ಹಿಂದು ಸಾಮ್ರಾಜ್ಯ ದಿನ ಜ್ಯೇಷ್ಠ ಶುದ್ಧ ತ್ರಯೋದಶಿ. ಇದು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವಾಗಿದೆ. ಇಂದಿನ ಈ ವಾತಾವರಣದಲ್ಲಿ ಯಾರಿಗೆ ಈ ಕುರಿತು ಜ್ಞಾನ, ಮಾಹಿತಿ ಇರುವುದಿಲ್ಲವೋ, ಅವರಲ್ಲಿ ಈ ದಿನವನ್ನು ಆಚರಿಸುವುದರ ಬಗ್ಗೆ, ಮನಸ್ಸಿನಲ್ಲಿ ಪ್ರಶ್ನೆಗಳು ಏಳಬಹುದು.
ನಮ್ಮ ದೇಶದಲ್ಲಿ ರಾಜರುಗಳ ಕೊರತೆ ಇಲ್ಲ, ದೇಶಕ್ಕಾಗಿ ಹೋರಾಡಿ ವಿಜಯಗಳಿಸಿದ ರಾಜರುಗಳ ಕೊರತೆಯೂ ಇಲ್ಲ. ಶಿವಾಜಿ ಮಹಾರಾಜರ ಕಾಲದ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಯನ್ನು ನೋಡಿದಾಗ ಅನೇಕ ಅಂಶಗಳಲ್ಲಿ ಸಮಾನತೆ ಕಂಡುಬರುತ್ತದೆ. ಅಂದಿನ ಕಾಲದಲ್ಲಿ ನಾಲ್ಕು ದಿಕ್ಕುಗಳಲ್ಲೂ ಸಂಕಟವಿತ್ತು, ಸಮಾಜವು ಅತ್ಯಾಚಾರದಿಂದ ಗ್ರಸ್ಥವಾಗಿತ್ತು, ಪೀಡನೆಗೊಳಗಾಗಿತ್ತು. ಅದೇ ರೀತಿ ಈಗಿನ ಕಾಲವೂ ಇದೆ. ಮತ್ತು ಕೇವಲ ವಿದೇಶಿ ಮತ್ತು ಸಾಮೂಹಿಕ ಶಕ್ತಿಗಳ ಸಂಕಟ ಮಾತ್ರವಲ್ಲದೇ ಎಲ್ಲ ರೀತಿಯ ಸಂಕಟಗಳಿವೆ. ಅಂದಿನ ಸಮಯದಲ್ಲಿ ಇವೆಲ್ಲ ಸಂಕಟಗಳ ನಡುವೆ ಸಮಾಜವು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು. ಇದು ಬಹಳ ದೊಡ್ಡ ಸಂಕಟವಾಗಿತ್ತು. ಮಹಮ್ಮದ್ ಬಿನ್ ಕಾಸಿಮನ ಆಕ್ರಮಣದಿಂದ ಸಂಕಟಗಳ ಸರಮಾಲೆ ಪ್ರಾರಂಭವಾಯಿತು. ನಾವು ಪದೇ ಪದೇ ಏಟು ತಿನ್ನುತ್ತ, ಕಚ್ಚಾಡುತ್ತ ಉಳಿದೆವು. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಒಂದು ನಿರಾಸೆಯ ಭಾವ ವ್ಯಾಪಿಸಿತು. ಈಗಿನ ಕಾಲದಲ್ಲಿಯೂ ಅದನ್ನು ನಾವು ಕಾಣುತ್ತೇವೆ. ಸಮಾಜದ ಬಗ್ಗೆ ಯೋಚಿಸುವ, ಪ್ರಾಮಾಣಿಕ ವ್ಯಕ್ತಿಗಳ ಬಳಿ ಹೋಗಿ ಕುಳಿತು ಮಾತನಾಡಿದರೆ ಅವರ ನಿರಾಸೆಯ ಭಾವವನ್ನು ಕಾಣುತ್ತೇವೆ. ಎಲ್ಲಿ ನೋಡಿದರೂ ಆಶಾಕಿರಣ ಕಾಣಸಿಗುವುದಿಲ್ಲ ಮತ್ತು ನಿರಾಸೆಯ ಪರಿಣಾಮವೆಂದರೆ ಆತ್ಮವಿಶ್ವಾಸ ಕಳೆದುಹೋಗುವುದು. ಸಮಾಜದ ಆತ್ಮವಿಶ್ವಾಸ ಕಳೆದುಹೋಗಿದೆ. ಶಿವಾಜಿಗಿಂತ ಮೊದಲಿನ ಪರಿಸ್ಥಿತಿಯೂ ಹೀಗೇ ಇತ್ತು. ತನ್ನ ವಿಜಿಗೀಷು ಪ್ರವೃತ್ತಿಯನ್ನು ಮರೆತ್ತಿದ್ದ ಹಿಂದುಸಮಾಜ ಹತಾಶೆಯಲ್ಲಿ ಮುಳುಗಿತ್ತು. ಇನ್ನುಮುಂದೆ ವಿದೇಶಿಗರ ಚಾಕರಿ ಮಾಡುವುದೇ ನಮ್ಮ ಕೆಲಸ ಎಂದು ಸಮಾಜವು ಭಾವಿಸಿತ್ತು. ಈ ಮಾನಸಿಕತೆಯ ಉತ್ತಮ ದಿಗ್ದರ್ಶನ ರಾಮಗಣೇಶ ಗಡಕರಿಯವರ ’ಶಿವಸಂಭವ’ ನಾಟಕದಲ್ಲಿದೆ. ಅದರಲ್ಲಿ ಶಿವಾಜಿ ಮಹಾಜನರ ಜನ್ಮಕಥೆ ಇದೆ. ಜೀಜಾಮಾತೆ ಗರ್ಭವತಿಯಾಗಿದ್ದಾಳೆ ಮತ್ತು ಗರ್ಭವತಿ ಸ್ತೀಯರಿಗೆ ತಿನ್ನುವ, ಕುಡಿಯುವ ವಿಶಿಷ್ಟ ಇಚ್ಛೆಗಳು ವ್ಯಕ್ತವಾಗುತ್ತದೆ. ಜನ್ಮತಾಳುವ ಬಾಲಕನ ಸ್ವಭಾವಕ್ಕೆ ತಕ್ಕಂತೆ ಬಯಕೆಗಳಾಗುತ್ತವೆ ಎಂದು ಹೇಳುತ್ತಾರೆ. ಮರಾಠಿಯಲ್ಲಿ ’ಡೋಹಾಳೆ’ ಎನ್ನುತ್ತಾರೆ. ಎಲ್ಲ ಗರ್ಭವತಿ ಸ್ತ್ರೀಯರಿಗೂ ಈ ರೀತಿ ಇಚ್ಛೆಗಳು ಉಂಟಾಗುತ್ತವೆ. ಸ್ತ್ರೀಯ ಸಖಿಯರು ಅವಳ ಇಚ್ಛೆಗಳನ್ನು ಪೂರೈಸಲು ಪ್ರಯತ್ನ ಪಡುತ್ತಾರೆ. ನಾಟಕದಲ್ಲಿ ಬಂದು ಪ್ರಸಂಗದಲ್ಲಿ ಜೀಜಾಮಾತೆಯ ಸಖಿಯರು ’ನಿನ್ನ ಇಚ್ಛೆ ಏನು? ಎಂದು ಕೇಳುತ್ತಾರೆ. ’ನಾನು ಸಿಂಹದ ಸವಾರಿ ಮಾಡಬೇಕು, ನನಗೆ ಎರಡಲ್ಲ, ಹದಿನೆಂಟು ಕೈಗಳಿರಬೇಕು ಮತ್ತ ಒಂದೊಂದು ಕೈಯಲ್ಲಿ ಒಂದೊಂದು ಆಯುಧವಿರಬೇಕು, ಪೃಥ್ವಿಯಲ್ಲಿರುವ ಎಲ್ಲ ರಾಕ್ಷಸರನ್ನು ನಾನು ನಿರ್ನಾಮಗೊಳಿಸಬೇಕು, ಸಿಂಹಾಸನದ ಮೇಲೆ ಕುಳಿತು ಮತ್ತು ಛತ್ರ ಚಾಮರಾದಿಗಳ ಧಾರಣೆಯಿಂದ ವಿಶ್ವದಲ್ಲಿ ನನ್ನ ಹೆಸರಿನ ಜಯಘೋಷ ಮಾಡಿಕೊಳ್ಳಬೇಕು’ – ಎನ್ನುತ್ತಾಳೆ ಜೀಜಾಮಾತೆ. ಸಾಮಾನ್ಯವಾಗಿ ಇದನ್ನೆಲ್ಲ ಕೇಳಿದಾಗ ಹುಟ್ಟುವ ಮಗು ವಿಜಿಗೀಷು ಪ್ರವೃತ್ತಿಯವನೆಂದು ಸಂತೋಷವಾಗಬೇಕು. ಆದರೆ ಜೀಜಾಮಾತೆಯ ಸಖಿಯರು ’ಇದೇನಿದು’? ಇದೇನು ಯೋಚಿಸುತ್ತಿರುವೆ? ಹೀಗೆಲ್ಲ ಯೋಚಿಸಿದ ಒಬ್ಬ ರಾಜನ ಸ್ಥಿತಿ ಹೇಗಾಯ್ತು ಗೊತ್ತಿದೆ ತಾನೇ? ನಾವು ಹಿಂದುಗಳು, ನಾವು ಸಿಂಹಾಸನ ಏರುವುದೇ? ನಾವು ಕೈಯಲ್ಲಿ ಶಸ್ತ್ರ ಹಿಡಿಯುವುದೇ? ಇದೇನು ಭಿಕ್ಷೆ ಬೇಡುವ ಲಕ್ಷಣಗಳನ್ನು ಹೇಳುತ್ತಿರುವಿ?’ ಎನ್ನುತ್ತಾರೆ. ’ಭೀಕೆಟೆ ಡೋಹಾಳೆ’ ಎಂಬ ಮರಾಠಿ ಶಬ್ದವಿದೆ. ಭಿಕ್ಷೆ ಬೇಡುವ ಲಕ್ಷಣ! ಅಂದರೆ ಹಿಂದುಗಳು ಕೈಯಲ್ಲಿ ಶಸ್ತ್ರ ಹಿಡಿದು ಪರಾಕ್ರಮ ತೋರಿಸುವ ಇಚ್ಛೆ ಇಟ್ಟುಕೊಳ್ಳುವುದು ಅಥವಾ ಸಿಂಹಾಸನದ ಮೇಲೆ ಕೂಡುವ ಇಚ್ಛೆ ವ್ಯಕ್ತಪಡಿಸುವುದು ದಿವಾಳಿತನದ ಲಕ್ಷಣವಾಗಿದೆ. ಈ ತರಹದ ಮಾನಸಿಕತೆ ಹಿಂದು ಸಮಾಜದಲ್ಲಿ ಮೂಡಿತ್ತು. ಆತ್ಮವಿಶ್ವಾಶ ಶೂನ್ಯರಾದಾಗ ಎಲ್ಲ ಪ್ರಕಾರದ ದೋಷಗಳು ಬಂದು ಸೇರುತ್ತವೆ. ಸ್ವಾರ್ಥ ಬರುತ್ತದೆ. ಪರಸ್ಪರ ಜಗಳ ಪ್ರಾರಂಭವಾಗುತ್ತದೆ ಮತ್ತು ಇದರ ಲಾಭವನ್ನು ಪಡೆದುಕೊಂಡು ವಿದೇಶೀಶಕ್ತಿಗಳು ಬೆಳೆಯುತ್ತ ಹೋಗುತ್ತವೆ. ಈ ಶಕ್ತಿಗಳು ಬೆಳೆಯುತ್ತ ಹೋದಂತೆ ಸಾಮಾನ್ಯ ಜನರ ಜೀವನವು ದುರ್ಭರವಾಗುತ್ತದೆ.
ಅನ್ನ ನಾಹಿ, ವಸ್ತ್ರ ನಾಹಿ, ಸೌಖ್ಯ ನಾಹಿ, ಜನಾಮಧ್ಯೆ,
ಆಶ್ರಯೋ, ಪಾಹತಾ ನಾಹಿ, ಬುದ್ಧಿ ದೇ ರಘುನಾಯಕಾ
ಮಾಣಸಾ ಖಾವಯಾ ಅನ್ನ ನಾಹಿ, ಅಂಥರೂಣ ಪಾಂಘರೂಣ ತೇ ಹೀ ನಾಹಿ,
ಘರ ಕರಾಯಾ ಸಾಮಗ್ರಿ ನಾಹಿ, ಅಖಂಡ ಚಿಂತೆಚ್ಯಾ ಪ್ರವಾಹಿ ಪಡಿಲೆ ಲೋಕ,
(ಅನ್ನವಿಲ್ಲ, ವಸ್ತ್ರವಿಲ್ಲ, ಸೌಖ್ಯವಿಲ್ಲ ಜನರಿಗೆ| ನೋಡಲು ಆಸರೆಯೂ ಸಿಗುತ್ತಿಲ್ಲ ಬುದ್ಧಿಗೀಡು ರಘುನಾಯಕಾ| ಮನುಷ್ಯರಿಗೆ ತಿನ್ನಲು ಅನ್ನವಿಲ್ಲ, ಹಾಸಲು -ಹೊದೆಯಲು ಇಲ್ಲ, ಮನೆಕಟ್ಟಲು ಸಾಮಗ್ರಿಗಳಿಲ್ಲ, ಅಖಂಡ ಚಿಂತಾಪ್ರವಾಹದಲ್ಲಿ ಬಿದ್ದಿರುವ ಜನರು||)
ಹೀಗೆ ಅಂದಿನ ಪರಿಸ್ಥಿತಿಯನ್ನು ಸ್ವಾಮಿ ರಾಮದಾಸರು ವರ್ಣಿಸುತ್ತಾರೆ. ಈ ರೀತಿ ಪರಾಕ್ರಮವಿಹೀನ, ದೈಶ್ಯಯುಕ್ತ ಸಮಾಜದ ಸ್ಥಿತಿ ಇತ್ತು. ಇಂತಹ ಸಂದರ್ಭದಲ್ಲಿ ಮಹಾರಾಜರ ಕಾರ್ಯದಿಂದ ವಿದೇಶಿಯರೊಂದಿಗೆ ಸುದೀರ್ಘ ಸಂಘರ್ಷದ ನಂತರ, ಭಾರತೀಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಹಿಂದುಗಳ ಅಧಿಕೃತ ವಿಧಿವತ್ತಾದ, ಸ್ವತಂತ್ರ ಸಿಂಹಾಸನ ಸ್ಥಾಪಿತವಾಯಿತು.
ಯಾಥಾರ್ಥ ಸಂದೇಶ
ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಗುವುದು ಕೇವಲ ಶಿವಾಜಿ ಮಹಾರಾಜರ ವಿಜಯದ ವಿಷಯವಲ್ಲ. ಕಾಬೂಲ್ಜಾಬೂಲ್ಗಳ ಮೇಲೆ ಆಕ್ರಮಣವಾದಾಗಿನಿಂದ, ಶಿವಾಜಿ ಮಹಾರಾಜರ ರಾಜ್ಯಾಭಿಷೇಕದವರೆಗಿನ ಸಮಯದಲ್ಲಿ ಈ ದೇಶದ ಧರ್ಮ, ಸಂಸ್ಕೃತಿ ಹಾಗೂ ಸಮಾಜಗಳನ್ನು ಸಂರಕ್ಷಣೆ ಮಾಡಿ ಹಿಂದುರಾಷ್ಟ್ರದ ಸರ್ವಾಂಗೀಣ ಉನ್ನತಿಯ ಪ್ರಯತ್ನಗಳೆಲ್ಲವೂ ವಿಫಲಗೊಂಡಿದ್ದವು. ಅನೇಕ ಪ್ರಯೋಗಗಳಾಯಿತು, ರಾಜರು ಹೋರಾಡಿದರು, ವಿಭಿನ್ನ ರೀತಿಯ ರಾಜನೀತಿಯ ಪ್ರಯೋಗ ನಡೆಯಿತು, ಸಂತರು ಸಮಾಜದಲ್ಲಿ ಏಕತೆಯ ಭಾವೆನಯನ್ನು ಮೂಡಿಸುವ, ಎಲ್ಲರನ್ನೂ ಒಟ್ಟುಗೂಡಿಸುವ, ಅದರಲ್ಲಿ ಶ್ರದ್ಧೆಯನ್ನು ನೆಲೆಗೊಳಿಸುವ ಪ್ರಯೋಗಗಳನ್ನು ಮಾಡುತ್ತಿದ್ದರು. ಕೆಲವು ತಾತ್ಕಾಲಿಕವಾಗಿ ಸಫಲಗೊಂಡವು. ಕೆಲವು ಪೂರ್ಣ ವಿಫಲಗೊಂಡವು. ಆದರೆ ಸಮಾಜಕ್ಕೆ ಬೇಕಾಗಿದ್ದ ಸಾಫಲ್ಯತೆ ಎಲ್ಲಿಯೂ ಕಂಡುಬರಲಿಲ್ಲ. ಈ ಎಲ್ಲ ಪ್ರಯೋಗಗಳ ಪ್ರಯತ್ನಗಳ ಅಂತಿಮ ಸಫಲ ಪರಿಣತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಗಿದೆ. ಇದು ಕೇವಲ ಶಿವಾಜಿ ಮಹಾರಾಜರ ವಿಜಯವಲ್ಲ. ಇದು ಹೋರಾಡುತ್ತಿರುವ ಹಿಂದುರಾಷ್ಟ್ರದ ಶತ್ರುಗಳ ಮೇಲಿನ ವಿಜಯವಾಗಿದೆ. ಹೊಸ ರೂಪದಲ್ಲಿ ಬಂದಿರುವ ಪರದಾಸ್ಯವು ಕೇವಲ ಅಧಿಕಾರ ಮತ್ತು ಸಂಪತ್ತಿನ ಲೂಟಿಗೆ ಸೀಮಿತವಾಗಿರದೇ ಮನುಷ್ಯನನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದೆ. ಬದಲಾಗದವರನ್ನು ಭಿನ್ನಗೊಳಿಸಿ, ಸಮಾಜ ವಿಧ್ವಂಸಕ, ಧರ್ಮ ವಿಧ್ವಂಸಕ ಪರಕೀಯ ಆಕ್ರಮಣಗಳಿಂದ ನಮ್ಮ ಸಹಿಷ್ಣುತೆಯ, ಶಾಂತಿಯ, ಅಹಿಂಸೆಯ, ಎಲ್ಲರೂ ನಮ್ಮವರೆಂಬ ತತ್ವಜ್ಞಾನವನ್ನು ಅಬಾಧಿತವಾಗಿ ಇಟ್ಟುಕೊಳ್ಳುತ್ತ, ಇದರ ಸುರಕ್ಷತೆಗಾಗಿ ಹೋರಾಡುತ್ತ ವಿಜಯಪ್ರಾಪ್ತಿಯನ್ನು ಹೊಂದುವುದು ಹೇಗೆ ಎಂಬ ಈ ಜಿಜ್ಞಾಸೆಗೆ, ಸಮಾಜದ ಈ 500 ವರ್ಷಗಳ ಸಮಸ್ಯೆಗೆ ಶಿವಾಜಿ ಮಹಾರಾಜರ ಪಟ್ಟಾಭಿಷೇಕವೇ ಪರಿಹಾರವಾಯಿತು. ಈ ದೃಷ್ಟಿಯಿಂದಲೇ ಪಟ್ಟಾಭಿಷೇಕವು ಮಹತ್ವದ್ದಾಗಿದೆ. ಶಿವಾಜಿಯ ಈ ಕಾರ್ಯಗಳನ್ನು ನೋಡಿದ ಜನತೆಯು ಹಿಂದುಸಮಾಜ, ಹಿಂದುಧರ್ಮ, ಸಂಸ್ಕೃತಿ, ರಾಷ್ಟ್ರವನ್ನು ಮುನ್ನಡೆಸಬಲ್ಲ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿವಾಜಿಯೇ ಎಂಬ ವಿಶ್ವಾಸವನ್ನು ತಾಳಿತು ಮತ್ತು ಔರಂಗಜೇಬನ ಗುಲಾಮಗಿರಿಯನ್ನು ಕಾಲಿಂದೊದೆದು ಕವಿ ಭೂಷಣ ದಕ್ಷಿಣಕ್ಕೆ ಬಂದ. ಶಿವಾಜಿ ಮಹಾಜನರ ಮುಂದೆ ’ಶಿವ ಬಾವನಿ’ ಯ ಗಾಯನ ಮಾಡಿದ. ಭೂಷಣನಿಗೆ ಧನಸಂಪತ್ತಿನ ಅವಶ್ಯಕತೆ ಇರಲಿಲ್ಲ. ಅವರು ಔರಂಗಜೇಬನ ಆಸ್ಥಾನದಲ್ಲಿ ಕವಿಯಾಗಿದ್ದರು. ಹಿಂದುವಾಗಿದ್ದರು. ದೇಶಭಕ್ತರಾಗಿದ್ದರು. ಸಮಾಜದ ಎಲ್ಲ ಪ್ರಕಾರದ ಭೇದಗಳನ್ನು ಉಂಟುಮಾಡುತ್ತಿದ್ದ ವಿಧರ್ಮೀಯರ ಸ್ತುತಿಗಾನ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ ಪ್ರಣಯ ಗೀತೆಗಳನ್ನು ಹೇಳುತ್ತ ಕಾಲ ವ್ಯಯಿಸುತ್ತಿದ್ದರು. ಔರಂಗಜೇಬನು ಒಮ್ಮೆ ತನ್ನ ಸ್ತುತಿಗಾನ ಮಾಡಲು ಭೂಷಣರಿಗೆ ಆಜ್ಞಾಪಿಸಿದನು. ತುಂಬಿದ ಸಭೆಯಲ್ಲಿ ಭೂಷಣರು ಅವನ ಆದಶವನ್ನು ತಿರಸ್ಕರಿಸಿದರು. ಉಜ್ವಲವಾಗಿರುವವರ ಗುಣಗಾನವನ್ನು ಮಾತ್ರ ಕವಿ ಮಾಡುತ್ತಾನೆ. ಕವಿ ತನ್ನನ್ನು ತಾನು ಮಾರಿಕೊಳ್ಳುವುದಿಲ್ಲ. ನೀನು ಸ್ತುತಿಗೆ ಯೋಗ್ಯವಾದ ರಾಜನಲ್ಲ ಮತ್ತು ಮಿನ್ನ ಚಾಕರಿ ನನಗೆ ಬೇಕಿಲ್ಲ ಎಂದು ಹೇಳಿ ಆಸ್ಥಾನವನ್ನು ಬಿಟ್ಟು ಬಂದರು. ಶಿವಾಜಿ ಮಹಾರಾಜ ರಾಜನಾಗಲಿ ಎಂಬುದು ಕೇವಲ ಮಹಾರಾಷ್ಟ್ರದ ಜನರ ಅಭಿಪ್ರಾಯವಾಗಿರಲ್ಲ. ಧರ್ಮ ಸಂಸ್ಥಾಪನೆಗಾಗಿ ಶಿವಾಜಿ ರಾಜನಾಗಬೇಕೆಂದು ಸಾಧು-ಸಂತರ ಆಕಾಂಕ್ಷೆಯಾಗಿತ್ತು. ಹಿಂದು ಸಮಾಜಕ್ಕೆ ಒಂದು ಯೋಗ್ಯ ನೇತೃತ್ವ ನೀಡುವುದೇ ಶಿವಾಜಿ ಕೆಲಸ ಎಂದು ಜೀಜಾಮಾತೆ ಹೇಳುತ್ತಿದ್ದರು. ಕಾಶಿ ವಿಶ್ವೇಶ್ವರ ಮಂದಿರದ ವಿಧ್ವಂಸವನ್ನು ಕಣ್ಣಾರೆ ಕಂಡಿದ್ದ ಅಲ್ಲಿನ ಪರಂಪರಾಗತ ಪೂಜಾರಿ ಗಾಗಾಭಟ್ಟರು, ಈ ಮಂದಿರಗಳ ಧ್ವಂಸವನ್ನು ತಡೆಯಬಲ್ಲ ವ್ಯಕ್ತಿ ಯಾರಾದರೂ ಇದ್ದಾರೆಯೇ? ಎಂದು ಪರಿಶೀಲಿಸಿದರು. ಆಗ ಗಾಗಾಭಟ್ಟರಿಗೆ ಶಿವಾಜಿಯ ಹೆಸರೇ ಎಲ್ಲೆಡೆ ಕೇಳಿ ಬಂದಿತು. ಅವರು ಮಹಾರಾಷ್ಟ್ರಕ್ಕೆ ಬಂದರು. ನಾಸಿಕ್ನಿಂದ ಶಿವಾಜಿಯ ಭೆಟ್ಟಿಯವರೆಗಿನ ತನ್ನ ಪ್ರವಾಸದಲ್ಲಿ ಶಿವಾಜಿಯ ಸಂಪೂರ್ಣ ಮಾಹಿತಿಯನ್ನು ಅವರು ಪಡೆದುಕೊಂಡರು. ಈ ಎಲ್ಲ ಅನುಭವಗಳನ್ನು ಕಂಡುಕೊಂಡ ಅವರು ’ನೀವು ಸಿಂಹಾಸನಾಧೀಶ್ವರರಾಗಬೇಕು’ ಎಂದು ಶಿವಾಜಿ ಮಹಾರಾಜರಿಗೆ ಹೇಳಿದರು. ಈ ರೀತಿಯಾಗಿ ಮಹಾರಾಷ್ಟ್ರದಲ್ಲಿ ಸಿಂಹಾಸನ ಸ್ಥಾಪನೆ, ಶಿವಾಜಿಯ ರಾಜ್ಯಾಭಿಷೇಕ ಇಷ್ಟಕ್ಕೇ ಅದು ಸೀಮಿತಗೊಂಡಿರಲಿಲ್ಲ. ಔರಂಗಜೇಬನ ಭೇಟಿಗೆ ಮಹಾರಾಜರು ಹೊರಟಾಗ ಸಮಸ್ತ ಹಿಂದು ಜಗತ್ತು, ಇಡೀ ವಿಶ್ವವೇ ಕಾತರದಿಂದ ನೋಡುತ್ತಿತ್ತು. ಈ ಭೇಟಿಯನ್ನು ವಿಶೇಷ ರೀತಿಯಿಂದ ಕಾಣುತ್ತಿದ್ದ ಹಿಂದು ಜಗತ್ತಿಗೆ ಇದು ಅಂತಿಮ ಪರೀಕ್ಷೆ ಎಂಬ ಭಾವ ಮೂಡಿತ್ತು. ಎಲ್ಲರೂ ಹೋರಾಟದಲ್ಲಿ ತೊಡಗಿದ್ದರು. ಅವರಿಗೆ ಹಿಂದುರಾಷ್ಟ್ರ ಬೇಕಾಗಿತ್ತು. ಶಿವಾಜಿ ಮಹಾರಾಜರ ಈ ಕಾರ್ಯ ಸಫಲಗೊಳ್ಳುವುದೇ ಎಂದು ನೋಡುತ್ತಿದ್ದ ಅವರುಗಳಿಗೆ ಇದು ಅಂತಿಮ ಪರೀಕ್ಷೆ ಎನಿಸಿತ್ತು. ಔರಂಗಜೇಬನಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡು ಬಂದು, ಶಿವಾಜಿ ಮಹಾರಾಜರು ತಮ್ಮ ಸಿಂಹಾಸನವನ್ನು ಸ್ಥಾಪಿಸಿದರು. ಇವೆಲ್ಲದರ ಪರಿಣಾಮವಾಗಿ ರಾಜಸ್ಥಾನದಲ್ಲಿ ಅಂತಃಕಲಹದಲ್ಲಿ ಮುಳುಗಿದ್ದ ರಾಜರುಗಳು ತಮ್ಮೆಲ್ಲ ಭೇದಗಳನ್ನು ಮರೆತು ದುರ್ಗಾದಾಸ್ ರಾಥೋಡ್ ಎಂಬುವವನ ನೇತೃತ್ವದಲ್ಲಿ ಒಂದಾದರು. ಪರಿಣಾಮವಾಗಿ ಶಿವಾಜಿಯ ರಾಜ್ಯಾಭಿಷೇಕವಾದ ಕೆಲವು ವರ್ಷಗಳ ನಂತರ ಎಲ್ಲ ವಿಧರ್ಮೀಯರೂ ರಾಜಸ್ಥಾನ ಬಿಟ್ಟು ಓಡಿಹೋಗುವ ಪರಿಸ್ಥಿತಿ ಎದುರಾಯಿತು. ತದನಂತರ ಮೊಘಲರು ಮತ್ತು ತುರ್ಕಿ ರಾಜರ ಹೆಜ್ಜೆಗಳು ರಾಜಸ್ಥಾನದಲ್ಲಿ ಬೀಳಲಿಲ್ಲ. ನೌಕರರಾಗಿ ಅವರು ಬಂದಿರಬಹುದು, ರಾಜರಾಗಿ ಅಲ್ಲ. ಛತ್ರಸಾಲನಂತೂ ಸ್ವತಃ ಶಿವಾಜಿ ಮಹಾರಾಜರಿಂದಲೇ ಪ್ರೇರಣೆ ಪಡೆದನು. ಛತ್ರಸಾಲನ ತಂದೆಯ ಕಾಲದವರೆಗೂ ಸಂಘರ್ಷ ನಡೆದೇ ಇತ್ತು. ಶಿವಾಜಿಯ ಕಾರ್ಯಶೈಲಿಯನ್ನು ಪ್ರತ್ಯಕ್ಷ ಕಂಡಿದ್ದ ಛತ್ರಸಾಲನು ಸ್ವಧರ್ಮದ ಸ್ವರಾಜ್ಯವನ್ನು ಸ್ಥಾಪಿಸಿದನು. ’ಶಿವಾಜಿಯ ನೀತಿಯನ್ನೇ ಅನುಸರಿಸುತ್ತ, ಆಕ್ರಮಕರ ಹೆಜ್ಜೆ ಈ ನೆಲದ ಮೇಲೆ ಬೀಳದಂತೆ ನೋಡಿಕೊಳ್ಳುತ್ತೇನೆ’ – ಎಂದು ಅಸಮಿನ ರಾಜ ಚಕ್ರಧ್ವಜಸಿಂಹ ಹೇಳುತ್ತಿದ್ದನು. ಅಸ್ಸಾಂ ಯಾವಾಗಲೂ ಮೊಘಲರ ಗುಲಾಮಿತನ ಒಳಗಾಗಲಿಲ್ಲ. ಇಸ್ಲಾಂಮಿನ ಗುಲಾಮಗಿರಿಗೆ ಒಳಗಾಗಿರಲಿಲ್ಲ. ಬ್ರಹ್ಮಪುತ್ರದಿಂದ ಆಕ್ರಮಣಕರೆಲ್ಲರೂ ಕಾಲ್ದೆಗೆದರು. ಇಸ್ಲಾಂಮಿನ ಗುಲಾಮಿತನಕ್ಕೆ ಒಳಗಾಗಿದ್ದರೂ ಶಿವಾಜಿಯ ನೀತಿಯನ್ನು ಅನುಸರಿಸುವ ಬಗ್ಗೆ ಚಕ್ರಧ್ವಜಸಿಂಹ ಬರೆದಿದ್ದಾನೆ ಹಾಗೂ ಮಾತಾಡಿದ್ದಾನೆ. ಇದೇ ನೀತಿಯಿಂದಲೇ ಬಿಹಾರದ ರಾಜನಾಗಿದ್ದ ರಾಜ ರುದ್ರಸಿಂಹನ ಹೋರಾಟವೂ ಸಫಲವಾಗಿತ್ತು. ’ಶಿವಾಜಿಯಂತೆಯೇ ನಾವೂ ಕೂಡ ಎಲ್ಲ ಷಂಡರನ್ನು ಬಂಗಾಲ ಸಮುದ್ರದಲ್ಲಿ ಮುಳುಗಿಸಬೇಕು’ ಎನ್ನುತ್ತಿದ್ದರು ಅವರು. ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ. ಇದುವೇ ವಿಜಯದ ಹಾದಿ-ಇದರ ಮೇಲೆ ಮುನ್ನಡೆಯಿರಿ ಎಂಬುದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಸಂದೇಶವಾಗಿತ್ತು.
ಶಿವಾಜಿಯ ಎಲ್ಲ ಕಾರ್ಯಗಳ ಪ್ರಯೋಜನವೂ ಇದೇ ಆಗಿದೆ. ಶಿವಾಜಿ ಮಹಾರಾಜರ ಈ ಕಾರ್ಯವು ಸ್ವಂತಕ್ಕಾಗಿ ಇರಲಿಲ್ಲ. ಅವರು ವ್ಯಕ್ತಿಗತ ಕೀರ್ತಿ, ಸಮ್ಮಾನಗಳಿಗಾಗಿ ಅಧಿಕಾರವನ್ನು ಪಡೆಯಲಿಲ್ಲ. ಅದು ಶಿವಾಜಿಯ ಸ್ವಭಾವವೂ ಆಗಿರಲಿಲ್ಲ. ದಕ್ಷಿಣದಲ್ಲಿ ಕುತುಬ್ಷಹನ ಭೇಟಿಯ ನಂತರ ಶ್ರೀಶೈಲ ಮಲ್ಲಿಕಾರ್ಜುನಕ್ಕೆ ಆಗಮಿಸಿದ ಅವರು ಭಾವವಿಷ್ಠರಾಗಿ ಸಂಪೂರ್ಣ ವೈರಾಗ್ಯವನ್ನು ತಾಳಿ ತನ್ನ ಶಿರಸ್ಸನ್ನು ಶಿವಲಿಂಗದ ಮುಂದೆ ಅರ್ಪಿಸಲು ಸಿದ್ಧರಾಗಿದ್ದರೆಂದು ಕಥೆಯಲ್ಲಿ ಕೇಳುತ್ತೇವೆ. ಶಿವಾಜಿಯ ಅಂಗರಕ್ಷಕ ಮತ್ತು ಅಮಾತ್ಯರು ಅವರ ಪ್ರಾಣವನ್ನು ಉಳಿಸಿದ್ದರು. ಸ್ವಾರ್ಥದ ಮಾತು ದೂರವಿರಲಿ, ಅವರಿಗೆ ತಮ್ಮ ಪ್ರಾಣದ ಮೇಲೆಯೂ ಮೋಹ ಇರಲಿಲ್ಲ. ದೇಶಕಾರ್ಯದಲ್ಲಿ ಸೇವೆಮಾಡುವ ಅವಕಾಶ ನೀಡಿರೆಂದು ಛತ್ರಸಾಲನು ಮಹಾರಾಜರ ಬಳಿಗೆ ಬಂದಿದ್ದನು. ಸ್ವಾರ್ಥದ ಯೋಚನೆ ಮಹಾರಾಜರಲ್ಲಿ ಇದ್ದಿದ್ದರೆ ಛತ್ರಸಾಲನನ್ನು ಮಾಂಡಲೀಕನನ್ನಾಗಿ ಇಟ್ಟುಕೊಳ್ಳುತ್ತಿದ್ದರು. ನೀನು ನೌಕರನಾಗಲು ಬಂದಿರುವೆಯೋ? ಕ್ಷತ್ರಿಯ ಕುಲದಲ್ಲಿ ಹುಟ್ಟಿರುವ ನೀನು ಬೇರೆ ರಾಜನ ಸೇವೆಗೆ ಬಂದಿರುವೆಯೋ? ನಿನ್ನ ರಾಜ್ಯವನ್ನೇ ಸ್ಥಾಪಿಸಿಕೋ ಎಂದು ಉಪದೇಶಿಸಿ ಛತ್ರಸಾಲನನು ಬೀಳ್ಕೊಟ್ಟರು. ರಾಜ್ಯವನ್ನು ನನ್ನ ರಾಜ್ಯಕ್ಕೆ ಜೋಡಿಸು, ಮಾಂಡಲಿಕನಾಗಿ ಕೆಲಸ ಮಾಡು ಎಂದವರು ಹೇಳಲಿಲ್ಲ. ಯಾವುದೋ ಒಂದು ಸಣ್ಣ ಜಹಗೀರಿನ, ಒಂದು ರಾಜ್ಯದ, ಎಲ್ಲಾ ರಾಜರುಗಳ ಮಧ್ಯದಲ್ಲಿ ಅತ್ಯಂತ ಪ್ರಭಾವಿ ರಾಜನಾಗಿ ಉಳಿಯುವ ಉದ್ದೇಶ ಮಹಾರಾಜರಿಗಿರಲಿಲ್ಲ.
ಲಿಸ್ಬನ್ನ ಪೋರ್ಚುಗೀಸ್ ಸಂಗ್ರಹಾಲಯದಲ್ಲಿ ಗೋವೆಯ ಗವರ್ನರ್ ಪತ್ರವಿದೆ. ಗೋವೆಯ ಗವರ್ನರ್ನ ನೌಕರನೊಬ್ಬ ಶಿವಾಜಿ ಮಹಾರಾಜರ ಕಿಲ್ಲೇದಾರ್ ರಾವಜಿ ಸೋಮನಾಥ ಪತಕಿಯ ಸಂಬಂಧಿಕನು. ’ಶಿವಾಜಿ ಮಹಾರಾಜ ಇಷ್ಟೆಲ್ಲ ಜಗಳ -ಕೋಲಾಹಲಗಳಲ್ಲಿ ಏಕೆ ಮುಳುಗಿದ್ದಾರೆ? ಆರಾಮಾಗಿ ಇರಬಹುದು, ಆದರೂ ಇರುತ್ತಿಲ್ಲ. ಉದ್ದೇಶವೇನು?’ ಎಂದನು ರಾವಜಿಯ ಬಳಿ ಪ್ರಶ್ನಿಸಿದನು. ರಾವಜಿಯು ಶಿವಾಜಿಯ ಬಳಿ ಬಂದು ’ಕಷ್ಟಪಟ್ಟು ನಾವು ಇಷ್ಟೆಲ್ಲ ಹೋರಾಟಗಳನ್ನು ಮಾಡುತ್ತಿದ್ದೇವೆ, ಈಗ ಸ್ವರಾಜ್ಯ ದೊಡ್ಡದಾಗಿದೆ. ಬಹಳವೇ ಚಿಕ್ಕದಾಗಿದ್ದ ನಿಮ್ಮ ಪುಣೆ ಜಹಗೀರು ಈಗ ವಿಸ್ತಾರವಾಗಿದೆ. ಮುಂದೇನು? ಇನ್ನು ಎಲ್ಲಿಯವರೆಗೆ ಮುಂದುವರೆಯುವುದು? ಎಂದು ಕೇಳಿದನು. ’ಕೇಳು, ಸಿಂಧುನದಿಯ ಉಗಮದಿಂದ ಕಾವೇರಿಯ ದಕ್ಷಿಣ ತಟದವರೆಗೆ ನಮ್ಮ ಭೂಮಿ ಇದೆ. ಈ ಭೂಮಿಯಿಂದ ಆಕ್ರಮಕರನ್ನು ಹೊರಹಾಕಬೇಕು. ಅವರಿಂದ ಧ್ವಂಸಗೊಂಡಿರುವ ತೀರ್ಥಸ್ಥಳಗಳನ್ನು ಪುನರ್ಸ್ಥಾಪಿಸುವ ಸಲುವಾಗಿಯೇ ನಾವು ಕಾರ್ಯ ಮಾಡಬೇಕು’ ಎಂದರು ಶಿವಾಜಿ. ಮಹಾರಾಜರ ಈ ಉತ್ತರವು ಪೋರ್ಚುಗೀಸರ ಸಂಗ್ರಹಾಲಯದಲ್ಲಿದೆ. ರಾವಜಿ ಸೋಮನಾಥ ತನ್ನ ಸಂಬಂಧಿಗೆ ತಿಳಿಸಿದ, ಅವನು ಗವರ್ನರ್ಗೆ ಹೇಳಿದ, ಗವರ್ನರ್ ಲಿಸ್ಬನ್ಗೆ ಪತ್ರ ಬರೆದ. ಸಂಗ್ರಹಾಲಯದಲ್ಲಿ ಈ ಪತ್ರವಿದೆ. ಮಹಾಜನರ ದೃಷ್ಟಿ ಇಷ್ಟು ವ್ಯಾಪಕವಾಗಿತ್ತು. ನಮ್ಮ ಪವಿತ್ರವಾದ ಹಿಂದುಧರ್ಮ, ಹಿಂದುಸಂಸ್ಕೃತಿ ಹಾಗೂ ಹಿಂದು ಸಮಾಜ ಇವುಗಳನ್ನು ಸಂರಕ್ಷಿಸಿ ಹಿಂದುರಾಷ್ಟ್ರದ ಸರ್ವಾಂಗೀಣ ಉನ್ನತಿ – ಎಂದು ನಾವು ಈಗ ಹೇಳುವಂತೆಯೇ ಮಹಾರಾಜರ ದೃಷ್ಟಿಯು ವ್ಯಾಪಕವಾಗಿತ್ತು. ಕೀರ್ತಿ ಅಪೇಕ್ಷೆ ಅವರಲ್ಲಿ ಇದ್ದಿದ್ದರೆ ತನಗಾದ ಅಪಮಾನವನ್ನು ಅವರು ಸಹಿಸುತ್ತಿರಲಿಲ್ಲ. ಮುಕ್ತ ಮೈದಾನದಲ್ಲಿ ಅಫಜಲ್ಖಾನನ ಸೈನ್ಯವನ್ನು ಸೋಲಿಸುವುದು ಕಷ್ಟವೆಂದರಿತ ಶಿವಾಜಿ ಮಹಾರಾಜರು ಪ್ರತಾಪಗಡದಲ್ಲಿ ಹೋಗಿ ಕುಳಿತರು. ತುಳಜಾಭವಾನಿಯ ಮಂದಿರ ಅಪವಿತ್ರವಾಯಿತು, ಪಂಢರಪುರ ಅಪವಿತ್ರವಾಯಿತು, ಜನರಲ್ಲಿ ಕೋಲಾಹಲವೆದ್ದಿತು, ಅವರ ಹೊಲಗಳು ನಾಶಗೊಂಡವು. ಊರುಗಳಿಗೆಲ್ಲ ಬೆಂಕಿ ಇಡಲಾಯಿತು. ಗೋಹತ್ಯೆ ನಡೆಯಿತು. ದೊಡ್ಡ ದೊಡ್ಡ ಮಾತುಗಳನ್ನಾಡುವ ಶಿವಾಜಿ ಎಲ್ಲಿ? ಎಲ್ಲಿ ಹೋಯಿತು ಅವನ ಮಾತುಗಳು? ಎಂದು ಜನರು ಆಡಿಕೊಂಡರು. ಈ ಅಪಮಾನಕ್ಕೆ ಶಿವಾಜಿಯು ಸೊಪ್ಪು ಹಾಕಲಿಲ್ಲ. ಕಾರಣವೆಂದರೆ ಅವರಿಗೆ ವ್ಯಕ್ತಿಗತ ಕೀರ್ತಿಲಾಭಗಳ ಮೋಹವಿರಲಿಲ್ಲ. ಅವರು ಒಂದು ನೀತಿಯನ್ನು ಇಟ್ಟುಕೊಂಡು ಹೊರಟಿದ್ದರು. ಬೆಂಕಿಯಲ್ಲಿ ಬೆಣ್ಣೆಯನ್ನು ಹಾಕುವ ರೀತಿಯಲ್ಲಿ ಶಿವಾಜಿ ನಿಜವಾಗಿಯೂ ಹೆದರಿದ್ದಾನೆ ಎಂಬಂತೆ ವಾತಾವರಣವನ್ನು ಹಬ್ಬಿಸಲಾಯಿತು. ಅದು ಕೂಟ ನೀತಿಯಾಗಿತ್ತು. ಅಫಜಲ್ಖಾನನನ್ನು ಕಾಡಿಗೆ ಎಳೆತಂದು ಸಮೂಲವಾಗಿ ನಾಶಮಾಡಿದರು. ಸ್ವಂತದ ಹೆಸರು-ಅಪಮಾನಗಳ ಯೋಚನೆ ಇದ್ದವರು ಈ ನೀತಿಯಂತೆ ನಡೆಯಲಾರರು. ಕೀರ್ತಿಯ ಅಪೇಕ್ಷೆ ಉಳ್ಳವರು ಯಾವ-ಯಾವುದೋ ದಾರಿಯನ್ನು ಬಳಸಿ ಜನರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ಜನರು ಬೆರಳೆತ್ತಿ ಮಾತನಾಡಿದರೆ ಅವರು ಸಹಿಸಿಕೊಳ್ಳುವುದಿಲ್ಲ. ಶಿವಾಜಿ ಮಹಾರಾಜರಲ್ಲಿ ಈ ವಿಚಾರವಿರಲಿಲ್ಲ. ಸ್ವಂತದ ವಿಚಾರ ಇರಲೇ ಇಲ್ಲ.
ಶಿವಾಜಿಯ ಆತ್ಮವಿಶ್ವಾಸ
ಶಿವಾಜಿ ಮಹಾರಾಜರು ದೇಶ-ಧರ್ಮದ ವಿಚಾರ ಮಾಡುತ್ತಿದ್ದರು. ಅದಕ್ಕಾಗಿ ಅವರು ಕಾರ್ಯ ಮಾಡಿದರು. ಎಷ್ಟೊಂದು ಆತ್ಮವಿಶ್ವಾಸ !ಪೂ. ಗುರೂಜೀಯವರ ಬೌದ್ಧಿಕ-ವರ್ಗದಲ್ಲಿ ನಾವು ಕೇಳಿರಬಹುದು. ದೇಶಕ್ಕಾಗಿ ಬಲಿದಾನ ಮಾಡುವ ಯೋಚನೆ ಜನರು ಮಾಡುತ್ತಾರೆ. ಭಗವಂತ ’ತಥಾಸ್ತು’ ಎನ್ನುತ್ತಾನೆ! ದೇಶಕ್ಕಾಗಿ ಬಲಿದಾನವಾಗಿರಿ ಎನ್ನುತ್ತಾನೆ. ! ಜನರು ಬಲಿದಾನ ಮಾಡುತ್ತಾರೆ. ಇದು ಕೂಡ ಬಹಳ ದೊಡ್ಡ ವಿಷಯವೇ, ಆದರೆ ಪರಾಕ್ರಮಿ, ವಿಜಿಗೀಷು ಪ್ರವೃತ್ತಿಯ ಮನಸ್ಸು ದೇಶಕ್ಕಾಗಿ ಹೋರಾಡುತ್ತೇನೆ. ಮತ್ತು ಎಲ್ಲ ಶತ್ರುಗಳನ್ನು ಹೊಡೆದೋಡಿಸಿ ವಿಜಯವನ್ನು ಸಂಪಾದಿಸುತ್ತೇನೆ ಎನ್ನುತ್ತದೆ. ಪರಿಸ್ಥಿತಿ ಹೇಗಿತ್ತು? ಉತ್ತರದಲ್ಲಿ ಬಾದಶಹನ ರಾಜ್ಯ, ದಕ್ಷಿಣದಲ್ಲಿ ಐದು ಸುಲ್ತಾನರುಗಳ ಸಾಮ್ರಾಜ್ಯ ಇತ್ತು. ವಿಜಯನಗರದಂತಹ ಬಲಾಢ್ಯ ಸಾಮ್ರಾಜ್ಯವು ಲುಪ್ತವಾಗಿ ಹೋಗಿತ್ತು. ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸುವೆ ಎಂದು ಶಿವಾಜಿ ಹೇಳಿದರು ಮತ್ತು ’ಈ ಸಾಮ್ರಾಜ್ಯ ನಿರ್ಮಾಣವಾಗುವುದು ಇದು ದೈವೇಚ್ಛೆ’ ಇದು ಈಶ್ವರೀಯ ಕಾರ್ಯ ಎನ್ನುತ್ತಿದ್ದರು.
ಇದು ಸಫಲವಾಗುವುದು ನಿಶ್ಚಿತ. ವಿಜಯಿಯಾಗುವುದು ನಿಶ್ಚಿತ. ಕಾರ್ಯ ನಾವು ಮಾಡಬೇಕಾಗಿದೆ. ಬಹುಶಃ ಪೂರ್ವದ ಸಂಘರ್ಷಮಯ ಇತಿಹಾಸವನ್ನು ಮಹಾರಾಜರು ಕೇಳಿರಬಹುದು, ಓದಿರಬಹುದು. ಶಿವಾಜಿ ಮಹಾರಾಜರ ಕಾರ್ಯವು ಅಲ್ಲಿಯವರೆಗೆ ನಡೆದ ಎಲ್ಲ ಕಾರ್ಯಗಳ, ಪ್ರಯತ್ನಗಳ ಸಮ್ಮಿಲನವಾಗಿದೆ ಎಂದು ಹೇಳಲು ಬಯಸುತ್ತೇನೆ. ಯಾಕೆಂದರೆ ಶಿವಾಜಿ ಮಹಾರಾಜರ ಬಳಿ ಇದ್ದ ಅಷ್ಟಪ್ರಧಾನ ಮಂಡಲವು ಪ್ರಾಚೀನ ಕಾಲದಲ್ಲಿ ಜಾರಿಯಲ್ಲಿದ್ದ ಪದ್ಧತಿಯಾಗಿತ್ತು, ಮಧ್ಯಂತರದಲ್ಲಿ ಅದು ಲುಪ್ತವಾಗಿ ಹೋಗಿತ್ತು. ವಿಜಯನಗರ ಸಾಮ್ರಾಜ್ಯವನ್ನು ಬಿಟ್ಟರೆ ಇನ್ನಾವ ಸಾರ್ವಭೌಮ ಹಿಂದುರಾಜರ ಬಳಿಯೂ ಅಷ್ಟಪ್ರಧಾನ ಮಂಡಲ ಇರಲಿಲ್ಲ. ಅದು ಲುಪ್ತವಾಗಿ ಹೋಗಿತ್ತು. ಹಾಗಾದರೆ ಮಹಾರಾಜರ ಬಳಿ ಎಲ್ಲಿಂದ ಬಂತು? ಅವರು ತಮ್ಮ ಪ್ರವಾಸದಲ್ಲಿ ಅಧ್ಯಯನ ಮಾಡುತ್ತಿದ್ದರು. ಚಿಕಿತ್ಸಕ ಬುದ್ಧಿ ಅವರಲ್ಲಿತ್ತು. ಬಹಳಷ್ಟು ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಬೆಂಗಳೂರಿಗೆ ಹೋದಾಗ ಶಹಾಜಿ ರಾಜರು ಜೊತೆಯಲ್ಲಿದ್ದರು. ಅವರು ಕಲಿಸುತ್ತಿದ್ದರು. ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಳ್ಳುವುದು, ಇತಿಹಾಸವನ್ನು ಕಲಿಯುವುದು ಅವರ ಗುಣವಾಗಿತ್ತು. ತುಕರಾಮ್ ಮಹಾರಾಜರು, ಸ್ವಾಮಿ ರಾಮದಾಸರಂತಹ ಸಂತರ ಭೇಟಿಯೂ ದೊರೆಯುತ್ತಿತ್ತು. ಸಂತ ರಾಮದಾಸರು ದೇಶಸಂಚಾರ ಮಾಡಿದ್ದರು. ಹಂಪಿಯಲ್ಲಿ ಅವರು ಮೂರುದಿನ ವಾಸವಾಗಿದ್ದರು. ಹಂಪಿಯಲ್ಲಿ ರಾಮದಾಸರು ಸ್ಥಾಪಿಸಿದ ಹನುಮಂತನ ವಿಗ್ರಹವಿದೆ. ವಿಜಿಗೀಷು ಪ್ರವೃತ್ತಿ ಸತ್ತು ಹೋಗಿರುವಂತಹ ದೃಶ್ಯಗಳು ಗೋಚರಿಸುತ್ತಿದ್ದವು. ಆದರೆ ಸಮಾಜದ ಸ್ಮೃತಿಯು ಕಳೆದುಹೋಗುವುದಿಲ್ಲ. ಸಮಾಜದ ನೇತೃತ್ವವು ಆತ್ಮವಿಶ್ವಾಸಹೀನವಾದರೂ ಸಮಾಜದ ಒಳಗೆ ಮನಸ್ಸಿನ ಆಳದಲ್ಲಿ ಜ್ಯೋತಿ ಪ್ರಕಾಶಿಸುತ್ತಿರುತ್ತದೆ. ಸಮಾಜದಲ್ಲಿ ಘಟಿಸುತ್ತಿರುವ ವಿದ್ಯಮಾನಗಳಿಂದ ಪಾಠ ಕಲಿತು, ಅನುಭವಗಳನ್ನು ಸಂಗ್ರಹಿಸಿ ತಪ್ಪುಗಳನ್ನು ಸುಧಾರಿಸಿಕೊಳ್ಳುತ್ತ ಕಾರ್ಯ ಮಾಡುವ ನಿಶ್ಚಿತ ಸಂಕಲ್ಪವನ್ನು ಮಾಡಿ ಶಿವಾಜಿ ಮಹಾರಾಜರು ಮುಂದಡಿ ಇಟ್ಟರು. ಎಷ್ಟು ಆತ್ಮವಿಶ್ವಾಸ! ನಾನು ಗೆಲ್ಲುವೆ, ನಾನು ಗೆಲ್ಲಲೇಬೇಕು. ಈ ಕಾರ್ಯ ಇದು ಭಗವಂತನ ಇಚ್ಛೆಯಾಗಿದೆ. ಹಾಗಾಗಿ ಅವರು ಸಮಾಜದಲ್ಲಿ ಜಾಗೃತಿಯ ಕಾರ್ಯವನ್ನು ಮೊದಲು ಪ್ರಾರಂಭಿಸಿದರು. ಏಕಾಏಕಿ ಹೋರಾಟವನ್ನು ಪ್ರಾರಂಭಿಸಲಿಲ್ಲ. ತಮಗೆ ನೀಡಲಾಗಿರುವ ಜಹಗೀರನ್ನು ಸಂಭಾಳಿಸಲು ಪುಣೆಗೆ ಬಂದರು. ಈ ಜಹಗೀರನ್ನು ಮೊದಲು ಶಾಹಜಿ ರಾಜರು ನೋಡಿಕೊಳ್ಳುತ್ತಿದ್ದರು. ನಿಜಾಮನನ್ನು ಕೈಯಲ್ಲಿಟ್ಟುಕೊಂಡು ಸ್ವಾತಂತ್ರ್ಯದ ಹೋರಾಟವನ್ನು ಪ್ರಾರಂಭಿಸಿದ್ದರು. ಒಪ್ಪಂದ ಸಾಧ್ಯವೇ ಎಂದು ನೋಡಲಾಯಿತು. ಸಾಧ್ಯವಾಗದೇ ಮುರಿದು ಬಿತ್ತು. ಶಹಾಜಿಯ ನೇತೃತ್ವದಲ್ಲಿ ಹೋರಾಡಿದ ಹಿಂದುಗಳಿಗೆ ಪಾಠ ಕಲಿಸಲು ಪುಣೆಗೆ ಬೆಂಕಿ ಇಟ್ಟರು. ಕತ್ತೆಗೆ ನೇಗಿಲುಗಳನ್ನು ಕಟ್ಟಿ ಪುಣೆಯ ಜಮೀನುಗಳನ್ನು ಬಿತ್ತಲಾಯಿತು. ಅಲ್ಲಿ ಒಂದು ಲೋಹದ ಹಾರೆಯನ್ನು ನೆಟ್ಟು ಹರಿದ ಚಪ್ಪಲಿಯನ್ನು ಅದಕ್ಕೆ ನೇತು ಹಾಕಲಾಯಿತು. ದೇಶದ, ಧರ್ಮದ ಹೋರಾಟದಲ್ಲಿ ತೊಡಗುವವರಿಗೆ ಇದೇ ಗತಿ ಕಾದಿದೆ ಎಂದುಕೊಳ್ಳುತ್ತ ಪುಣೆಯ ಜನರು ತಮ್ಮ ಮನೆಯ ಬಾಗಿಲನ್ನು ಅರ್ಧತೆರೆದು ಹೊರಗೆ ನೋಡುತ್ತ ಮಾತನಾಡಿಕೊಳ್ಳುತ್ತಿದ್ದರು. ಶಿವಾಜಿ ಮಹಾರಾಜರ ಆಗಮನವಾಯಿತು. ಮಹಾರಾಜರು ಮೊದಲು ಮಾಡಿದ ಕೆಲಸವೆಂದರೆ ನಮ್ಮ ಪರಂಪರೆ, ಸಂಸ್ಕೃತಿಯ ಗೌರವದ ಸಂಕೇತ ಗಣೇಶನ ಮಂದಿರವನ್ನು ಹುಡುಕಿ ತೆಗೆದುದು. ಗಣೇಶನ ಪ್ರತಿಷ್ಠಾಪನೆ ಮಾಡಿ, ಪುಣೆಯ ಭೂಮಿಯನ್ನು ವಿಧಿಪೂರ್ವಕ ಬಂಗಾರದ ನೇಗಿಲಿನಿಂದ ಬಿತ್ತಿದರು. ಎಲ್ಲಿ ಕಬ್ಬಿಣದ ಹಾರೆಗೆ ಹರಿದ ಚಪ್ಪಲಿ ನೇತು ಹಾಕಲಾಗಿತ್ತೋ ಅಲ್ಲಿಯೇ ಒಬ್ಬ ಪರಾಕ್ರಮಿ ಯುವಕ ಬಂದು ಬಂಗಾರದ ನೇಗಿಲಿನಿಂದ ಉಳುಮೆ ಮಾಡಿದನು, ಈ ಎರಡೂ ವೈಪರೀತ್ಯಗಳನ್ನು ಹಿಂದು ಸಮಾಜವು ಕಂಡಿತು. ದಿನಗಳು ಬದಲಾದವು. ಎಂತಹ ಆತ್ಮವಿಶ್ವಾಸ ಜಾಗೃತವಾಗಿರಬಹುದು? ತಮ್ಮ ಜಹಗೀರಿನಲ್ಲಿ ಒಳ್ಳೆಯ ಆಡಳಿತ ನೀಡಿ ಜನರನ್ನು ಅವರು ಸಮರ್ಥರನ್ನಾಗಿಸಿದರು. ಉಳಿದ ಕರ್ಯಗಳಿಗಾಗಿ ಸಮಾಜವನ್ನು ಒಂದುಗೂಡಿಸಲಾಯಿತು.
ರಣನೀತಿ ಕುಶಲ ಶಿವಾಜಿ
ಒಬ್ಬ ನೇತಾರ, ಒಂದು ಆಡಳಿತ-ಇದು ಸಮಾಜದ ಭಾಗ್ಯವನ್ನು ಬದಲಾಯಿಸಲಾರದೆಂಬ ಸತ್ಯ ಮಹಾರಾಜನಿಗೆ ಗೊತ್ತಿತ್ತು. ತಾತ್ಕಾಲಿಕ ವಿಜಯ ದೊರೆತರೂ ಇತಿಹಾಸದ ಪುನರಾವೃತಿ ಆಗುತ್ತದೆ. ಹೀಗಾಗಿ ಸಮಾಜದಲ್ಲಿ ವಿಜಿಗೀಷು ಭಾವ ಜಾಗೃತವಾಗಬೇಕು. ಸಮಾಜದಲ್ಲಿ ಆತ್ಮವಿಶ್ವಾಸ ಜಾಗೃತಗೊಳಿಸಿ ಸಂಘಟಿತಗೊಳಿಸಬೇಕು. ಎಲ್ಲ ತರಹದ ಜನರನ್ನು ಅವರು ಒಟ್ಟುಗೂಡಿಸಿದರು. ಅವರ ಅನುಯಾಯಿಗಳಲ್ಲಿ ಅನೇಕ ತೆರನಾದ ಜನಗಳಿದ್ದರು. ಮರಾಠಿಯಲ್ಲಿ ’ ಅಠರಾ ಪಗಡ್ ಜಾತಿ’! ಎಂದು ಕರೆಯುತ್ತಾರೆ. ಹದಿನೆಂಟು ರೀತಿಯಲ್ಲಿ ಪೇಟ ಸುತ್ತುವವರು ಇದ್ದರು. ಈ ಹದಿನೆಂಟು ರೀತಿಯ ಜನಗಳಲ್ಲಿ ಸರದಾರರು, ಪುರೋಹಿತರಿಂದ ಹಿಡಿದು ಹೀನರೆಂದು ಕರೆಸಿಕೊಳ್ಳುವ ಜನಗಳು ಕೂಡ ಮಹಾರಾಜರ ಗಳಸ್ಯ ಕುಠಸ್ಯ ಮಿತ್ರರಾಗಿದ್ದರು. ಮಹಾರಾಜರಿಗಾಗಿ ಹಾಗೂ ಸ್ವರಾಜ್ಯ, ಸ್ವಧರ್ಮಗಳಿಗಾಗಿ ಸಾಯಲೂ ಕೂಡ ಜನ ಸಿದ್ಧರಿದ್ದರು. ಅಂದಿನ ಸಮಯದಲ್ಲಿ ಮಹಾರಾಜರ ಬಳಿ ಶಸ್ತ್ರಗಳಿರಲಿಲ್ಲ. ಹೆಚ್ಚು ಸಾಧನಗಳು ಇರಲಿಲ್ಲ. ಆನೆ-ಕುದುರೆಗಳು ಇರಲಿಲ್ಲ. ಶಿವಾಜಿಯು ತಯಾರಿಸಿದ ಒಬ್ಬೊಬ್ಬ ವೀರನೂ ಮುಂದೆ ದಂತಕಥೆಯಾದನು. ಒಂದು ಕಥೆಯನ್ನು ಹೀಗೆ ಸ್ಮರಿಸಿಕೊಳ್ಳುತ್ತೇವೆ.
ಶಿವಾಜಿ ಮಹಾರಾಜರು ಖುದ್ದಾಗಿ ಕುತುಬ್ಶಹನ ಭೇಟಿಗೆ ಬಂದರು ಕುತುಬಶಹನು ವ್ಯಂಗ್ಯವಾಡುತ್ತ- ’ಶಿವಾಜಿ ಮಹಾರಾಜರೇ ನಿಮ್ಮ ಬಳಿ ಇರುವ ಆನೆಗಳೆಷ್ಟು?’ ಎಂದು ಕೇಳಿದನಂತೆ ಶಿವಾಜಿಯ ಬಳಿ ಆನೆಗಳಿಲ್ಲ ಎಂಬುದು ಅವನಿಗೆ ತಿಳಿದಿತ್ತು. ಶಿವಾಜಿ ಮಹಾರಾಜರು ’ನಮ್ಮ ಬಳಿ ಸಾಕಷ್ಟು ಆನೆಗಳಿವೆ’ ಎಂದರು. ’ಜೊತೆಯಲ್ಲಿ ತಂದಿಲ್ಲವೊ?’ ’ತಂದಿದ್ದೇವೆ!’ ’ಎಲ್ಲಿವೆ’? ’ಹಿಂದೆ ನಿಂತಿವೆ !’ ಹಿಂದೆ ಅವನ ಮಾವಳಿ ಸೈನಿಕರು ನಿಂತಿದ್ದರು. ’ಇವು ನಮ್ಮ ಆನೆಗಳೊಂದಿಗೆ ಹೋರಾಡಬಲ್ಲಯೇ’ ಕುತುಬ್ಶಹ ವ್ಯಂಗವಾಡಿದನು. ’ನಾಳೆ ಮೈದಾನದಲ್ಲಿ ನೋಡೋಣ’- ಮಹಾರಾಜರೆಂದರು.
ಮೂರನೆಯ ದಿನ ಕುತುಬ್ಶಹನ ಪಳಗಿದ ಆನೆಯನ್ನು ಮೈದಾನಕ್ಕೆ ತರಲಾಯಿತು. ಸುಲ್ತಾನನು ಗೋಳ್ಕೊಂಡದಲ್ಲಿ ಆನೆಯನ್ನು ಮೈದಾನಕ್ಕೆ ಬಿಡಿಸಿದ ಹಾಗೂ ಮಹಾರಾಜರು ಆನೆಯೊಂದಿಗೆ ಹೋರಾಡುವಂತೆ ’ಏಸಾಜಿ ಕಂಕನಿಗೆ ಆದೇಶವಿತ್ತರು. ಏಸಾಜಿಯು ಕಂಬಳಿಯನ್ನು ನೆಲಕ್ಕೆ ಬಡಿದು ಬರಿಗೈಲಿ ಖಡ್ಗವನ್ನು ಬೀಸುತ್ತ ಮೈದಾನಕ್ಕಿಳಿದನು. ಆನೆಯ ಸೊಂಡಿಲನ್ನು ಕತ್ತರಿಸಿ ಅದನ್ನು ಹೊಡೆದುಹಾಕಿದನು. ಹೃದಯದಲ್ಲಿ ನಿರ್ಭಯತೆಯನ್ನು ಧಾರಣೆ ಮಾಡಿಕೊಂಡು ಮದವೇರಿದ ಆನೆಯೊಂದಿಗೆ ಸೆಣಸಬಲ್ಲ ಒಂದು ವೀರರ ಪಡೆಯನ್ನೇ ಶಿವಾಜಿ ತಯಾರು ಮಾಡಿದ್ದರು. ಸಕಲ ಸಮಾಜದಲ್ಲಿ ಉತ್ಸಾಹದ ಭಾವನೆಯನ್ನು ಉತ್ಪನ್ನ ಮಾಡಿದ್ದರು. ಹೀಗಾಗಿ ಶಿವಾಜಿ ಮಹಾರಾಜರು ಕಾಲವಾದ ನಂತರ ರಾಜಾರಾಮ್ ಮಹಾರಾಜರು ದಕ್ಷಿಣದಲ್ಲಿ ವಾಸವಾಗತೊಡಗಿದರು. ರಾಜ, ಖಜಾನೆ ಸೈನ್ಯ ಸೇನಾಪತಿ ಏನೂ ಇರದಿದ್ದ ಸಂದರ್ಭದಲ್ಲೂ ಜನರು ಕೈಗೆ ದೊರೆತ ಆಯುಧಗಳನ್ನು ತೆಗೆದುಕೊಂಡು ಮಹಾರಾಷ್ಟ್ರದ ಪ್ರಜೆಗಳು ಇಪ್ಪತ್ತು ವರ್ಷ ಹೋರಾಡಿದರು. ಸ್ವರಾಜ್ಯವನ್ನು ಅಳಿಸಿಹಾಕಲು ಬಂದ ಔರಂಗಜೇಬನೂ ಸೈನ್ಯ ಸಮೇತವಾಗಿ ಇಲ್ಲೇ ಮಣ್ಣಾದ. ಸಮಾಜದ ಈ ಶಕ್ತಿಯನ್ನು ಶಿವಾಜಿ ಮಹಾರಾಜರು ಹೊರತಂದರು ಮತ್ತು ಕಾರ್ಯಪ್ರವೃತ್ತಗೊಳಿಸಿದರು. ಸ್ವಂತ ಜೀವನದ ಬಗ್ಗೆ ಯೋಚಿಸಲಿ ಐವತ್ತು ವರ್ಷಗಳ ಅವರ ಆಯಸ್ಸು ಅಖಂಡ ಪರಿಶ್ರಮದಿಂದ ಕೂಡಿತ್ತು. ನೀವು ಹೋರಾಡಿ-ನಾನು ಆದೇಶ ನೀಡುತ್ತೇನೆ ಎಂಬ ಸ್ವಭಾವ ಶಿವಾಜಿಯಲ್ಲಿ ಇರಲಿಲ್ಲ. ಅವರು ಸ್ವಯಂ ಕಾರ್ಯಪ್ರವೃತ್ತರಾಗಿ, ಕೆಲಸಮಾಡಿ, ನಂತರ ಹೇಳುತ್ತಿದ್ದರು. ಶಾಯಿಸ್ತೆಖಾನನ ಶಾಸ್ತಿಗೆ ಸ್ವಯಂ ಸಿದ್ಧರಾದರು. ಕರತಲಬಖಾನನನ್ನು ಶರಣಾಗತಿಗೆ ತರುವ ಸಮಯದಲ್ಲಿ ಶಸ್ತ್ರಧಾರಣೆಯೊಂದಿಗೆ ವೀರೋಚಿತ ಗಣವೇಷದಲ್ಲಿ ಸಿದ್ಧರಿದ್ದರು. ಸ್ವಯಂ ಮುಂದೆ ಇದ್ದು ತಮ್ಮ ಸಾಹಸದ ಪರಿಚಯ ಮಾಡಿಸುತ್ತಿದ್ದರು. ಅನುಯಾಯಿಗಳಲ್ಲಿ ಶಕ್ತಿ ಜಾಗೃತವಾಗುತ್ತ ವಿವೇಕವೂ ಒಡಮೂಡಿತ್ತು. ’ಧೃತಿ ಉತ್ಸಾಹ ಸಮನ್ವಿತ;’ ಎಂಬುದು ಅವರ ರಣನೀತಿಯಾಗಿತ್ತು. ಈ ಧೃತಿ, ಉತ್ಸಾಹ ಮತ್ತು ಸಾಹಸದ ಬಲದಿಂದ ಅವರು ಅಫಜಲಖಾನನೊಂದಿಗೆ ಹೋರಾಡಿ ಸಫಲರಾದರು.
ಅಫಜಲಖಾನ್ ಬಂದಾಗ ಅಪಮಾನವನ್ನು ಸ್ವೀಕರಿಸಿಯೂ ಪ್ರತಾಪಗಡದಲ್ಲಿ ಸುಮ್ಮನೆ ಕುಳಿತಿದ್ದರು ಮಹಾರಾಜರು. ಭೇಟಿಗೆ ಹೋದರು. ಧೈರ್ಯದಿಂದ ಎಲ್ಲವನ್ನು ಸಹಿಸಿಕೊಂಡರು. ಸರಿಯಾದ ಸಂದರ್ಭ ಬಂದಾಗ ಅಫಜಲಖಾನನನ್ನು ಸಮೂಲವಾಗಿ ನಿರ್ನಾಮ ಮಾಡಿದರು. ಅಲ್ಲಿಂದ ಶಿವಾಜಿಯ ಕಾರ್ಯಗಳಿಂದ ನಾಲ್ಕು ತಿಂಗಳಿನಲ್ಲಿ ಸ್ವರಾಜ್ಯದ ಗಡಿಯು ಬಿಜಾಪುರವನ್ನು ಬೆಳೆಯಿತು. ಸಾಹಸ ವ್ಯಕ್ತಪಡಿಸುವುದು ಯಾವಾಗ? ಧೈರ್ಯ ತೋರಿಸಿವುದು ಯಾವಾಗ? ಆಕ್ರಮಣದ ಸಂಧರ್ಭ ಯಾವುದು? ಯಾವಾಗ ಸುಮ್ಮನಿರುವುದು? ಈ ವಿವೇಕವು ಮಹಾರಾಜರಲ್ಲಿತ್ತು.
ಶಿವಾಜಿಯ ಕಾಲಮಾನದವರೆಗಿನ ಯುದ್ಧನೀತಿಯು ಇಡೀ ದೇಶದಲ್ಲಿ ಸರಳ ಮತ್ತು ಧಾರ್ಮಿಕ ರೀತಿಯದ್ದಾಗಿತ್ತು. ನಾವು ಧರ್ಮಯುದ್ಧ ಮಾಡುತ್ತಿದ್ದೆವು. ಶಿವಾಜಿ ಮಹಾರಾಜರು ಈ ನೀತಿಯ ಪರಿಭಾಷೆಯನ್ನೇ ಬದಲಿಸಿದರು. ಎದುರಿಗಿರುವ ಶತ್ರು ಕಪಟಿಯಾಗಿದ್ದರೆ ಕಪಟತನದಿಂದಲೇ ಉತ್ತರಿಸಬೇಕು ಎಂಬುದು ಶಿವಾಜಿಯ ನೀತಿಯಾಗಿತ್ತು. ಧರ್ಮದ ವಿಜಯಕ್ಕಾಗಿ ಕೃಷ್ಣನ ನೀತಿಯನ್ನು ಅನುಸರಿಸಬೇಕು ಎನ್ನುತ್ತಿದ್ದರು. ಶಹಾಜಿ ಮಹಾರಾಜರನ್ನು ಆದಿಲಶಾಹಿ ಬಂಧನದಲ್ಲಿಟ್ಟಾಗ ಮಹಾರಾಜರು ಔರಂಗಜೇಬನಿಗೆ ಪತ್ರ ಬರೆದರು. ನಾವು ನಿಮ್ಮ ಪ್ರಾಮಾಣಿಕ ಸೇವಕರು, ನಿಮ್ಮ ಗಡಿಗಳನ್ನು ನಾವು ರಕ್ಷಣೆ ಮಾಡುತ್ತಿದ್ದೇವೆ. ಆದಿಲಶಾಹಿ ಕಷ್ಟ ನೀಡುತ್ತಿದ್ದಾನೆ. ನೀವು ಸ್ಪಲ್ಪ ತಿಳಿಹೇಳಬೇಕು ಎಂದು ಪತ್ರದಲ್ಲಿ ಬರೆದಿದ್ದರು. ಪತ್ರ ತಲುಪುತ್ತಿದ್ದಂತೆ ಔರಂಗಜೇಬ ಆದಿಲಶಾಹಿಗೆ ಪತ್ರ ಬರೆದರು. ಶಹಾಜಿ ರಾಜರ ಬಿಡುಗಡೆಯಾಯಿತು. ಆದರೆ ಈ ಸಂದರ್ಭದಲ್ಲೂ ಮೊಘಲರಿಗೆ ಸಂಬಂಧಿಸಿದ್ದ ಎರಡು ಗ್ರಾಮಗಳನ್ನು ಶಿವಸೈನಿಕರು ಲೂಟಿಮಾಡಿದ್ದರು. ತನ್ನೆಲ್ಲ ಶತ್ರುಗಳಿಗೆ ಕೆಲವರಿಗೆ ಸ್ನೇಹಹಸ್ತ ತೋರುತ್ತ, ಕೆಲವರಿಗೆ ಶಸ್ತ್ರವನ್ನು ತೋರಿಸುತ್ತ ಶಿವಾಜಿ ತನ್ನ ಕೈಚಳಕ ತೋರುತ್ತಿದ್ದರು. ಅಪ್ರಾಮಾಣಿಕರ ಮುಂದೆ ಪ್ರಾಮಾಣಿಕತೆಯನ್ನು ತೋರುವುದು ಸರಿಯಾದ ಕ್ರಮವಲ್ಲ. ಅಫಜಲಖಾನನ ವಧೆಯ ನಂತರ ಈ ಚರ್ಚೆಯು ನಡೆದಿರಬಹುದು. ನೀವು ಮೋಸಗಾರರು, ನೀವು ವಚನ ಕೊಟ್ಟು, ಕೈಯಲ್ಲಿ ತುಳಸಿ ಪತ್ರೆ, ಬಿಲ್ವ ಪತ್ರೆಯನ್ನು ಹಿಡಿದುಕೊಂಡು ಮಾತು ಕೊಟ್ಟಿದ್ದಿರಿ. ಆದರೂ ಮೋಸದಿಂದ ಅಪಜಲಖಾನನನ್ನು ಹೊಡೆದಿರಿ ಎಂಬ ಪ್ರಶ್ನೆಯನ್ನು ಮಹಾರಾಜರಿಗೆ ಕೇಳಲಾಯಿತು. ಹೌದು, ನಾನು ಮೋಸ ಮಾಡಿದೆ. ಅಫಜಲಖಾನ ಜೀವಂತವಾಗಿ ಇಲ್ಲವೇ ಸಾಯಿಸಿ ಕರೆದೊಯ್ಯುವ ಪ್ರತಿಜ್ಞೆ ಮಾಡಿ ಬಂದಿದ್ದವನು. ಅವನ ಕೈಯಲ್ಲಿ ಸಾಯಬೇಕಿತ್ತೇ? ನಾನು ನನಗಾಗಿ ಬದುಕುವವನಲ್ಲ. ಇದು ನವನಿರ್ಮಿತ ಸ್ವರಾಜ್ಯ, ಇದು ಬೆಳೆಯಬೇಕು. ಸ್ವರಾಜ್ಯವು ವಟವೃಕ್ಷವಾಗಿ ಬೆಳೆಯುವ ಮೊದಲು ಅದನ್ನು ಕತ್ತರಿಸಲು ಬಂದ ಖಾನನಿಗೆ ಅನುಮತಿ ನೀಡಬೇಕಿತ್ತೇ? ಕಪಟತನವನ್ನೇ ಮನದಲ್ಲಿ ತುಂಬಿಕೊಂಡಿದ್ದ ಅವನಿಗೆ ಮೋಸ ಮಾಡಬೇಕಾಯಿತು. ಅವನ ಕಪಟತನಕ್ಕೆ ನಾನು ಉತ್ತರ ನೀಡಿದೆನಷ್ಟೇ. ಸ್ನೇಹಿತರಿಗೆ ಮೋಸಮಾಡಿದ ಒಂದಾದರೂ ಉದಾಹರಣೆ ಇದ್ದರೆ ಹೇಳಿ ನೋಡೋಣ-ಎಂಬುದು ಮಹಾರಾಜರ ಉತ್ತರವಾಗಿತ್ತು. ಹಿಂದುಸ್ತಾನದ ಮೇಲೆರಗುವ ಆಕ್ರಮಕರಿಗೆ ಪ್ರತ್ಯುತ್ತರ ನೀಡುವ ನೀತಿಯನ್ನು ಮಹಾರಾಜರು ಸಂಪೂರ್ಣವಾಗಿ ಪರಿಷ್ಕರಿಸಿದರು. ಸ್ವಂತದ ನಿರ್ದೋಷ ಯೋಜನೆ ಹಾಗೂ ಕುಶಲತೆಯ ಬಲದಿಂದ ಒಂದರ ನಂತರ ಒಂದರಂತೆ ವಿಜಯಗಳಿಸುತ್ತ ನಡೆದರು. ತಾತ್ಕಾಲಿಕವಾದ ಪರಾಜಯವನ್ನು ವಿಜಯವನ್ನಾಗಿ ಪರಿವರ್ತಿಸಿದರು. ಔರಂಗಜೇಬ ಭೇಟಿಗೆಂದು ಹೊರಟ ಅವರು ರಾಜಸ್ಥಾನದ ರಜಪೂತರಲ್ಲಿ ಬತ್ತಿಹೋಗಿದ್ದ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ಮತ್ತೆ ಜಾಗೃತಗೊಳಿಸಿದರು. ಅವರ ಆತ್ಮವಿಶ್ವಾಸಕ್ಕೆ ಮಹಾರಾಜರು ಇಂಬು ನೀಡಿದರು. ಅಲ್ಲಿಂದ ತಪ್ಪಿಸಿಕೊಂಡು ಬರಲು ಸಫಲರಾದರು ಎಂಬುದಷ್ಟೇ ಅಲ್ಲ, ಅಲ್ಲಿ ಅವರು ಅನೇಕರನ್ನು ತನ್ನವರನ್ನಾಗಿಸಿಕೊಂಡರು. ಅಲ್ಲಿಂದ ಬಂದ ನಂತರ ಲೂಟಿಯಾಗಿದ್ದ ಸಂಪತ್ತನ್ನು ಪುನಃ ಪಡೆದುಕೊಂಡು ಸಾಮ್ರಾಜ್ಯವನ್ನು ವಿಸ್ತರಿಸಿದರು. ಗಜದಳ, ಅಶ್ವದಳ, ಪದಾತಿದಳವನ್ನು ಒಟ್ಟಾಗಿ ಉಪಯೋಗಿಸುತ್ತ ವ್ಯೂಹರಚನೆ ಮಾಡಬಲ್ಲ ಹಾಗೂ ಪ್ರಯೋಗ ನಡೆಸಬಲ್ಲ ಏಕಮೇವ ವ್ಯಕ್ತಿ ಶಿವಾಜಿಯಾಗಿದ್ದರು. ಇಂತಹ ನೀತಿವಂತರು, ಸಾಹಸವಂತರು ಹಾಗೂ ದೂರದೃಷ್ಟಿವುಳ್ಳವರು ಆಗಿದ್ದ ಮಹಾರಾಜರು ಕೇವಲ ಅಧಿಕಾರಕ್ಕಾಗಿ ರಾಜರಾದವರಲ್ಲ. ಅವರ ಮುಂದೆ ಸುರಕ್ಷಿತ ಹಿಂದುಧರ್ಮ, ಹಿಂದು ಸಂಸ್ಕೃತಿ, ಹಿಂದು ಸಮಾಜ ಮತ್ತು ವಿಜಿಗೀಷು ಪ್ರವೃತ್ತಿಯ ಪರಮವೈಭವ ಸಂಪನ್ನ ಹಿಂದುರಾಷ್ಟ್ರದ ದೃಶ್ಯವಿತ್ತು.
ಶಿವಾಜಿಯ ಆಡಳಿತ
ಶಿವಾಜಿಯ ಬಹಳಷ್ಟು ಮಾತುಗಳು ಈಗಿನ ಸಂದರ್ಭದಲ್ಲಿ ಮಾತನಾಡಿದರೂ ಜನರು ಅವುಗಳನ್ನು ಪುರೋಗಾಮಿ ಹೆಜ್ಜೆಗಳೆಂದು ಕರೆಯುವರು. ಸಮಾಜವಾದ, ಸಾಮ್ಯವಾದ ಹೆಸರು ದೂರದೂರದವರೆಗೆ ಇಲ್ಲದಿದ್ದಾಗ ಶಿವಾಜಿ. ಮಹಾರಾಜರು ಜಮೀನ್ದಾರಿಕೆಯನ್ನು ರದ್ದು ಮಾಡಿದ್ದರು. ಸಮಾಜದ ಸಂಪತ್ತಿನ ಮೇಲೆ ನಾವು ಟ್ರಸ್ಟಿಗಳಾಗಿ ಉಳಿಯಬಹುದು. ನಾವು ಅದರ ಅಧಿಕಾರಿಗಳಾಗುವುದಿಲ್ಲ. ಇದು ಸಮಾಜ ಆಸ್ತಿಯಾಗಿದೆ, ರಾಜ್ಯದ ಅಧೀನದಲ್ಲಿರುವ ವ್ಯವಸ್ಥೆಯನ್ನು ಗಮನಿಸುತ್ತಿರುವ ಯಾವುದೇ ವ್ಯಕ್ತಿಗೆ ಆಸ್ತಿಯನ್ನು ನೀಡಲಾಗುವುದಿಲ್ಲ. ಸಂಭಾಳಿಸಲು ನೀಡಲಾಗುತ್ತದೆ. ಜವಾಬ್ದಾರಿ ಇರುತ್ತದೆ. ಅಧಿಕಾರ ಇರುವುದಿಲ್ಲ. ಪಾಳೇಗಾರಿಕೆಯನ್ನು ರದ್ದು ಮಾಡಲಾಯಿತು. ಆ ಸಮಯದಲ್ಲಿ ಸರದಾರ ಜಹಗೀರುದಾರರಿಗೆ ತಮ್ಮ ಒಂದು ಸೈನ್ಯವಿರುತ್ತಿತ್ತು. ಈ ಪದ್ಧತಿಯನ್ನು ಬದಲಾಯಿಸಿದ ಮಹಾರಾಜರು ಕೇಂದ್ರಿಯ ಆಡಳಿತದಿಂದ ಸೈನಿಕ ವೇತನವನ್ನು ಪ್ರಾರಂಭಿಸಿದರು. ಸೈನಿಕರ ವ್ಯಕ್ತಿನಿಷ್ಠೆಯನ್ನಾಗಿ ಪರಿವರ್ತಿಸಿದರು. ಮಹಾರಾಜರ ರಾಜ್ಯಗಳಲ್ಲಿ ಸೈನಿಕರ ಅಶ್ವಗಳ ಪ್ರಭುತ್ವವು ಸ್ವರಾಜ್ಯದ ಕೇಂದ್ರೀಯ ಆಡಳಿತದ ಕಡೆ ಇತ್ತು. ಬಡ ರೈತರ ಜಮೀನುಗಳ ಸ್ತರ ಮತ್ತು ಫಸಲಿನ ಉತ್ಪಾದನೆಯ ಆಧಾರದ ಮೇಲೆ ರೈತರಿಗೆ ನೆಮ್ಮದಿ ನೀಡಲಿಲ್ಲ. ಎರಡನೇ ದರ್ಜೆಯ ವಿತ್ತೀಯ ಕರಸೂಚಿ ಅವರು ಜಾರಗೊಳಿಸಿದರು. ಬಾವಿ ತೋಡಿಸುವಿಕೆ, ಕೆರೆಗಳ ನಿರ್ಮಾಣ, ಅರಣ್ಯ ಪ್ರದೇಶದ ಬೆಳವಣಿಗೆ, ಧರ್ಮಶಾಲೆ, ಮಂದಿರ ಹಾಗೂ ರಸ್ತೆಗಳ ನಿರ್ಮಾಣದ ಕಾರ್ಯವನ್ನು ಶಿವಾಜಿ ಮಹಾರಾಜ್ ಮಾಡಿದರು.
ಮಹಾರಾಜರು ಸಮಯಾನುಸಾರವಾಗಿ ಸಮಾಜದಲ್ಲಿ ಆಗಬೇಕಿದ್ದ ಬದಲಾವಣೆಗಳನ್ನು ಜಾರಿಗೆ ತಂದರು. ಹಿಂಜರಿಯದೇ ಮುನ್ನುಗ್ಗಿ ಮಾಡಿದರು. ನೇತಾಜಿ ಪಾಲಕರ್ನನ್ನು ಹಿಂದುಧರ್ಮಕ್ಕೆ ಮತ್ತೆ ಕರೆತಂದರು. ಬಜಾಜಿ ನಿಂಬಾಳಕರ್ನನ್ನು ಹಿಂದುವಾಗಿ ಪರಿವರ್ತಿಸಿದರು. ಸಮಾಜದಲ್ಲಿ ಈ ವ್ಯವಸ್ಥೆಯನ್ನು ಉಳಿಸಲು ಅವರೊಂದಿಗೆ ಸಂಬಂಧವನ್ನು ಬೆಸೆದರು. ಅವರಲ್ಲಿ ವಿವೇಕವಿತ್ತು. ದೂರದೃಷ್ಠಿ ಇತ್ತು. ಖಡ್ಗದ ಶಕ್ತಿಯ ಮೇಲೆ ಇಸ್ಲಾಮೀಕರಣ ನಡೆದಿತ್ತು. ಶಿವಾಜಿ ಮಹಾರಾಜರ ದೃಷ್ಟಿ ಹೇಗಿತ್ತು? ವಿದೇಶಿ ಮುಸಲ್ಮಾನರನ್ನು ಹುಡುಕಿ ಹುಡುಕಿ ಅವರನ್ನು ಹೊರಹಾಕಿದರು. ನಮ್ಮ ಸಮಾಜದಿಂದ ಹೊರನಡೆದು ಮುಸಲ್ಮಾನರಾಗಿದ್ದ ನಮ್ಮದೇ ಬಂಧುಗಳೊಡನೆ ಜೊತೆಗಿದ್ದು ಮರಳಿ ತರುವ ಪ್ರಕ್ರಿಯೆಯನ್ನು ಅವರು ಪ್ರಾರಂಭಿಸಿದರು. ಕುತುಬಶಹನಿಗೆ ಅಭಯ ನೀಡಿದರು. ನಿಮ್ಮ ದರ್ಬಾರಿನಲ್ಲಿ ನಿಮ್ಮ ಮೊದಲೆರಡು ವಜೀರರು ಹಿಂದುಗಳೇ ಆಗಿರಬೇಕು ಎಂಬ ಶರತ್ತನಿಟ್ಟು ಅಭಯ ನೀಡಿದರು. ಅದಕ್ಕನುಸಾರವಾಗಿ ವೆಂಕಣ್ಣ ಮತು ಮಾದಣ್ಣನೆಂಬ ಇಬ್ಬರು ವಜೀರರು ಇದ್ದರು. ಹಿಂದುಗಳ ಮೇಲೆ ಯಾವ ಅತ್ಯಾಚಾರವೂ ನಡೆಯಕೂಡದೆಂಬ ಎರಡನೇ ಶರತ್ತನ್ನು ಮಹಾರಾಜರು ವಿಧಿಸಿದ್ದರು. ಪೂರ್ಚುಗೀಸ್ ಗವರ್ನರ್ ಹಾಗೂ ಪೋರ್ಚುಗೀಸ್ ಸೈನ್ಯದ ಪ್ರದೇಶದಲ್ಲಿ ಮತಾಂತರದ ಉದ್ದೇಶದಿಂದ ಮಿಷನರಿಗಳು ಬಂದಿರುವ ಸುದ್ದಿ ಕೇಳಿದ ಕೂಡಲೇ ಮಹಾರಾಜರು ದಾಳಿಗೆ ಸಿದ್ಧರಾದರು. ಇವರುಗಳನ್ನೆಲ್ಲ ಜೀರ್ಣಿಸಿಕೊಳ್ಳಲು ನಮ್ಮ ನೀತಿಯಲ್ಲಿ ಸಡಿಲತೆ ಉಂಟಾಗಬಾರದು. ನೇರ ದಾಳಿ ಇಟ್ಟರು. ಚಿಪಳೂಣದ ಹತ್ತಿರ ಹೋದರು. ಪರಶುರಾಮರ ಮಂದಿರವನ್ನು ಮತ್ತೆ ನಿರ್ಮಿಸಿದರು. ಔರಂಗಜೇಬನ ಆದೇಶದ ಮೇರೆಗೆ ಕಾಶಿ ವಿಶ್ವನಾಥನ ಮಂದಿರವನ್ನು ಒಡೆಯಲಾಗಿತ್ತು. ’ದೈವಯೋಗದಿಂದ ಮತ್ತು ಈಶ್ವರನ ಕೃಪೆಯಿಂದ ನೀನು ರಾಜನಾಗಿರುವೆ. ಈಶ್ವರನ ದೃಷ್ಟಿಯಲ್ಲಿ ಎಲ್ಲಾ ಪ್ರಜೆಗಳು ಸಮಾನರು. ಈಶ್ವರನು ಹಿಂದು-ಮುಸ್ಲಿಂ ಎಂದು ಭೇದ ಎಣಿಸುವುದಿಲ್ಲ. ನೀನು ನ್ಯಾಯದ ಪಾಲನೆಯನ್ನು ಮಾಡು. ನೀನು ಹಿಂದುಗಳ ಮಂದಿರಗಳನ್ನು ಒಡೆಯುವ ಕಾರ್ಯಕ್ಕೆ ಕೈಹಾಕಿದರೆ ನಾನು ಖಡ್ಗ ತೆಗೆದುಕೊಂಡು ಉತ್ತರಕ್ಕೆ ಬರಬೇಕಾದೀತು’ – ಎಂದು ಮಹಾರಾಜರು ಔರಂಗಜೇಬನಿಗೆ ಪತ್ರ ಬರೆದನು. ಮಹಾರಾಜರ ರಾಜ್ಯವು ಉತ್ತರದಲ್ಲಿ ಇರಲಿಲ್ಲ. ದಕ್ಷಿಣದಲ್ಲಿತ್ತು. ಶಿವಾಜಿ ಮಹಾರಾಜರ ಸಾಮ್ರಾಜ್ಯವು ಕಾಶಿಯವರೆಗೆ ವಿಸ್ತರಿಸುವುದೆಂಬ ಭವಿಷ್ಯವಾಣಿಯೂ ಯಾರೂ ನುಡಿದಿರಲಿಲ್ಲ. ಕಾಶಿ ವಿಶ್ವನಾಥನು ರಾಷ್ಟ್ರದ ಶ್ರದ್ಧಾ ಸ್ಥಾನವೆಂದು ಬಗೆದ ಅವರು ಪತ್ರ ಬರೆದಿದ್ದರು. ಇದು ನನ್ನ ರಾಷ್ಟ್ರ ಕಾರ್ಯವಾಗಿದೆ. ಹಾಗಾದರೆ ಮುಸಲ್ಮಾನರಾಗಿ ಪರಿವರ್ತಿತರಾದವರನ್ನು ಏನು ಮಾಡುವುದು? ಪ್ರೇಮದಿಂದ ಜೋಡಿಸುವುದು. ಸಾಧ್ಯವಾದಷ್ಟು ಮರಳಿ ಕರೆತರುವುದು. ಈ ಎಲ್ಲ ದೃಷ್ಟಿಗಳು ಶಿವಾಜಿಯ ಕಾರ್ಯದಲ್ಲಿತ್ತು. ಕಾಲವು ಎತ್ತ ಹೋಗುತ್ತಿದೆ ಹಾಗೂ ಏನು ಮಾಡಬೇಕು ಎಂಬ ಅದ್ಭುತ ದೃಷ್ಟಿ ಅವರಲ್ಲಿತ್ತು. ಹಾಗಾಗಿ ಯುರೋಪಿನಿಂದ ಹಳೆಯ ಮೊಳೆಗಳನ್ನು ಜೋಡಿಸುತ್ತ ಮುದ್ರಣ ಮಾಡುವ ಯಂತ್ರವನ್ನು ತರಿಸಿ, ಅದನ್ನು ತಯಾರು ಮಾಡುವ ಪ್ರಯತ್ನವನ್ನು ಅವರು ಮಾಡಿದರು. ಮುದ್ರಣ ಕಲೆಯನ್ನು ಪ್ರಾರಂಭಿಸುವ ಪ್ರಯತ್ನ ಮಾಡಿದರು. ವಿದೇಶಿಗಳಿಂದ ತರಿಸಲಾದ ತೋಪುಗಳು, ಒಳ್ಳೆಯ ತಲವಾರಗಳನ್ನು ಇಲ್ಲಿ ತಯಾರಿಸಲು ಪ್ರಯತ್ನಿಸಿದರು. ಸ್ವರಾಜ್ಯದ ಸುರಕ್ಷತೆಗಾಗಿ ಒಂದು ಒಳ್ಳೆಯ ನಿಶ್ಚಿತ ಸೂಚನಾ ವಿಧಾನಗಳನ್ನೊಳಗೊಂಡ ಗುಪ್ತಚರರ ವ್ಯಾಪಕ ಜಾಲದ ಮಾಧ್ಯಮವನ್ನು ಅವರು ಕಟ್ಟಿ ನಿಲ್ಲಿಸಿದ್ದರು. ಸಾಗರದ ಸೀಮೆ ನಮ್ಮ ದೇಶದ ಸುರಕ್ಷೆಯಾಗಿದೆ, ಅಲ್ಲಿ ಹಡಗುಗಳು ನಿರ್ಮಾಣವಾಗಿರುವುದರಿಂದ ಆಕ್ರಮಣಗಳು ಹೆಚ್ಚುವ ಸಾಧ್ಯತೆಗಳಿವೆ. ಹೀಗಾಗಿ ನಮ್ಮದೊಂದು ನೌಕಾದಳ ಬೇಕು. ಸ್ವಂತದ ನೌಕಾದಳವನ್ನು ಮಹಾರಾಜರು ನಿರ್ಮಿಸಿದರು. ವಿದೇಶಿಗಳ ಹಡಗು ನಿರ್ಮಾಣ ಕಲೆ ಹಾಗೂ ನಮ್ಮ ಪೂರ್ವಜರ ಹಡಗು ನಿರ್ಮಾಣದ ಕಲೆಯನ್ನು ತುಲನೆ ಮಾಡುತ್ತ, ವಿದ್ವಾಂಸರೊಂದಿಗೆ ಚರ್ಚಿಸಿ ಹಡಗುಗಳನ್ನು ನಿರ್ಮಿಸಿದರು. ಸಿಂಧುದುರ್ಗ, ಸುವರ್ಣದುರ್ಗ, ಪದ್ಮದುರ್ಗ ವಿಜಯದುರ್ಗ, ವಿಜಯದುರ್ಗ ಹೀಗೆ ಜಲದುರ್ಗಗಳನ್ನು ಕಟ್ಟಿದರು. ಎಷ್ಟು ವಿಶಾಲ ದೃಷ್ಟಿ ಮಹಾರಾಜರಲ್ಲಿತ್ತು. ಕೇವಲ ಅಂದಿನ ಕಾಲಮಾನದ ಬಗ್ಗೆ ಅವರು ಯೋಚಿಸುತ್ತಿರಲಿಲ್ಲ. ಒಬ್ಬ ಸುಲ್ತಾನನನ್ನು ಸೋಲಿಸಿ ಸ್ವರಾಜ್ಯ ನಿರ್ಮಿಸುವುದು ಅಷ್ಟೇ ಅಲ್ಲ ಅದರ ಸುರಕ್ಷೆಯೂ ಆಗಬೇಕು. ಈ ಸಮಾಜವನ್ನು ಸಮಯಾನುಕೂಲವಾಗಿಸಿ ವಿಶ್ವದಲ್ಲಿ ಅಗ್ರಗಣ್ಯ ಸಮಾಜವಾಗಿ ಎದ್ದು ನಿಲ್ಲುವುದು ಉದ್ದೇಶವಾಗಿತ್ತು.
ಈ ಶಬ್ದಗಳು ಕೇವಲ ಅವರ ಮಾತುಗಳಲ್ಲಿ ಹೊಮ್ಮಲಿಲ್ಲ, ಅವರ ಕಾರ್ಯವು ಹೇಳುತ್ತಿದೆ. ಹೀಗೆ ಎಷ್ಟೋ ಉದಾಹರಣೆಗಳು ಕಣ್ಣ ಮುಂದಿವೆ. ಹೀಗಾಗಿ ಅವರದು ಉತ್ತಮ ಆಡಳಿತವಾಗಿತ್ತು. ರಾಜ್ಯದಲ್ಲಿ ಅಮಾತ್ಯರೊಂದಿಗೆ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಜನರ ಮಾತೃಭಾಷೆಯಲ್ಲಿ ಆಡಳಿತ ನಡೆಸುವ ದೃಷ್ಟಿಯಿಂದ ಫಾರಸಿಭಾಷೆಯನ್ನು ಸಮಾಪ್ತಿಗೊಳಿಸಿ ರಾಜ್ಯ ವ್ಯವಹಾರ ಕೋಶವನ್ನು ಮಹಾರಾಜರು ಹೊರತಂದರು. ಗೋವಂಶದ ಹತ್ಯೆಯನ್ನು ಪ್ರತಿಬಂಧಿಸಿದರು. ಸ್ವಧರ್ಮದ, ಸ್ವದೇಶದ ಆಡಳಿತವನ್ನು ಜಾರಿಗೊಳಿಸಿದರು. ಅವರ ಆದೇಶಪತ್ರವು ಪ್ರಸಿದ್ಧವಾಗಿದೆ. ಎಷ್ಟೊಂದು ಸಣ್ಣ – ಸಣ್ಣ ಮಾತುಗಳನ್ನು ಚಿಂತನೆ ಮಾಡಿದ್ದಾರೆ. ಅವರ ಆಡಳಿತ ಒಳ್ಳೆಯದಾಗಿತ್ತು ಎಂದರೇನು? ಅದು ಲೋಕಾಭಿಮುಖವಾಗಿತ್ತು. ಸೈನಿಕರು ಬಿಡಾರ ಹೂಡುವಲ್ಲಿ, ಸೇನಾ ಶಿಬಿರಗಳನ್ನು ಹಾಕುವ ಕಡೆಯಲ್ಲಿ ಪ್ರಜೆಗಳ ಹೊಲಗಳಿದ್ದರೆ ಅವರ ಅನುಮತಿ ಪಡೆದುಕೊಂಡು ಉಪಯೋಗಿಸಬೇಕೆಂದು ಮಹಾರಾಜರ ಕಟ್ಟಾಜ್ಞೆ ಇರುತ್ತಿತ್ತು. ಸೈನಿಕರು ಪ್ರಜೆಗಳಿಂದ ಒಂದು ತುಂಡು ಹಗ್ಗವನ್ನು ತೆಗೆದುಕೊಂಡರೂ ಕೂಡ ಸರಿಯಾದ ಬೆಲೆಯನ್ನು ನೀಡಬೇಕೆಂದು ಮಹಾರಾಜರ ಆದೇಶವಿತ್ತು. ಹುಕ್ಕಾ ಸೇದಿರುವ ಅಂಶದಿಂದ ಬೆಂಕಿ ಹೊತ್ತಿಕೊಳ್ಳುವ ಸಂಭವವಿರುವುದರಿಂದ ಕಸವನ್ನು ಹಾಗೂ ಹಗ್ಗವನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಸಣ್ಣ ವಿಷಯಗಳೆನಿಸಿದರೂ ದಕ್ಷತೆಯ ಹಾಗೂ ಲೋಕಾಭಿಮುಖವಾದವುಗಳಾಗದೆ ಮಹಾರಾಜರದು ನ್ಯಾಯಯುತ ಆಡಳಿತವಾಗಿತ್ತು. ಅವರು ಪುಣೆಯ ಜಹಗೀರಿನ ಆಡಳಿತ ವಹಿಸಿಕೊಂಡಿದ್ದ ಪ್ರಾರಂಭದ ದಿನಗಳು. ರಾಂಝಾ ಎಂಬ ಗ್ರಾಮದ ಪಾಟೀಲನೊಬ್ಬ ಅಬಲೆ ಸ್ತ್ರೀಯನ್ನು ಅತ್ಯಾಚಾರವೆಸಗಿದ. ಮಹಾರಾಜರು ಅವನನ್ನು ಎಳೆದು ತರುವಂತೆ ಆಜ್ಞಾಪಿಸಿದರು. ಅವನ ಕೈ ಮತ್ತು ಕಾಲುಗಳನ್ನು ಕತ್ತರಿಸಲು ಆದೇಶವಿತ್ತರು. ಅಂದಿನಿಂದ ಅಧಿಕಾರಗಳ ಕಿರುಕುಳಗಳು, ಪ್ರಜೆಗಳ ದೂರುಗಳು ಹಾಗೂ ಆಡಳಿತದ ನಿರ್ಲಕ್ಷ್ಯ ಇವೆಲ್ಲ ನಿಂತು ಹೋದವು. ಸರಿ-ತಪ್ಪುಗಳ ನಿರ್ಣಯವಾಗುತ್ತಿತ್ತು. ತಪ್ಪುಗಳಿಗೆ-ಆಯೋಗ್ಯರಿಗೆ ಶಿಕ್ಷೆಯಾಗುತ್ತಿತ್ತು. ದೊಡ್ಡ ವ್ಯಕ್ತಿಯು ತಪ್ಪು ಮಾಡಿದರೆ ಅಷ್ಟೇ ಕಠೋರ ದಂಡನೆ, ಸಾಮಾನ್ಯ ವ್ಯಕ್ತಿಯ ತಪ್ಪಿನಿಂದ ಉಪಯೋಗವಾಗುವಂತಿದ್ದರೆ ಅವನಿಗೆ ಸನ್ಮಾನ ನೀಡಲಾಗುತ್ತಿತ್ತು. ಹಿರಕಣಿ ಎಂಬ ಹಾಲು ಮಾರುವವಳ ಕಥೆಯು ಪ್ರಸಿದ್ಧವಾಗಿದೆ. ಅವಳು ಹಾಲು ಮಾರಲು ರಾಯಗಡಕ್ಕೆ ಬಂದು ಹೋಗುತ್ತಿದ್ದಳು. ಒಂದು ದಿನ ಸಾಯಂಕಾಲದವರೆಗೆ ಕೋಟೆಯೊಳಗೆ ಉಳಿದುಕೊಂಡಳೂ. ನಿಯಮಾನುಸಾರ ಕೋಟೆಯ ಎಲ್ಲ ಬಾಗಿಲುಗಳನ್ನು ಸೂರ್ಯಾಸ್ತವಾಗುತ್ತಿದ್ದಂತೆ ಬಂದ್ ಮಾಡಲಾಯಿತು. ಅವಳು ಗ್ರಾಮಕ್ಕೆ ಮರಳುವುದು ಹೇಗೆ? ಪರ್ವತದ ಕೆಳಗೆ ತನ್ನ ಗ್ರಾಮದ ಮನೆಯಲ್ಲಿ ಬಿಟ್ಟು ಬಂದಿರುವ ತನ್ನ ಮಗನ ನೆನಪಾಗಿ ಅವಳು ವ್ಯಾಕುಲಗೊಂಡಳು. ಅದೇ ವ್ಯಾಕುಲತೆಯಿಂದ ಕೋಟೆಯ ಪರ್ವದ ಒಂದು ದುರ್ಗಮ ಗೋಡೆಯನ್ನು ಹತ್ತಿ ಅಲ್ಲಿಂದ ಹಾರಿ ಹೊರಗೆ ಬಂದಳು. ಮಹಾರಾಜರಿಗೆ ಈ ವಿಷಯ ಗೊತ್ತಾಯಿತು. ಅವರು ಹಿರಕಣಿಯನ್ನು ಆಸ್ಥಾನಕ್ಕೆ ಕರೆಸಿ ಅವಳ ಸಾಹಸಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಆ ಗೋಡೆಯನ್ನು ಇನ್ನಷ್ಟು ಎತ್ತರದಲ್ಲಿ ಕಟ್ಟಿಸಿ ಮೇಲೆ ಒಂದು ಬುರುಜನ್ನು ನಿರ್ಮಿಸಿ ಆ ರಸ್ತೆಯನ್ನು ಮುಚ್ಚಲಾಯಿತು. ಈಗಲೂ ಆ ಬುರುಜನ್ನು ’ಹಿರಕಣಿ ಬುರುಜು’ ಎನ್ನುತ್ತಾರೆ. ಹೊಸಕೋಟೆಯನ್ನು ಕಟ್ಟುವಾಗ ಅಥವಾ ಕೋಟೆಯ ನವೀಕರಣ ಮಾಡುವಾಗ ಮಹಾರಾಜರು ಸೈನಿಕರ ಮಧ್ಯೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರಂತೆ. ಸೈನಿಕರು ಸಾಧ್ಯವಿರುವ ಎಲ್ಲ ದುರ್ಗಮ ಮಾರ್ಗಗಳಿಂದ ಕೋಟೆ ಹತ್ತಿ ಬರಬೇಕು. ಇದಕ್ಕನುಗುಣವಾಗಿ ಕೋಟೆತ ಯೋಜನೆ ರೂಪಿತವಾಗುತ್ತಿತ್ತು. ಸ್ಪರ್ಧಾಳುಗಳು ಹತ್ತಿ ಬರುವ ಎಲ್ಲ ದಾರಿಗಳನ್ನು ಧ್ವಂಸಗೊಳಿಸಿ ಒಂದು ಮಾರ್ಗವನ್ನು ಮಾತ್ರ ಇಡಲಾಗುತ್ತಿತ್ತು. ಗೆದ್ದವರಿಗೆ ಬಹುಮಾನ ನೀಡಲಾಗುತ್ತಿತ್ತು. ಇಂತಹ ಪ್ರಜಾನುರಾಗಿ, ದಕ್ಷ, ನ್ಯಾಯಯುತ ಶಾಸನ ಅವರದ್ದಾಗಿತ್ತು. ಅಲ್ಲಿ ಭೇದಭಾವವಿರಲಿಲ್ಲ. ಅಲ್ಲಿ ಹೆಮ್ಮೆ ಇತ್ತು. ಅಲ್ಲಿ ಕಠೋರತೆ ಇತ್ತು. ಪ್ರಜಾನುಕೂಲ ಸಹೃದಯ ಆಡಳಿತವಿತ್ತು, ಆದರೆ ಸಹೃದಯದ ಅರ್ಥ ಢಾಳುಢಾಳಾದ ಆಡಳಿತವಿರಲಿಲ್ಲ. ಬಹಳ ಕಠೋರತೆ ಇತ್ತು. ಆಡಳಿತದಲ್ಲಿ ಯಾರ ಹಂಗೂ ಇರುತ್ತಿರಲಿಲ್ಲ, ಸ್ವಂತ ಮಗನ ಬಗ್ಗೆಯೂ ಅವರು ಕಾಳಜಿ ಮಾಡಲಿಲ್ಲ. ಮಹಾರಾಜರು ಸ್ವತಃ ಸಂಭಾಜಿ ಮಹಾರಾಜರಿಗೆ ಶಿಕ್ಷೆಯನ್ನು ನೀಡಿದ್ದರು. ಸ್ವಂತ ಸ್ನೇಹಿತನ ಹಂಗನ್ನೂ ಇಟ್ಟುಕೊಳ್ಳಲಿಲ್ಲ. ಕಾನ್ಹೋಜಿ ಜೆಥೆಯು ಖಂಡೋಜಿ ಖೋವಡೆ ತಪ್ಪು ಮಾಡಿರಬಹುದು. ಆದರೆ ಅವನೊಂದಿಗೆ ನಮ್ಮದು ಒಳ್ಳೆಯ ಸಂಬಂಧವಿದೆ, ಅವನನ್ನು ಕ್ಷಮಿಸಬೇಕೆಂದು ಮಹಾರಾಜರಲ್ಲಿ ಕೇಳಿಕೊಂಡನು. ಮಿತ್ರನ ಮಾತನ್ನು ಅವರು ತೆಗೆದು ಹಾಕಲಿಲ್ಲ. ಆದರೆ ಖಂಡೋಜಿ ಬೋಪಡೆಯು ಕೈ ಮತ್ತು ಕಾಲನ್ನು ಕತ್ತರಿಸಲಾಯಿತು. ’ಪ್ರಾಣ ಉಳಿಸಿದ್ದೇನೆ, ತಪ್ಪು ಮಾಡಿದ ಕೈಯನ್ನು -ಕಾಲನ್ನು ಕತ್ತರಿಸಿದ್ದೇನೆ’ ಎಂದರು ಮಹಾರಾಜರು. ಹೀಗೆ ಕಠೋರ, ನ್ಯಾಯಯುತ, ಪ್ರಜಾಹಿತದಕ್ಷ, ಪ್ರಜಾನುಕೂಲ ಹಾಗೆ ಸಹೃದಯಿ ಆಡಳಿತ ಅವರದಾಗಿತ್ತು. ಸ್ವಯಂ ಮಹಾರಾಜರು ನೇತೃತ್ವದ ಆದರ್ಶವಾಗಿದ್ದರು. ಶಿವಾಜಿ ಮಹಾರಾಜರ ಚಾರಿತ್ರ್ಯದ ಬಗ್ಗೆ ಅವರ ವಿರೋಧಿಯೂ ಮಾತನಾಡಲಾರನು. ಕಲ್ಯಾಣ ಸುಭೇದಾರನ ಸೊಸೆಯೂ ಕತೆಯು ಬಹಳ ಪ್ರಸಿದ್ಧವಾಗಿದೆ. ಹೀಗೆ ಅನೇಕ ಉದಾಹರಣೆಗಳಿವೆ. ಅತ್ಯಂತ ಲೋಕಪ್ರಿಯ ಸರ್ವ ಅಧಿಕಾರ ಸಂಪನ್ನ ರಾಜನಾಗಿದ್ದರೂ ಸಜ್ಜನರ ಎದುರು ವಿನಮ್ರವಾಗಿರುತ್ತಿದ್ದರು. ಕಲಾವಿದರ ಗುಣಗಳ ಬಗ್ಗೆ ಅಭಿಮಾನ ತಾಳುತ್ತಿದ್ದರು. ರಸಿಕರಾಗಿದ್ದರು. ಸ್ವತಃ ಕಾರ್ಯಮಾಡಿ ನಂತರ ಇನ್ನೊಬ್ಬರಿಗೆ ಹೇಳುತ್ತಿದ್ದರು. ಸಾಹಸವಿತ್ತು, ವಿಜಯದ ವಿಶ್ವಾಸವಿತ್ತು. ನೀತಿನಿಪುಣರಾಗಿದ್ದರು. ಕೆಲಸ ಮಾಡುವ ನಿಪುಣತೆ ಇತ್ತು. ಯಾವುದೇ ವಿಷಯವಿರಲಿ ಅದನ್ನು ಉತ್ತಮವಾಗಿಸುವ ಗುರುಮಂತ್ರ ಅವರ ಬಳಿ ಇತ್ತು. ಸಮರ್ಥ ರಾಮದಾಸರಂತಹ ವಿಲಕ್ಷಣ ವ್ಯಕ್ತಿಗಳಿಂದ ಮಹಾರಾಜರಿಗೆ ದೊರೆತ ಪ್ರಶಂಸೆಯ ಮಾತುಗಳು ಹೀಗಿವೆ
’ಶಿವರಾಯಾಚೆ ಆಠವಾವೆ ರೂಪ, ಶಿವರಾಯಾಚಾ ಆಠವಾವಾ ಪ್ರತಾಪ,
ಶಿವರಾಯಾಚಾ ಆಠವಾವಾ ಸಾಕ್ಷೇಪ ಭೂಮಂಡಳಿ,
ಶಿವರಾಯಾಚೆ ಕೈಸೇ ಚಾಲಣೆ, ಶಿವರಾಯಾಚೆ ಕೈಸೇ ಬೋಲಣೆ
ಶಿವರಾಯಾಚೆ ಸಲಗಿ ದೆಣೆ, ಕೈಸೇ ಆಸೆ |
ಯಶವಂತ , ನೀತಿವಂತ, ಸಾಮರ್ಥ್ಯವಂತ, ವರದವಂತ
ಪುಣ್ಯವಂತ, ಕೀರ್ತಿವಂತ, ಜಾಣತಾ ರಾಜಾ ಶ್ರೀಮಂತ ಯೋಗಿ’ |
(ನೆನೆಯಲಿ ಶಿವರಾಯನ ರೂಪವನು,
ನೆನೆಯಿರಿ ಶಿವರಾಯನ ಪ್ರತಾಪವನು
ನೆನೆಯಿರಿ ಶಿವರಾಯನ ಸಾಮರ್ಥ್ಯವನು, ಭೂಮಂಡಲದಿ |
ಶಿವರಾಜನ ನಡೆ ಏನು
ಶಿವರಾಜನ ನುಡಿ ಏನು
ಶಿವರಾಯನು ನೀಡುವ ಪರಾಮರ್ಶೆ ಹೇಗಿದೆ |
ಯಶವಂತ, ನೀತಿವಂತ, ಸಾಮರ್ಥ್ಯವಂತ, ವರದವಂತ
ಪುಣ್ಯವಂತ, ಕೀರ್ತಿವಂತ, ಜ್ಞಾನಿ ರಾಜನು, ಶ್ರೀಮಂತ ಯೋಗಿ |)
ವ್ಯಕ್ತಿಗತ ದೃಷ್ಟಿಯಿಂದ ಸ್ವಯಂ ರಾಜನು ಹೇಗಿರಬೇಕು, ಹಿಂದು ಸಮಾಜದ ವ್ಯಕ್ತಿ ಹೇಗಿರಬೇಕು ಹಿಂದುಸಮಾಜಕ್ಕೆ ನೇತೃತ್ವ ನೀಡಬಲ್ಲ ನೇತಾರ ಹೇಗಿರಬೇಕು ಇದರ ಮೂರ್ತಿವೆತ್ತ ಆದರ್ಶ ಶಿವಾಜಿ ಮಹಾರಾಜರೇ ಆಗಿದ್ದಾರೆ. ಮಹಾರಾಜರ ಹೃದಯದ ಆತ್ಮವಿಶ್ವಾಸ ಮತ್ತು ವಿಜಿಗೀಷು ಪ್ರವೃತ್ತಿಯು ಸಮಾಜದಲ್ಲಿ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿತು. ಸಂಪೂರ್ಣ ಸಮಾಜದಲ್ಲಿ ಸ್ವರಾಜ್ಯ ಸ್ಥಾಪನೆಯ ಆಕಾಂಕ್ಷೆಯ ಸಂಕಲ್ಪವನ್ನು ಬಡಿದೆಬ್ಬಿಸಿತು. ಕಾರ್ಯದ ಜೊತೆಗೆ ಸಮಾಜವನ್ನು ಕೊಂಡೊಯ್ದು ಯಾರ ನೇತೃತ್ವದಿಂದ ಹಿಂದು ಸ್ವರಾಜ್ಯದ ಸಿಂಹಾಸನ ನಿರ್ಮಾಣವಾಯಿತೋ, ಅಂತಹ ಶಿವಾಜಿ ಮಹಾರಾಜರ ವಿಜಯವು ವಾಸ್ತವದಲ್ಲಿ ಹಿಂದುರಾಷ್ಟ್ರದ ಸುಧೀರ್ಘ ಹೋರಾಟದ ಮೊದಲಿನ ಅವಸ್ಥೆಯಲ್ಲಿ ರಾಷ್ಟ್ರದ ನಿರ್ಣಾಯಕ ವಿಜಯವಾಗಿತ್ತು. ಒಂದು ವೇಳೆ ಸಂಘರ್ಷದ ಎರಡನೆಯ ಅವಸ್ಥೆಯಲ್ಲಿ ಮಹಾರಾಜರ ನೀತಿಯಂತೆ ನಡೆದುದೇ ಆಗಿದ್ದರೆ ಹಿಂದಿನಂತೆಯೇ ನಿರ್ಣಾಯಕವಾಗಿ ವಿಜಯವನ್ನೇ ಪಡೆಯುತ್ತಿದ್ದವು. ಅದರಂತೆ ನಾವು ನಡೆಯದ ಕಾರಣ ಪಾಕಿಸ್ತಾನವನ್ನು ಪಡೆದುಕೊಂಡಿದ್ದೇವೆ.
ವರ್ತಮಾನದ ಸಂದರ್ಭದಲ್ಲಿ ಅನುಕರಣೀಯ ಸಂದೇಶ
ಇಂದಿನ ಪರಿಸ್ಥಿತಿಯು ಅದೇ ರೀತಿ ಇದೆ. ಇಂದಿನ ಅವಶ್ಯಕತೆಯೂ ಅದೇ ಆಗಿದೆ. ಈಗಲೂ ಸಮಾಜದಲ್ಲಿ ಅದೇ ವಿಜಿಗೀಷು ಪ್ರವೃತ್ತಿಯನ್ನು, ಆತ್ಮವಿಶ್ವಾಸವನ್ನು ಕಾರ್ಯವನ್ನು ಜಾಗೃತಗೊಳಿಸಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಮಹಾರಾಜರ ಚಾರಿತ್ರ್ಯದ, ಗುಣಗಳ ಅನುಕರಣೆ ಮಾಡುತ್ತ ಹಿಂದು ಸಮಾಜದ, ಹಿಂದು ಸಮಾಜಕ್ಕೆ ಜೊತೆನೀಡುತ್ತ, ತನಗಾಗಿ ಅಲ್ಲದೇ, ಹಿಂದು ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಸಮಾಜಕ್ಕೆ ಯೋಗ್ಯ ನೇತೃತ್ವ ನೀಡಬಲ್ಲ ವ್ಯಕ್ತಿ ತಯಾರಾಗಬೇಕು ಮತ್ತು ಸಮಾಜದ ಆತ್ಮವಿಶ್ವಾಸಕ್ಕೆ ಒಂದು ಗತಿ ನೀಡಬಲ್ಲ ವ್ಯಕ್ತಿ ಬೇಕು. ಪ್ರಜಾಹಿತ ದಕ್ಷ, ಸಹೃದಯಿ, ಸರ್ವಂತ್ರ ಸಮಭಾವ ಹೊಂದಿರುವ, ನೀತಿಕಠೋರತೆಯನ್ನು ಉಳ್ಳ ಯೋಗ್ಯ ಹಿಂದುವನ್ನು ಸಮಾಜದ ಮೂಲಕವೇ ಪ್ರತಿಷ್ಠಾಪಿಸಬೇಕಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಗುಣವೆತ್ತತೆ, ಕಾರ್ಯ ಮತ್ತು ಆತ್ಮವಿಶ್ವಾಸದ ಆಧಾರದ ಮೇಲೆ ಇದು ಸಾಧ್ಯವಿದೆ. ಭೂತಕಾಲದಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಮಹಾರಾಜರ ಕಾರ್ಯ ನಮಗೆ ಜೀವಂತ ನಿದರ್ಶನವಾಗಿದೆ. ಈ ಕಾರ್ಯವು ಅಂದಿನ ಕಾಲದಲ್ಲಿ ಎಲ್ಲರಿಗೂ ಉದಾಹರಣೆ ರೂಪದಲ್ಲಿ ಉಳಿಯಿತು. ಎಲ್ಲರೂ ಕೂಡಿ ಮಾಡಿದ ಪ್ರಯೋಗಗಳಲ್ಲಿನ ದೋಷಗಳನ್ನು ಸುಧಾರಿಸುತ್ತ ಅಂತಿಮ ಸಫಲ ಪ್ರಯೋಗವು ಶಿವಾಜಿ ಮಹಾರಾಜರದಾಯಿತು.
ಈ ಕಾರಣಕ್ಕಾಗಿ ಅವರ ರಾಜ್ಯಾಭಿಷೇಕವು ಮಹತ್ವದ್ದಾಗಿದೆ. ಅವರ ಜಯಂತಿ ಅಥವಾ ಪುಣ್ಯತಿಥಿಯನ್ನು ಉತ್ಸವದ ರೂಪದಲ್ಲಿ ನಾವು ಆಚರಿಸುವುದಿಲ್ಲ. ಅನೇಕರು ಹುಟ್ಟುತ್ತಾರೆ, ಅನೇಕರು ಸಾಯುತ್ತಾರೆ -ಪ್ರಪಂಚದಲ್ಲಿ ಮಾಡಿದ ಕಾರ್ಯವೇನು ಎಂಬುದು ಪ್ರಮುಖವಾಗುತ್ತದೆ.
ಸಂಪೂರ್ಣ ರಾಷ್ಟ್ರಕ್ಕಾಗಿ ಮಹಾರಾಜರು ಮಾಡಿದ ಅನೇಕ ಪ್ರಯತ್ನಗಳ ಸಫಲ ಪರಿಣಾಮವು ಪಟ್ಟಾಭಿಷೇಕವಾಗಿದೆ. ಹೀಗಾಗಿ ನಾವು ಅದನ್ನು ಶಿವಸಾಮ್ರಾಜ್ಯ ದಿನ ಎಂದು ಕರೆಯುವುದಿಲ್ಲ ಹಿಂದು ಸಾಮ್ರಾಜ್ಯ ದಿನ ಎನ್ನುತ್ತೇವೆ. ಸಾಕಾರ ರೂಪದಲ್ಲಿ ಆದರ್ಶವೆಂದರೆ ಶಿವಾಜಿ ಮಹಾರಾಜರ ಜೀವನ ಪ್ರತಿಯೊಂದು ಅಂಶವೇ ದಿಗ್ದರ್ಶನವಾಗಿದೆ. ಅಂತಹ ಚರಿತ್ರೆ, ನೀತಿ, ಕುಶಲತೆ, ಉದ್ದೇಶ, ಪವಿತ್ರತೆಯ ಅವಶ್ಯಕತೆ ಈಗ ಇದೆ. ಈಗಿನ ಪರಿಸ್ಥಿತಿಯಲ್ಲಿ ಮಹಾರಾಜರ ಗುಣ, ಚರಿತ್ರೆಯಿಂದ ದೊರೆಯುವ ದಿಗ್ದರ್ಶನವು ಮಾರ್ಗದರ್ಶಕವಾಗಿದೆ. ಈಗಲೂ ಅನುಕರಣೀಯವಾಗಿದೆ. ಈ ಹಿಂದು ಸಾಮ್ರಾಜ್ಯ ದಿನೋತ್ಸವದ ಮಹತ್ವ ಎಲ್ಲರಿಗೆ ತಿಳಿಯಲಿ. ಸಂದೇಶವು ಹೃದಯದಲ್ಲಿ ಇಳಿಯಲಿ. ವ್ಯಕ್ತಿಯ ಆಚರಣೆಯಲ್ಲಿ ಪ್ರಕಟವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.