ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ, ಬೇಡಬೇಡವೆಂದರೂ ಹಲವು ಕಹಿ ನೆನಪುಗಳು ಕಾಡುತ್ತವೆ. 1975 ರ ಜೂನ್ 25 ರ ಕರಾಳ ನೆನಪುಗಳು ಮನದ ಮೂಲೆಯಿಂದ ಮಾಸಿಹೋಗುವುದೇ ಇಲ್ಲ. ತುರ್ತುಪರಿಸ್ಥಿತಿ ತೊಲಗಿ ಬರೋಬ್ಬರಿ 41 ವರ್ಷಗಳಾಗಿದ್ದರೂ ತುರ್ತುಪರಿಸ್ಥಿತಿ ಸಂದರ್ಭದ ಹೋರಾಟ, ಆಗ ಪ್ರಜಾತಂತ್ರದ ಉಳಿವಿಗಾಗಿ ಅನೇಕರು ಮಾಡಿದ ತ್ಯಾಗ, ಬಲಿದಾನದ ಕಥೆಗಳು ಈಗಲೂ ಹಸಿರಾಗಿಯೇ ಇವೆ. ತನ್ನ ಅಧಿಕಾರದ ಅಸ್ತಿತ್ವದ ಉಳಿವಿಗಾಗಿ ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ವಿರೋಧ ಪಕ್ಷದ ನಾಯಕರನ್ನು ಮುಲಾಜಿಲ್ಲದೆ ಜೈಲಿಗಟ್ಟಿದ ಪರಿ, ಸಂಸದೀಯ ಸಮಿತಿಯ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಜನಸಂಘದ ವರಿಷ್ಠನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ಸಮಾಜವಾದಿ ಪಕ್ಷದ ಮಧುದಂಡವತೆ, ಸಂಸ್ಥಾ ಕಾಂಗ್ರೆಸ್ನ ಶಾಮನಂದನ ಮಿಶ್ರ ಅವರನ್ನು ಯಾವ ಸೂಚನೆಯೂ ಇಲ್ಲದೆ ಬಂಧಿಸಿ ಜೈಲಿಗಟ್ಟಿದ ಬಗೆ, ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ ಅವರಂತಹ ವಯೋವೃದ್ಧರನ್ನೂ ನಿಷ್ಕರುಣೆಯಿಂದ ಸೆರೆಮನೆಗೆ ತಳ್ಳಿದ ರೀತಿ, ಪತ್ರಕರ್ತರಾಗಿದ್ದ ‘ಆರ್ಗನೈಜರ್’ ಸಂಪಾದಕ ಕೆ.ಆರ್. ಮಲ್ಕಾನಿ, ‘ವಿಕ್ರಮ’ ಸಂಪಾದಕರಾಗಿದ್ದ ಬಿ.ಎಸ್.ಎನ್. ಮಲ್ಯ, ಮೊದಲಾದವರನ್ನು ಬಂಧಿಸಿದ್ದು, ಸಂಘದ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್, ಕರ್ನಾಟಕದ ಸಂಘದ ಮುಖ್ಯಸ್ಥರಾಗಿದ್ದ ಯಾದವರಾವ್ ಜೋಶಿ, ಮೊದಲಾದವರನ್ನು ಮೀಸಾ ಬಂಧನಕ್ಕೆ ಒಳಪಡಿಸಿದ್ದು… ಹೀಗೆ ಹಲವಾರು ವಿದ್ಯಮಾನಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ.
1975 ರ ತುರ್ತು ಪರಿಸ್ಥಿತಿ ಒಂದು ರೀತಿಯಲ್ಲಿ 2ನೇ ಸ್ವಾತಂತ್ರ್ಯ ಸಮರವೇ ಆಗಿತ್ತು. ಏಕೆಂದರೆ ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಣೆಯ ಮೂಲಕ ಎಲ್ಲ ಬಗೆಯ ಮೂಲಭೂತ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡಿದ್ದರು. ಸರ್ಕಾರದ ವಿರುದ್ಧ ಟೀಕಿಸುವಂತಿರಲಿಲ್ಲ. ಪತ್ರಿಕೆಗಳಲ್ಲಿ ಸರ್ಕಾರದ ವಿರುದ್ಧ ಟೀಕಿಸಿ ಏನನ್ನೂ ಬರೆಯುವಂತಿರಲಿಲ್ಲ. ಸರ್ಕಾರದ ತಪ್ಪು ನೀತಿಗಳನ್ನು ಬಹಿರಂಗವಾಗಿ ಯಾರೂ ಖಂಡಿಸುವಂತಿರಲಿಲ್ಲ. ಒಟ್ಟಾರ ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿತ್ತು. ಇಂದಿರಾಗಾಂಧಿಯ ವಂದಿಮಾಗಧರು ‘ಇಂಡಿಯಾ ಈಸ್ ಇಂದಿರಾ’, ‘ಇಂದಿರಾ ಈಸ್ ಇಂಡಿಯಾ’ ಎಂಬ ಅಸಹ್ಯಕರ ಘೋಷಣೆಗಳನ್ನು ಹಾಕುವ ಸ್ಥಿತಿಗೆ ದೇಶ ತಲುಪಿತ್ತು. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಸರ್ವಾಧಿಕಾರದ ವಿರುದ್ಧ ಹೋರಾಟದ ಕಿಡಿ ಸಿಡಿಯಿತು ಎಂಬುದು ಮಾತ್ರ ಗಮನಾರ್ಹ. ಅಸತ್ಯ, ಅನ್ಯಾಯ ಮತ್ತು ದಬ್ಬಾಳಿಕೆಗಳ ಮುಂದೆ ಬಾಗುವುದು ಹೇಡಿತನ ಎಂದು ಮಹತ್ಮಾಗಾಂಧೀಜಿಯವರು ಬಹಳ ಹಿಂದೆ ಹೇಳಿದ ಮಾತನ್ನೇ ಧ್ಯೇಯವಾಕ್ಯವನ್ನಾಗಿಟ್ಟುಕೊಂಡು 1975 ರ ಗಾಂಧಿಜಯಂತಿಯಂದು ಹೋರಾಟ ಆರಂಭವಾಗಿ, 1977 ರ ಮಾರ್ಚ್ ತನಕವೂ ಅಖಂಡವಾಗಿ ಸಾಗಿದ್ದು ಒಂದು ರೋಚಕ ಇತಿಹಾಸ. ಈಗಿನ ಪೀಳಿಗೆಯವರಿಗೆ ಈ ಇತಿಹಾಸ ಒಂದಿನಿತೂ ಗೊತ್ತಿಲ್ಲ ಎನ್ನುವುದು ಮಾತ್ರ ವಿಷಾದದ ಸಂಗತಿ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಹಲವು ಬಗೆಯ ಹೋರಾಟಗಳನ್ನು ದಾಖಲಿಸುವುದು ಈ ಲೇಖನದ ಉದ್ದೇಶವಲ್ಲ. ಆದರೆ ಆಗ ಪ್ರತಿಫಲಾಪೇಕ್ಷೆಯಿಲ್ಲದೆ ನಾಡಿನ ಅನೇಕ ಗಣ್ಯರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಮಹಿಳೆಯರು, ಜನಸಾಮಾನ್ಯರು, ತುರ್ತುಸ್ಥಿತಿ ವಿರುದ್ಧ ಹೋರಾಡಿದ್ದು, ಅಸತ್ಯ, ಅನ್ಯಾಯಗಳ ವಿರುದ್ಧ ಸಿಡಿದೆದ್ದಿದ್ದು ಈಗಿನವರಿಗೆ ಖಂಡಿತ ಪ್ರೇರಣಾದಾಯಿ ಆಗಬಲ್ಲದು. ಆಗ ತುರ್ತುಸ್ಥಿತಿ ವಿರುದ್ಧ ಹೋರಾಡಿ ಅನೇಕರು ಜೈಲು ಸೇರಿದರು. ಚಿತ್ರ ಹಿಂಸೆ ಅನುಭವಿಸಿದರು. ತಮ್ಮ ಆಸ್ತಿ, ಮನೆಮಠಗಳನ್ನು ಕಳೆದುಕೊಂಡರು. ಅನೇಕರ ಉದ್ಯೋಗ ಹೋಯಿತು. ತುರ್ತುಪರಿಸ್ಥಿತಿ ಬಳಿಕ ಇಂತಹವರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲಾಗದೆ ಪರಿತಪಿಸಿದ ನಿದರ್ಶನಗಳೂ ಸಾಕಷ್ಟಿವೆ. ಆದರೆ ಅಂತಹವರು ತಾವು ಸರ್ವಾಧಿಕಾರದ ವಿರುದ್ಧ ಹೋರಾಡಿದ್ದಕ್ಕೆ ಸರ್ಕಾರದಿಂದ ಮಾಸಾಶನ ಅಥವಾ ಇನ್ನಿತರ ಸೌಲಭ್ಯ ಒದಗಿಸಿಕೊಡಿ ಎಂದು ಯಾವತ್ತೂ ಬೇಡಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದೆವೆಂದು ನಕಲಿ ಪ್ರಮಾಣಪತ್ರ ತೋರಿಸಿ ಮಾಸಾಶನ ಪಡೆಯುವ ಸ್ವಾತಂತ್ರ್ಯ ಯೋಧರಂತೆ ವರ್ತಿಸಲಿಲ್ಲ. ತಮ್ಮ ಪಾಡಿಗೆ ತಾವು ಸಮಾಜಮುಖಿಯಾಗಿ ಬದುಕು ನಡೆಸಿದರು. ತುರ್ತುಪರಿಸ್ಥಿತಿ ವಿರುದ್ಧದ ಹೋರಾಟ ಅವರ ಪಾಲಿಗೆ ಒಂದು ಕರ್ತವ್ಯದ ಭಾಗವಾಗಿತ್ತೇ ಹೊರತು ಅದೊಂದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುವ ವಿಷಯವಾಗಿರಲಿಲ್ಲ. ಹಾಗೆಂದೇ ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದ ಅನೇಕ ಮಹನೀಯರ ಹೆಸರುಗಳು ಕೂಡ ಯಾರಿಗೂ ಗೊತ್ತಿಲ್ಲ. ಅದರ ಸೂಕ್ತ ದಾಖಲಾತಿ ಕೂಡ ಇಲ್ಲ. ಹೋರಾಡಿದ ಹಲವರ ಕುರಿತು ಮಾಹಿತಿ ಇದ್ದರೂ ಅನಂತರ ಅಧಿಕಾರಕ್ಕೇರಿದ ಸರ್ಕಾರಗಳು ಅವರ ಕುರಿತು ಯಾವ ಕಾಳಜಿಯನ್ನೂ ವ್ಯಕ್ತಪಡಿಸಲಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಕೆಲವರು, ಅನಂತರ ಕೇಂದ್ರ ಹಾಗೂರಾಜ್ಯಗಳಲ್ಲಿ ತಮ್ಮದೇ ಸರ್ಕಾರ ಬಂದಾಗ ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅಧಿಕಾರದ ರುಚಿ ನೋಡಿದ್ದಿದೆ. ಅಂತಹವರೂ ಕೂಡ ತಮ್ಮ ಜೊತೆಗೆ ಹೋರಾಡಿದವರನ್ನು ನೆನಪಿಟ್ಟುಕೊಳ್ಳಲೇ ಇಲ್ಲ! ತುರ್ತುಪರಿಸ್ಥಿತಿಯ ಬಳಿಕ ಬಿಜೆಪಿಗೆ ಸೇರಿದವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು. ತುರ್ತುಪರಿಸ್ಥಿತಿಗೂ ಮೊದಲು ಅದೇ ಪಕ್ಷದಲ್ಲಿದ್ದ ಅನೇಕರು ಹೇಳಹೆಸರಿಲ್ಲದಂತಾದರು.
ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದ ಅನೇಕ ತ್ಯಾಗಜೀವಿಗಳು ಈಗಲೂ ನಮ್ಮ ನಡುವೆ ಇದ್ದಾರೆ. ಆದರೆ ಅವರೆಂದೂ ಅಧಿಕಾರಕ್ಕಾಗಿ ಹಪಹಪಿಸಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರಂತೂ ತಾವು ಎಂಎಲ್ಎ, ಎಂಪಿ ಆಗದಿದ್ದರೂ ಬೇರೆಯವರನ್ನು ಆ ಸ್ಥಾನಗಳಿಗೆ ಆಯ್ಕೆಯಾಗುವಂತೆ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ತಮಗಿಂತ ಚಿಕ್ಕವರು ರಾಜಕೀಯ ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಾಗ ಸಂತಸಪಟ್ಟಿದ್ದಾರೆ. ಆದರೆ ಇಂತಹ ತ್ಯಾಗಜೀವಿಗಳಿಂದ ಅಧಿಕಾರಕ್ಕೇರಿದ ಕೆಲವರು ಮಾತ್ರ ತಾವು ಏರಿದ ಏಣಿಯನ್ನೇ ಕೆಳಗೆ ತಳ್ಳಿ ಅಹಂಕಾರದಿಂದ ಬೀಗಿದ್ದಾರೆ. ತಮ್ಮ ಏಳಿಗೆಯ ಅಡಿಗಲ್ಲುಗಳನ್ನು ಕಡೆಗಣಿಸಿದ್ದಾರೆ.
ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೂ ಹೀಗೆಯೇ ನಡೆದಿತ್ತು. ಆಗ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಮಾಡಿದವರು ಅದೆಷ್ಟೋ ಮಂದಿ. ಕಷ್ಟನಷ್ಟ, ಸೆರೆವಾಸ, ಕರಿನೀರಿನ ಶಿಕ್ಷೆ, ಯಮಯಾತನೆ ಅನುಭವಿಸಿದವರು ಇನ್ನೆಷ್ಟೋ ಮಂದಿ. ಸ್ವಾತಂತ್ರ್ಯ ಪ್ರಾಪ್ತವಾದಾಗ ಅಧಿಕಾರ ಅನುಭವಿಸಿದವರು ಮಾತ್ರ ಕೆಲವೇ ಮಂದಿ. ಅವರಿಗೆ ಸ್ವಾತಂತ್ರ್ಯ ಹೋರಾಟದ ತೀವ್ರ ಕಷ್ಟ-ನಷ್ಟಗಳ ಯಾವ ಅನುಭವವೂ ಇರಲಿಲ್ಲ. ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಮಾತ್ರ ಅವರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ತೀವ್ರತರ ಕಷ್ಟ, ಯಾತನೆ ಸಹಿಸಿದ ಅನೇಕರನ್ನು ಸ್ವಾತಂತ್ರ್ಯ ಬಂದ ಬಳಿಕ ಸಂಪೂರ್ಣ ಕಡೆಗಣಿಸಲಾಯಿತೆಂಬುದು ಈಗ ಇತಿಹಾಸ. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು 14 ವರ್ಷಗಳ ಕಠಿಣ ಸೆರೆವಾಸ ಅನುಭವಿಸಿದ ವಿನಾಯಕ ದಾಮೋದರ ಸಾವರ್ಕರ್ ನಮಗೆ ಬೇಡವಾದವರಾದರು, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಅವರ ಹೆಸರಿನ ಉಲ್ಲೇಖವೇ ಇಲ್ಲ. ಮಕ್ಕಳಿಗೆ ಅಂತಹ ಸ್ವಾತಂತ್ರ್ಯ ಯೋಧ, ತ್ಯಾಗಜೀವಿಯ ಕುರಿತು ಅರಿವು ಮೂಡಿಸಬೇಕೆಂಬ ಕಳಕಳಿಯೇ ಅಧಿಕಾರಸ್ಥರಿಗೆ ಇರಲಿಲ್ಲ. ಹಾಗೆ ನೋಡಿದರೆ ಸಾವರ್ಕರ್ ಅವರಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಇನ್ನೊಬ್ಬರಿಲ್ಲ ಎನ್ನಬಹುದು. ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಅವರು. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ. ಸ್ವರಾಜ್ಯ ಎಂದು ಉಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು. ದಾಸ್ಯ ರಕ್ಕಸನ ಎದೆ ಮೆಟ್ಟಲು ಪ್ರಯತ್ನ ಪಟ್ಟಿದ್ದಕ್ಕಾಗಿ ತಾನು ಗಳಿಸಿದ್ದ ಬಿಎ ಪದವಿಯನ್ನು ಕಳೆದಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ. ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್. ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ. ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಮೊಟ್ಟಮೊದಲ ರಾಜಕೀಯ ಆರೋಪಿ. ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟಮೊದಲ ರಾಜಕೀಯ ಕೈದಿ. ವಿಶ್ವದ ರಾಜಕೀಯ ಚರಿತ್ರೆಯಲ್ಲೇ ೫೦ ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು. ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ ಸೌಲಭ್ಯಗಳಾಗಲೀ ಇಲ್ಲದಿದ್ದರೂ, ಬರೆಯುವುದನ್ನು ನಿಷೇಧಿಸಲಾಗಿದ್ದರೂ, ಸೆರೆಮನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಕಂಠಪಾಠಮಾಡಿ ೧೪ ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ.
ಇಷ್ಟೆಲ್ಲಾ ಖ್ಯಾತಿಗಳಿಗೆ ಭಾಜನರಾಗಿದ್ದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಬಂದಬಳಿಕ ಅಧಿಕಾರಸ್ಥರು ಹೇಗೆ ನಡೆಸಿಕೊಂಡರು ಎಂಬುದನ್ನು ನೆನೆಸಿಕೊಂಡರೆ ಎಂತಹ ಅಳ್ಳೆದೆಯವರ ರಕ್ತವೂ ಕೊತಕೊತ ಕುದಿಯುತ್ತದೆ. ಮಹಾತ್ಮಾಗಾಂಧಿ ಹತ್ಯೆ ನಡೆದಾಗಲೂ ಸಾವರ್ಕರ್ ಅವರ ಮೇಲೆ ಕೊಲೆ ಆರೋಪದ ಗೂಬೆ ಕೂರಿಸಲಾಗಿತ್ತು. ಅಸಲಿಗೆ ಗಾಂಧಿ ಹತ್ಯೆಗೂ ಸಾವರ್ಕರ್ಗೂ ಯಾವುದೇ ಸಂಬಂಧವಿರಲಿಲ್ಲ. ನೆಹರು ಕುಟುಂಬವಂತು ಸಾವರ್ಕರ್ ಅವರ ಭಾವಚಿತ್ರವನ್ನು ಪಾರ್ಲಿಮೆಂಟ್ ಭವನದಲ್ಲಿ ಅನಾವರಣಗೊಳಿಸುವುದಕ್ಕೂ ಅವಕಾಶ ಕಲ್ಪಿಸಿರಲಿಲ್ಲ. ಸ್ವಾತಂತ್ರ್ಯಕ್ಕೆ ಮೊದಲು ಬ್ರಿಟಿಷರಿಂದ ಹಿಂಸೆ ಅನುಭವಿಸಿದ್ದ ಸಾವರ್ಕರ್, ಸ್ವಾತಂತ್ರ್ಯ ಬಂದಬಳಿಕ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಹಿಂಸೆ, ಕಿರುಕುಳಕ್ಕೀಡಾದರು. ಇನ್ನು ಬದುಕೇ ಸಾಕು ಎನ್ನುವಷ್ಟು ನಿರಾಶೆ ಸಾವರ್ಕರ್ಗೆ ಕವಿದಿತ್ತು. ಸಾವು ಬೇಗ ಬರಬಾರದೇ ಎಂದು ಅನೇಕ ಸಲ ಮಮ್ಮಲ ಮರುಗಿದ್ದರು. ತಮ್ಮ ಆತ್ಮಕತೆಯಲ್ಲಿ ಸಾವರ್ಕರ್ ತಮಗಾದ ನೋವು, ಯಾತನೆಗಳ ವಿವರಗಳನ್ನು ಯಥಾವತ್ ಬರೆದಿಟ್ಟಿದ್ದಾರೆ (ನೋಡಿ: ‘ಆತ್ಮಾಹುತಿ’ ಗ್ರಂಥ).
ಸ್ವಾತಂತ್ರ್ಯಕ್ಕಾಗಿ ಅಹರ್ನಿಶಿ ಹೋರಾಡಿದ್ದ ಸಾವರ್ಕರ್, ಸ್ವಾತಂತ್ರ್ಯ ಬಂದ ಬಳಿಕ ಅಧಿಕಾರಕ್ಕಾಗಿ ಖಂಡಿತ ಹಪಹಪಿಸಿರಲಿಲ್ಲ. ಆದರೆ ದೇಶದಲ್ಲಿ ಸಮಾನತೆ, ಸಮಾನ ಹಕ್ಕುಗಳು ಇರಬೇಕು. ಮಾತೃಭೂಮಿಯಾದ ಹಿಂದೂಸ್ಥಾನವು ಒಂದು ಅವಿಭಾಜ್ಯ ದೇಶವಾಗಿರಬೇಕು. ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧತೆಯನ್ನು ತರಲು ಭಾರತ ಗಮನಾರ್ಹ ಕೊಡುಗೆ ನೀಡಬೇಕು ಎಂದೆಲ್ಲಾ ಬಯಸಿದ್ದರು. ವಿವಿಧ ಮತಗಳು, ಪಂಥಗಳು ಅಥವಾ ಜನಾಂಗಕ್ಕೆ ಸೇರಿದ ಜನರನ್ನು ಅತ್ಯಂತ ಸಮಾನತೆಯಿಂದ ಕಾಣಬೇಕು. ಇಲ್ಲಿ ಯಾರೂ ಇನ್ನೊಬ್ಬರ ಮೇಲೆ ಸವಾರಿ ಮಾಡಲು ಅವಕಾಶ ಇರಕೂಡದು ಎಂದು ಆಶಿಸಿದ್ದರು. ಇಂತಹ ಮಹಾಪುರುಷನನ್ನು ಅಧಿಕಾರಸ್ಥರು ಹಾಗೂ ಬುದ್ಧಿಜೀವಿಗಳು ಒಬ್ಬ ಮತಾಂಧ ಕೋಮುವಾದಿ ಎಂದು ಜರೆದರು. ದೇಶದಲ್ಲಿ ಕೋಮುಭಾವನೆ ಹರಡಲು ಸಾವರ್ಕರ್ ಅವರ ಸಿದ್ಧಾಂತವೇ ಕಾರಣ ಎಂದು ದೂಷಿಸಿದರು. ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ನಡೆಸಿದ ಈ ತ್ಯಾಗಜೀವಿಗೆ ಸರ್ಕಾರದಿಂದ ಒಂದೇ ಒಂದು ಪ್ರಶಸ್ತಿಯನ್ನೂ ನೀಡಲಿಲ್ಲ. ಸ್ವಾತಂತ್ರ್ಯ ಸೌಧದ ಅಡಿಗಲ್ಲನ್ನು ಅಧಿಕಾರಸ್ಥರು ನಿರ್ಲಕ್ಷಿಸಿ ಗೋಪುರದ ಮೇಲೆ ಕುಳಿತು ಮೆರೆದ ವೈಖರಿ ಹೀಗೆ!
ಯಾವುದೇ ಭವ್ಯಸೌಧದ ಭದ್ರತೆಗೆ ಅಡಿಗಲ್ಲುಗಳೇ ಆಧಾರ. ಅಡಿಗಲ್ಲುಗಳು ಭದ್ರವಾಗಿರದಿದ್ದರೆ ಸೌಧ ಕುಸಿಯದೇ ಇರದು. ಆದರೆ ಇಂತಹ ಅಡಿಗಲ್ಲುಗಳನ್ನೇ ಕಡೆಗಣಿಸುವ ವಿಚಿತ್ರ ಸ್ಥಿತಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಹಾಗೂ ಅನಂತರದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಂಡು ಬಂದಿದೆ. ಇದೊಂದು ಕೆಟ್ಟ ಬೆಳವಣಿಗೆ ಎನ್ನದೆ ವಿಧಿಯಿಲ್ಲ. ಅಡಿಗಲ್ಲುಗಳಿಗೆ ಗೋಪುರದ ಚಿಂತೆ ಇರುವುದಿಲ್ಲ. ಆದರೆ ಗೋಪುರಗಳಿಗೆ ಅಡಿಗಲ್ಲುಗಳ ಚಿಂತೆ ಇರದಿದ್ದರೆ ಹೇಗೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.