ಮಂಗಳೂರು : ಹೊಸ ಮರಳು ನೀತಿ ಜಾರಿಗೊಂಡ ನಂತರ ಜಿಲ್ಲೆಯಲ್ಲಿ ಮರಳು ದಂಧೆ ಅಂಕೆ ಮೀರಿದೆ. ಜಿಲ್ಲೆಯ ನದೀ ಪಾತ್ರಗಳನ್ನು ಬಗೆದು ಬರಿದು ಮಾಡುತ್ತಿರುವ ಮರಳು ವ್ಯಾಪಾರಿಗಳು ಮಾಫಿಯಾ ರೀತಿ ಬೆಳೆದು ನಿಂತಿದ್ದಾರೆ. ಇಂತಹ ಮರಳು ದಂಧೆಗೆ ಜಿಲ್ಲಾಡಳಿತವೇ ಸಹಕಾರ ನೀಡುತ್ತಿದೆ ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಹೊಸ ಮರಳು ನೀತಿಯನ್ನು ದುರುಪಯೋಗ ಪಡೆಯುತ್ತಿರುವ ಮರಳು ವ್ಯಾಪಾರಿಗಳು ಬೇನಾಮಿ ಹೆಸರುಗಳಲ್ಲಿ ಪರ್ಮಿಟ್ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತದೊಂದಿಗೆ ಅಪವಿತ್ರ ಮೈತ್ರಿಯನ್ನು ಸಾಧಿಸಿ ಪಡೆದ ಪರ್ಮಿಟ್ಗಿಂತ ನಾಲ್ಕು ಪಟ್ಟು ಮರಳು ಹೊರ ಜಿಲ್ಲೆಗಳಿಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮನೆ ನಿರ್ಮಾಣ ಸಹಿತ ಜನಸಾಮಾನ್ಯರಿಗೆ ಮರಳು ನಿರಾಕರಿಸುತ್ತಿರುವ ವ್ಯಾಪಾರಿಗಳು ಜಿಲ್ಲಾಡಳಿತದ ಸಹಕಾರದೊಂದಿಗೆ ಹೊರಜಿಲ್ಲೆ, ಹೊರರಾಜ್ಯಗಳಿಗೆ ರಾಜಾರೋಷವಾಗಿ ಮರಳು ಸಾಗಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮರಳಿಗೆ ಹಾಹಾಕಾರ ಶುರುವಾಗಿದ್ದು, ಬೆಲೆ ವಿಪರೀತ ಏರಿಕೆಯಾಗಿದೆ. ಇಂತಹ ಅನೈಸರ್ಗಿಕ, ಕಾನೂನುಬಾಹಿರ ಮರಳುಗಾರಿಕೆಯಿಂದಾಗಿ ಮರಳು ವ್ಯಾಪಾರಿಗಳು ಮಾಫಿಯಾ ರೀತಿ ಬೆಳೆದು ನಿಂತಿದ್ದಾರೆ. ನದೀ ಪಾತ್ರಗಳಲ್ಲಿ ಅಂತರ್ಜಲ ಕುಸಿಯುವ, ನದಿಗಳು ಬತ್ತಿ ಹೋಗುವ ಭೀತಿ ಎದುರಾಗಿದೆ. ಕುದುರುಗಳು ಕುಸಿಯತೊಡಗಿದೆ.
ಇಷ್ಟೆಲ್ಲಾ ಆದರೂ ಜಿಲ್ಲಾಡಳಿತ ಕೇವಲ, ಕಾಟಾಚಾರದ ಸಭೆಗಳನ್ನು ನಡೆಸಿ, ಎಚ್ಚರಿಕೆಯ ಸಂದೇಶ ನೀಡಿ ಜನತೆಯ ಕಣ್ಣಿಗೆ ಮಣ್ಣೆರಚುತ್ತಿದೆ. ಇನ್ನೊಂದೆಡೆ ರಾಜಕಾರಣಿಗಳ ಹಿಡಿತದಲ್ಲಿರುವ ಮರಳು ಮಾಫಿಯಾದ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿರುವ ಮುನೀರ್ ಕಾಟಿಪಳ್ಳ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತೀವ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು DYFIರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.