ಆ ತಾಯಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ, ಮತ್ತೊಬ್ಬ ಮಗ ಅಮೋಲ್ ಕಾಲಿಯಾ. ಇಬ್ಬರೂ ತಮ್ಮ ಜೀವನವನ್ನು ದೇಶ ಕಾಯೋಕೆ ಮೀಸಲಿಟ್ಟಿದ್ದವರು.
ಅದೊಂದು ದಿನ ರಾತ್ರಿ ಆ ತಾಯಿಗೊಂದು ದುಃಸ್ವಪ್ನ. ಒಮ್ಮೆಲೇ ಎದ್ದು, ತನ್ನ ಪತಿಯನ್ನು ಎಬ್ಬಿಸುತ್ತಾರೆ. ಕನಸಿನಲ್ಲಿ ಕಂಡದ್ದು ತನ್ನ ಇಬ್ಬರೂ ಮಕ್ಕಳು ಮಿಲಿಟರಿ ಸೇವೆಯಲ್ಲಿದ್ದು, ಕಾರ್ಗಿಲ್ ಯುದ್ಧ ಬೇರೆ ಘೊಷಣೆಯಾಗಿತ್ತು. ಯುದ್ಧದ ಭೀತಿ ಆ ತಂದೆ ತಾಯಿಯ ಮನದಲ್ಲಿ.
ಹೀಗೆ ಸ್ವಪ್ನ ಬಿದ್ದ ಎರಡೇ ದಿನದಲ್ಲಿ ಸುದ್ಧಿ ವಾಹಿನಿಗಳಲ್ಲಿ ಹೀಗೊಂದು ಸುದ್ಧಿ ಪ್ರಸಾರವಾಗುತ್ತದೆ. ‘ಭಾರತೀಯ ಸೈನಿಕರು ಕಾರ್ಗಿಲ್ ಪರ್ವತಗಳನ್ನು ವಶಪಡಿಸಿಕೊಳ್ಳುವುದರ ಮೂಲಕ ಬಹುದೊಡ್ಡ ವಿಜಯಗಳಿಸಿದ್ದಾರೆ.’ ಆದರೆ ಯುದ್ಧದಲ್ಲಿ ಕ್ಯಾಪ್ಟನ್ ಅಮೋಲ್ ಕಾಲಿಯಾ ವೀರಸ್ವರ್ಗವನ್ನಪ್ಪಿದ್ದಾರೆ ಎಂದು.
“ನನ್ನ ಬಗ್ಗೆ ನೀವೇನು ಚಿಂತಿಸಬೇಡಿ. ಈ ತಿಂಗಳ ಕೊನೆಗೆ ನಾನು ದೆಹಲಿಗೆ ಹಿಂದಿರುಗುವೆ. ನಿಮಗೆ ತುಂಬಾ ತುರ್ತಾಗಿದ್ದರೆ ಆಗ ನನ್ನ ಮದುವೆಯನ್ನು ನಿರ್ಧರಿಸಬಹುದು” ಎಂದು ಅಮೋಲ್ ತನ್ನ ತಂದೆ ತಾಯಿಗೆ ಪತ್ರ ಬರೆದು, ಅದೇ ದಿನ ಅಮೋಲ್ ತನ್ನ 40 ಜನ ಸಂಗಡಿಗರೊಂದಿಗೆ 18,000 ಅಡಿ ಎತ್ತರದ ಹಿಮಚ್ಛಾದಿತ ಕಾರ್ಗಿಲ್-ಯಲೋಡೀಯರ್ ಪ್ರದೇಶದಲ್ಲಿ ಶತ್ರು ಪಡೆಯ ಜೊತೆ ಕಾದಾಡಲು ಯುದ್ಧ ವಿಮಾನದಿಂದಿಳಿದರು. ಆಗಲೇ ಬಂದು ಜಮಾಯಿಸಿದ ಪಾಕ್ ಸೈನ್ಯ, ವಿಮಾನದಿಂದ ಕೆಳಗಿಳಿಯುತ್ತಿದ್ದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿಗೈದರು. ದಾಳಿಯಲ್ಲಿ 12 ಜನ ಯೋಧರು ಪ್ರಾಣತೆತ್ತರು. ಅಮೋಲ್ನ ಮೇಲೂ ಸಹ ಗುಂಡಿನ ಮಳೆಗೈದಿದ್ದರು. ಆತ ನೆಲದಲ್ಲೆ ತೆವಳುತ್ತಾ ಬಂದೂಕಿನಿಂದ ಗುಂಡನ್ನು ಚಲಾಯಿಸುತ್ತಾ 20 ಅತಿಕ್ರಮಣಕಾರರನ್ನು ಆಹುತಿ ತೆಗೆದುಕೊಂಡನು.
ಆದರೆ ಶತ್ರು ಪಡೆ ಸುತ್ತುವರೆದಿದ್ದರಿಂದ ತಪ್ಪಿಸಿಕೊಳ್ಳಲಾಗಲೇ ಇಲ್ಲ. ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯುವಿನ ಹಾಗೆ ಹೋರಾಡಿದ ಅಮೋಲ್ಗೆ ಕಾದಾಡುತ್ತಾ ಮಡಿಯುವುದೊಂದೇ ಅವನ ಇರಾದೆಯಾಗಿತ್ತೇ ಹೊರತು, ತಪ್ಪಿಸಿಕೊಳ್ಳುವುದಾಗಿರಲಿಲ್ಲ.
ಅಮೋಲ್ ಹಾಗೂ ಆತನ 12 ಮಂದಿ ಪರಾಕ್ರಮಿ ಯೋಧರು ವೀರ ಮರಣ ಹೊಂದಿದ್ದರು. ವೀರ ಮರಣ ಹೊಂದಿದ ಅಮೂಲ್ ದೇಹ ಹಿಮಪರ್ವತದಡಿಯಲ್ಲಿ ತತ್ಕ್ಷಣವೇ ಸಿಗಲಿಲ್ಲ. ಎರಡು ದಿನದ ಬಳಿಕ ಸಿಕ್ಕಿತು. ಅದಾಗಲೇ ಅಮೋಲ್ನ ಧೈರ್ಯ, ಪರಾಕ್ರಮಗಳ ವೀರಗಾಥೆ ಆತನ ಊರಾದ ದೆಹಲಿ ಸಮೀಪದ ನಂಗಾಲ್ ಪಟ್ಟಣಕ್ಕೆ ತಲುಪಿಯಾಗಿತ್ತು. ಅಮೋಲ್ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಅದೊಂದು ರೀತಿಯಲ್ಲಿ ಯಾತ್ರಾಸ್ಥಳವೇ ಆಗಿ ಹೋಗಿತ್ತು.
ಮಗನ ಪರಾಕ್ರಮವನ್ನು ಕೇಳಿದ ತಂದೆ ಎಸ್.ಪಿ.ಶರ್ಮ ಅವರು ಭಾವುಕರಾಗಿಬಿಟ್ಟಿದ್ದರು.
ಮನೆಗೆ ಕಿರಿಮಗನಾದ ಅಮೂಲ್ ದೇಶಕ್ಕೆ ಹಿರಿಮಗನಾಗಿ ಬಿಟ್ಟೆ ಎಂದು ಹೇಳುತ್ತಾ, ಆತನಿಗೆ ಒಂದು ಸಲ್ಯೂಟ್ ಹೊಡೆಯುತ್ತಾರೆಂದರೆ ಆತನ ಪರಾಕ್ರಮ ಅದೆಂತದ್ದು.
ಯುದ್ಧದಲ್ಲಿ ನಿರಂತರ ಹೊರಾಟ ನಡೆಯುತ್ತ ಸಾಗುತ್ತದೆ. ಅಷ್ಟೊತ್ತಿಗೆ ಜೂನ್ 13 ಆಗಿರುತ್ತದೆ. ಕಾರ್ಗಿಲ್ ವಲಯದಲ್ಲಿ ನಿರಂತರವಾಗಿ ಶತ್ರುಗಳ ವಿರುದ್ಧ ಹೋರಾಡುತ್ತಿದ್ದ ಸೈನಿಕರಿಗೆ ಅಂದು ಅದೇನೊ ಹೆಚ್ಚಿನ ಹುಮ್ಮಸ್ಸು, ವಿಶ್ವಾಸ. ಆ ಸಂಭ್ರಮವೇ ಬೇರೆ. ಭಾರತದ ಇತಿಹಾಸದಲ್ಲೇ ಕೇಳರಿಯದ ಸಂಭ್ರಮದ ದಿನ. ದೇಶದ ಪ್ರಧಾನಿಯೊಬ್ಬರು ಯುದ್ಧಭೂಮಿಗೆ ಭೇಟಿ ಕೊಟ್ಟ ದಿನ ಅದಾಗಿತ್ತು.
ಹೌದು, ವಾಜಪೇಯಿ ಅವರು ಅಂದು ಕಾರ್ಗಿಲ್ ವಲಯದ ಬರೂ ಗ್ರಾಮಕ್ಕೆ ಭೇಟಿ ನೀಡಿದ ದಿನ ಅದಾಗಿತ್ತು. ಶತ್ರುಗಳಿಗೆ ಇದು ಇಷ್ಟವಿರಲಿಲ್ಲ ಮತ್ತು ಸಹಿಸಲೂ ಆಗಲಿಲ್ಲ. ಪ್ರಧಾನಿಗಳು ಅಲ್ಲಿ ಬರುವ ಮುಂಚೆಯೇ ಎರಡು-ಮೂರು ಕಿ.ಮೀ. ಅಂತರದಲ್ಲಿ ಐದು ಶೆಲ್ಗಳ ದಾಳಿ. ಅವರು ಸೈನಿಕರು ಹಾಗೂ ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಬೇಕಿದ್ದ ವಿಭಾಗೀಯ ಆಯುಕ್ತರ ಕಛೇರಿಯನ್ನು ಸಂಪೂರ್ಣ ಧ್ವಂಸ ಮಾಡಿದರು. ಆದರೂ ಪ್ರಧಾನಿಗಳು ಅಂಜಲಿಲ್ಲ. ಭಾರತಾಂಬೆಯ ರಕ್ಷಣೆಗಾಗಿ ಹೋರಾಡುತ್ತಿದ್ದ ಧೀರ ಸೈನಿಕರನ್ನು ಉದ್ದೇಶಿಸಿ ಮಾತನಾಡಿ, “ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ, ಇಡೀ ಭಾರತ ದೇಶದ ಜನತೆ ನಿಮ್ಮ ಬೆಂಬಲಕ್ಕಿದೆ” ಎಂದರು.
ವಾಜಪೇಯಿ ಅವರು ಯುದ್ಧಕ್ಷೇತ್ರಕ್ಕೆ ನೀಡಿದ ಭೇಟಿ ಸೈನಿಕರಲ್ಲಿ ಇಮ್ಮಡಿ ಉತ್ಸಾಹ ಮೂಡಿಸುವುದಷ್ಟೇ ಅಲ್ಲದೇ ಇಡೀ ದೇಶವಾಸಿಗಳು ಸಂಭ್ರಮಪಟ್ಟರು. ಸ್ವತಃ ರಾಷ್ಟ್ರಪತಿಯವರೇ “ನಿಮ್ಮ ಜೀವನವನ್ನು ಅಪಾಯಕ್ಕೊಡ್ಡಿ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಿರುವುದಕ್ಕೆ ನಮಗೆ ಹೆಮ್ಮೆ ಎನಿಸಿದೆ” ಎಂದು ವಾಜಪೇಯಿಯವರನ್ನು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.