ಧರ್ಮಸ್ಥಳ: ಮಹಿಳೆಯರು ಜಾಗೃತರಾದರೆ ಕುಟುಂಬ ಅಭಿವೃದ್ಧಿಯೊಂದಿಗೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಮಹಿಳೆಯರು ಕುಟುಂಬ ಹಾಗೂ ಗ್ರಾಮಗಳ ಮೂಲ ಬೇರುಗಳಿದ್ದಂತೆ. ಕೇವಲ ವರ್ಷಕ್ಕೊಮ್ಮೆ ಆದಾಯ ಕಾಣುವ ನಾವು ಖರ್ಚಿನ ಬಗ್ಗೆ ಹಿಡಿತ ಮಾಡಬೇಕು. ಸ್ವಸಹಾಯ ಸಂಘಗಳಲ್ಲಿ ಸೇರಿಕೊಂಡ ಮಹಿಳೆಯರು ಸುಜ್ಞಾನವಂತರಾಗಿ ಸಮಾಜವನ್ನು ಮುನ್ನಡೆಸುವಂತಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಧನದಡಿಯಲ್ಲಿ ಹೂಳೆತ್ತಲಾದ ಧಾರಾವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಕೆರೆಯನ್ನು ಸಾರ್ವಜನಿಕರಿಗೆ ಸಮರ್ಪಿಸಿ, ಕೆರೆದಂಡೆಯ ಮೇಲೆ ಗಿಡ ನೆಡುವುದರೊಂದಿಗೆ ಜಿಲ್ಲೆಯ ಜಲಾನಯನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅತ್ಯಂತ ಸುಂದರವಾದ ಕೆರೆ ಹೆಬ್ಬಳ್ಳಿಯಲ್ಲಿ ನಿರ್ಮಾಣವಾಗಿದ್ದು ಇದನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ. ಸರ್ವಪಾಪ ನಿವಾರಣೆಗೂ ಗಂಗೆಯೇ ಬೇಕು. ಆದರೆ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ಭೂಮಿಗೆ ನೀರುಣಿಸುವ ಕೆಲಸವನ್ನು ನಾವೆಲ್ಲಾ ಒಟ್ಟಾಗಿ ಮಾಡಬೇಕಾಗಿದೆ ಎಂದರು.
ಕೆರೆ ಏರಿಯ ಸುತ್ತಲೂ ಇನ್ನೂರಕ್ಕೂ ಹೆಚ್ಚು ವಿವಿಧ ಹಣ್ಣು ಹೂವಿನ ಗಿಡಗಳ ನಾಟಿ ಮಾಡುವ ಕಾರ್ಯಕ್ರಮಕ್ಕೆ ಹೆಗ್ಗಡೆಯವರು ಸ್ವತಃ ಮಾವಿನ ಗಿಡ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು. ಹೆಬ್ಬಳ್ಳಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮಿಗಳು ಡಾ| ಹೆಗ್ಗಡೆಯವರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಎನ್.ಜಯಶಂಕರ ಶರ್ಮ, ಹೆಬ್ಬಳ್ಳಿ ಗ್ರಾ.ಪಂ ಅಧ್ಯಕ್ಷೆ ರತ್ನವ್ವ ಸುಣಗಾರ್, ಉಪಾಧ್ಯಕ್ಷ ರಮೇಶ್ ಧಾರವಾಡ, ತಾ.ಪಂ ಸದಸ್ಯ ಮಲ್ಲಪ್ಪ ಬಾವಿಕಟ್ಟೀ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಸ್ವಾಗತಿಸಿದರು. ನವಲಗುಂದ ಯೋಜನಾಧಿಕಾರಿ ಸತೀಶ್ ಎಚ್. ನಿರೂಪಿಸಿದರು. ಹೆಬ್ಬಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಡಿ ಚೌರಡಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.