ಮಂಗಳೂರು : ಭೂಮಿಗೆ ಜ್ವರ ಬಂದಿದೆಯಂತೆ! ಹೀಗೆ ಹೇಳಿದ್ದನ್ನು ಕೇಳುವಾಗ, ಭೂಮಿಗೆ ಯಾವಾಗಾದರೂ ಜ್ವರಬರುತ್ತಾ ತಮಾಷೆ ಮಾಡಬೇಡಿ ಎಂದು ಹೇಳುವವರೇ ಹೆಚ್ಚು. ಆದರೆ ಇದು ಹೌದು ಎನ್ನುತ್ತದೆ ವಿಜ್ಞಾನ ಪ್ರಪಂಚ. ಇದರ ಬಗ್ಗೆ ತಿಳಿಯಬೇಕೆಂದಿದ್ದರೆ ಮಂಗಳೂರಿಗೆ ಬಂದಿರುವ ಸೈನ್ಸ್ ಎಕ್ಸ್ಪ್ರೆಸ್ ರೈಲಿನೊಳಗೆ ಒಂದು ರೌಂಡ್ ಸುತ್ತಬೇಕು.
ಭೂಮಿಯ ತಾಪಮಾನ ಹೆಚ್ಚುತ್ತಿದೆ, ಹವಾಮಾನ ಬದಲಾಗುತ್ತಿದೆ. ಹಾಗಾಗಿ ನಾವು ಭೂಮಿಯ ತಾಪಮಾನ ಕಡಿಮೆ ಮಾಡಬೇಕು ಎಂಬ ಸಂದೇಶ ಹೊತ್ತ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ‘ಸೈನ್ಸ್ ಎಕ್ಸ್ಪ್ರೆಸ್’ – ಕ್ಲೈಮೆಟ್ ಆಕ್ಷನ್ ಸ್ಪೆಷಲ್ ಎಂಬ ರೈಲು ಮಂಗಳೂರಿಗೆ ಬಂದಿದೆ.
ಈ ರೈಲು ಸಂಪೂರ್ಣ ಹವಾನಿಯಂತ್ರಿತವಾಗಿದ್ದು 11 ಕೋಚ್ಗಳನ್ನು ಒಳಗೊಂಡಿದೆ ಈ ರೈಲಿನ ಮೂರು ಬೋಗಿಗಳು ಸೋಲಾರ್ ಮೂಲಕ ಕಾರ್ಯಾಚರಿಸುತ್ತದೆ. ಅಲ್ಲದೆ ಕೋಚಿನ ಎರಡೂ ಕಡೆಗಳಲ್ಲೂ ಕಿಟಕಿಗಳಿಗೆ ಮಕ್ಕಳು ರಚಿಸಿದ ಹವಾಮಾನ ವೈಪರೀತ್ಯದ ವರ್ಣಚಿತ್ರವನ್ನು ಹಾಕಲಾಗಿದೆ. ಇದರಲ್ಲಿ 5 ಕ್ಕಿಂತ ಹೆಚ್ಚಿನ ವರ್ಣಚಿತ್ರಗಳು ಮಂಗಳೂರಿನ ಶಾಲಾ ಮಕ್ಕಳು ಮಾಡಿರುವಂತದ್ದು ಎನ್ನುವುದು ಒಂದು ವಿಶೇಷ. ಈ ರೈಲು 6 ಲಿಮ್ಕಾ ದಾಖಲೆಗಳನ್ನು ಗಳಿಸಿದೆ.
ಮೊದಲ ಬೋಗಿಯಲ್ಲಿ ‘ಅರ್ಥ್ ಫಿವರ್’ ಎಂಬ ಶೀರ್ಷಿಕೆಯಡಿ ಭೂಮಿಯ ತಾಪಮಾನ ಹೆಚ್ಚುತ್ತಿರುವ ಕುರಿತು ಗ್ರೀನ್ ಹೌಸ್ ಗ್ಯಾಸ್ ಎಫೆಕ್ಟ್ ಬಗ್ಗೆ ತಿಳಿಸಲಾಗಿದ್ದು ವಾತಾವರಣದಲ್ಲಿರುವ ಅನಿಲ ಪ್ರಮಾಣಗಳ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.
ಎರಡನೇ ಬೋಗಿಯಲ್ಲಿ ಹವಾಮಾನ ಬದಲಾವಣೆ, ಏರುತ್ತಿರುವ ಭೂಮಿಯ ಉಷ್ಣತೆ, ಕೃಷಿ ಚಟುವಟಿಕೆ ಮತ್ತು ನೀರಿನ ಬಳಕೆ, ಕಾಡನ್ನು ಬೆಳಸುವ ಬಗ್ಗೆ ಅಲ್ಲದೇ ಹಿಮ ಕರಗುವ ಬಗ್ಗೆ ಮತ್ತು ಇದರಿಂದ ಹಿಮಕರಡಿಗಳ ವಿನಾಶದ ಬಗ್ಗೆಯೂ ಚಿತ್ರಿಸಲಾಗಿದೆ. ಈ ತಾಪಮಾನ ಏರಿಕೆಯಿಂದ ಹಿಮಕರಗಿ ನೀರಾಗುವುದರಿಂದ ಭೂಮಿಯ ವಿನಾಶದ ಬಗ್ಗೆ ಹೇಳಲಾಗಿದೆ.
ಮೂರನೇ ಮತ್ತು ನಾಲ್ಕನೇ ಬೋಗಿಯಲ್ಲಿ ಹವಾಮಾನ ಬದಲಾವಣೆಯಲ್ಲಿ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಬಿತ್ರಿಸಲಾಗಿದ್ದು ನೀರಿನ ಪುನರ್ ಬಳಕೆಯಲ್ಲಿ ತಾಮ್ರದ ಪೈಪ್ಗಳ ಮೂಲಕ ಹರಿಸುವಿಕೆ ಮತ್ತು ನೀರಿನ ಸಂರಕ್ಷಣೆಯಲ್ಲಿ ವೃಕ್ಷಗಳ ಪಾತ್ರವನ್ನು ಹೇಳಲಾಗಿದೆ. ಅಲ್ಲದೆ ತಾಮ್ರದ ಪಾತ್ರಗಳ ಬಳಕೆಯನ್ನು ಉತ್ತೇಜಿಸಲಾಗಿದೆ. ಡೈನೋಸಾರ್ಸ್ ಅಳಿವಿನ ಬಗ್ಗೆ ತಿಳಿಸಲಾಗಿದೆ.
ಐದನೇ ಮತ್ತು ಆರನೇ ಬೋಗಿಯಲ್ಲಿ ಸಾರ್ವಜನಿಕ ಸಾರಿಗೆ, ಸೈಕಲ್ ಬಳಕೆಗಳನ್ನು ಉತ್ತೇಜಿಸಲಾಗಿದ್ದು ಪುನಃಶ್ಚೇತನ ಶಕ್ತಿಗಳ ಬಳಕೆಯ ಬಗ್ಗೆ ತಿಳಿಸಲಾಗಿದೆ.
ಏಳನೇ ಮತ್ತು ಎಂಟನೇ ಬೋಗಿಯಲ್ಲಿ ಸ್ಥಳೀಯವಾಗಿ ಬೆಳೆಯುವ ಆಹಾರ, ಕ್ರಿಮಿನಾಶಕ ಸಿಂಪಡನೆ, ಭೂಮಿಯ ಫಲವತ್ತತೆ, ಸಾಂಪ್ರದಾಯಿಕ ಆಹಾರ ಶೈಲಿಗೆ ಒತ್ತು ಕೊಡಲಾಗಿದೆ. ಜಂಕ್ಫುಡ್ಗಳ ಬಗ್ಗೆ ಅರಿವು ಮೂಡಿಸಲಾಗಿದೆ.
ಒಂಬತ್ತನೇ ಮತ್ತು ಹತ್ತನೇ ಬೋಗಿಯಲ್ಲಿ ಬಯೋತಂತ್ರಜ್ಞಾನ ಮತ್ತು ಅದಕ್ಕೆ ಬಳಕೆಯಾಗುವ ಆ್ಯಪ್ ಗಳ ಬಗ್ಗೆ ತಿಳಿಸಲಾಗಿದೆ. ಅಲ್ಲದೇ ಜೀವ ವೈವಿಧ್ಯಗಳ ಬಗ್ಗೆ ಬಣ್ಣಿಸಲಾಗಿದೆ.
ಹನ್ನೊಂದನೇ ಬೋಗಿಯಲ್ಲಿ ಪಾರಂಪರಿಕ ಕೆತ್ತನೆ ಮತ್ತು ಕಟ್ಟಡ ಅದರಿಂದ ಪರಿಸರಕ್ಕೆ ಆಗುವ ಅನುಕೂಲ, ಸಾಂಪ್ರದಯಿಕ ಅಡುಗೆ ಪದಾರ್ಥದ ಪಾತ್ರೆಗಳು, ಆಧುನಿಕತೆಗೆ ಒಗ್ಗಿಕೊಳ್ಳುವ ಮಿಟ್ಟಿಕೂಲ್ ನಂತಹ ಮಣ್ಣಿನ ಪ್ರಪಂಚ ಇವೆಲ್ಲವುಗಳನ್ನು ಒಳಗೊಂಡಿದೆ.
‘ಸೈನ್ಸ್ ಎಕ್ಸ್ಪ್ರೆಸ್’ ತನ್ನ ಮೊದಲ ಹಂತದಲ್ಲಿ ಏಳು ತಿಂಗಳ ಕಾಲ ಭಾರತದಾದ್ಯಂತ ಸಂಚರಿಸಲಿದೆ. 20 ರಾಜ್ಯಗಳ 64 ಸ್ಥಳಗಳಲ್ಲಿ ಇದು ಪ್ರದರ್ಶನಗೊಳ್ಳಲಿದ್ದು, 19,800ಕಿ.ಮೀ. ದೂರವನ್ನು ಕ್ರಮಿಸಲಿದೆ. ಈ ಪ್ರದರ್ಶನವು ಹವಾಮಾನ ಬದಲಾವಣೆ ಬಗ್ಗೆ ಜನರಿಗೆ ವಿಶೇಷ ಮಾಹಿತಿ ನೀಡಲಿದೆ.
ಮಂಗಳೂರಿನ ಶಾಲಾ ಮಕ್ಕಳು ಮಾಡಿರುವಂತ ಹವಾಮಾನ ವೈಪರೀತ್ಯದ ವರ್ಣಚಿತ್ರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.