ಮೇ 31 ರಂದು ಪ್ರಧಾನಿ ವಾಜಪೇಯಿಯವರು, ಇದು ಅತಿಕ್ರಮಣವಲ್ಲ, ಭಾರತದ ಮೇಲೆ ದಾಳಿ ಎಂದು ಗಟ್ಟಿಯಾಗಿ ಹೇಳಿದರು. ಪಾಕಿಸ್ಥಾನದ ಬೆಂಬಲದಿಂದಾಗಿ ಕಾರ್ಗಿಲ್ ವಲಯದಲ್ಲಿ ಅತಿಕ್ರಮಣದ ಮತ್ತು ಉದ್ಧಟತನದ ಯತ್ನವಾಗಿದೆ ಎಂದು ಅತ್ಯಂತ ಕಟು ಶಬ್ದಗಳಲ್ಲಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದರು. ಅಲ್ಲದೆ ಈ ಭಾಗದಲ್ಲಿ ಪರಿಸ್ಥಿತಿ ಶಾಂತವಾಗಿದ್ದು ಶಾಂತಿಯನ್ನು ಕದಡುವ ಹುನ್ನಾರವನ್ನು ಪಾಕಿಸ್ಥಾನ ಮಾಡಬಾರದು. ಅಲ್ಲಿನ ಅತಿಕ್ರಮಣಕಾರರನ್ನು ಪಾಕಿಸ್ಥಾನಕ್ಕೆ ಮರಳಿ ಕರೆಸಿಕೊಳ್ಳಬೇಕು ಅಥವಾ ತೆರವುಗೊಳಿಸಿದರೆ ಒಳ್ಳೆಯದು ಇಲ್ಲದಿದ್ದರೆ ನಾವು ದಿಟ್ಟತನದಿಂದ ಅವರನ್ನು ಹಿಮ್ಮೆಟ್ಟುತ್ತೇವೆ ಎಂದು ಖಡಕ್ ಸಂದೇಶ ನೀಡಿದರು.
ಇಷ್ಟು ಖಡಕ್ ಸಂದೇಶ ನೀಡಿದರೂ ಪಾಕಿಸ್ಥಾನ ತನ್ನ ಉದ್ದಟತನವನ್ನು ಮುಂದುವರೆಸಿತ್ತು. ಆಗಲೇ ಆರಂಭವಾದದ್ದು ಆಪರೇಷನ್ ವಿಜಯ್ ಕಾರ್ಯಾಚರಣೆ.
ಯುದ್ಧ ಆರಂಭವಾದ ಏಳನೇ ದಿನಕ್ಕೆ ಬಟಾಲಿಕ್ ವಲಯದಲ್ಲಿ ಹೋರಾಟದ ತೀವ್ರತೆ ಹೆಚ್ಚಿತ್ತು. ನಮ್ಮ ಯುದ್ಧ ವಿಮಾನಗಳು ಶತ್ರುಪಡೆಗಳ ಜಾಗವನ್ನು ಪತ್ತೆ ಹಚ್ಚಿ ಗಡಿಯಿಂದ ಹೊರಗಟ್ಟುವವರೆಗೂ ಹೋರಾಟ ನಿಲ್ಲದಂತೆ ಅಧಿಕಾರಿಗಳು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಸೂಚಿಸಿದರು. ಅಲ್ಲಿಯವರೆಗೆ ಕದನವಿರಾಮದ ಪ್ರಶ್ನೆಯೇ ಇಲ್ಲವೆಂದು ಗಟ್ಟಿ ನಿರ್ಧಾರ ತೆಗೆದುಕೊಂಡರು.
ಜೂನ್ 2 ರ ಹೊತ್ತಿಗೆ ಕಾರ್ಗಿಲ್ ವಲಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ 46 ಮಂದಿ ಸಿಬ್ಬಂದಿಗಳು ಭಾರತಮಾತೆಗಾಗಿ ಪ್ರಾಣವನ್ನರ್ಪಿಸಿದರು. 174 ಮಂದಿ ಗಾಯಗೊಂಡರು. ದಟ್ಟವಾದ ಮೋಡ ಕವಿದರೂ ಅತಿಕ್ರಮಣಕಾರರ ಬಂಕರ್ಗಳು, ಶಿಬಿರಗಳ ಮೇಲೆ ಭಾರತೀಯ ಸೇನೆಯಿಂದ ಪರಿಣಾಮಕಾರಿ ದಾಳಿ. 28 ನೇ ರಾಷ್ಟ್ರೀಯ ರೈಫಲ್ಸ್ಗೆ ಸೇರಿದ ಕನ್ನಡಿಗ ಯೋಧ ಶಿವಬಸ್ಸಯ್ಯನ ಸಾಹಸ ಮರೆಯಲಾರದಂತಹದ್ದು.
ದ್ರಾಸ್ ವಲಯದಲ್ಲಿ ರಕ್ತ ಹೆಪ್ಪುಗಟ್ಟಿಸುವಷ್ಟು ಚಳಿ. ದುರ್ಗಮವಾದ ಪರ್ವತ ಪ್ರದೇಶ. ಮುಂದಿನ ಸೇನಾಶಿಬಿರಕ್ಕೆ ಮದ್ದು ಗುಂಡು, ಆಹಾರಪದಾರ್ಥ, ಮತ್ತಿತರ ಅಗತ್ಯ ವಸ್ತುಗಳನ್ನು ಸಾಗಿಸುವ ಜವಾಬ್ದಾರಿ ಶಿವಬಸ್ಸಯ್ಯನದ್ದು.
ಪಾಕ್ ಬೆಂಬಲಿತ ಅತಿಕ್ರಮಣಕಾರರ ದಾಳಿಯನ್ನು ಹಿಮ್ಮೆಟ್ಟಿಸುವ ರಾಷ್ಟ್ರೀಯ ರೈಫಲ್ಸ್ನ ಮತ್ತೊಂದು ತುಕಡಿ ಕೆಲದಿನಗಳ ಹಿಂದೆಯೇ ಗಡಿ ಸೇರಿತ್ತು. ಅಂದು ರಾತ್ರಿ ನೀಲ ಗಗನಕ್ಕೆ ಇನ್ನೂ ಚಂದ್ರನ ಆಗಮನ ಆಗಿರಲಿಲ್ಲ. ಎತ್ತರಕ್ಕೆ ಚಾಚಿಕೊಂಡಿದ್ದ ಗಿರಿಶಿಖರಗಳು. ಅಗತ್ಯ ವಸ್ತುಗಳನ್ನು ಹೊತ್ತ ಮಿಲಿಟರಿ ವಾಹನ ದುರ್ಗಮ ಹಾದಿ, ಸುಮಾರು 500 ಅಡಿ ಕೆಳಗಿರುವುದು ಹರಿಯುವ ನದಿ, ಇಂತಹ ಹಾದಿಯಲ್ಲಿ ಶತ್ರುಗಳಿಗೆ ಕಾಣದಂತೆ ವಾಹನವನ್ನು ಚಲಾಯಿಸಿಕೊಂಡು ಹೋಗುವುದೇ ಒಂದು ದೊಡ್ಡ ಸವಾಲಾಗಿತ್ತು. ಹೆಡ್ಲೈಟನ್ನೂ ಹಾಕದೆ ಕತ್ತಲಲ್ಲಿ ಚಂದ್ರನ ಮಂದ ಬೆಳಕಿನಲ್ಲಿ ಸಾಗುತ್ತಿದ್ದ ಶಿವಬಸಯ್ಯ ಸಾಧ್ಯವಾದಷ್ಟು ಶತ್ರುಗಳ ಶೆಲ್ ದಾಳಿಯಿಂದ ತಪ್ಪಿಸಿಕೊಂಡು ಮುಂದಕ್ಕೆ ಸಾಗುತ್ತಿದ್ದ. ಆದರೆ ವಿಧಿಯ ಆಟ ! ಒಮ್ಮೆಲೇ ಶೆಲ್ಗಳ ಸುರಿಮಳೆ ಟ್ರಕ್ ಮೇಲಾಯಿತು. ಶೆಲ್ ಸಿಡಿತದ ತುಣುಕುಗಳು ಶಿವಬಸಯ್ಯನ ದೇಹವನ್ನು ದಾಟಿ ಹೋಗಿತ್ತು. ತೀವ್ರ ರಕ್ತಸ್ರಾವದ ನಡುವೆಯೂ ತನ್ನ ಜೊತೆಗಿದ್ದ ಮತ್ತೊಬ್ಬನಿಗೆ ದಾರಿ ತೋರಿಸಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದ. ತೀವ್ರ ರಕ್ತಸ್ರಾವದ ಕಾರಣ ಶಿಬಿರ ತಲುಪಿದ ಕೆಲ ಗಂಟೆಗಳ ನಂತರ ಕೊನೆಯುಸಿರೆಳೆದ. ತಾಯಿ ಭಾರತಾಂಬೆಯ ಮಡಿಲಿಗೆ ಕನ್ನಡಿಗ ವೀರಯೋಧನ ಆತ್ಮಾರ್ಪಣೆ.
ಇನ್ನೊಂದು ಕಡೆ ಪಾಕಿಸ್ಥಾನದಿಂದ ನಮ್ಮ ಮತ್ತೋರ್ವ ವೀರನನ್ನು ಬಿಡುಗಡೆ ಮಾಡಿ ಕಳಿಸಿಕೊಡಲಾಯಿತು. ಪ್ಲೈಟ್ ಲೆಫ್ಟೆನೆಂಟ್ ಕೆ. ನಚಿಕೇತ್ ಅವರು ದೆಹೆಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅದ್ದೂರಿಯ ಸ್ವಾಗತ. ಸ್ವತಃ ರಕ್ಷಣಾ ಸಚಿವರು, ಏರ್ ಚೀಫ್ ಮಾರ್ಷಲ್ ಹಾಜರಿದ್ದರು. ನಚಿಕೇತನ ಕುಟುಂಬಸ್ಥರು ಮಗನನ್ನು ಕಣ್ತುಂಬ ನೋಡಿ ಸಂತಸಪಟ್ಟರು. “ಗುರಿ ಸಾಧನೆಗಾಗಿ ಮತ್ತೆ ಯುದ್ಧರಂಗಕ್ಕೆ ತೆರಳಲಿ ಎಂಬುದೇ ನನ್ನಾಸೆ” ಎಂದರು ಆ ಧೀರ ತಂದೆ. ನಚಿಕೇತನೇನು ಕಡಿಮೆಯೇ ಅದಮ್ಯ ವೀರ ಸಾಹಸಿ ಸೈನಿಕ. “ನಾನೊಬ್ಬ ಸಿಪಾಯಿ. ನಾನು ಮತ್ತೆ ನನ್ನ ಕೆಲಸಕ್ಕೆ ಹೋಗಲು ಇಚ್ಛಿಸುವೆ” ಎಂದು ಉತ್ಸಾಹದ ಮಾತುಗಳನ್ನಾಡಿದರು. ಎಂತಹ ತಂದೆ, ಎಂತಹ ಮಗ ಧನ್ಯಳು ಭಾರತಮಾತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.