News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಗವದ್ಗೀತೆ, ಹಿಂದುಸ್ಥಾನ ಎಂದಾಕ್ಷಣ ಕಂಗಾಲಾಗುವುದೇಕೆ?

gitaಈಚೆಗೆ ಇಬ್ಬರು ಮಹನೀಯರ ಹೇಳಿಕೆಗಳು ತೀವ್ರ ಚರ್ಚೆಗೆ ಒಳಗಾಗಿದ್ದು ಸೋಜಿಗವೇ ಸರಿ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಆರ್.ದವೆ ಅವರು ಅಹ್ಮದಾಬಾದಿನಲ್ಲಿ ಆ. 2ರಂದು ‘ಭಗವದ್ಗೀತೆ ಮತ್ತು ಮಹಾಭಾರತವನ್ನು ಶಾಲೆಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ನಾನೇನಾದರೂ ಭಾರತದ ಸರ್ವಾಧಿಕಾರಿಯಾಗಿದ್ದರೆ ಮೊದಲನೇ ತರಗತಿಯಿಂದ ಗೀತೆ ಮತ್ತು ಮಹಾಭಾರತ ಕಲಿಸುವುದನ್ನು ಕಡ್ಡಾಯಗೊಳಿಸುತ್ತಿದ್ದೆ. ನಾನು ಈ ಮಾತು ಹೇಳಿದ್ದಕ್ಕೆ ಯಾರಾದರೂ ನನ್ನನ್ನು ಜಾತ್ಯತೀತನಲ್ಲವೆಂದು ಹೇಳಿದರೆ ಆ ಕುರಿತು ನಾನು ಚಿಂತಿಸಲಾರೆ. ಒಳ್ಳೆಯದನ್ನು ಅದು ಎಲ್ಲೇ ಇರಲಿ, ನಾವು ಪಡೆಯಬೇಕು’ ಎಂದು ಹೇಳಿದ್ದರು.

ಅದೇ ರೀತಿ ಆರೆಸ್ಸೆಸ್‌ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಸಭೆಯೊಂದರಲ್ಲಿ ಮಾತನಾಡುತ್ತಾ ‘ಎಲ್ಲ ಭಾರತಿಯರು ಹಿಂದುಗಳು ಮತ್ತು ಈ ದೇಶ ಹಿಂದು ರಾಷ್ಟ್ರ’ ಎಂದು ಪ್ರತಿಪಾದಿಸಿದ್ದರು.

ನ್ಯಾಯಮೂರ್ತಿ ದವೆ ಮತ್ತು ಆರೆಸ್ಸೆಸ್‌ನ ಮೋಹನ್ ಭಾಗವತ್ ಅವರ ಹೇಳಿಕೆಗಳ ವಿರುದ್ಧ ಜಾತ್ಯತೀತರೆನಿಸಿಕೊಂಡ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ‘ ಗೀತೆ ಮತ್ತು ಮಹಾಭಾರತ ಶಾಲಾ ಶಿಕ್ಷಣದಲ್ಲಿರಬೇಕೆಂದು ಹೇಳುವುದು ಭಾರತದ ಜಾತ್ಯತೀತ ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದು ಟೀಕಿಸಿದರು. ಅದೇ ರೀತಿ ಅಸಾವುದ್ದೀನ್ ಓವೈಸಿ ಹಾಗೂ ಎನ್‌ಸಿಪಿ ನಾಯಕ ಮಜಿದ್ ಮೆಮನ್ ಕೂಡ ನ್ಯಾಯಮೂರ್ತಿ ದವೆಯವರ ಹೇಳಿಕೆ ಸಂವಿಧಾನ್ಕಕೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ಹೀಗೆಲ್ಲ ಹೇಳಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆ ಎಂದು ಘೀಳಿಟ್ಟರು.

ಶಾಲೆಗಳಲ್ಲಿ ಗೀತೆಯು ನೈತಿಕತೆ ಕಲಿಸುತ್ತದೆ ಎಂದು ದವೆ ಅವರು ಹೇಳುವುದಾದರೆ ಕುರಾನ್ ಸಹ ನೈತಿಕತೆ ಕಲಿಸುತ್ತದೆ. ಬೈಬಲ್, ಸಿಕ್ಖರ ಗುರುಗ್ರಂಥ ಸಾಹೇಬ್ ಕೂಡ ನೈತಿಕತೆ ಕಲಿಸುತ್ತದೆ ಎಂದು ತರ್ಕ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಕಾಟ್ಜು ವಾದವನ್ನೇ ಮಂಡಿಸಿದರು.

ಆದರೆ ಮದ್ರಸಾಗಳಲ್ಲಿ ಈಗಾಗಲೇ ನೀಡಲಾಗುತ್ತಿರುವ ಕುರಾನ್ ಶಿಕ್ಷಣದ ಕುರಿತು ಈ ಪೈಕಿ ಯಾವೋಬ್ಬ ಮಹನೀಯರೂ ಅದು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳುವ ಸಾಹಸ ಮಾಡಿಲ್ಲ. ಚರ್ಚ್‌ಗಳ ಹಿಡಿತದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜುಗಳಲ್ಲಿ ಈಗಾಗಲೇ ಬೋಧಿಸಲಾಗುತ್ತಿರುವ ಬೈಬಲ್, ಎಲ್ಲ ಮಕ್ಕಳಿಗೆ ಕಡ್ಡಾಯ ಬೈಬಲ್ ಪ್ರಾರ್ಥನೆ, ಕ್ರೈಸ್ತ ಮತಕ್ಕೆ ಸಂಬಂಧಿಸಿದ ಮತ್ತಿತರ ಧಾರ್ಮಿಕ ನಡವಳಿಕೆ ಕುರಿತು ಯಾರೂ ಕೂಡ ಪ್ರಶ್ನಿಸುವ ಸಾಹಸಕ್ಕೆ ಹೋಗುವುದಿಲ್ಲ. ಕ್ರೈಸ್ತರ ಹಿಡಿತದಲ್ಲಿರುವ ಕಾನ್ವೆಂಟ್ ಶಾಲೆಗಳಲ್ಲಿ ಹೆಣ್ಣು ಮಕ್ಕಳು ಹಣೆಗೆ ತಿಲಕ ಧರಿಸುವಂತಿಲ್ಲ, ಕೈಗೆ ಬಳೆ ತೊಡುವಂತಿಲ್ಲ, ಮುಡಿಗೆ ಹೂವು ಮುಡಿಯುವಂತಿಲ್ಲ, ಹಿಂದು ದೇವರ ಕುರಿತು ಮಾತನಾಡುವಂತಿಲ್ಲ.. ಇತ್ಯಾದಿ ಅಲಿಖಿತ ನಿಯಮಗಳ ಕುರಿತು ಆಗಾಗ ವಿವಾದಗಳು, ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ಇಂತಹ ಅಲಿಖಿತ ಹಾಗೂ ಸಂವಿಧಾನ ವಿರೋಧಿ ನಿಯಮಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಅದಕ್ಕೆ ಏನಾದರೊಂದು ತೇಪೆ ಹಾಕಿ, ಸ್ವಲ್ಪ ಕಾಲ ಆ ನಿಯಮಗಳನ್ನು ಕಡ್ಡಾಯಗೊಳಿಸದೆ, ವಿವಾದದ ಬಿಸಿ ಕೊಂಚ ತಣ್ಣಗಾದ ಮೇಲೆ ಮತ್ತೆ ಅದೇ ಸಂವಿಧಾನವಿರೋಧಿ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವ ಷಡ್ಯಂತ್ರ ನಡೆಯುತ್ತಲೇ ಇರುತ್ತದೆ. ಆದರೆ ಈ ಬಗ್ಗೆ ಜಾತ್ಯತೀತರಾಗಲಿ, ವಿಚಾರವಾದಿಗಳಾಗಲಿ ಪ್ರಶ್ನಿಸುವ ಗೋಜಿಗೆ ಹೋಗುವುದೇ ಇಲ್ಲ. ಆದರೆ ಗೀತೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕೆಂದು ನ್ಯಾಯಮೂರ್ತಿಯೊಬ್ಬರು ಹೇಳಿದ್ದು ಇಂಥವರಿಗೆ ಸಂವಿಧಾನವಿರೋಧಿ ಎನಿಸಿಬಿಡುತ್ತದೆ!

ಅಸಲಿಗೆ ಭಗವದ್ಗೀತೆಯ ಮಹಾನತೆಯ ಕುರಿತು, ಅದು ವ್ಯಕ್ತಿಗಳಲ್ಲಿ ಬೀರುವ ಪ್ರಭಾವದ ಕುರಿತು ಮಾತನಾಡಿದವರಲ್ಲಿ ನ್ಯಾಯಮೂರ್ತಿ ಎ.ಆರ್. ದವೆ ಮೊದಲಿಗರೇನಲ್ಲ. ಕೊನೆಯವರೂ ಇವರು ಆಗಲಿಕ್ಕಿಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲು ಸೇರಿದ್ದಾಗ ಅಲ್ಲಿ ಅವರಿಂದ ಮೂಡಿ ಬಂದ ಮಹಾನ್ ಕೃತಿಯೇ ‘ಗೀತಾ ರಹಸ್ಯ’. ಮಹಾತ್ಮ ಗಾಂಧಿ ಭಗವದ್ಗೀತೆಯ ಬಗ್ಗೆ ತೋರಿದ ಭಕ್ತಿ ಅಪಾರ. ಆಚಾರ್ಯ ವಿನೋಬಾ ಭಾವೆಯವರಿಂದ ಹಿಡಿದು ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸ್ವಾಮೀಜಿಯವರವರೆಗೆ ಗೀತೆಯ ಕುರಿತು ಇರುವ ಶ್ರದ್ಧೆ, ಭಕ್ತಿ ಹಾಗೂ ಅದು ಮನುಕುಲಕ್ಕೆ ಅದೆಷ್ಟು ಪ್ರಯೋಜಕ ಎಂದು ಸಾರಿದ್ದು ಈಗ ಇತಿಹಾಸ.

ಗಾಂಧೀಜಿಯವರು ಗೀತೆಯ ಬಗ್ಗೆ ಆಗಾಗ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಲೇ ಇದ್ದರು. ಗೀತೆ ಅವರಿಗೆ ನಿಜವಾದ ಸಂವಿಧಾನವೇ ಆಗಿತ್ತು. ‘ ಭಗವದ್ಗೀತೆ ಆತ್ಮಜ್ಞಾನ ಹಾಗೂ ಅದನ್ನು ಗಳಿಸುವ ಸಾಧನೆಗೆ ಮೂಲ ವಿಷಯವಾಗಿದೆ… ಗೀತೆಯ ಬಗ್ಗೆ ತನಗೆ ನಿಷ್ಠೆ ಇದೆ ಎಂದು ಹೇಳುವವನಿಗೆ ಹಿಂದು- ಮುಸಲ್ಮಾನ ಎಂಬ ಬೇಧಭಾವ ತಿಳಿಯದು. ಏಕೆಂದರೆ ಭಗವಾನ್ ಕೃಷ್ಣನೇ ಹೇಳಿದ್ದಾನೆ – ನೈಜ ಭಕ್ತಿಭಾವದಿಂದ ಪರಮಾತ್ಮನ ಉಪಾಸನೆ ಮಾಡುವವನು ಯಾವುದೇ ಹೆಸರಿನಿಂದ ಮಾಡಿದರೂ ಅದು ನನಗೆ ಸಲ್ಲುತ್ತದೆ. ಗೀತೆಯ ಭಕ್ತಿ, ಕರ್ಮ ಮತ್ತು ಪ್ರೇಮದ ವಿಧಾನದ ಬಗ್ಗೆ ನೈಜ ಶ್ರದ್ಧೆ ಹೊಂದಿದಲ್ಲಿ ಒಬ್ಬನು ಇನ್ನೊಬ್ಬನನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ’ (ಯಂಗ್ ಇಂಡಿಯಾ ಪತ್ರಿಕೆಯಲ್ಲಿ). ಗಾಂಧೀಜಿಯವರಿಗೆ ಗೀತೆಯ ಬಗ್ಗೆ ಅದೆಂತಹ ಶ್ರದ್ಧೆ ಇತ್ತೆಂಬುದಕ್ಕೆ ಅವರ ಈ ಮಾತೇ ಸಾಕ್ಷಿ. ಭಗವದ್ಗೀತೆಯನ್ನು ತಮ್ಮ ತಾಯಿ ಎಂದು ವರ್ಣಿಸಿದ್ದ ಗಾಂಧೀಜಿ, ಅವರು ಗೊಂದಲ ಮತ್ತು ದುಃಖಕ್ಕೆ ಒಳಗಾದಾಗಲೆಲ್ಲ ಆಶ್ರಯಿಸುತ್ತಿದ್ದುದು ಗೀತೆಯನ್ನೇ.

ಮಹಾತ್ಮ ಗಾಂಧೀಯವರ ಬಗ್ಗೆ ನ್ಯಾಯಮೂರ್ತಿ ಕಾಟ್ಜು, ಅಸಾವುದ್ದೀನ್ ಓವೈಸಿ, ಮಜಿದ್ ಮೆಮನ್ ಅವರಿಗೆ ಗೌರವ ಇರುವುದೇ ಆದರೆ ಅವರೆಲ್ಲರೂ ಗಾಂಧೀಜಿ ಭಗವದ್ಗೀತೆ ಬಗ್ಗೆ ತೋರಿದ ಅಪಾರ ಶ್ರದ್ಧೆಯನ್ನು ಒಪ್ಪಿಕೊಳ್ಳಲೇ ಬೇಕು. ಅಷ್ಟೇ ಅಲ್ಲ, ಗೀತೆಯನ್ನು ಶಾಲೆಗಳಲ್ಲಿ ಕಲಿಸುವುದು ಸಂವಿಧಾನ ವಿರೋಧಿ ಎಂಬ ಹೇಳಿಕೆಯನ್ನು ತಕ್ಷಣ ವಾಪಸ್ ಪಡೆಯಲೇ ಬೇಕು. ಭಗವದ್ಗೀತೆಯ ಬಗ್ಗೆ ಕುಹಕದ ಮಾತನಾಡುವವರು ಮೊದಲು ಅದರಲ್ಲಿ ಏನಿದೆ? ಅದರ ತಿರುಳೇನು ಎಂಬುದನ್ನು ಅರಿಯಬೇಕು. ಭಗವದ್ಗೀತೆಯ ಬಗ್ಗೆ ಅರಿವೇ ಇಲ್ಲದವರು ಅದನ್ನು ‘ಸಂವಿಧಾನ ವಿರೋಧಿ’ ಎಂದು ಟೀಕಿಸಿದರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಭಾರತದಿಂದ ವಿದೇಶಗಳಿಗೆ ತೆರಳುವವರಿಗೆ ಅಲ್ಲಿನ ಜನ ಸಾಮಾನ್ಯವಾಗಿ ಮೊದಲು ಕೇಳುವ ಪ್ರಶ್ನೆ- ನಿಮಗೆ ಭಗವದ್ಗೀತೆ ಗೊತ್ತಿದೆಯೇ? ನಿಮ್ಮ ಬಳಿ ಗೀತೆಯ ಪ್ರತಿ ಇದೆಯೇ? ವಿದೇಶಗಳಿಗೆ ತೆರಳುವ ಸಾಮಾನ್ಯರ ಮಾತು ಹಾಗಿರಲಿ, ಕೆಲವು ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳಿಗೇ ಗೀತೆಯ ಬಗ್ಗೆ ಏನೇನೂ ಗೊತ್ತಿರುವುದಿಲ್ಲ. ವಿದೇಶಿಯರ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಬಿಡುತ್ತಾರೆ. ಗೀತೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಭಾರತಿಯನನ್ನು ಭಾರತೀಯನೆಂದು ವಿದೇಶಿಗರು ಖಂಡಿತ ಒಪ್ಪಲಾರರು.

ಹಿಂದುಸ್ಥಾನ ಏಕಲ್ಲ?
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ನೀಡಿದ ಹೇಳಿಕೆ ‘ಎಲ್ಲ ಭಾರತಿಯರೂ ಹಿಂದುಗಳು ಮತ್ತು ಈ ದೇಶ ಹಿಂದು ರಾಷ್ಟ್ರ’ ಎಂಬ ಬಗ್ಗೆಯೂ ಬುದ್ಧಿಜೀವಿಗಳ, ವಿಚಾರವಾದಿಗಳ ಆಕ್ರೋಶ ಸೊಜಿಗವೆನಿಸುತ್ತದೆ. ವೇದಗಳಲ್ಲಾಗಲೀ, ರಾಮಾಯಣ, ಮಹಾಭಾರತಗಳಲ್ಲಾಗಲೀ ಉಲ್ಲೇಖವಾಗದ ‘ಹಿಂದು’ ಪದದ ಮೇಲೆ ಭಾಗವತರಿಗೆ ಈ ಮಟ್ಟದ ಅಕ್ಕರೆ ಮೂಡಲು ಕಾರಣ ಏನು? ಭಾರತದ ಸಂವಿಧಾನದಲ್ಲಿ ಹಿಂದುಸ್ಥಾನ ಎಂಬ ಪದವೇ ಇಲ್ಲ. ಭಾರತ್ ಮತ್ತು ಇಂಡಿಯಾ ಎಂಬ ಎರಡು ಹೆಸರುಗಳಿಂದ ಸಂವಿಧಾನವು ಈ ದೇಶವನ್ನು ಗುರುತಿಸಿದೆ. ಹೀಗಿರುವಾಗ ಮೋಹನ್ ಭಾಗವತ್ ಮತ್ತು ಅವರ ಬೆಂಬಲಿಗರು ಭಾರತದ ಮೇಲೆ ‘ಹಿಂದುಸ್ಥಾನ’ ವನ್ನು ಒತ್ತಾಯಪೂರ್ವಕವಾಗಿ ಹೇರುವ ಅನಿವಾರ್ಯತೆಗಳೇನು? ಅದರ ಅಗತ್ಯವೇನಿದೆ? ಇಷ್ಟಕ್ಕೂ ಈ ದೇಶ ಈಗಿನಂತೆ ಭಾರತ ಆಗಿಯೇ ಮುಂದುವರಿಯುವುದರಿಂದ ಮೋಹನ್ ಭಾಗವತರಿಗೆ ಆಗುವ ತೊಂದರೆಗಳೇನು?… ಇದೇ ತೆರನ ಹಲವು ಕುಹಕದ ಪ್ರಶ್ನೆಗಳನ್ನು ವಿಚಾರವಾದಿಗಳು, ಕೆಲವು ಮಾಧ್ಯಮಗಳು ಎಬ್ಬಿಸಿವೆ. ಭಾಗವತರನ್ನು ಸಂವಿಧಾನ ಗೌರವಿಸದ ವ್ಯಕ್ತಿ ಎಂಬಂತೆ ಬಿಂಬಿಸಲಾಗಿದೆ.

ಬುದ್ಧಿಜೀವಿಗಳ ಇಂತಹ ವಾದ ಎಷ್ಟು ಟೊಳ್ಳು ಎಂಬುದು ವಿಚಾರ ಮಾಡುತ್ತಾ ಹೋದಾಗ ಬಯಲಾಗುತ್ತದೆ. ಹಿಂದು ಎಂಬ ಹೆಸರು ಈಚೆಗೆ ಬಂದದ್ದು ಎಂಬುದಾಗಲಿ, ಅದನ್ನು ಪರಕೀಯರು ನಮಗೆ ಕೊಟ್ಟರು ಎಂಬುದಾಗಲಿ ಚಾರಿತ್ರಿಕವಾಗಿ ನಿಜವಲ್ಲ. ಪ್ರಪಂಚದ ಅತ್ಯಂತ ಪ್ರಾಚೀನ ದಾಖಲೆಯಾದ ಋಗ್ವೇದದಲ್ಲಿಯೇ ಸಪ್ತ ಸಿಂಧು ಎಂಬುದು ನಮ್ಮ ನಾಡು ಮತ್ತು ಜನತೆಗೆ ಅನ್ವಯಿಸಿದ ಗುಣವಾಚಕ ಪದ. ಸಂಸ್ಕೃತದ ‘ಸ’ಕಾರವು ನಮ್ಮ ಪ್ರಾಕೃತ ಭಾಷೆಗಳಲ್ಲಿ ಮತ್ತು ಯುರೋಪಿನ ಭಾಷೆಗಳಲ್ಲಿ ಒಮ್ಮೊಮ್ಮೆ ‘ಹ’ಕಾರವಾಗುತ್ತದೆ ಎಂಬುದು ಪ್ರಾಜ್ಞರಿಗೆಲ್ಲ ತಿಳಿದ ವಿಷಯ. ಬೃಹಸ್ಪತಿ ಆಗಮದ ಪ್ರಕಾರ, ‘ಹಿಂದು’ ಶಬ್ದದಲ್ಲಿ ಹಿಮಾಲಯದ ‘ಹಿ’ ಮತ್ತು ‘ಇಂದು ಸರೋವರ’ದ (ದಕ್ಷಿಣ ಮಹಾ ಸಾಗರ) ‘ಇಂದು’ – ಇವೆರಡೂ ಕೂಡಿದ್ದು ನಮ್ಮ ಇಡೀ ಮಾತೃಭೂಮಿಯ ವಿಸ್ತಾರವನ್ನು ಅದು ಸೂಚಿಸುತ್ತದೆ.
ಹಿಮಾಲಯಂ ಸಮಾರಭ್ಯ ಯಾವದಿಂದು ಸರೋವರಂ
ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷ್ಯತೇ|
(ದೇವತೆಗಳಿಂದ ನಿರ್ಮಿತಗೊಂಡು, ಹಿಮಾಲಯದಿಂದ ಇಂದು ಸಾಗರದವರೆಗೆ ಪಸರಿಸಿರುವ ಈ ನಾಡನ್ನು ಹಿಂದೂಸ್ಥಾನವೆಂದು ಕರೆಯುತ್ತಾರೆ)

ನಮ್ಮ ಚರಿತ್ರೆಯ ಕಳೆದ ಒಂದು ಸಾವಿರ ವರ್ಷಗಳ ನಿರ್ಣಾಯಕ ಅವಧಿಯಲ್ಲಿ ಹಿಂದು ಎಂಬ ಹೆಸರು ನಮಗೆ ವಿಶೇಷವಾಗಿ ಅನ್ವಯಿಸಿದೆ. ಪೃಥ್ವಿರಾಜನ ಕಾಲದಿಂದ ನಮ್ಮ ಎಲ್ಲ ಹಿರಿಯ ರಾಷ್ಟ್ರವೀರರೂ, ರಾಜನೀತಿಜ್ಞರೂ, ಕವಿಗಳೂ ಮತ್ತು ಇತಿಹಾಸಕಾರರೂ ನಮ್ಮ ಜನತೆಯನ್ನು, ನಮ್ಮ ಧರ್ಮವನ್ನು ನಿರ್ದೇಶಿಸಲು ಬಳಸಿರುವ ಹೆಸರು ಹಿಂದು ಎಂದೇ. ಈ ಶಬ್ದ ನಮ್ಮ ಜನತೆಯ ಏಕತೆ, ಭವ್ಯತೆ ಮತ್ತು ವೈಶಿಷ್ಟ್ಯಗಳನ್ನು ಒಮ್ಮೆಗೇ ಪ್ರತಿಬಿಂಬಿಸುವ ಶಬ್ದ ಕೂಡ ಹೌದು. ಹಿಂದೂ ಜೀವನ ಎಂಬುದು ನಿಸರ್ಗ ಸಹಜ ವ್ಯವಸ್ಥೆ ಇದ್ದಂತೆ. ರೆಂಬೆಗಳು, ಎಲೆಗಳು, ಹೂವುಗಳು ಇತ್ಯಾದಿ ವಿಜಾತೀಯ ಭಾಗಗಳಿಂದ ಒಂದು ಮರ ತುಂಬಿರುವಂತೆ ಅದು. ರೆಂಬೆಗಳೇ ಬೇರೆ, ಎಲೆಗಳೇ ಬೇರೆ. ಒಂದರಿಂದ ಇನ್ನೊಂದು ಸಂಪೂರ್ಣ ಭಿನ್ನ ಎಂದೇ ಹೊರನೋಟಕ್ಕೆ ತೋರುತ್ತದೆ. ಆದರೆ ಈ ಹೊರ ತೋರಿಕೆಯ ಭಿನ್ನತೆಗಳೆಲ್ಲಾ ಒಂದೇ ಮರದ ಬಹುಮುಖ ಆವಿಷ್ಕಾರಗಳು. ಅವುಗಳಲ್ಲಿ ಹರಿಯುವ ಜೀವರಸ ಒಂದೇ, ಅದು ಬೇರೆ ಬೇರೆ ಅಲ್ಲ. ಈ ಅರ್ಥದಲ್ಲಿ ಈ ದೇಶದಲ್ಲಿರುವವರೆಲ್ಲ ಹಿಂದುಗಳೇ. ಭಾರತ, ಇಂಡಿಯಾ ಎಂಬ ಹೆಸರಿನಿಂದ ಕರೆಯುವುದಕ್ಕೆ ಎಷ್ಟೋ ಸಾವಿರ ವರ್ಷಗಳ ಮುನ್ನ ಈ ದೇಶವನ್ನು ಎಲ್ಲರೂ ಕರೆಯುತ್ತಿದ್ದುದು ಹಿಂದುಸ್ಥಾನ ಎಂದೇ.

ಮೋಹನ್ ಭಾಗವತ್ ‘ಇದು ಹಿಂದು ರಾಷ್ಟ್ರ’ ಎಂದು ಹೇಳಿರುವುದೂ ಕೂಡ ಇದೇ ಅರ್ಥದಲ್ಲಿ. ಹಿಂದು ರಾಷ್ಟ್ರ ಎಂದ ಕೂಡಲೇ ಇಲ್ಲಿರುವ ಮುಸ್ಲಿಮರು, ಕ್ರೈಸ್ತರು, ಇನ್ನಿತರರು ಗಾಬರಿಯಾಗುವ ಅಗತ್ಯವಾದರೂ ಎಲ್ಲಿದೆ? ಪರ್ಷಿಯಾಕ್ಕೆ ಇಸ್ಲಾಂ ಮತ ಬಂದರೂ ಪರ್ಷಿಯನ್ನರು ತಮ್ಮ ಲಿಪಿಯನ್ನು ಕೈಬಿಟ್ಟು ಅರಬ್ಬಿ ಲಿಪಿ ಸ್ವೀಕರಿಸಲಿಲ್ಲ. ಅರಬ್ಬರ ಜೀವನ ವಿಧಾನವನ್ನೂ ಅವರು ಒಪ್ಪಿಕೊಳ್ಳಲಿಲ್ಲ. ತಮ್ಮ ಜೀವನ ರೀತಿಗೇ ಅವರು ಅಂಟಿಕೊಂಡರು. ತಮ್ಮ ಪೂರ್ವಜ ರುಸ್ತುಂ ಬಗ್ಗೆ ಅವರಿಗೆ ಈಗಲೂ ಗಾಢವಾದ ಗೌರವ. ರುಸ್ತುಂ ಮುಸ್ಲಿಮನೇನೂ ಆಗಿರಲಿಲ್ಲ. ಇಂಡೋನೇಷಿಯಾದ ಬಹುತೇಕ ಮಂದಿ ಇಸ್ಲಾಂ ಮತ ಸ್ವೀಕರಿಸಿದ್ದಾರೆ. ಆದರೆ ಅಲ್ಲಿ ವಿದ್ಯೆ, ಬುದ್ಧಿಗಳ ಅಧಿದೇವತೆಗಳು ಸರಸ್ವತಿ ಮತ್ತು ಗಣೇಶ. ಆ ನಾಡಿನ ಮಕ್ಕಳು ತಮ್ಮ ಶಿಕ್ಷಣದ ಓನಾಮ ಆರಂಭಿಸುವುದು ಸಚಿತ್ರ ರಾಮಾಯಣದಿಂದಲೇ. ಶ್ರೀರಾಮಚಂದ್ರ ಆ ದೇಶದ ಅದರ್ಶ ಪುರುಷ. ಇಂಡೋನೇಷಿಯಾದ ಮೊದಲನೇ ಅಧ್ಯಕ್ಷರ ಹೆಸರು ಸುಕರ್ಣ. ಅವರ ಮಗ ಕಾರ್ತಿಕೇಯ. ಅನಂತರ ಬಂದ ಅಧ್ಯಕ್ಷರ ಹೆಸರು ಸುಹಾರ್ತೊ. ಸೀತೆ, ಸಾವಿತ್ರಿ, ದಮಯಂತಿ, ಭಾನುಮತಿ ಮೊದಲಾದ ಹೆಸರುಗಳು ಅಲ್ಲಿನ ಮಹಿಳೆಯರಲ್ಲಿ ಕಾಮನ್ ಆಗಿದೆ. ಅಲ್ಲಿನ ವಿಮಾನ ಸಾರಿಗೆಗೆ ಅವರಿಟ್ಟ ಹೆಸರು – ಗರುಡ ಏರ್‌ಲೈನ್ಸ್ (ಗರುಡ ವಿಷ್ಣುವಿನ ವಾಹನ). ಅಲ್ಲಿನ ಸಂವಿಧಾನದ ಮೊದಲನೇ ಧ್ಯೇಯವಾಕ್ಯ – ‘ಧರ್ಮೇ ರಕ್ಷತಿ ರಕ್ಷಿತಂ’ ಎಂದು.

ಇರಾನ್, ಟರ್ಕಿ, ಇಂಡೋನೇಷಿಯಾ ಮೊದಲಾದ ಮುಸ್ಲಿಮ್ ಬಾಹುಳ್ಯ ದೇಶಗಳಲ್ಲಿ ತಮ್ಮ ಪೂರ್ವಜರ ಪರಂಪರೆಯನ್ನು ಅಲ್ಲಿನವರು ಗೌರವಿಸಬಹುದಾದರೆ ನಮ್ಮ ದೇಶದ ಮುಸ್ಲಿಮರು, ಕ್ರೈಸ್ತರು ಯಾಕೆ ಇಲ್ಲಿನ ಪೂರ್ವಜರ ಪರಂಪರೆಯನ್ನು ಗೌರವಿಸಲು ಸಾಧ್ಯವಿಲ್ಲ? ಈ ದೇಶವನ್ನು ಹಿಂದುಸ್ಥಾನ ಎಂದು ಕರೆದಾಕ್ಷಣ ಇಲ್ಲಿರುವ ಮುಸ್ಲಿಮ್, ಕ್ರೈಸ್ತ ಮತ್ತಿತರ ಹಿಂದುಯೇತರರಿಗೆ ಆಗುವ ತೊಂದರೆಯಾದರೂ ಏನು? ಹಿಂದುಸ್ಥಾನ ಎಂಬುದು ಎಲ್ಲ ವೈವಿಧ್ಯತೆಗಳನ್ನು ಉಳಿಸಿಕೊಂಡು, ಬಹುಸಂಸ್ಕೃತಿ, ಬಹು ಆಚರಣೆ, ಬಹು ಆರಾಧನೆಗಳನ್ನು ಗೌರವಿಸುವ ವಿಶಾಲಾರ್ಥದ ಇರಾದೆ ಹೊಂದಿದೆ ಎಂಬುದನ್ನು ಇವರೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top