ಬೆಳ್ತಂಗಡಿ : ಸಂಪ್ರದಾಯ, ಅಂತಸ್ತಿನ ಹೆಸರಲ್ಲಿ ಮದ್ಯಪಾನ ನೀಡಿ ಜನರನ್ನು ವ್ಯಸನಿಗಳನ್ನಾಗಿ ಮಾಡುವುದು ಸರಿಯಲ್ಲ. ದಾನ, ಧರ್ಮ, ಪರೋಪಕಾರದ ಮೂಲಕ ಶ್ರೀಮಂತಿಕೆಯ ಪ್ರದರ್ಶನವಾಗಲಿ ಎಂದು ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಅವರು ಕನ್ಯಾಡಿಯ ಶ್ರೀ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ 62 ನೇ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಡಿಸೆಂಬರ್ 31 ರಂದು ಕುಡಿತಬೇಡ ಎನ್ನುವ ಸಂಕಲ್ಪ ಮಾಡಿದರೆ 1 ನೇ ತಾರೀಕಿಗೆ ಸಂಕಲ್ಪವನ್ನು ಮರೆತು ಕುಡಿತ ಮುಂದುವರೆಸುವವರೇ ಜಾಸ್ತಿ. ಎತ್ತರವಾದ ಬೆಟ್ಟಕ್ಕೆ ಹತ್ತುವ ಪ್ರಯತ್ನ ಮಾಡುವ 3 ಜನರಲ್ಲಿ 3 ಭಾವನೆ ಇರುತ್ತದೆ.
ಒಬ್ಬ ಸಾಧ್ಯವಿಲ್ಲ ಎಂದರೆ ಮತ್ತೊಬ್ಬ ಪ್ರಯತ್ನಿಸಿ ವಿಫಲನಾಗುತ್ತಾನೆ. ಮೂರನೆಯವನು ಏರಿಯೇ ಏರುತ್ತೇನೆ ಎನ್ನುವ ಹಠದೊಂದಿಗೆ ಸಾಧನೆ ಮಾಡುತ್ತಾನೆ. ಇಲ್ಲಿ ಸೇರಿದ್ದ 62 ಮಂದಿ ಮೂರನೆಯವನ ನಿರ್ಧಾರದಂತೆ ದೃಢಸಂಕಲ್ಪ ಮಾಡಬೇಕೆಂದರು. ಕುಡಿತ ಬಿಡುವುದೆಂದರೆ ತಪಸ್ಸು ಇದ್ದಂತೆ. ತಪೋ ಭಂಗ ಮಾಡುವ ಬಂಧುಬಳಗ, ಸ್ನೇಹಿತರಿಂದ ದೂರವಿರಬೇಕು. ಹೊಲಸ್ಸಿನಿಂದ ಮೇಲೆ ಬಂದವರು ಮತ್ತೆ ಅದೇ ಗಲೀಜಿಗೆ ಬೀಳಬಾರದು. ಹೊಸ ಜನ್ಮದಲ್ಲಿ ಹೊಸ ಅನುಭವ ಪಡೆದು ತಪ್ಪದೇ ಪರಿವರ್ತನೆಯಾಗಬೇಕೆಂದರು. ಪರಿವರ್ತನೆಯಾದ ಹೃದಯಕ್ಕೆ ಆಧ್ಯಾತ್ಮದ ಸೀಲು ಹಾಕಬೇಕು. ನಂತರ ಆಧ್ಯಾತ್ಮವೇ ನಮಗೆ ರಕ್ಷಿಸುತ್ತದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರು, ಪೋಲಿಸ್ ಪೇದೆಗಳು, ಶಿಕ್ಷಕರು, ವೈದ್ಯರು, ಅಭಿಯಂತರರು, ಖಾಸಗೀ ಕಂಪೆನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ 23 ಜಿಲ್ಲೆಗಳಿಂದ, ಕೇರಳ ರಾಜ್ಯದಿಂದಲೂ ಶಿಬಿರಾರ್ಥಿಗಳಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ವೈಜ್ಞಾನಿಕ ಚಿಕಿತ್ಸೆಯನ್ನು ಗಮನದಲ್ಲಿಟ್ಟು ಮನೋವೈದ್ಯರು, ಸಲಹೆಗಾರರು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸಲಹೆ, ಚಿಕಿತ್ಸೆ, ಮಾರ್ಗದರ್ಶನ ನೀಡಲಾಗಿದೆ. ಮುಂದಿನ ಶಿಬಿರವು ಮಾ.21 ರಿಂದ 28 ರವರೆಗೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.