ಸುರತ್ಕಲ್: ಪಂಜ ಮತ್ತು ಕೊಯ್ಕುಡೆ ಗ್ರಾಮದಲ್ಲಿ ಐ.ಎಸ್.ಪಿ.ಆರ್.ಎಲ್.ನ ಪೈಪ್ಲೈನ್ ಹಾದು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ತೋಕೂರು – ಪಾದೂರು ಪೈಪ್ಲೈನ್ ಕುರಿತು ಜನಜಾಗೃತಿ ಸಮಿತಿಯು ಗ್ರಾಮಸ್ಥರ ಜನಜಾಗೃತಿ ಸಭೆಯನ್ನು ಇಲ್ಲಿನ ಭಜನಾ ಮಂದಿರದಲ್ಲಿ ಹಮ್ಮಿಕೊಂಡಿತು.
ಇತ್ತೀಚೆಗೆ ಇಲ್ಲಿನ ಬಯಲು, ಗದ್ದೆಗಳಲ್ಲಿ ಕೆಲವು ಮಂದಿ ಮಾರ್ಕಿಂಗ್ ಮಾಡುತ್ತಿದ್ದಾಗ ವಿಚಾರಿಸಿದ ಗ್ರಾಮಸ್ಥರಿಗೆ ಇದು ಪೈಪ್ಲೈನ್ಗೆ ಮಾರ್ಕಿಂಗ್ ಎಂದು ಹೇಳಿದ್ದರು. ಇಲ್ಲಿ ನಾಲ್ಕು ಪೈಪ್ಲೈನ್ ಹಾಕಲಾಗುತ್ತದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಎರಡು ಗ್ರಾಮದ ಕೆಲವರಿಗೆ ನೊಟೀಸ್ ನೀಡಲಾಗಿದೆ. ನೊಟೀಸು ನೀಡದೇ ಇದ್ದವರ ಜಮೀನಿನಲ್ಲೂ ಮಾರ್ಕಿಂಗ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ನೀಡಿದರು. ಈ ಭಾಗದಲ್ಲಿ ಸೆಂಟ್ಸ್ಗೆ ಎರಡೂವರೆ ಸಾವಿರದಂತೆ ಪರಿಹಾರ ಧನವನ್ನು ಏಕಪಕ್ಷೀಯವಾಗಿ ನಿಗದಿ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಜನಜಾಗೃತಿ ಸಮಿತಿಯ ಚಿತ್ತರಂಜನ್ ಭಂಡಾರಿ ಮಾಹಿತಿ ನೀಡುತ್ತಾ ಸರಕಾರದ ನೀತಿ ನಿಯಮಾವಳಿಗಳನ್ನು ಮೀರಿ ಕೆ.ಐ.ಡಿ.ಬಿ. ಅಧಿಕಾರಿಗಳು ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕನಿಷ್ಟ ನಿಯಮಾವಳಿಗಳನ್ನೂ ಪೂರೈಸಲಾಗಿಲ್ಲ. ಭೂಸ್ವಾಧೀನದ ಬಗ್ಗೆ ರೈತರು ಆಕ್ಷೇಪ ಸಲ್ಲಿಸಿದ ಬಗ್ಗೆ 2013ರಲ್ಲಿ ಅಂದಿನ ಭೂ ಸ್ವಾಧೀನಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದರು, ನೈಜ ವರದಿ ಸಲ್ಲಿಸಿದ ಅಧಿಕಾರಿ ಒಂದು ವಾರದ ಒಳಗೆ ವರ್ಗಾವಣೆಗೊಂಡಿದ್ದರೇ ಹೊರತು ಆ ಬಗ್ಗೆ ರೈತರು ಸರಕಾರ ಮತ್ತು ಐ.ಎಸ್.ಆರ್.ಪಿ.ಎಲ್ ಸಂಸ್ಥೆಯನ್ನು ಸೇರಿಸಿ ಸಭೆ ನಡೆಸಲಾಗಿಲ್ಲ. ಈ ರೀತಿ ಅಕ್ರಮ ಏಕಪಕ್ಷೀಯ ಭೂ ಸ್ವಾಧೀನದಿಂದ ಪೈಪ್ಲೈನ್ ಹಾದು ಹೋಗುವ ಪ್ರದೇಶದ ಇಕ್ಕೆಲಗಳಲ್ಲಿ ಜನಜೀವನ ದುರ್ಭರವಾಗಲಿದೆ. ಪೈಪ್ಲೈನ್ ಬಾಧಿತರು ಮಾತ್ರವಲ್ಲದೆ ಸಮಗ್ರ ಗ್ರಾಮದ ಜನತೆಯೇ ಇದನ್ನು ಪ್ರತಿಭಟಿಸಬೇಕಾಗಿದೆ ಎಂದರು.
ಜನಜಾಗೃತಿ ಸಮಿತಿಯ ಕಾನೂನು ಸಲಹೆಗಾರ ಜಗದೀಶ್ ರಾವ್. ಪಿ. ಮಾತನಾಡುತ್ತಾ ಈ ಬಗ್ಗೆ ಸರ್ವೇ ಕಾರ್ಯವನ್ನು ಎಪ್ಪತ್ತು ವರ್ಷ ಮೀರಿದ ನಿವೃತ್ತ ಅಧಿಕಾರಿಗಳಿಂದ ನಡೆಸಲಾಗಿದೆ. ಇದರಿಂದಾಗಿ ಸರ್ವೇ ಕಾರ್ಯ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡು ರೈತರಿಗೆ ಅನ್ಯಾಯವಾಗಿದೆ. ಸಮರ್ಥ ಅರ್ಹ ಸರ್ವೆಯರ್ರಿಂದ ಪುನಃ ಸರ್ವೇ ಮಾಡಿಸುವ ಅಗತ್ಯವಿದೆ ಎಂದರು.
ಪೈಪ್ಲೈನ್ ಹಾದು ಹೋಗುವ ಭೂಮಿಯಲ್ಲಿ ರೈತರು ತೊಗರಿ ಇತ್ಯಾದಿ ಬೆಳೆಯಬಹುದು ಎಂದು ಹೇಳಲಾಗುತ್ತದೆ. ಒಂದು ಅಡಿ ಆಳಕ್ಕೆ ಬೇರು ಹೋಗುವ ಯಾವುದೇ ಗಿಡವನ್ನು ನೆಡುವಂತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯು ತೆಂಗು ಮತ್ತು ಕಂಗಿಗೆ ಹೇಳಿ ಮಾಡಿಸಿದ ಭೂಮಿಯಾಗಿದೆ. ಇಲ್ಲಿ ಯಾರೂ ತೊಗರಿ ಬೆಳೆಯುತ್ತಿಲ್ಲ. ಈ ಮೂಲಕ ರೈತರನ್ನು ಮೋಸ ಮಾಡಲಾಗುತ್ತಿದೆ ಎಂದರು. ಪೈಪ್ ಲೈನ್ ಆಕ್ಟ್ ಪ್ರಕಾರ ಎತ್ತರ ತಗ್ಗು ಪ್ರದೇಶದಲ್ಲಿ ಬೆಂಡ್ಗಳನ್ನು ಬಳಸಿ ಕೊಳವೆ ಅಳವಡಿಸುವಂತಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯು ಏರು ತಗ್ಗುಗಳಿಂದ ಕೂಡಿದ ಪ್ರದೇಶವಾಗಿದೆ. ಪಂಜಾಬ್, ರಾಜಸ್ಥಾನ, ಮುಂತಾದ ಬಯಲು ಪ್ರದೇಶದಲ್ಲಿ ಹಾಕಬೇಕೆಂದು ಕಾನೂನು ಹೇಳುವ ಪೈಪ್ಲೈನ್ನ್ನು ಗುಡ್ಡಗಾಡು, ಮಲೆನಾಡು ಪ್ರದೇಶವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ದಾರಿ, ನೀರು, ಕೃಷಿ ಇತ್ಯಾದಿ ಮಾಮೂಲಿ ಹಕ್ಕುಗಳಿಗೆ ಬಾಧೆಯಾಗುವಂತೆ ಹಾಕುವುದು ಕಾನೂನು ಬಾಹಿರ ಎಂಬ ಮಾಹಿತಿ ನೀಡಿದರು.
ದೇಶದ ಅಗತ್ಯಕ್ಕೆ ಭೂಮಿ ನೀಡುವುದಿಲ್ಲ ಎಂದು ಯಾರೂ ಹೇಳುವುದಿಲ್ಲ. ಆದರೆ ಪರಿಹಾರ ಶೇಕಡಾ ಹತ್ತು ಮಾತ್ರ ನೀಡಲಾಗುತ್ತದೆ. ಇದು ಹಾಳಾದ ಕಟ್ಟಪುಣಿ, ತೋಡು ಇತ್ಯಾದಿಗಳನ್ನು ಮೊದಲಿನ ರೂಪಕ್ಕೆ ತರಲು ಖರ್ಚಾಗುತ್ತದೆ. ಸ್ವಾಧೀನಗೊಂಡ ಭೂಮಿಯ ಗರಿಷ್ಠ ಉಪಯೋಗವನ್ನು ಪಡೆಯುವ ಸಂಸ್ಥೆಯು ರೈತರ ಮೇಲೆ ಸವಾರಿ ಮಾಡುವಂತಾಗುತ್ತದೆ. ಕೇಂದ್ರ ಸರಕಾರದ ಭೂಸ್ವಾಧೀನ ಅಧ್ಯಾದೇಶ 2015ರ ಪ್ರಕಾರ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಹೆಚ್ಚು ಪರಿಹಾರ ಕೊಟ್ಟು ಭೂಸ್ವಾಧೀನ ಮಾಡಿಕೊಳ್ಳಲಿ.
ಇದಕ್ಕೆ ಸಂಬಂಧಪಟ್ಟ ಸಂಸ್ಥೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬದ ಓರ್ವರಿಗೆ ಉದ್ಯೋಗ ನೀಡಲಿ. ರೈತರಿಗೆ ರಸ್ತೆ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಒದಗಿಸಲಿ ಎಂದು ಪಂಜ – ಕೊಯ್ಕುಡೆಯ ರೈತರ ಒಕ್ಕೊರಲಿನ ಅಭಿಪ್ರಾಯ ಮಂಡಿಸಿದರು.
ಭೂಮಿ ಸಿರಿ ಇದ್ದ ಹಾಗೆ ಅದನ್ನು ಎಷ್ಟು ಬೇಕಾದರೂ ಅಭಿವೃದ್ಧಿ ಮಾಡುವ ಅವಕಾಶ ನಮಗೆ ಇದೆ. ಆದರೆ ಪೈಪ್ಲೈನ್ ಹಾಕಿ ಅದರ ಮರಣವನ್ನು ಕಾಣುವ ಸ್ಥಿತಿ ನಮಗೆ ಬಾರದಿರಲಿ ಎಂದು ಜನಜಾಗೃತಿ ಸಮಿತಿಯ ಸುರೇಶ್ ಶೆಟ್ಟಿ ಕುತ್ತೆತ್ತೂರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಜ ಗ್ರಾ.ಪಂ. ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಜನಪ್ರತಿನಿಧಿಗಳು ಜನರೊಂದಿಗೆ ಇದ್ದು ಅವರ ಸಮಸ್ಯೆಗೆ ಸ್ಪಂದಿಸುತ್ತಾರೆ. ಪಂಚಾಯತ್ ಅನುಮತಿ ಇಲ್ಲದೆ ಯಾವುದೇ ಕಾಮಗಾರಿಯನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಜನರ ಸಹಕಾರವೂ ಜನಪ್ರತಿನಿಧಿಗಳಿಗೆ ಬೇಕು ಎಂದು ಹೇಳಿದರು.
ಪಂಜ ಮತ್ತು ಕೊಯ್ಕುಡೆ ಗ್ರಾಮದ ಜನಜಾಗೃತಿ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ವೆಂಕಟೇಶ ಭಟ್, ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಮೈಯದ್ದಿ, ಸತೀಶ್ ಶೆಟ್ಟಿ ಪಂಜ ಬೈಲಗುತ್ತು, ಜನಜಾಗೃತಿ ಸಮಿತಿಯ ರವೀಂದ್ರ ಶೆಟ್ಟಿ ಕುತ್ತೆತ್ತೂರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.