದು. ಬಲಿದಾನಿಗಳ “ಕಾಫಿನ್” ಗಳನ್ನು ಹೊಸ ಪೀಳಿಗೆ ನೋಡಿದ್ದು ಕಾರ್ಗಿಲ್ನಲ್ಲಿ. ಪುಟ್ಟ ಮಕ್ಕಳು ದೇಶಕ್ಕಾಗಿ ಕಣ್ಣೀರು ಸುರಿಸುವುದನ್ನು ದೇಶ ಕಂಡಿದ್ದು ಕಾರ್ಗಿಲ್ ಕಾರ್ಯಾಚರಣೆಯಲ್ಲೇ. ಗುಂಡಿಗೆ ಎದೆಯೊಡ್ಡುವ ಯೋಧನನ್ನು ಪ್ರಧಾನಮಂತ್ರಿ, ರಕ್ಷಣಾ ಮಂತ್ರಿಗಳು ಸಮರ ಭೂಮಿಯಲ್ಲಿ ಬೆನ್ನು ತಟ್ಟಿದ್ದು ಕಾರ್ಗಿಲ್ನಲ್ಲೇ. ಅತೀ ಹೆಚ್ಚಿನ ಪಡೆಗಳು ಸಮುದ್ರ ಮಟ್ಟದಿಂದ 15000 ಅಡಿಗಳ ಎತ್ತರದಲ್ಲಿ ಮೊದಲ ಬಾರಿಗೆ ಸೆಣಸಿದ್ದು ಕಾರ್ಗಿಲ್ನಲ್ಲೇ. ಹಲ ವರ್ಷಗಳ ತರುವಾಯ ಸುದೀರ್ಘ ಸಮಯ ನಮ್ಮ ಯೋಧ ಅರೆಹೊಟ್ಟೆಯಲ್ಲಿ ವಾತಾವರಣದೊಂದಿಗೆ ಸೆಣಸಿದ್ದು ಇದೇ ಕಾರ್ಗಿಲ್ನಲ್ಲಿ. ಹಿಮಚ್ಛಾಧಿತ ಬಂಕರುಗಳಲ್ಲಿ, ಟೆಂಟುಗಳಲ್ಲಿ ನರಕ ಸದೃಶ ಬದುಕನ್ನು ನಡೆಸಿದ್ದು ಇದೇ ಕಾರ್ಗಿಲ್ನಲ್ಲಿ. ಯಾವ ಲೇಹ್ನ್ನು, ಯಾವ ಜೋಜಿಲಾವನ್ನು ನಮ್ಮ ಪರಾಕ್ರಮಿ ಯೋಧರು ಅಂದು ಭಾರತಕ್ಕೆ ಸೇರಿಸಿದ್ದರೋ ಅದನ್ನು ಶತಾಯಗತಾಯ ಉಳಿಸಿಕೊಳ್ಳಲು ಭಾರತೀಯ ಸೇನೆ ಕಾರ್ಗಿಲ್ನಲ್ಲಿ ಬಹಳಷ್ಟನ್ನು ಕಳೆದುಕೊಳ್ಳಬೇಕಾಯಿತು. ಆಧುನಿಕ ಯುದ್ಧ ತಂತ್ರಕ್ಕೆ ಬಹುವರ್ಷಗಳ ನಂತರ ನಮ್ಮ ಸೇನೆ ಒಡ್ಡಿಕೊಳ್ಳಬೇಕಾಯಿತು. ಮತ್ತು ಅದನ್ನು ಸಮರ್ಥವಾಗಿ ಎದುರಿಸಿ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತು. ನಮ್ಮ ಒಂದಿಂಚು ನೆಲವನ್ನೂ ಪರರ ಪಾಲಾಗಲು ಬಿಡೆವು ಎಂದು ಗುಡುಗಿದ ಸರ್ಕಾರವನ್ನು ನಾವು ಇತಿಹಾಸದಲ್ಲಿ ಕಂಡಿದ್ದು ಇದೇ ಕಾರ್ಗಿಲ್ನಲ್ಲಿ. ನಮ್ಮ 25 ಮಿಲಿಟರಿ ಅಧಿಕಾರಿಗಳು, 436 ಸೈನಿಕರನ್ನು ಬಲಿಕೊಟ್ಟು, 54 ಜನ ಅಧಿಕಾರಿಗಳ ಮತ್ತು 629 ಜವಾನರ ರಕ್ತ ಕೊಟ್ಟು ನಾವು ಸ್ವಾಭಿಮಾನವನ್ನು ಉಳಿಸಿಕೊಂಡೆವು.
ವಿಜಯೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತ ಹುತಾತ್ಮ ಯೋಧರಿಗೆ ನಮನ ಸಮರ್ಪಿಸೋಣ.
ಜೈಹಿಂದ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.