ಮಂಗಳೂರು: ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿದ್ದು, ಜಗತ್ತಿನ ಕಾರ್ಮಿಕ ವರ್ಗ ನಡೆಸಿದ ಹೋರಾಟವನ್ನು ನೆನಪಿಸುತ್ತಾ, ಪ್ರಸ್ತುತ ಕಾರ್ಮಿಕ ವರ್ಗದ ಮುಂದಿನ ಅಪಾಯಗಳ ಬಗ್ಗೆ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಅಂದು ಸಂಜೆ 3:೦೦ಕ್ಕೆ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಜ್ಯೋತಿ ವೃತ್ತದಿಂದ ಹೊರಟು, ಬಳಿಕ 4:೦೦ಕ್ಕೆ ದ.ಕ ಜಿಲ್ಲಾಧಿಕಾರಿಗಳ ಕಛೇರಿಯೆದುರು ಬೃಹತ್ ಸಾರ್ವಜನಿಕ ಸಭೆಯು ಜರುಗಲಿದೆ ಎಂದು ಸಿಐಟಿಯು ಮಂಗಳೂರು ನಗರ ಸಮಿತಿಯು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್, ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಭಾಗವಹಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮಂಗಳೂರು ನಗರಾಧ್ಯಕ್ಷರಾದ ಜಯಂತಿ ಬಿ. ಶೆಟ್ಟಿಯವರು ವಹಿಸಲಿದ್ದಾರೆ.
ಜನರ ಮಧ್ಯೆ ಭ್ರಮೆಯನ್ನು ಸೃಷ್ಟಿಸಿ, ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳ ತಾಳಕ್ಕೆ ತಕ್ಕ ಕುಣಿಯುತ್ತಿದೆ. ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಬಲಿಕೊಟ್ಟು ತೀವ್ರ ದಾಳಿಗಳನ್ನು ನಡೆಸುತ್ತಿದೆ. ಈ ದೇಶದ ಗುತ್ತೇದಾರಿ ಬಂಡವಾಳಶಾಹಿಗಳಿಗೆ ಒಳ್ಳೆಯ ದಿನಗಳು ಬಂದಿದೆಯೇ ಹೊರತು ಕಾರ್ಮಿಕ ವರ್ಗಕ್ಕಲ್ಲ ಎಂದು ನರೇಂದ್ರ ಮೋದಿ ಸರ್ಕಾರವು ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ರಮಣಕಾರಿ ನೀತಿಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕ ವರ್ಗದ ಮೇಲೆ ದಾಳಿ ತೀವ್ರಗೊಳಿಸಿದೆ.
ರಾಜ್ಯದ ಕಾಂಗ್ರೆಸ್ಸ್ ಸರಕಾರವೂ ಕೂಡ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡಲು ಉತ್ಸುಕರಾಗಿದೆಯೇ ಹೊರತು ರಾಜ್ಯದ ಕಾರ್ಮಿಕ ವರ್ಗದ ಪರವಾಗಿ ಎಳ್ಳಷ್ಟು ಕಾಳಜಿ ವಹಿಸುತ್ತಿಲ್ಲ. ರಾಜ್ಯದಲ್ಲಿಯೂ ಕಾರ್ಮಿಕ ವರ್ಗ ಗಂಬೀರ ಪ್ರಶ್ನೆಗಳನ್ನು ಎದುರಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಕಾರ್ಮಿಕ ವರ್ಗವು ಒಗ್ಗಟ್ಟಾಗಿ ನಿಂತು ಐಕ್ಯ ಚಳುವಳಿಯತ್ತ ದಾಪುಗಾಲನ್ನು ಇಡಬೇಕಾಗಿದೆ. ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರಬಲ ಜನಾಂದೋಲನ ಮೂಡಿ ಬರಬೇಕಾಗಿದೆ.
ಈ ವರ್ಷದ ಮೇ ದಿನಾಚರಣೆಯು ಕಾರ್ಮಿಕರ ಪಾಲಿಗೆ ಉತ್ಸವ ಮಾತ್ರವಾಗದೆ, ಹೋರಾಟ-ಚಳುವಳಿಗಳನ್ನು ತೀಕ್ಷ್ಣಗೊಳಿಸಲು ಪ್ರತಿಜ್ಞೆಗೈಯ್ಯುವ ದಿನವಾಗಬೇಕಾಗಿದ್ದು, ನಗರದ ಎಲ್ಲಾ ವಿಭಾಗದ ಕಾರ್ಮಿಕರು, ಮಧ್ಯಮ ವರ್ಗದ ನೌಕರರು, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.