ಅಮೃತಸರ: ಉತ್ತರ ಭಾರತದಲ್ಲಿ ಸಂಭವಿಸುತ್ತಿರುವ ಅತ್ಯಧಿಕ ಪ್ರಮಾಣದ ವಾಯುಮಾಲಿನ್ಯದಿಂದಾಗಿ ಸಿಖ್ಖ್ ಧರ್ಮೀಯರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ.
ಒಂದು ಕಾಲದಲ್ಲಿ ತನ್ನ ಹೊಳಪಿನಿಂದ ನೋಡುಗರ ಕಣ್ಮನ ಸೆಳೆಯುತ್ತಿದ್ದ 430 ವರ್ಷಗಳ ಇತಿಹಾಸವಿರುವ ಈ ಸ್ವರ್ಣಲೇಪಿತ ದೇಗುಲ ಬರುಬರುತ್ತಾ ಮಂಕಾಗುತ್ತಿದೆ, ಇದನ್ನು ಸರಿಪಡಿಸಲು ಶತಕಗಳ ಹಿಂದೆ ಅತ್ಯಂತ ದುಬಾರಿ ಯೋಜನೆಯನ್ನು ಆರಂಭಿಸಲಾಗಿತ್ತು, 1999 ರಲ್ಲಿ ಮತ್ತೆ ಪುನಃಶ್ಚೇತನದ ಕಾರ್ಯ ನಡೆದಿತ್ತು. ಆದರೂ ಹೆಚ್ಚುತ್ತಿರುವ ವಾಯುಮಾಲಿನ್ಯ ಈ ದೇಗುಲದ ಅಂದವನ್ನು ಕೆಡಿಸುತ್ತಿದೆ.
ವಾಯುಮಾಲಿನ್ಯ ತಡೆಗೆ ಪರಿಸರ ಹೋರಾಟಗಾರರು, ಧಾರ್ಮಿಕ ನಾಯಕರು ಅಭಿಯಾನ ಆರಂಭಿಸಿದ್ದಾರೆ. ಸುತ್ತಮುತ್ತಲ ರೈತರು ತಮ್ಮ ಹೊಲದಲ್ಲಿ ಬೆಂಕಿ ಹಾಕದಂತೆ ತಡೆಯಲಾಗಿದೆ, ಕೈಗಾರಿಕೆಗಳನ್ನು ತೆರವುಗೊಳಿಸಲಾಗಿದೆ, ಟ್ರಾಫಿಕ್ ತಡೆಗೆ ಕ್ರಮಕೈಗೊಳ್ಳಲಾಗಿದೆ. ಪ್ರತಿನಿತ್ಯ ಒಂದು ಲಕ್ಷ ಮಂದಿಗೆ ಉಚಿತ ಊಟ ಹಾಕುವ ಇಲ್ಲಿನ ಅನ್ನಛತ್ರದಲ್ಲಿ ಒಲೆಯ ಬದಲು ಕುಕ್ಕಿಂಗ್ ಗ್ಯಾಸ್ನ್ನು ಬಳಕೆ ಮಾಡಲಾಗುತ್ತಿದೆ.
ಆದರೂ ಇದುವರೆಗೆ ಈ ಎಲ್ಲಾ ಅಭಿಯಾನಗಳು ಅಷ್ಟು ಫಲ ನೀಡಿಲ್ಲ, ಆದರೂ ಬದಲಾವಣೆ ನಿಧಾನಕ್ಕೆ ಆಗುತ್ತಿದೆ. ಇದುವರೆಗೆ ಮಾಲಿನ್ಯ ಪರಿಶೀಲನಾ ಉಪಕರಣವನ್ನು ಇನ್ನೂ ಇಲ್ಲಿ ಅಳವಡಿಸದೇ ಇರುವುದು ಇನ್ನೊಂದು ದೊಡ್ಡ ದುರಂತ.
ಸುತ್ತಲಿನ ಹೋಟೆಲ್, ಮನೆಗಳಲ್ಲಿ ಒಲೆ ಬಳಕೆ ಮಾಡಲಾಗುತ್ತಿದೆ, ಇದನ್ನು ನಿಷೇಧಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಮೃತಸರ ದೇಶದ 9ನೇ ಅತೀ ಹೆಚ್ಚು ಮಾಲಿನ್ಯ ನಗರ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದೆ.
ದೇಗುಲದ ಸ್ವರ್ಣಲೇಪನವನ್ನು ಬದಲಾಯಿಸಲು ಸಾಧ್ಯವಿದೆ, ಆದರೆ ಅದಕ್ಕೆ ತಗಲುವ ವೆಚ್ಚ ಮಾತ್ರ ಊಹೆಗೆ ನಿಲುಕದ್ದು. ಹೀಗಾಗಿ ಮಾಲಿನ್ಯವನ್ನು ತಡೆದು 17 ನೇ ಶತಮಾನದ ಪ್ರವಾಸಿಗರ, ಸಿಖ್ಖರ ಅಚ್ಚುಮೆಚ್ಚಿನ ತಾಣವನ್ನು, ಭಾರತ ಹೆಮ್ಮೆಯ ಸ್ವರ್ಣ ದೇಗುಲವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.