ಭಾರತೀಯ ಸಂಸ್ಕೃತಿ ಎಂದರೇನು? ಈ ಪ್ರಶ್ನೆಗೆ ಒಂದೇ ಶಬ್ದದಲ್ಲಿ ಉತ್ತರಿಸಿ ಎಂದು ರಸಪ್ರಶ್ನೆ ಕೇಳಿದರೆ ಯಾರಿಗಾದರೂ ಉತ್ತರಿಸಲು ಸಾಧ್ಯವೇ? ಸಾಧ್ಯವಿದೆ. ಆ ಒಂದು ಶಬ್ದ ಎಂದರೆ ರಾಮಾಯಣ. ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯಸಂಸ್ಕೃತಿ, ಸಭ್ಯತೆ, ಜೀವನ ಮೌಲ್ಯಗಳ ಸಾಕಾರರೂಪ.
ವೈಯುಕ್ತಿವಾಗಿ ಶ್ರೀರಾಮ ಗುಣವಂತ, ವೀರ್ಯವಂತ, ಧೀರ, ಮಹಾನ್ಪರಾಕ್ರಮಿ, ಶೀಲವಂತ, ಸತ್ಯನಿಷ್ಠ, ಧರ್ಮಜ್ಞ, ವಿದ್ವಾಂಸ, ಸರ್ವಪ್ರಾಣಿ ಹಿತಾಸಕ್ತ. ಹೀಗೆ ಅವನು ಅನಂತ ಗುಣಗಳ ಗಣಿ.
ಇಂಥ ಮಾನವ ಜೀವನದ ಗುಣಗಳ ಪರಾಕಾಷ್ಠೆ ಶ್ರೀರಾಮಚಂದ್ರನ ಜೀವನಮೌಲ್ಯಗಳನ್ನು ಸಮಗ್ರವಾಗಿ ತಿಳಿಸುವ ಕಾವ್ಯ ವಾಲ್ಮೀಕಿ ವಿರಚಿತ ರಾಮಾಯಣ.
ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳ ಮೂಲಕ ಜೀವನದ ಶಾಶ್ವತ ಮೌಲ್ಯಗಳಾದ, ಧರ್ಮ, ಅರ್ಥ, ಕಾಮಗಳನ್ನು ಕವಿ ವಾಲ್ಮೀಕಿ ಅರ್ಥೈಸಿದ್ದಾನೆ. ಈ ಮೌಲ್ಯಗಳು ವಿಶ್ವಮೌಲ್ಯಗಳು (Universal values). ತಪ್ತ ಗೊಂಡಿರುವ ಇಂದಿನ ಜಗತ್ತಿಗೆ ಶಾಂತಿಯನ್ನು ನೀಡಬಲ್ಲ ಶಕ್ತಿ ಇರುವುದು ಈ ಮೌಲ್ಯಗಳಿಗೆ ಮಾತ್ರ. ಧರ್ಮ- ಇದೊಂದು ಅತ್ಯಂತ ಪ್ರಧಾನವಾದ ಶಾಶ್ವತ ಮೌಲ್ಯ. ಇದು ಮಿಕ್ಕೆಲ್ಲ ಮೌಲ್ಯಗಳ ಆತ್ಮ. ಧರ್ಮವನ್ನು ಕಾಪಾಡುವವನನ್ನು ಧರ್ಮವು ಕಾಪಾಡುತ್ತದೆ ಎನ್ನುತ್ತದೆ ವೇದೋಕ್ತಿ. ಪಿತೃವಾಕ್ಯ ಪರಿಪಾಲನೆ ಪುತ್ರಧರ್ಮ. ಅದಕ್ಕಾಗಿ ರಾಮ ತನ್ನೆಲ್ಲ ಸುಖ ಸಂತೋಷಗಳನ್ನು ತ್ಯಜಿಸಿ ಕಾಡಿಗೆ ಹೊರಟುನಿಂತ. ತಾಯಿ ಕೌಸಲ್ಯೆಯ ಪಾದಕ್ಕೆರಗಿದಾಗ ತಾಯಿ ಹೇಳಿದ ಮಾತು ಅರ್ಥಪೂರ್ಣ. ಯಾವ ಧರ್ಮವನ್ನು ನೀನು ದೃಢಮನಸ್ಸಿನಿಂದ ಪಾಲಿಸುತ್ತಿದ್ದೀಯೋ ಅದು ನಿನ್ನನ್ನು ಸದಾ ಕಾಪಾಡಲಿ.
ಇನ್ನು ಭರತ ಅಯೋಧ್ಯೆಗೆ ಹಿಂದಿರುಗಿ ರಾಮನ ವನವಾಸದ ಸುದ್ಧಿ ಅರಿತ ನಂತರ ತಾಯಿ ಕೈಕೇಯಿಗೆ ಹೇಳುವ ಮಾತು ಜೇಷ್ಠ ಪುತ್ರನಿರುವಾಗ ಕನಿಷ್ಠನು ರಾಜನಾಗುವಂತಿಲ್ಲ. ಇದು ಶಾಶ್ವತ ಧರ್ಮ.
ಸಿಂಹಾಸನವು ಸುಲಭವಾಗಿ ಸಿಗುವಂತಿದ್ದರೂ ಧರ್ಮಪಾಲನೆಯ ವ್ರತಧಾರಿಗಳಾದ ರಾಮ, ಭರತರಿಬ್ಬರಿಗೂ ಅದು ಬೇಡವಾಗಿತ್ತು. ಇದು ಧರ್ಮ ಪಾಲನೆ.
ಅರ್ಥ, ಕಾಮಗಳೂ ಧರ್ಮವನ್ನು ಆಧರಿಸಿಕೊಂಡಿರುವವರೆಗೆ ಅಪೇಕ್ಷಿತ ಮೌಲ್ಯಗಳೇ. ಆದರೆ ಧರ್ಮ ಮಾರ್ಗದಿಂದ ಜಾರಿದ ಅರ್ಥ ಕಾಮಗಳು ವಿನಾಶಕ್ಕೆ ದಾರಿಯಾಗುತ್ತವೆ. ರಾಮಾಯಣದಲ್ಲಿ ಇವು ಬಹಳ ಚೆನ್ನಾಗಿ ವಿವರಿಸಲ್ಪಟ್ಟಿವೆ.
ಇಡೀ ರಾಮಾಯಣ ಕಥೆಯು ಚಲಿಸುವುದು ಮಂಥರೆ ಮತ್ತು ಶೂರ್ಪನಖಿ ಎಂಬ ಎರಡು ಸ್ತ್ರೀ ಚಕ್ರಗಳ ಮೇಲೆ. ಇಲ್ಲಿ ಮಂಥರೆ ಮತ್ತು ಶೂರ್ಪನಖಿಯರು ಅರ್ಥ-ಕಾಮಗಳ ಪ್ರತಿರೂಪ. ಮಂಥರೆಗೆ ರಾಜ್ಯದ ಆಸೆ; ಶೂರ್ಪನಖಿಗೆ ಸುಂದರಾಂಗನಾದ ಶ್ರೀರಾಮನನ್ನು ಕೂಡುವ ಆಸೆ. ಮಂಥರೆ, ಭರತನನ್ನು ರಾಜನನ್ನಾಗಿಸುವ ಆಸೆಪಟ್ಟಳು. ಆದರೆ ಸ್ವತಃ ಭರತನೇ ಅದು ಅಧರ್ಮವೆಂದು ಜರಿದ. ಶೂರ್ಪನಖಿ ಏಕಪತ್ನೀ ವ್ರತಸ್ಥನಾದ ರಾಮನನ್ನು ಇಚ್ಚಿಸಿದಳು. ರಾಮ ಅದು ಅಧರ್ಮವೆಂದು ಹೇಳಿದರೂ ಕೇಳಲಿಲ್ಲ. ಪರಿಣಾಮ ರಾಮಾಯಣ ಯುದ್ಧ.
ಸುಭಾಷಿತವೊಂದು ‘ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪ್ರಶಸ್ಯತೇ’ ಎನ್ನುತ್ತದೆ. ಎಲ್ಲ ಶುಚಿತ್ವಕಿಂತಲೂ ಅರ್ಥಶುಚಿತ್ವ (ಹಣವನ್ನು ಧರ್ಮಮಾರ್ಗದಲ್ಲಿ ಸಂಪಾದಿಸುವುದು ಮತ್ತು ದಾನಮಾಡುವುದು) ಬಹಳ ಮುಖ್ಯ. ರಾಮ ಕಾಡಿಗೆ ಹೊರಡುವ ಮುನ್ನ ತನ್ನ ಕೋಶಾಧಿಕಾರಿಯನ್ನು ಕರೆದು ತನ್ನದಾದ ಹಣವನ್ನು ಬಡ ಬಗ್ಗರಿಗೆ ದಾನಕೊಡುವಂತೆ ಹೇಳುತ್ತಾನೆ.
ಭರತನಾದರೋ, ಹದಿನಾಲ್ಕು ವರ್ಷ ತಪಸ್ವಿಯ ಜೀವನ ನಡೆಸುತ್ತ, ರಾಮ ವನವಾಸದಿಂದ ಹಿಂದಿರುಗಿದಾಗ ಅಣ್ಣಾ ನಿನ್ನ ಅನುಗ್ರಹದಿಂದ ನಾನು ರಾಜ್ಯ ರಕ್ಷಿಸಿದೆ. ನಿನ್ನ ಅನುಪಸ್ಥಿತಿಯಲ್ಲಿ ರಾಜ್ಯಕೋಶಗಳು ಹತ್ತುಪಟ್ಟು ಬೆಳೆದಿದೆ. ಇಂದೇ ನಿನ್ನ ರಾಜ್ಯವನ್ನು ಹಿಂತೆಗೆದುಕೊಂಡು ನನ್ನನ್ನು ಭಾರ ಮುಕ್ತನಾಗಿಸು ಎನ್ನುತ್ತಾನೆ. ಇಲ್ಲಿ ವಾಲ್ಮೀಕಿ ರಾಮ ಭರತರ ಮೂಲಕ ವೈಯುಕ್ತಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದನೆ ಮಾಡಿದ್ದಾನೆ.
ಆತ್ಮಸಂಯಮ ಎಂಬುವುದು ವೈಯುಕ್ತಿಕ ಮೌಲ್ಯವೂ ಹೌದು. ಕೌಟುಂಬಿಕ ಮೌಲ್ಯವೂ ಹೌದು. ವಿಶೇಷಾರ್ಥದಲ್ಲಿ ಸಾಮಾಜಿಕ ಮೌಲ್ಯವೂ ಹೌದು. ಸಂಯಮ ಜಾರಿದರೆ ಎಂಥ ಅನಾಹುತವಾಗುತ್ತದೆ ಎಂಬುದು ರಾಮಾಯಣದ ಹಲವು ಪಾತ್ರಗಳ ಮೂಲಕ ನಮಗೆ ತಿಳಿದು ಬರುತ್ತದೆ.
ಸಂಯಮವಿಲ್ಲದೆ ಕಾಮವನ್ನು ಹರಿಯಬಿಟ್ಟದ್ದರಿಂದ ಶೂರ್ಪನಖಿ ರಾಕ್ಷಸ ಕುಲನಾಶಿನಿಯಾದಳು. ತಮ್ಮನ ಹೆಂಡತಿ ತಾರೆಯನ್ನು ಕಾಮಿಸಿ ವಾಲಿ ಪ್ರಾಣವನ್ನು ಕಳೆದುಕೊಂಡನು. ಅಹಲ್ಯೆ ಇಂದ್ರನನ್ನು ಬಯಸಿ ಶಾಪಗ್ರಸ್ತೆಯಾದಳು.
ಕಾಮಕ್ರೋಧಗಳು ಒಂದೇ ನಾಣ್ಯದ ಎರಡು ಮುಖಗಳು. ಕಾಮಕ್ರೋಧಗಳಿಗೆ ಒಳಗಾದ ರಾವಣನಿಗೆ ಮಾರೀಚನ ಬುದ್ಧಿವಾದ ಹಿಡಿಸಲಿಲ್ಲ. ಕಾರಣ ಶೂರ್ಪನಖಿಯ ಕ್ರೋಧ ರಾವಣನನ್ನು ಅಂಧನನ್ನಾಗಿಸಿ, ಸೀತಾಪಹರಣಕ್ಕೆ ಪ್ರೇರೇಪಿಸಿತ್ತು. ಮಾಯಾ ಜಿಂಕೆಯ ರೂಪಿ ಮಾರೀಚ ರಾಮಬಾಣಕ್ಕೆ ಹತನಾಗುವಾಗ ಹೇ ರಾಮ, ಹೇ ಲಕ್ಷ್ಮಣಾ ಎಂದು ಕೂಗಿದ. ಅದು ರಾಕ್ಷಸರ ಮಾಯೆ ಎಂದು ಎಷ್ಟು ಕೇಳಿದರೂ ಕೇಳದ ಸೀತೆ ಕೋಪದಿಂದ ಲಕ್ಷ್ಮಣಾ ನನ್ನ ಮಾತನ್ನು ನೀನು ಉಲ್ಲಂಘಿಸುತ್ತಿರುವೆ ಎಂದು ಕುಟುಕಿದ್ದು ಮುಂದಿನ ಅನಾಹುತಕ್ಕೆ ಕಾರಣವಾಯಿತು.
ಹೀಗೆ ಕೋಪದ ಕೈಗೆ ಮನಸ್ಸನ್ನು ಕೊಟ್ಟರೆ ಮನುಷ್ಯನಿಗೆ ಅನರ್ಥಗಳೇ ಆಗುತ್ತವೆ ಎಂಬುದನ್ನು ಈ ಪಾತ್ರಗಳು ನಮಗೆ ತಿಳಿಸುತ್ತವೆ.
ಅದೇ ಚಾರಿತ್ರ್ಯಶುದ್ಧಿಯಿಂದ ನಿರ್ಮಲ ಮನಸ್ಸನ್ನು ಹೊಂದಿದ್ದರೆ, ಮನುಷ್ಯ ವಿಚಲಿತನಾಗುವುದಿಲ್ಲ ಎಂಬುದನ್ನು ವಾಲ್ಮೀಕಿ ಹನುಮಂತನ ಮೂಲಕ ನಿರೂಪಿಸಿದ್ದಾನೆ. ವಿಧಿಯಿಲ್ಲದೆ ರಾವಣನ ಅಂತಃಪುರವನ್ನು ಹೊಕ್ಕ ಹನುಮಂತನಿಗೆ, ಅಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದ ಸುಂದರಿಯನ್ನು ಕಂಡರೂ ಮನಸ್ಸು ಚಂಚಲವಾಗಲಿಲ್ಲ. ಒಂದು ಕ್ಷಣ ತನ್ನಿಂದ ಅಧರ್ಮವಾಯಿತೇನೋ ಎಂದೆನಿಸಿದರೂ, ತನ್ನಿಂದ ಧರ್ಮಕ್ಕೆ ಕಿಂಚಿತ್ತೂ ಕುಂದು ಬಂದಿಲ್ಲ ಎಂದು ಸಮಾಧಾನ ಪಡುತ್ತಾನೆ.
ಗುರುಭಕ್ತಿ
ಗುರು ಹಿರಿಯರನ್ನು ಆದರಿಸುವುದು. ಅದರಲ್ಲಿ ಭಕ್ತಿ ಇರಿಸುವುದು ನಮ್ಮ ಸಂಸ್ಕೃತಿಯ ವಿಶೇಷ. ಅದರಲ್ಲೂ ಆಚಾರ್ಯದೇವೋಭವ ಎಂದು ಗುರುವನ್ನು ದೈವತ್ವಕ್ಕೇರಿಸಿದ್ದು ನಮ್ಮ ಸಭ್ಯತೆ. ಶ್ರೀರಾಮ ತನ್ನ ಗುರುಭಕ್ತಿಯ ಮೆರೆದ ಪರಿ ಇಲ್ಲಿದೆ. ಗುರು ವಿಶ್ವಾಮಿತ್ರರು ತಮ್ಮೊಂದಿಗೆ ಬಂದ ರಾಮಲಕ್ಷ್ಮಣರಿಗೆ ಶ್ರಸ್ತ್ರಾಸ್ತ್ರಗಳ ಪರಿಚಯ ಮಾಡಿಕೊಟ್ಟು ಬಲ-ಅತಿಬಲ ಎಂಬ ಮಂತ್ರವನ್ನು ಬೋಧಿಸುತ್ತಾರೆ. ದಾರಿಯಲ್ಲಿ ಎದುರಾದ ತಾಟಕಿಯೆಂಬ ರಾಕ್ಷಸಿಯನ್ನು ಕೊಲ್ಲಲು ಹೇಳಿದಾಗ, ರಾಮನ ಮನಸ್ಸಿನಲ್ಲಿ ಸ್ತ್ರೀ ಹತ್ಯೆ ಪಾಪವಲ್ಲವೇ? ಎಂಬ ಜಿಜ್ಞಾಸೆ ಮೂಡಿದರೂ ಗುರುವಾಜ್ಞೆಯಂತೆ ತಾಟಕಿಯನ್ನು ಕೊಲ್ಲುತ್ತಾನೆ. ನಂತರ ರಾಮನ ಮನಸ್ಸನ್ನು ಅರಿತ ವಿಶ್ವಾಮಿತ್ರರು ಅಧರ್ಮಕ್ಕೆ ಅನುಗುಣವಾಗಿ ನಡೆಯುವವರು ಸ್ತ್ರೀಯಾಗಲೀ ಬ್ರಾಹ್ಮಣನಾಗಲಿ ಅವರನ್ನು ವಧಿಸುವುದು ಧರ್ಮಪಾಲನೆ ಎಂದು ತಿಳಿಸುತ್ತಾರೆ. ಜನಕನ ಆಸ್ಥಾನದಲ್ಲೂ ರಾಮ ಬಿಲ್ಲನ್ನು ಗುರುವಿನ ಆಜ್ಞೆಯಂತೆ ಮುರಿಯಲು ಎದ್ದಾಗ ಎಲ್ಲ ಗುರು ಹಿರಿಯರಿಗೂ ನಮಸ್ಕರಿಸಿಯೇ ಮುಂದಡಿ ಇಡುತ್ತಾನೆ.
ಅತಿಥಿಸತ್ಕಾರ
ಮನೆಗೆ ಕರೆಸಿಕೊಳ್ಳದೇ ಬರುವವನೇ ಅತಿಥಿ. ಅತಿಥಿಯನ್ನು ದೈವತ್ವಕ್ಕೇರಿಸಿ ಅತಿಥಿ ದೇವೋಭವ ಎಂದ ಸಂಸ್ಕೃತಿಯೂ ನಮ್ಮದು. ರಾಮಾಯಣದಲ್ಲಿ ಹೆಜ್ಜೆ ಹೆಜ್ಜೆಗೂ ಈ ಮೌಲ್ಯವನ್ನು ಕಾಣುತ್ತೇವೆ. ವಿಶ್ವಾಮಿತ್ರ, ದಶರಥನ ಆಸ್ಥಾನಕ್ಕೆ ಬಂದ ಅತಿಥಿ. ಅವನಿಗೆ ಸಕಲ ಸತ್ಕಾರವನ್ನು ಮಾಡಿದ ನಂತರ, ವಿಶ್ವಾಮಿತ್ರ ದಶರಥನಿಗೆ ಯಾಗರಕ್ಷಣೆಗೆ ರಾಮಲಕ್ಷ್ಮಣರನ್ನು ಕಳಿಸಲು ಹೇಳುತ್ತಾನೆ. ಕ್ಷಣಕಾಲ ದಶರಥ ಗೊಂದಲಕ್ಕೊಳಗಾದರೂ ಅತಿಥಿಯ ಮನನೋಯಿಸಬಾರದೆಂಬ ವಸಿಷ್ಠರ ಮಾತಿನಂತೆ ತನ್ನ ಮಕ್ಕಳನ್ನು ವಿಶ್ವಾಮಿತ್ರರೊಂದಿಗೆ ಕಳಿಸುತ್ತಾನೆ. ಕಾಡಿಗೆ ಹೊರಟ ರಾಮಲಕ್ಷ್ಮಣ ಸೀತೆಯರನ್ನು ಗಂಗಾನದಿ ದಾಟಿಸುವಾಗ, ಅಂಬಿಗ ಗುಹ ಸತ್ಕರಿಸುವುದು, ಶಬರಿ ರಾಮನಿಗಾಗಿ ಪರಿತಪಿಸಿ, ರಾಮಬಂದಾಗ ಶ್ರೇಷ್ಠವಾದ ಹಣ್ಣುಗಳನ್ನು ನೀಡಬೇಕೆಂದು ಎಂಜಲು ಹಣ್ಣು ನೀಡುವುದು ಅವರ ಭಕ್ತಿಯನ್ನಷ್ಟೇ ಅಲ್ಲ ಅತಿಥಿ ಸತ್ಕಾರದಲ್ಲಿನ ಆಸೆಯನ್ನೂ ಎತ್ತಿತೋರಿಸುತ್ತದೆ.
ಪ್ರಜಾಪ್ರಭುತ್ವ
ಇಂದಿನ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪ್ರಭುತ್ವ ಓಟು ಕೊಡುವ ಒಂದು ದಿನಕ್ಕೆ ಮಾತ್ರ ಸೀಮಿತ. ಅದರ ನಂತರ ನಾಯಕರದ್ದೇ ಪ್ರಭುತ್ವ. ಆದರೆ ರಾಮ ರಾಜ್ಯವಾದರೋ ಅಕ್ಷರಶಃ ಪ್ರಜಾಪ್ರಭುತ್ವವೇ. ರಾಮ ಕಾಡಿಗೆ ಹೊರಟಾಗ ಎಲ್ಲ ಪ್ರಜೆಗಳೂ ಹೋಗಬಾರದೆಂದು ಕಾಡಿಬೇಡಿದರೂ ಕಾಡಿಗೆ ಹೊರಡಲು ಸಿದ್ಧರಾದರು! ಅಗಸನ ಮಾತಿಗೆ ಶ್ರೀರಾಮ ಪತ್ನಿಯನ್ನು ತೊರೆದ. ಎಂಥ ಪ್ರಜಾರಂಜಕ ಶ್ರೀ ರಾಮಚಂದ್ರ, ರಾಜಧರ್ಮವನ್ನು ಹೇಗೆ ಪಾಲಿಸಬೇಕೆಂಬ ಆದರ್ಶವನ್ನು ವಾಲ್ಮೀಕಿ, ರಾಮನ ಮೂಲಕ ತಿಳಿಸಿದ್ದಾನೆ.
ದೇಶಭಕ್ತಿ
ತಾಯಿ ಹೇಗೆ ದೇವರ ಸಮಾನವೋ, ತಾಯ್ನಾಡು ಸಹ ದೇವರಸಮಾನ. ನಮ್ಮ ಸಂಸ್ಕೃತಿಯಲ್ಲಿ ನಮ್ಮನ್ನು ಪೋಷಿಸುವ ಎಲ್ಲರೂ ತಾಯಿಗೆ ಸಮಾನ. ಅನ್ನ ಉಣಿಸುವ ಭೂಮಿ ಭೂಮಾತೆ. ನೀರುಣಿಸುವ ನದಿ ಗಂಗಾಮಾತೆ, ಹಾಲುಣಿಸುವ ಹಸು ಗೋಮಾತೆ.
ರಾವಣನ ವಧೆಯ ನಂತರ, ಲಂಕೆಯ ವೈಭವಕ್ಕೆ ಮನಸೋತ ಲಕ್ಷ್ಮಣ, ಅಯೋಧ್ಯೆಯನ್ನು ಮರೆತು ಲಂಕೆಯಲ್ಲೇ ಇರುವ ಇಚ್ಛೆ ವ್ಯಕ್ತಪಡಿಸಿದಾಗ
ಅಪೀ ಸೃರ್ಣಮಯೀಲಂಕಾ| ನಮೇ ಲಕ್ಷ್ಮಣರೋಚತೆ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ||
ಲಕ್ಷ್ಮಣಾ, ಇಡೀ ಲಂಕೆಯು ಚಿನ್ನದಿಂದ ಕೂಡಿದ್ದರೂ ನನಗದು ರುಚಿಸುವುದಿಲ್ಲ. ಏಕೆಂದರೆ ತಾಯಿ ಮತ್ತು ತಾಯ್ನಾಡು ನನಗೆ ಸ್ವರ್ಗಕ್ಕಿಂತಲೂ ಮಿಗಿಲು ಎಂದು ರಾಮನ ಬಾಯಲ್ಲಿ ವಾಲ್ಮೀಕಿ ಹೇಳಿಸುವ ಮಾತು ನಮಗೆಲ್ಲರಿಗೂ ಜೀವನಾದರ್ಶವಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.