ಬೆಳ್ತಂಗಡಿ : ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಆಚರಣೆಗೆಂದು 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಕರನ್ನು ಸ್ವಾಗತಿಸಲು ಹಾಗೂ ಅವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ವ್ಯವಸ್ಥಾಪನಾ ಸಮಿತಿ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ಕಳೆದ 37 ವರ್ಷಗಳಿಂದ ಕಾಲ್ನಡಿಗೆಯಿಂದಲೇ ದೂರದ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಭದ್ರಾವತಿ, ಕೊಡಗು, ಗಂಗಾವತಿ ಮತ್ತಿತರ ಊರುಗಳಿಂದ ಮಹಾಶಿವರಾತ್ರಿ ಪ್ರಯುಕ್ತ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಮಾರ್ಚ್ 7ರ ಮಹಾಶಿವರಾತ್ರಿ ಪ್ರಯುಕ್ತ ತಿಂಗಳಾನುಗಟ್ಟಲೆಯ ತಯಾರಿ ನಡೆಸಿಕೊಂಡು ಕಾಲ್ನಡಿಗೆಯಲ್ಲಿ ದೂರದ ಊರಿನಿಂದ ಪ್ರಯಾಣಿಸುತ್ತಾ, 6 ತಿಂಗಳ ಮೊದಲೇ ಎಲ್ಲೆಲ್ಲಿ ರಾತ್ರಿ ಮೊಕ್ಕಾಂ ಮಾಡಬೇಕು ಮುಂಜಾನೆ ಬೇಗನೆ ಹೊರಟು ಬಿಸಿಲು ಮತ್ತು ಶಾಖದ ಸಂದರ್ಭದಲ್ಲಿ ನಿಗದಿತ ಸ್ಥಳಗಳಲ್ಲಿ ವಿರಮಿಸಿ ಊಟೋಪಚಾರ ಮುಗಿಸಿಕೊಂಡು ಬಿಸಿಲಿನ ಬೇಗೆಯು ಕಡಿಮೆಯಾಗುವ ಹೊತ್ತಿಗೆ ಪುನಃ ಕಾಲ್ನಡಿಗೆ ಮುಂದುವರಿಸಿಕೊಂಡು ನಿರಂತರ ಶಿವನ ಸ್ಮರಣೆಯೊಂದಿಗೆ ಪ್ರಯಾಣ ಬೆಳೆಸುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತಲುಪುವ ಉದ್ದೇಶವನ್ನು ಹೊಂದುವ ಯೋಜನೆ ಹಾಕಿಕೊಂಡಿರುತ್ತಾರೆ.
ಈ ಬಾರಿ ಭಕ್ತರು ಮಾರ್ಚ್ 4 ರಿಂದಲೇ ಕ್ಷೇತ್ರವನ್ನು ಪ್ರವೇಶಿಸುವ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ದಾರಿಯುದ್ದಕ್ಕೂ ಶ್ರೀ ಕ್ಷೇತ್ರದ ಭಕ್ತಾಬಿಮಾನಿಗಳು ಎಂಬ ಅಭಿಮಾನ ಹಾಗೂ ಗೌರವದಿಂದ ದೇವಸ್ಥಾನ, ಭಜನಾ ಮಂದಿರಗಳ ಹಾಗೂ ಕೆಲವು ಸಂಘ ಸಂಸ್ಥೆಗಳ ಸಮಿತಿಯವರು ಅಲ್ಲಲ್ಲಿ ಪಾದಯಾತ್ರಿಗಳಿಗೆ ಉಳಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಅದರಂತೆ ಸಮಿತಿಯೂ ಕೂಡ ಪಾದಯಾತ್ರಿಗಳು ತಾಲೂಕಿನ ಗಡಿ ಭಾಗವಾದ ಚಾರ್ಮಾಡಿಗೆ ಪ್ರವೇಶ ಆದ ನಂತರ ಚಾರ್ಮಾಡಿ ಪೇಟೆಯಲ್ಲಿ ಪ್ರಥಮ ಚಿಕಿತ್ಸೆಗೆ ವೈದ್ಯರುಗಳ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸೋಮಂತಡ್ಕ, ಕೊಕ್ಕಡ ಮುಂದುವರಿದ ನಂತರ ಬೂಡುಜಾಲು ಉಜಿರೆಯಲ್ಲಿ ಎಸ್.ಡಿ.ಎಂ. ಆಸ್ಪತ್ರೆಯ ಬಳಿ ವೈದ್ಯರುಗಳ ಒದಗಣೆಗೆ ವ್ಯವಸ್ಥೆ ಮಾಡಲಾಗಿದೆ. 24 ಗಂಟೆಗಳ ಕಾಲದಲ್ಲಿ ಸುಸಜ್ಜಿತ ವ್ಯವಸ್ಥೆ ಇರುವ 2 ಸಂಚಾರಿ ಆಸ್ಪತ್ರೆಯು ಸೇವೆಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಧರ್ಮಸ್ಥಳದ ಮಹಾದ್ವಾರದ ಬಳಿ ಮಾಹಿತಿಗಾಗಿ ಪಾದಯಾತ್ರಿಗಳ ವಿಶೇಷ ಕಚೇರಿಯನ್ನು ರಚಿಸಿ ಮಾಹಿತಿ ನೀಡುವ ಹಾಗೂ ದ್ವಾರದ ಬಳಿ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿದೆ.
ಅಲ್ಲದೆ ಉಜಿರೆಯ ಶಿಕ್ಷಣ ಸಂಸ್ಥೆಗಳಲ್ಲಿ ತಂಗಲು ವ್ಯವಸ್ಥೆ ಮಾಡುವುದರೊಂದಿಗೆ ಸಂಸ್ಥೆಯ ಸಿಬ್ಬಂದಿಗಳು ಮುಂಚಿತವಾಗಿ ಸಭೆ ಸೇರಿ ವ್ಯವಸ್ಥೆಗಳ ಬಗ್ಗೆ ರೂಪುರೇಷೆಯನ್ನು ಮಾಡಿ ಯಾವುದೇ ರೀತಿಯ ಚ್ಯುತಿ ಬರದಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಶ್ರೀ ಕ್ಷೇತ್ರದ ಒಳಗಡೆಯು ಮುಂಗಡವಾಗಿ ತಿಳಿಸಿದರೆ ಪಾದಯಾತ್ರೆ ಬಳಗಕ್ಕೆ ಎಲೆಲ್ಲಿ ಮೊಕ್ಕಾಂ ಮಾಡಬೇಕು ಎಂಬುದಾಗಿ ಪತ್ರ ಮುಖೇನ ಹಾಗೂ ದೂರವಾಣಿ ಮುಖೇನ ಮಾಹಿತಿ ನೀಡಲಾಗುತ್ತದೆ. ಈ ಬಾರಿ ಕ್ಷೇತ್ರದ ಮತ್ತು ಅಲ್ಲಲ್ಲಿ ನಿಲ್ಲುವ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಯಾತ್ರಾರ್ಥಿಗಳಲ್ಲಿ ಮನವಿ ಮಾಡಲಾಗಿದೆ. ಈ ತನಕ ಬಂದ ಮಾಹಿತಿಯ ಪ್ರಕಾರ ಒಟ್ಟು 11,000 ಪಾದಾಯಾತ್ರಿಗಳು ಬರುವ ನಿರೀಕ್ಷೆಯನ್ನು ಹೊಂದಲಾಗಿದೆ ಸಮಿತಿ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.