ಕಾರ್ಕಳ: ಸ್ಥಳೀಯ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2014-15ನೇ ಆರ್ಥಿಕ ವರ್ಷದಲ್ಲಿ ಸರ್ವಾಧಿಕ 313 ಕೋಟಿ ರೂ.ವ್ಯವಹಾರ ನಡೆಸಿ 1.77 ಕೋಟಿ ನಿವ್ವಳ ಲಾಭದೊಂದಿಗೆ ನಿರಂತರ ಪ್ರಗತಿ ಸಾಧಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದ್ದಾರೆ.
69.48 ಕೋಟಿ ರೂ. ದುಡಿಮೆ ಬಂಡವಾಳ ಹೊಂದಿರುವ ಈ ಸಹಕಾರಿಯು 2.61 ಕೋಟಿ ರೂ. ಪಾಲು ಬಂಡವಾಳ, 61.87 ಕೋಟಿ ರೂ. ಠೇವಣಿಯೊಂದಿಗೆ 50.95 ಕೋಟಿ ರೂ. ಸಾಲ ವಿತರಿಸಿ, ಶೇ.೯೫ಕ್ಕೂ ಅಧಿಕ ಸಾಲ ವಸೂಲಾತಿ ಮಾಡಿ ನಿರಂತರ ಪ್ರಗತಿ ಪಥದತ್ತ ಸಾಗುತ್ತಿದೆ. ಸೊಸೈಟಿಯು ಏಳು ಶಾಖೆಗಳನ್ನು ಹೊಂದಿದ್ದು, ಈ ಪೈಕಿ 4 ಶಾಖೆಗಳಿಗೆ ಸ್ವಂತ ಕಟ್ಟಡ ಹೊಂದಿರುವುದು ಆಸ್ತಿ ಕ್ರೋಢೀಕರಣಕ್ಕೆ ಸಾಕ್ಷಿಯಾಗಿದ್ದು, ಹಿಂದಿನ ಆರ್ಥಿಕ ವರ್ಷದಲ್ಲಿ ಖರೀದಿ ಮಾಡಿದ ಬಜಗೋಳಿ ಶಾಖೆಯು ಸಂಪೂರ್ಣ ನವೀಕರಿಸಿ, ಮುಂದಿನ ಮೇ ತಿಂಗಳಿನಿಂದ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿ, ಗ್ರಾಹಕರಿಗೆ ಶೀಘ್ರ ಸೇವೆ ನೀಡಲಿದೆ.
ಆ ಮೂಲಕ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಥಮ ಹವಾನಿಯಂತ್ರಿತ ಸಹಕಾರಿ ಶಾಖೆಯಾಗಲಿದೆ. ಜೋಡುರಸ್ತೆಯಲ್ಲಿರುವ ಕೇಂದ್ರ ಕಚೇರಿ ಸಾರಸ್ವತ ಸೌಧದ ನವೀಕರಣಕ್ಕೆ ಸಿದ್ಧತೆ ನಡೆಸಿದ್ದು, ಈ ಆರ್ಥಿಕ ವರ್ಷದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಕಾರ್ಯಾಚರಿಸಲಿದೆ. ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಿ ಶೀಘ್ರ ಸೌಲಭ್ಯ ನೀಡಲು ಒತ್ತು ನೀಡಲಾಗುತ್ತಿದ್ದು, ಸಹಕಾರಿಯ ಚಟುವಟಿಕೆಗಳನ್ನು ಗ್ರಾಹಕರು/ಸದಸ್ಯರು ಸರಳವಾಗಿ ತಿಳಿಯಲು ಅವಕಾಶವಾಗುವಂತೆ ಸಂಸ್ಥೆಯ ವೆಬ್ಸೈಟ್ ಶೀಘ್ರ ಕಾರ್ಯಾರಂಭವಾಗಲಿದೆ. ಇಲಾಖಾ ಪರಿಶೋಧನೆಯಲ್ಲಿ ಕಳೆದ 15 ವರ್ಷಗಳಿಂದ ನಿರಂತರ ಎ ವರ್ಗದ ಗೌರವಕ್ಕೆ ಪಾತ್ರವಾಗಿ ಆರ್ಥಿಕ ಸ್ಥಿರತೆಯನ್ನು ಹೊಂದಿರುತ್ತದೆ. ಕಳೆದ 18 ವರ್ಷಗಳ ನಿರಂತರ ಪ್ರಗತಿ ಗುರುತಿಸಿ ಸಹಕಾರಿ ಇಲಾಖೆಯು ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ರಾಜ್ಯ ಸಹಕಾರಿ ಸಚಿವರಿಂದ ಪ್ರಶಸ್ತಿ ನೀಡಿ ಸಂಸ್ಥೆಯನ್ನು ಇಲಾಖಾ ಮಟ್ಟದಲ್ಲಿ ಗುರುತಿಸಿದೆ.
ಸಂಸ್ಥೆಯು ತನ್ನ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಿದ್ದು ಅಪಘಾತ, ಗಂಭೀರ ಅನಾರೋಗ್ಯಕ್ಕೆ ತುತ್ತಾದ ಸದಸ್ಯರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಶೈಕ್ಷಣಿಕ ಕ್ಷೇತ್ರಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದು, ಹಿಂದಿನ ವರ್ಷಗಳಂತೆ ಈ ವರ್ಷವೂ ಗ್ರಾಮಾಂತರ ಪ್ರದೇಶಗಳ ೨೨ ಶಾಲೆಗಳಿಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ೨,೩೦೦ ಶಾಲಾ ಬ್ಯಾಗ್ಗಳ ವಿತರಣೆ ನಡೆಯಲಿದೆ. ಉಡುಪಿ, ದ.ಕ. ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಸಹಕಾರಿಯು 20ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು, ಸ್ಥಾಪನಾ ವರ್ಷದ ಹೊರತು ಎಲ್ಲಾ ವರ್ಷಗಳಲ್ಲಿಯೂ ನಿರಂತರ ಲಾಭ ಗಳಿಸಿ, ಸದಸ್ಯರಿಗೆ ಡಿವಿಡೆಂಟ್ ನೀಡುತ್ತಿದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ಗರಿಷ್ಠ ಶೇ.25 ಡಿವಿಡೆಂಟ್ ನೀಡಿ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿದೆ.
ಸೊಸೈಟಿಯು 2014-15ರಲ್ಲಿ ಠೇವಣಿ ಸಂಗ್ರಹದಲ್ಲಿ ಶೇ.23 ಪಾಲುಬಂಡವಾಳದಲ್ಲಿ ಶೇ.16, ಸಾಲ ನೀಡಿಕೆಯಲ್ಲಿ ಶೇ.15, ದುಡಿಮೆ ಬಂಡವಾಳದಲ್ಲಿ ಶೇ.23, ಸಾಲ ವಸೂಲಾತಿಯಲ್ಲಿ ಶೇ.95ಕ್ಕೂ ಅಧಿಕ, ಲಾಭಗಳಿಕೆಯಲ್ಲಿ ಶೇ.19ರ ಸಾಧನೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿಯನ್ನು ದಾಖಲಿಸಿದೆ. ನಿರಂತರ ಪ್ರಗತಿಗೆ ಕಾರಣರಾದ ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ, ಸಂಸ್ಥೆಯ ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸಿ, ಮುಂದಿನ ಐದು ವರ್ಷಗಳಲ್ಲಿ ಬರಲಿರುವ ರಜತ ಮಹೋತ್ಸವದ ಪೂರ್ವಭಾವಿ ರಾಜ್ಯಮಟ್ಟದಲ್ಲಿ ಬಲಿಷ್ಟ ಸಹಕಾರಿ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.