ಬೆಳ್ತಂಗಡಿ : ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಹೆಚ್ಚುವರಿಯಾಗಿ 6 ಕೊಳವೆ ಬಾವಿಯನ್ನು ಕೊರೆಯಲಾಗಿದೆ. ಇದರಿಂದ ನೀರಿನ ಸಮಸ್ಯೆಯನ್ನು ಬಗೆಹರಿಲಾಗಿದೆ. ವಾಣಿಜ್ಯ ನೀರಿನ ಸಂಪರ್ಕ ಹೊಂದಿರುವವರಿಗೆ ಒಂದು ಗಂಟೆ ಹೆಚ್ಚುವರಿ ನೀರನ್ನು ಕೊಡಲಾಗುವುದು ಎಂದು ಶುಕ್ರವಾರ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸಾಮಾನ್ಯ ಸಭೆಯಲ್ಲಿ ತಿಳಿಸಲಾಯಿತು. ಸಭೆಯು ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದಲ್ಲಿ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತಿದ್ದು ನೀರಿನ ಆಶ್ರಯವಿರುವ ಸೋಮವತಿ ನದಿ ಬತ್ತಿದರೂ ಬೋರ್ವೆಲ್ಗಳ ಆಶ್ರಯದಿಂದ ನಗರಕ್ಕೆ ಬೇಕಾದ ನೀರು ಪೂರೈಕೆ ಮಾಡಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನೀರಿನ ಯಾವುದೇ ಕೊರತೆಯಿಲ್ಲ. ಆದರೆ ವಾಣಿಜ್ಯ ನೀರಿನ ಸಂಪರ್ಕ ಹೊಂದಿರುವವರಿಗೆ ದಿನಕ್ಕೆ ಎರಡು ಗಂಟೆ ನೀರು ನೀಡಲಾಗುತ್ತಿತ್ತು. ಇನ್ನೂ ಹೆಚ್ಚವರಿ ನೀರು ಕೊಡಲು 6 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು ಇದರಲ್ಲಿ ೪ರಲ್ಲಿ ಉತ್ತಮ ನೀರು ಸಿಕ್ಕಿದೆ. ನಾಳೆಯಿಂದ ಒಂದು ಗಂಟೆ ಹೆಚ್ಚುವರಿ ನೀರು ಕೊಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ನಗರದಲ್ಲಿ ಕಸ ವಿಲೇವಾರಿಗೆ ಪ್ರಥಮ ಆಧ್ಯತೆ ನೀಡಿದ್ದು ಇತ್ತೀಚೆಗೆ ಬಸ್ ನಿಲ್ದಾಣದ ಸುತ್ತಮುತ್ತ ಮಾತ್ರ ಕಸಗುಡಿಸಲಾಗುತ್ತಿದೆ. ಮುಖ್ಯ ರಸ್ತೆಯ ಕೆಲವು ಕಡೆಗಳಲ್ಲಿ ಕಸ ತುಂಬಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಮಮತಾ ಶೆಟ್ಟಿ ಪ್ರಸ್ತಾವಿಸಿದರು. ಈ ಬಗ್ಗೆ ಅಧ್ಯಕ್ಷರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿವರಣೆ ಕೇಳಿದಾಗ, ಕೆಲವು ಕಸವಿಲೇವಾರಿ ಸಿಬ್ಬಂದಿಗಳಿಗೆ ಚೆಕ್ ಮೂಲಕ ಪಾವತಿ ನೀಡಲಾಗುತ್ತಿದ್ದು, ಅವರಿಗೆ ಡ್ರಾ ಮಾಡಲು ತೊಂದರೆಯಾಗುತ್ತಿದೆ. ಇದರಿಂದ ಸಿಬ್ಬಂದಿಗಳು ಕಸವಿಲೇವಾರಿಗೆ ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಬಂತು. ಸಿಬ್ಬಂದಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಕನಿಷ್ಠ ವಾರಕ್ಕೆ ಎರಡು ಸಲವಾದರೂ ನಗರದ ಪ್ರಮುಖ ಎಲ್ಲಾ ರಸ್ತೆಗಳಲ್ಲಿ ಕಸ ಗುಡಿಸುವ ವ್ಯವಸ್ಥೆಯಾಗಬೇಕು. ಇಲ್ಲವಾದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದು ಅಧ್ಯಕ್ಷರು ಎಚ್ಚರಿಸಿದರು.
ನಗರ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಬಾರದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದರೂ ನಗರ ವ್ಯಾಪ್ತಿಯ ಕೆಲವು ಮನೆಗಳಿಂದ ತ್ಯಾಜ್ಯ ನೀರನ್ನು ಚರಂಡಿಗೆ ಹರಿಸಲಾಗುತ್ತಿದೆ. ಈ ಬಗ್ಗೆ ನಗರ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖಾ ಸಿಬ್ಬಂದಿ ಪಾರ್ವತಿ ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಎಚ್ಚರ ವಹಿಸುವ ಭರವಸೆ ನೀಡಿದರು.
ನಗರದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಪ್ಲಾಸ್ಟಿಕ್ ಮಾರಾಟ, ಬ್ಯಾನರ್ಗಳ ಅಳವಡಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು ನಗರ ಪಂಚಾಯತ್ ವತಿಯಿಂದ ಅಂಗಡಿಗಳ ಮೇಲೆ ವಾರಕ್ಕೊಮ್ಮೆ ದಾಳಿ ನಡೆಸಲಾಗುತ್ತಿದೆ. ಹಂತ ಹಂತವಾಗಿ ಜಿಲ್ಲಾಧಿಕಾರಿಗಳ ಆದೇಶವನ್ನು ಸಂಪೂರ್ಣವಾಗಿ ಪಾಲಿಸಲಾಗುವುದು ಎಂದು ಸಭೆ ನಿರ್ಣಯಿಸಿತು. ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ಗಳ ತೆರವು ನಡೆಯುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ್ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಭೆ ಒತ್ತಾಯಿಸಿತು.
ಸಭೆಯ ಮೊದಲು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಜೈನ್ ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ಉಪಾಧ್ಯಕ್ಷ ಡಿ. ಜಗದೀಶ್, ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಅರಿಗ, ಶಹರೀ ರೋಜ್ಗಾರ್ನ ಯೋಜನಾಧಿಕಾರಿ ವೆಂಕಟರಮಣ ಶರ್ಮ, ಆಹಾರ ನಿರೀಕ್ಷಕ ಮಂಜಪ್ಪ ಸಪಲ್ಯ ಉಪಸ್ಥಿತಿರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.