ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ‘ಕಾಂಗ್ರೆಸ್ಮುಕ್ತ ಭಾರತ’ ನಮ್ಮ ಮುಂದಿನ ಗುರಿ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿದ್ದ ಮಾತನ್ನು ಗೇಲಿ ಮಾಡುತ್ತಿದ್ದ ವಿರೋಧಿನಾಯಕರೇ ಹೆಚ್ಚು. ಅದರಲ್ಲೂ ಬಿಹಾರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಾಗ ಈ ಗೇಲಿ ತಾರಕಕ್ಕೇರಿತ್ತು. ಮೋದಿ ಮ್ಯಾಜಿಕ್ ಇನ್ನು ನಡೆಯುವುದಿಲ್ಲ ಎಂದು ಅನೇಕ ರಾಜಕೀಯ ವಿಶ್ಲೇಷಕರು ಷರಾ ಬರೆದಿದ್ದರು. ಆದರೆ ಮೊನ್ನೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದಾಗ ಈ ರಾಜಕೀಯ ವಿಶ್ಲೇಷಕರು ಹುಬ್ಬೇರಿಸುವಂತಾಗಿದ್ದು ನಿಜ. ಏಕೆಂದರೆ ಈಶಾನ್ಯ ಭಾರತದಲ್ಲಿ ಒಮ್ಮೆ ಕೂಡ ಅಧಿಕಾರ ಹಿಡಿಯದ ಬಿಜೆಪಿ ಇದೇ ಮೊದಲ ಬಾರಿಗೆ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಎಲ್ಲರೂ ದಂಗಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ದಕ್ಷಿಣದ ತುದಿಯಲ್ಲಿರುವ ಕಮ್ಯುನಿಷ್ಟರ ಭದ್ರಕೋಟೆಯೆಂದೇ ಬಿಂಬಿತವಾಗಿರುವ ಕೇರಳದಲ್ಲೂ ಮೊದಲಬಾರಿಗೆ ತನ್ನ ಖಾತೆ ತೆರೆದಿದೆ. ಕಾಂಗ್ರೆಸ್ ಇವೆರಡೂ ರಾಜ್ಯಗಳಲ್ಲಿ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಇನ್ನು ತಮಿಳುನಾಡು, ಪುದುಚೆರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿಗೆ ಮಹತ್ವದ ಗೆಲುವು ಸಾಧ್ಯವಾಗದಿದ್ದರೂ ತನ್ನ ಶೇಕಡಾವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ 6 ಸ್ಥಾನಗಳನ್ನು ಗೆದ್ದು ತನ್ನ ಅಸ್ತಿತ್ವವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಆದರೆ ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೂ ಗೆಲ್ಲಲಾಗಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಷ್ಟರ ಜೊತಗಿನ ಮೈತ್ರಿ ಆ ಪಕ್ಷವನ್ನು ಇನ್ನಷ್ಟು ಪಾತಾಳಕ್ಕೆ ನೂಕಿದೆ. ಪುದುಚೆರಿಯಲ್ಲಿ ಮಾತ್ರ ಡಿಎಂಕೆ ಜೊತೆಗಿನ ಮೈತ್ರಿ ಕಾಂಗ್ರೆಸ್ಗೆ ಸಮಾಧಾನ ತಂದುಕೊಟ್ಟಿದೆ. ಭಾರತದ ಹೊಸ ರಾಜಕೀಯ ಭೂಪಟವೇ ಈಗ ಬದಲಾಗಿದೆ. 2014 ರಲ್ಲಿ ಬಿಜೆಪಿ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ 14 ರಾಜ್ಯಗಳಲ್ಲಿ ಅಧಿಕಾರ ಹಿಡಿದಿತ್ತು. ಉಳಿದ 9 ರಾಜ್ಯಗಳಲ್ಲಿ ಇತರೆ ಪಕ್ಷಗಳು ಅಧಿಕಾರದಲ್ಲಿದ್ದವು. ಈಗ 2016 ರಲ್ಲಿ ಬಿಜೆಪಿ ಮೈತ್ರಿಕೂಟ 13 ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿದ್ದರೆ ಕಾಂಗ್ರೆಸ್ ಮೈತ್ರಿಕೂಟ ಕೇವಲ 8 ರಾಜ್ಯಗಳಿಗೆ ತನ್ನ ಅಧಿಕಾರವನ್ನು ಸೀಮಿತಗೊಳಿಸಿದೆ. ಕೇವಲ 2 ವರ್ಷಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳ ಸ್ಥಾನಮಾನವೇ ಬದಲಾಗಿದೆ. ಹೀಗಾಗಿ ಮೋದಿ ಹೇಳುತ್ತಿದ್ದ ‘ಕಾಂಗ್ರೆಸ್ಮುಕ್ತ ಭಾರತ’ ಘೋಷಣೆ ನಿಜವಾಗಿಲ್ಲವೆಂದು ಈಗ ಯಾರಾದರೂ ಹೇಳಲು ಸಾಧ್ಯವೆ?
ಅಸ್ಸಾಂನಲ್ಲಿ ಸತತವಾಗಿ 15 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಾರಿ ಕೇವಲ ವಿರೋಧ ಪಕ್ಷಕ್ಕೆ ಕುಗ್ಗಿರುವುದಕ್ಕೆ ಸ್ಥಳೀಯ ನಾಯಕರ ನಿರ್ಲಕ್ಷ್ಯ, ಬಾಂಗ್ಲಾದೇಶೀಯರ ಅಕ್ರಮ ನುಸುಳುವಿಕೆ ಬಗ್ಗೆ ಕ್ರಮ ಕೈಗೊಳ್ಳದಿರುವುದು, ಮೇರಿ ಮೀರಿದ ಭ್ರಷ್ಟಾಚಾರ ಮೊದಲಾದ ಹಲವು ಕಾರಣಗಳಿವೆ. ಇವೆಲ್ಲ ಅಂಶಗಳು ಬಿಜೆಪಿಯ ಪಾಲಿಗೆ ಈ ಬಾರಿ ವರವಾಗಿ ಪರಿಣಮಿಸಿದ್ದು ಸತ್ಯ. ಆಡಳಿತವಿರೋಧಿ ಅಲೆಗೆ ಅಲ್ಲಿ ಕಾಂಗ್ರೆಸ್ ತತ್ತರಿಸಿಹೋಗಿದೆ. ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಪ್ರಾದೇಶಿಕ ಪಕ್ಷಗಳ ಮೈತ್ರಿ ಬಿಜೆಪಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ. ಈ ಮೈತ್ರಿಕೂಟದ ರಚನೆಯನ್ನು ಬಿಜೆಪಿ ಒಂದು ವರ್ಷಕ್ಕೆ ಮುನ್ನವೇ ಹೆಣೆದಿತ್ತು. ಜೊತೆಗೆ ಆಗಲೇ ಯೋಜಿತ ಪ್ರಚಾರವನ್ನೂ ಆರಂಭಿಸಿತ್ತು. ಇದರ ಪರಿಣಾಮವಾಗಿ ಸತತ ೩ ಅವಧಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ. ತರುಣ್ ಗೊಗೊಯ್ ನೇತೃತ್ವದ ಕಾಂಗ್ರೆಸ್ಅನ್ನು ಅಧಿಕಾರದ ಗದ್ದುಗೆಯಿಂದ ಇಳಿಸುವಲ್ಲಿ ಯಶಸ್ವಿಯಾಗಿದೆ. ಪೂರ್ವಾಂಚಲ ರಾಜ್ಯಗಳಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸುವ ಐತಿಹಾಸಿಕ ಅವಕಾಶ ಬಿಜೆಪಿ ಪಾಲಾಗಿದೆ. ಮುಸ್ಲಿಂ ಬಾಹುಳ್ಯದ ಜಿಲ್ಲೆಗಳೇ ಹೆಚ್ಚಾಗಿರುವ ಅಸ್ಸಾಂನಲ್ಲಿ ಬಿಜೆಪಿ ಗೆಲುವು ಹೇಗೆ ಸಾಧ್ಯ ಎಂದು ಹಲವು ರಾಜಕೀಯ ವಿಶ್ಲೇಷಕರು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಈಗ ಆಶ್ಚರ್ಯಕರ ಉತ್ತರ ದೊರೆತಿದೆ. ಮುಸ್ಲಿಮರು ಬಿಜೆಪಿಗೆ ಓಟ್ ಮಾಡದಿದ್ದರೆ ಅಸ್ಸಾಂನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿರುತ್ತಿತ್ತೇ? ಎಂಬ ಪ್ರಶ್ನೆಯನ್ನು ಈ ವಿಶ್ಲೇಷಕರಿಗೇ ಈಗ ಕೇಳಬೇಕಾಗಿದೆ.
ರಾಜಕೀಯ ವಿಶ್ಲೇಷಕರಿಗೆ ಅಸ್ಸಾಂ ಫಲಿತಾಂಶಕ್ಕಿಂತ ಹೆಚ್ಚು ಅಚ್ಚರಿ ಮೂಡಿಸಿರುವುದು ಕೇರಳದ ಬಿಜೆಪಿಯ ಫಲಿತಾಂಶ. ಇದುವರೆಗೆ ಆ ರಾಜ್ಯದಲ್ಲಿ ಬಿಜೆಪಿ ಖಾತೆಯನ್ನು ತೆರೆದದ್ದೇ ಇಲ್ಲ. ಪ್ರತಿ ಬಾರಿ ಅಲ್ಲಿ ಠೇವಣಿ ಕಳೆದುಕೊಂಡದ್ದೇ ಹೆಚ್ಚು. ಆದರೆ ಈ ಬಾರಿ ತಿರುವನಂತಪುರದ ನೇಮಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಓ. ರಾಜಗೋಪಾಲ್, 8671 ಮತಗಳ ಅಂತರದಿಂದ ಗೆದ್ದು ಖಾತೆ ತೆರೆದಿದ್ದಾರೆ. ಅವರು ಸೋಲಿಸಿರುವುದು ಸಿಪಿಎಂ ಅಭ್ಯರ್ಥಿ ವಿ. ಶಿವನ್ಕುಟ್ಟಿ ಅವರನ್ನು. ಇದಲ್ಲದೆ ಬಿಜೆಪಿ 7 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಕೇವಲ 89 ಮತಗಳ ಅಂತರದಿಂದ ಅಭ್ಯರ್ಥಿ ಸುರೇಂದ್ರನ್ ಹಾಗು ಇನ್ನೊಂದು ಕ್ಷೇತ್ರದಲ್ಲಿ 800 ಮತಗಳ ಅಂತರದಲ್ಲಿ ಇನ್ನೊಬ್ಬ ಬಿಜೆಪಿ ಅಭ್ಯರ್ಥಿ ಸೋತಿರುವುದು ಕೇರಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಸಾಕ್ಷಿ. 2011 ರಲ್ಲಿ ಬಿಜೆಪಿಯ ಮತಹಂಚಿಕೆ ಪ್ರಮಾಣ ಕೇವಲ ಶೇ. 9 (20 ಲಕ್ಷ ಮತದಾರರು) ಇತ್ತು. ಈ ಬಾರಿ ಅದು ಶೇ. 15 ಕ್ಕೆ ಏರಿಕೆಯಾಗಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 50 ಸಹಸ್ರಕ್ಕಿಂತಲೂ ಹೆಚ್ಚು ಮತ ಪಡೆದಿದ್ದರೆ, 24 ಕ್ಷೇತ್ರಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿ ಯುಡಿಎಫ್ ಮತ್ತು ಎಲ್ಡಿಎಫ್ ಮೈತ್ರಿಕೂಟಗಳಿಗೆ ಸವಾಲೆಸೆದಿದ್ದಾರೆ. ಬಿಜೆಪಿಯ ಈ ಬೆಳವಣಿಗೆ ಈ ಎರಡೂ ಮೈತ್ರಿಕೂಟಗಳಿಗೂ ದಿಗಿಲು ಹುಟ್ಟಿಸಿದೆ. ಕೇರಳದಲ್ಲಿ ಒಮ್ಮೆ ಎಲ್ಡಿಎಫ್ ಅಧಿಕಾರಕ್ಕೇರಿದರೆ ಇನ್ನೊಮ್ಮೆ ಯುಡಿಎಫ್ ಅಧಿಕಾರಕ್ಕೆ ಎಂಬುದು ಒಂದು ರಾಜಕೀಯ ಸಮೀಕರಣ ಆಗಿತ್ತು. ಆದರೆ ಈ ಸಮೀಕರಣವೇ ಈಗ ಬದಲಾಗಿದೆ. ಬಿಜೆಪಿ ಪ್ರಬಲ ತೃತೀಯ ಶಕ್ತಿಯಾಗಿ ಅಲ್ಲಿ ಹೊರಹೊಮ್ಮಿದೆ. ‘ಕೇರಳ ವಿಧಾನಸಭೆಗೆ ಬಿಜೆಪಿ ಎಂಟ್ರಿ ಸಾಧ್ಯವೇ ಇಲ್ಲ. ಅವರೇನಿದ್ದರೂ ವಿಸಿಟರ್ಸ್ ಪಾಸ್ ಪಡೆದು ವಿಧಾನಸಭೆಗೆ ಬರಬೇಕಷ್ಟೇ’ ಎಂದು ಹಿರಿಯ ಕಮ್ಯುನಿಸ್ಟ್ ನಾಯಕರೊಬ್ಬರು ಗೇಲಿ ಮಾಡಿದ್ದರು. ಅವರೀಗ ಪರಿತಪಿಸುವಂತಾಗಿದೆ.
ಕೇರಳದ ಒಟ್ಟು 14 ಜಿಲ್ಲೆಗಳಲ್ಲಿ 2011 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಒಟ್ಟು ಮತಗಳು 10,54,011. ಈಗ 2016 ರಲ್ಲಿ ಅದರ ಒಟ್ಟು ಮತಗಳು 30,20,938. ಕಣ್ಣೂರಿನಂತಹ ಕಮ್ಯುನಿಷ್ಟರ ಭದ್ರಕೋಟೆಯಲ್ಲಿ 2011 ರಲ್ಲಿ 69,180 ಮತಗಳಿಸಿದ್ದ ಬಿಜೆಪಿ ಈ ಬಾರಿ ಗಳಿಸಿದ್ದು 1,58,632. ವಯನಾಡ್ ಎಂಬ ಮತ್ತೊಂದು ಕಮ್ಯುನಿಷ್ಟರ ಕೆಂಪು ಕೋಟೆಯಲ್ಲಿ 2011 ರಲ್ಲಿ ಬಿಜೆಪಿ ಪಡೆದಿದ್ದು 21,141 ಮತಗಳು. ಅದು ಈ ಬಾರಿ 57,088 ಕ್ಕೆ ಏರಿಕೆಯಾಗಿದೆ. ತಿರುವನಂತಪುರದಲ್ಲಿ 1,54,144 (2011) ಮತಗಳು ಈ ಬಾರಿ 4,43,596 (2016) ಕ್ಕೆ ಏರಿಕೆಯಾಗಿದೆ. ಮಲ್ಲಪ್ಪುರಂ ಎಂಬ ಮುಸ್ಲಿಂಬಾಹುಳ್ಯ ಕ್ಷೇತ್ರದಲ್ಲಿ 2011 ರಲ್ಲಿ ಬಿಜೆಪಿಗೆ ದೊರಕಿದ್ದು 87,546. ಈ ಬಾರಿ ಮಾತ್ರ ಅಲ್ಲಿಯ ಗಳಿಕೆ 1,70,105. ಹೀಗೆ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿಯ ಮತಗಳಿಕೆ ಸಾಕಷ್ಟು ಹೆಚ್ಚಿದೆ. ಬಿಜೆಪಿಯೆಂದರೆ ಕೋಮುವಾದಿ, ಮುಸ್ಲಿಂ ವಿರೋಧಿ ಎಂದು ಯುಡಿಎಫ್ ಮತ್ತು ಎಲ್ಡಿಎಫ್ ಪ್ರಚಾರಮಾಡುತ್ತಲೇ ಇದ್ದವು. ಆದರೆ ಈ ಬಾರಿ ಮುಸ್ಲಿಂಬಾಹುಳ್ಯ ಕ್ಷೇತ್ರ ಮಲ್ಲಪ್ಪುರಂನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪನಕ್ಕಾಡ್ ಬಾದೂಶಾ ತಂಗಳ್ ಎಂಬ ಪ್ರತಿಷ್ಟಿತ ಮುಸ್ಲಿಂ ಮನೆತನದ ವ್ಯಕ್ತಿ. ಕೇರಳಕ್ಕೆ ಮುಸ್ಲಿಂ ಧರ್ಮವನ್ನು ಹರಡಿದ ಮನೆತನವೆಂದೇ ತಂಗಳ್ ಮನೆತನದ ಖ್ಯಾತಿ. ಬಿಜೆಪಿಯ ಅಭ್ಯರ್ಥಿಯಾಗಿ ತಂಗಳ್ 7,211 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರೂ ಬಿಜೆಪಿ ಮುಸ್ಲಿಂ ವಿರೋಧಿಯಲ್ಲ ಎಂಬುದನ್ನು ಅವರು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಕೇರಳದಲ್ಲಿ ಈ ಬಾರಿ ಕೇವಲ ಒಂದೇ ಒಂದು ಸ್ಥಾನ ಗಳಿಸುವ ಮೂಲಕ ತನ್ನ ಖಾತೆ ತೆರೆದಿರಬಹುದು. ಆದರೆ ಇದು ಕೇರಳದಲ್ಲಿ ಬಿಜೆಪಿಯ ವಿಜಯಕ್ಕೆ ಮೊದಲ ಮೆಟ್ಟಿಲು ಎನ್ನುವುದನ್ನು ಮರೆಯುವಂತಿಲ್ಲ. ಇನ್ನೂ ಒಂದು ಸಂಗತಿಯನ್ನು ಯಾರೂ ಮರೆಯಕೂಡದು. ಅದೆಂದರೆ, ಬಿಜೆಪಿಯ ಈ ಗೆಲುವಿನ ಹಿಂದೆ 267 ಮಂದಿಯ ಬಲಿದಾನವಿದೆ. ಸಾವಿರಾರು ಕುಟುಂಬಗಳ ಕಣ್ಣೀರು ಹರಿದಿದೆ. ಅದಕ್ಕೂ ಹೆಚ್ಚಿನ ಸಂಖ್ಯೆಯ ತಾಯಂದಿರ ನಿಟ್ಟುಸಿರು ಅಡಗಿದೆ. 1969 ರಿಂದ ಕೇರಳದಲ್ಲಿ ಆರೆಸ್ಸೆಸ್ ಮೇಲೆ ಕಮ್ಯುನಿಷ್ಟರ ಭೀಕರ ಹಲ್ಲೆಗಳು ಆರಂಭವಾಗಿದ್ದು ಈಗ ಇತಿಹಾಸ. 1969 ರಲ್ಲಿ ಕಮ್ಯುನಿಷ್ಟರ ಹಲ್ಲೆಗೆ ಮೊದಲ ಬಲಿಪಶುವಾಗಿದ್ದು ಸಂಘದ ಕಾರ್ಯಕರ್ತರಾಗಿದ್ದ ವಡಚಿಲ್ ರಾಮಕೃಷ್ಣನ್ ಎಂಬ ಬಡ ದಲಿತ ಬಂಧು. ಅವರನ್ನು ಭೀಕರವಾಗಿ ಹತ್ಯೆಮಾಡಿದ ಕಮ್ಯುನಿಷ್ಟರು ತಮ್ಮ ಕೃತ್ಯವನ್ನು ‘ಇದೊಂದು ಕಣ್ಣೂರು ಮಾಡೆಲ್’ ಎಂದೇ ಸಮರ್ಥಿಸಿಕೊಂಡಿದ್ದರು. ಅಲ್ಲಿಂದ ಶುರುವಾದ ಸಂಘಪರಿವಾರದ ವ್ಯಕ್ತಿಗಳ ಹತ್ಯೆಗೆ ಇನ್ನೂ ಮುಕ್ತಿ ದೊರೆತಿಲ್ಲ. ಜಯಕೃಷ್ಣನ್ ಮಾಸ್ಟರ್ ಎಂಬ ಬಿಜೆಪಿ ಕಾರ್ಯಕರ್ತರನ್ನು ಶಾಲೆಯಲ್ಲಿ ಪಾಠಮಾಡುತ್ತಿದ್ದಾಗಲೇ ಮಕ್ಕಳೆದುರೇ ಕಮ್ಯುನಿಸ್ಟರು ಭೀಕರವಾಗಿ ಕೊಂದು ಹಾಕಿದರು. ಈ ಪ್ರಕರಣಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಪೋಲೀಸರು ನ್ಯಾಯಾಲಯಕ್ಕೆ ಒದಗಿಸಲು ವಿಫಲರಾಗಿದ್ದರಿಂದ ಆರೋಪಿಗಳ ಖುಲಾಸೆಯಾಗಿ ಅವರೆಲ್ಲಾ ಈಗ ಅದೇ ಊರಿನಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಸುಜಿತ್, ನಿಖಿಲ್, ಸತಿ, ಲಕ್ಷ್ಮಿ, ಪುರುಷು, ಮನೋಜ್… ಹೀಗೆ ಕಮ್ಯುನಿಷ್ಟರ ಕರಾಳ ಕೃತ್ಯಕ್ಕೆ ಬಲಿದಾನವಾದವರು ಅದೆಷ್ಟೋ ಮಂದಿ. ಈ ಬಾರಿ ಕಣ್ಣೂರು ಜಿಲ್ಲೆಯ ಕೂತ್ತುಪರಂಬ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸದಾನಂದ ಮಾಸ್ಟರ್ ಕೂಡ ಕಮ್ಯುನಿಷ್ಟರ ಭೀಕರ ಹಲ್ಲೆಗೆ ಒಳಗಾದ ದುರ್ದೈವಿವ್ಯಕ್ತಿ. ಅವರ ಎರಡು ಕಾಲುಗಳನ್ನೇ ಕಮ್ಯುನಿಷ್ಟ್ ಗೂಂಡಾಗಳು ಕತ್ತರಿಸಿ ಹಾಕಿದ್ದಾರೆ. ಆದರೆ ಮಾಸ್ಟರ್ ಅವರ ಜೀವನೋತ್ಸಾಹವನ್ನು ಮಾತ್ರ ಕತ್ತರಿಸಿಹಾಕಲು ಸಾಧ್ಯವಾಗಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅವರ ಸ್ಪರ್ಧೆಯೇ ಇದಕ್ಕೆ ಸಾಕ್ಷಿ. ಅವರು ಗೆಲ್ಲಲಿಲ್ಲ ಎಂಬುದು ಅಷ್ಟೇನೂ ಪ್ರಾಮುಖ್ಯದ ಸಂಗತಿಯಾಗುವುದಿಲ್ಲ. ಆದರೆ ಎರಡು ಕಾಲು ಕಳೆದುಕೊಂಡರೂ ಅವರು ನಂಬಿದ ಸಿದ್ಧಾಂತಕ್ಕೆ ಈಗಲೂ ಬದ್ಧರು, ಅದಕ್ಕಾಗಿ ಹೋರಾಡಬಲ್ಲರು ಎಂಬ ಸಂದೇಶ ಇದರಿಂದ ರವಾನೆಯಾಗಿದೆ.
ಈ ಬಾರಿ ಮತ್ತೆ ಎಲ್ಡಿಎಫ್ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ತನ್ನ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿರುವುದು ಕೆಂಪಣ್ಣರ ಪಾಲಿಗೆ ನುಂಗಲಾರದ ಬಿಸಿ ತುಪ್ಪ ಎನ್ನುವುದು ಅಷ್ಟೇ ನಿಜ. ಮೊನ್ನೆ ಫಲಿತಾಂಶ ಪ್ರಕಟವಾದ ದಿನವೇ ಮಂಜೇಶ್ವರ, ಕಾಸರಗೋಡು ಮತ್ತಿತರ ಕ್ಷೇತ್ರಗಳಲ್ಲಿ ಕಮ್ಯುನಿಸ್ಟ್ ಗೂಂಡಾಗಳು ಸಂಘಪರಿವಾರದ, ಹಿಂದುಗಳ ಮನೆ ಮೇಲೆ ದಾಳಿ ಮಾಡಿರುವುದು ಇದಕ್ಕೊಂದು ನಿದರ್ಶನ. ಮಂಜೇಶ್ವರದಲ್ಲಿ ಬಿಜೆಪಿ ಕೇವಲ 89 ಮತಗಳ ಅಂತರದಲ್ಲಿ ಸೋತಿರುವುದು ಎಲ್ಡಿಎಫ್ ಹಾಗೂ ಯುಡಿಎಫ್ಗೆ ದಿಗ್ಭ್ರಾಂತಿ ಮೂಡಿಸಿದೆ. ತಮ್ಮ ರಾಜಕೀಯ ಕೊಲೆಕೃತ್ಯದ ಬ್ರಹ್ಮಾಸ್ತ್ರ ಬಿಜೆಪಿ ಬೆಳವಣಿಗೆಯನ್ನು ಖಂಡಿತ ತಡೆಯದು ಎಂಬ ಅಂಶ ಎಲ್ಡಿಎಫ್ ನಾಯಕರಿಗೆ ಮನವರಿಕೆಯಾಗಿದೆ. ಕೊಲೆ ರಾಜಕಾರಣದಿಂದ ಕೇರಳದಲ್ಲಿ ಬಲಪಂಥೀಯ ಸಂಘಟನೆಗಳನ್ನು, ರಾಜಕೀಯವನ್ನು ಬಗ್ಗು ಬಡಿಯಬಹುದು ಎಂಬ ಎಲ್ಡಿಎಫ್ ಮತ್ತು ಯುಡಿಎಫ್ ಕೂಟಗಳ ವಿಶ್ವಾಸಕ್ಕೆ ಬಲವಾದ ಧಕ್ಕೆ ತಟ್ಟಿದೆ. ಇನ್ನಾದರೂ ಕೊಲೆ ರಾಜಕೀಯಕ್ಕೆ ಮಂಗಳ ಹಾಡುವುದೊಳಿತು ಎಂಬ ಪ್ರಾಮಾಣಿಕ ಅರಿವು ಆ ಕೂಟಗಳ ನಾಯಕರಲ್ಲಿ ಮೂಡಬೇಕು. ಆದರೆ ಅದು ಅಸಾಧ್ಯ. ಏಕೆಂದರೆ ಶಾಂತಿ, ಸಮಾಧಾನ, ಬಂಧುತ್ವ ಹೊಮ್ಮಬೇಕಾದ ದೇವರನಾಡಿನಲ್ಲಿ ದ್ವೇಷ, ಅಸೂಯೆ, ಹಿಂಸೆ, ಕೊಲೆ ಕೃತ್ಯಗಳಿಗೆ ಅಂತ್ಯವೇ ಇಲ್ಲವೇನೋ ಎಂಬ ವಾತಾವರಣ ಈಗಲೂ ಇದೆ. ಮುಂದೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.