ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಮತ್ತು ಜ್ಯಾತ್ಯಾತೀತ ಜನತಾದಳದ ಮೇಲ್ಮನೆಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಶಾಸಕರು ಶಿಕ್ಷಕ/ಉಪನ್ಯಾಸಕರ ಈ ಕೆಳಗಿನ ಬೇಡಿಕೆಗಳನ್ನು ಅದ್ಯತೆಯ ಮೇಲೆ ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಮುಂಗಡ ಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಒಟ್ಟು ಅನುದಾನದಲ್ಲಿ ಶೇಕಡ 2% ಕಡಿತ ಮಾಡಿರುವ ಹಿನ್ನಲೆಯಲ್ಲಿ ಶಿಕ್ಷಣ ಕ್ಷೇತ್ರದ ಅನೇಕ ಸಮಸ್ಯೆಗಳು ನೆನೆಗುದಿಗೆ ಬಿದ್ದಂತಾಗಿವೆ. ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸಿ ನಿರಂತರ ಹೋರಾಟ ನಡೆಸುತ್ತಿರುವ ಈ ಕೆಳಗಿನ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಿರುತ್ತಾರೆ.
ರಾಜ್ಯದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಉಪನ್ಯಾಸಕರು ವೇತನ ತಾರತಮ್ಯ ಸರಿಪಡಿಸಲು ಹಿಂದಿನ ಸರ್ಕಾರವು ರಚಿಸಿದ್ದ ಶ್ರೀ ಕುಮಾರ್ ನಾಯಕ್ರವರ ನೇತೃತ್ವದ ಸಮಿತಿಯ ವರದಿಯನ್ನು ಯಥವತ್ತಾಗಿ ಜಾರಿಗೊಳಿಸುವುದು.ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಕುರಿತು ಈಗಾಗಲೇ ಅಧ್ಯಯನ ಮಾಡಿ ಸಲ್ಲಿಸಿರುವ ವರಿದಿಯಲ್ಲಿ ರೂ 351 ಕೋಟಿ ವಾರ್ಷಿಕ ಹೆಚ್ಚುವರಿ ಅನುದಾನದ ಅಗತ್ಯವಿದ್ದು ಮಾನ್ಯ ಉನ್ನತ ಶಿಕ್ಷಣ ಸಚಿವರು ಸದನದಲ್ಲಿ ರೂ 285 ಕೋಟಿ ಮಿತಿಗೆ ಒಳಪಟ್ಟು ಪರಿಹರಿಸುವಂತೆ ಭರವಸೆ ನೀಡಿರುವ ಹಿನ್ನಲೆಯಲ್ಲಿ ಮಾನ್ಯ ಉಚ್ಚ ನ್ಯಾಯಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವುದು.
ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವುದು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಬಗ್ಗೆ. 1995ರ ಪೂರ್ವ ಹಾಗೂ ನಂತರದಲ್ಲಿ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು.
2006 ರ ನಂತರ ನೇಮಕಾತಿ ಹೊಂದಿದ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೂ ಹೊಸ ಪಿಂಚಣಿ ಯೋಜನೆಯನ್ನು ವಿಸ್ತರಿಸುವುದು. ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತದ ವ್ಯಾಪ್ತಿಯಲ್ಲಿ ತರುವ ಕ್ರಿಯಾ ಯೋಜನೆಯ ಕುರಿತು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳದಿರುವ ಬಗ್ಗೆ. ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಯ ಕುರಿತು ಕ್ರಮಕೈಗೊಳ್ಳುವ ಕುರಿತು ಮತ್ತು ಜೆ.ಒ.ಸಿ ಉಪನ್ಯಾಸಕರ ಸಮಸ್ಯೆಗಳಿಗೆ ಕುರಿತಾಗಿ ಶೀಘ್ರ ಪರಿಹಾರ ಒದಗಿಸುವ ಕುರಿತು ಒತ್ತಾಯಿಸಲಾಗಿದೆ.
ದೈಹಿಕ ಶಿಕ್ಷಕರ ಸೇವಾ ಸೌಲಭ್ಯಗಳು ಭಡ್ತಿ ಹಾಗೂ ಇನ್ನಿತರ ಸಂಗತಿಗಳ ಕುರಿತ ವೈದ್ಯನಾಥನ್ ವರದಿ ಅನುಷ್ಠಾನ. ವರ್ಗಾವಣೆ ನೀತಿಯಲ್ಲಿ ಗೊಂದಲ ನಿವಾರಿಸಿ ಶಿಕ್ಷಕರಿಗೆ ನ್ಯಾಯ ಒದಗಿಸುವ ಬಗ್ಗೆ ಮತ್ತು ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಉಪಯೋಗಿಸದೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗೆ ಬೋಧನೆಗೆ ಹೆಚ್ಚು ಅವಕಾಶ ನೀಡುವ ಕುರಿತು ಮನವಿ ಮಾಡಲಾಗಿದೆ.
ಕೇಂದ್ರದ ಏಳನೇ ವೇತನ ಅಯೋಗದ ವರದಿಯ ಅನುಷ್ಠಾನದ ಹಿನ್ನಲೆಯಲ್ಲಿ ರಾಜ್ಯದಲ್ಲೂ ಏಳನೇ ವೇತನ ಅಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದು. Regional Institute of English (RIE) ಸಂಸ್ಥೆಯಿಂದ ಡಿಪ್ಲೊಮಾ ಪಡೆದ ಶಿಕ್ಷಕರ ಸಮಸ್ಯೆ ಪರಿಹರ್ಸುವ ಪರಿಹರಿಸುವ ಕುರಿತು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಯುಜಿಸಿ ಮಾನ್ಯತೆಯನ್ನು ಪುನರ್ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತುಒತ್ತಾಯಿಸಲಾಗಿದೆ.
ಮೇಲೆ ಉಲ್ಲೇಖಿಸಿದ ಎಲ್ಲಾ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಶಿಕ್ಷಕರ ಹಾಗು ಪದವೀಧರ ಕ್ಷೇತ್ರದ ಶಾಸಕರುಗಳಿಗೆ ನೀಡಿದ ಭರವಸೆಯಂತೆ ಶಿಕ್ಷಣ ಸಚಿವರು ಹಾಗು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಶಾಸಕರಾದ ಬಸವರಾಜ ಹೊರಟ್ಟಿ, ರಾಮಚಂದ್ರಗೌಡ, ಮರಿತಿಬ್ಬೇಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೋ. ಮಧುಸೂದನ್, ಪುಟ್ಟಣ್ಣ, ಆರ್.ಚೌಡರೆಡ್ಡಿ ತೂಪಲ್ಲಿ, ಅಮರನಾಥ ಪಾಟೀಲ್, ಅರುಣ ಶಹಾಪುರ ಹಾಗೂ ಎಸ್.ವಿ. ಸಂಕನೂರು ಮುಂತಾದ ಶಾಸಕರು ಜಂಟಿ ಹೇಳಿಕೆಯಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.