ಬಹಳಷ್ಟು ಚರ್ಚಿತವಾಗಿರುವ ಪದಗಳಲ್ಲಿ, “ರಾಷ್ಟ್ರೀಯತೆ” ಅನ್ನೋ ಪದವೂ ಒಂದು. “ಭಾರತ ಎಂದಿಗೂ ಏಕರೂಪ ರಾಷ್ಟ್ರ ಆಗಿರಲೇ ಇಲ್ಲ” ಎಂಬ ವಾದದಿಂದ ಹಿಡಿದು, “ರಾಷ್ಟ್ರೀಯತೆ ಅಂದರೆ ಅದೂ ಒಂದು ರೀತಿಯ ಮೂಲಭೂತವಾದ” ಎಂಬ ಮಟ್ಟಿಗಿನ ಅಭಿಪ್ರಾಯಗಳು, ಪ್ರಗತಿಪರರ ವಿಚಾರಧೋರಣೆಗಳಲ್ಲಿ ಕಾಣಸಿಗುತ್ತವೆ. ಆದರೆ, ಅವರಿಗೆಲ್ಲ ಉತ್ತರಿಸಲು, ಮತ್ತೆ ಮತ್ತೆ ತೋರಿಸಬಹುದಾದ ಕೆಲವು ವ್ಯಕ್ತಿತ್ವಗಳು ನಮ್ಮ ದೇಶದಲ್ಲಿ ಜನ್ಮಿಸಿದ್ದಾರೆ. ಆ ಮಹಾನ್ ಪುರುಷರ ಜೀವನಗಾಥೆಯೇ ಸಾಕು, ಅನೇಕರ ವಿತಂಡಮಾತುಗಳನ್ನು ಖಂಡಿಸಲು.!
ಅಂತಹ ಮೇರುಪುರುಷರ ಸಾಲಿನಲ್ಲಿ ನಿಲ್ಲುವವರು ಶ್ರೀಶಂಕರಾಚಾರ್ಯರು. ವೇದಗಳ ತತ್ವಗಳನ್ನು ಮತ್ತೆ ಭಾರತ ಭೂಮಿಯಲ್ಲಿ ಪ್ರಚುರಪಡಿಸಿದ ಧೀಮಂತರು. ಸುಮಾರು ಕ್ರಿ.ಶ. 788 ರಲ್ಲಿ, ಕೇರಳದ ಕಾಲಡಿ ಎಂಬಲ್ಲಿ ಜನಿಸಿದ ಆಚಾರ್ಯರು, ಬಾಲ್ಯದಿಂದಲೂ ಆಧ್ಯಾತ್ಮದತ್ತ ಮನಸ್ಸು ಮಾಡಿದ್ದರು. ಅಗಾಧ ಪ್ರತಿಭಾವಂತರಾಗಿದ್ದ ಇವರು, ಸಣ್ಣ ವಯಸ್ಸಿನಲ್ಲೇ ತಮ್ಮ ಗುರುಗಳನ್ನು ಹುಡುಕಿಕೊಂಡು ಹೊರಟರು. ನರ್ಮದೆಯ ತೀರದಲ್ಲಿ ಶ್ರೀಗೋವಿಂದ ಭಗವತ್ಪಾದರನ್ನು ಭೇಟಿಯಾದ ಮೇಲೆ ಅವರ ಶಿಷ್ಯತ್ವವನ್ನೇ ಪಡೆದುಕೊಂಡರು. ಸುಮಾರು ೮ ನೇ ವರ್ಷಕ್ಕೆ ಸನ್ಯಾಸಾಶ್ರಮ ಸ್ವೀಕರಿಸಿ, ನಿರಂತರ ವೇದಾಧ್ಯಯನ, ಶಾಸ್ತ್ರಾಭ್ಯಾಸಗಳಿಂದ ಅತಿ ಸ್ವಲ್ಪಾವಧಿಯಲ್ಲೇ ಅದ್ಭುತ ವಿದ್ವತ್ತನ್ನು ಸಾಧಿಸಿದ್ದರು. ೧೨-೧೩ ನೆ ವಯಸ್ಸಿನಲ್ಲೇ ಗುರುಗಳ ಪ್ರೀತಿಗಾಗಿ ವಿವೇಕ-ಚೂಡಾಮಣಿ ಯನ್ನು ರಚಿಸಿದ್ದರು.
ಅವೈದಿಕ ಮತಗಳ ಧೂರ್ತತೆಯಿಂದ, ನಲುಗಿದ್ದ ವೈದಿಕ ಸಾಮ್ರಾಜ್ಯವನ್ನು ಮತ್ತೆ ಪುನರುತ್ಥಾನ ಮಾಡಬೇಕೆಂಬ ಅವರ ಗುರುಗಳ ಆದೇಶದಂತೆ, ಶ್ರೀಶಂಕರರು ತಮ್ಮ ಶಿಷ್ಯರೊಡನೆ ಇಡೀ ದೇಶಪರ್ಯಟನೆಗೆ ಮುಂದಾದರು. ಅದೊಂದು ಅದ್ಭುತ ಪರ್ಯಟನೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಎಲ್ಲ ದೇಶಗಳನ್ನೂ ಸಂಚರಿಸಿ, ಅಲ್ಲಲ್ಲಿದ್ದ ದುರ್ವಾದಿಗಳನ್ನು ಜಯಿಸಿ, ವೇದಗಳ ಸತ್ಯತೆ, ಅವುಗಳ ಸಾರ್ವಕಾಲಿಕತೆ ಮತ್ತು ಶ್ರೇಷ್ಠತೆಗಳನ್ನು ಸಾರಿ ಸಾರಿ ಜಾಗೃತಿ ಮೂಡಿಸಿದರು. ಹೀಗಾಗಿ ಶಂಕರರ ಅನುಯಾಯಿಗಳು ದಿನೇ ದಿನೇ ಹೆಚ್ಚುತ್ತ ಹೋದರು. ಬದರಿಕಾಶ್ರಮಕ್ಕೆ ಹೋಗಿ, ಅಲ್ಲಿ ಮತ್ತೆ ನಾರಾಯಣನ ನಿರಂತರ ಪೂಜೆಗೆ ವ್ಯವಸ್ಥೆ ಕಲ್ಪಿಸಿದ್ದನ್ನು ಇಂದಿಗೂ ಪ್ರತಿಯೊಬ್ಬ ಯಾತ್ರಿಕನೂ ಸ್ಮರಿಸಿಕೊಳ್ಳಬೇಕಾದ ವಿಷಯ.
ಶ್ರೀಶಂಕರರು ದೇಶವನ್ನು ಸುತ್ತಿದ ಪರಿ ನೋಡಿದರೇನೇ, ಅದೊಂದು ದೇಶ ಬೆಸೆಯುವ ಬಂಧವೇನೋ ಅಂತ ಅನಿಸೋದು ನಿಜ. ಅವರು ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಿದ ನಾಲ್ಕು ಅಮ್ನಾಯ ಪೀಠಗಳು, ಅವರ ದಾರ್ಶನಿಕತೆಗೆ ಸಾಕ್ಷಿ. ದೇಶದ ಎಲ್ಲ ಭಾಗಗಳೂ ಒಂದು ಸೂತ್ರದೊಳಗೆ ಬರಲೆಂಬ ಭಾವನೆಯಿಂದಲೇ ಈ ನಾಲ್ಕು ಪೀಠಗಳು ಸ್ಥಾಪಿತವಾಗಿದ್ದವೆಂದು ಹೇಳಿದರೆ ತಪ್ಪಾಗಲಾರದು. ತನ್ಮೂಲಕ ರಾಷ್ಟ್ರೀಯತೆಗೆ ಶ್ರೀಗಣೇಶ ಮಾಡಿದವರೂ ಆಚಾರ್ಯರೇ.
ಆಧ್ಯಾತ್ಮಿಕವಾಗಿ ಅದ್ವೈತದ ವಾದಗಳೇನೆ ಇರಲಿ, ರಾಷ್ಟ್ರೀಯ ದೃಷ್ಟಿಯಿಂದಂತೂ ಇದೊಂದು ಬೇಕಾದಂತಹ ಭಾವ. ನಮ್ಮ ಮತ್ತು ನಮ್ಮ ನೆರೆ ಹೊರೆಯವರ ನಡುವೆ ಒಂದೇ ಮನಸ್ಥಿತಿ ಬರದೆ ಹೋದರೆ ದೇಶದ ಗತಿ ಏನಾದೀತು.?. ಯಾವುದೋ ವಿದೇಶದಲ್ಲಿ, ಅಕಸ್ಮಾತ್ ಭಾರತೀಯನ್ನೊಬ್ಬನನ್ನು ನೋಡಿದರೆ ಸಾಕು, ‘ಅರೆ, ಇವನೂ ನಮ್ಮವನೇ’ ಅನ್ನೋ ಭಾವ ಮೂಡುವುದರ ಹಿಂದೆ ಈ ಅದ್ವೈತದ ಛಾಪು ಇದೆ. ಸಮಾನ ಮನೋಭಾವ, ಸಮಾನ ದೃಷ್ಟಿಕೋನ ಇವೆಲ್ಲಾ ಒಂದು ರಾಷ್ಟ್ರದ ನಿರ್ಮಾಣಕ್ಕೆ ಅತ್ಯಗತ್ಯವಾದ ಸಾಮಗ್ರಿಗಳು. ಅದಿಲ್ಲದೆ ಹೋದಲ್ಲಿ ಯಾವ ರಾಷ್ಟ್ರವೂ ಉತ್ಥಾನ ಹೊಂದಲಾರದು. ಹೀಗೆ ಭಾರತದ ಆಂತರ್ಯದಲ್ಲಿ ಏಕತೆಯ ಅಂತಸ್ಸತ್ವವನ್ನು ತುಂಬಿದ ಶ್ರೀಶಂಕರರು ರಾಷ್ಟ್ರೀಯತೆಯ ಜನಕರು.
ಇವತ್ತು ರಾಜ್ಯ-ಭಾಷೆ-ಧರ್ಮಗಳ ನೆಪದಲ್ಲಿ ನಮ್ಮಲ್ಲಿ ಅನೇಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವೆಲ್ಲವನ್ನೂ ಮೀರಿದ ಒಂದು ಮಾನಸಿಕವಾದ ಅದ್ವೈತ ಭಾವ ನಮ್ಮಲ್ಲಿದೆ. ಕ್ರಿಕೆಟ್ ನಡೆಯುವಾಗ ಪಕ್ಕದಲ್ಲೇ ಕಡುದ್ವೇಷಿ ಕೂತಿದ್ದರೂ, ಅವನ ಜೊತೆಗೆ ಸೇರಿಯೇ ಭಾರತಕ್ಕೆ ಶುಭ ಹಾರೈಸುತ್ತೇವಲ್ಲ, ಆಗೆಲ್ಲಾ ಆ ಸುಪ್ತ ಐಕ್ಯತೆಯ ಭಾವ ಜಾಗೃತವಾಗಿರುತ್ತೆ. ಅಂತಹ ಜಾಗೃತಿ ನಮಗೆ ಸದಾ ಇರೋ ಹಾಗಿದ್ದರೆ, ದೇಶ ಅದೆಷ್ಟು ಸುಭಿಕ್ಷವಾದೀತು.!
“ಅಹಂ ರಾಷ್ಟ್ರೀ ಸಂಗಮನೀ”, “ಅಸ್ಮಿನ್ ರಾಷ್ಟ್ರೆ ಶ್ರಿಯಂ” ಹೀಗೆ ಮುಂತಾದ ವೇದವಾಕ್ಯಗಳಲ್ಲೆಲ್ಲಾ, ಒಂದು ರಾಷ್ಟ್ರದ ಕಲ್ಪನೆ ನಿಶ್ಚಿತವಾಗಿ ಇದೆ. ಉತ್ತರದ ವ್ಯಕ್ತಿ, ದಕ್ಷಿಣ ಭಾರತದ ನದಿ-ತೀರ್ಥಗಳನ್ನು ಸ್ಮರಿಸುವಾಗ, ಅಂತೆಯೇ ದಕ್ಷಿಣದ ವ್ಯಕ್ತಿ ಉತ್ತರದ ತೀರ್ಥಗಳನ್ನು ಸ್ಮರಿಸುವಾಗ ಇರುವುದು, ರಾಷ್ಟ್ರೀಯತೆಯ ಭಾವವಲ್ಲದೆ ಮತ್ತೇನು ?!, ಎಷ್ಟೇ ಪ್ರಾಂತಗಳಾಗಿ ಭಾರತ ಇದ್ದಿದ್ದರೂ, ಮೂಲದಲ್ಲಿ ಇದು, ಪುಣ್ಯ ಭಾರತ ಎಂಬ ಪ್ರಜ್ಞೆ ಜನರಲ್ಲಿದ್ದೇ ಇತ್ತು. ಅದು ಆಗಾಗ ಕಡಿಮೆಯಾದಾಗಲೆಲ್ಲಾ, ಮತ್ತೆ ಉಜ್ಜುಗಿಸಲು ಮಹಾತ್ಮರು ಉದಯಿಸಿದ್ದಾರೆ. ಅವರ ಶ್ರಮ-ತಪಶ್ಶಕ್ತಿಗಳಿಂದಲೇ ಭಾರತ ಇಂದಿಗೂ ಭವ್ಯವಾಗಿ ಮೆರೆಯುತ್ತಿದೆ.
ತಮ್ಮ ಕೊಡುಗೆಗಳಿಂದ, ಮತ್ತೆ ವೈದಿಕತೆಯನ್ನು ಉದ್ದೀಪನಗೊಳಿಸಿದ, ತನ್ಮೂಲಕ ದೇಶದ ಸದ್ಭಾವನೆಯನ್ನೂ ಜಾಗೃತಗೊಳಿಸಿದ ಶ್ರೀಶಂಕರಾಚಾರ್ಯರ ಸ್ಮರಣೆ ಆಚಂದ್ರಾರ್ಕವಾಗಿ ನಡೆಯಲಿ. ಅವರ ಆದರ್ಶದ ಬೆಳಕಿನಲ್ಲಿ, ದೇಶ ಮುನ್ನಡೆಯಲಿ.
ವಂದೇ ಮಾತರಂ.
ಭೀಮಸೇನ ಪುರೋಹಿತ್ (ಶಿಕ್ಷಕ್ ಸಮಾಚಾರ್)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.