ಬೆಳ್ತಂಗಡಿ : ಕೇಂದ್ರ ಸರಕಾರ ನೌಕರರಿಗೆ ನೀಡುತ್ತಿರುವ ವೇತನವನ್ನೇ ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು ೫ ವರ್ಷಗಳ ವೇತನ ಆಯೋಗ ಪರಿಷ್ಕರಿಸುವ ವೇತನವನ್ನು ನೀಡದೆ ರಾಜ್ಯ ಸರಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಒತ್ತಾಯಿಸಿ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ ಶುಕ್ರವಾರ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ನೀಡಿ ಒತ್ತಾಯಿಸಿದರು.
ಬೆಳ್ತಂಗಡಿ ತಾಲೂಕು ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಜಯಕೀರ್ತಿ ಜೈನ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಸ್ತ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಘಟನೆಯಾಗಿದೆ. ರಾಜ್ಯ ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರಿ ನೌಕರರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ಸಂಘದ ರಾಜ್ಯ ಮಟ್ಟದ ಸಮ್ಮೇಳನದ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟದ ಉದ್ಘಾಟನೆ ಸಂದರ್ಭ ಭರವಸೆಯನ್ನು ನೀಡಿರುವುದು ಸ್ವಾಗತರ್ಹ. ಸಂಘವು ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನುಷ್ಠಾನಗೊಳಿಸುವ ಏಕೈಕ ಬೇಡಿಕೆಯನ್ನು ಸರ್ಕಾರಕ್ಕೆ ಕಳೆದ ಸಾಲಿನ ಆಯವ್ಯಯ ಮಂಡನೆ ಪೂರ್ವದಲ್ಲಿ ಮಂಡಿಸಲಾಗಿತ್ತು.
ಕಳೆದ ಸಾಲಿನ ಆಯವ್ಯಯ ಮಂಡನೆ ಪೂರ್ವದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನಿಯೋಗಕ್ಕೆ ನೀಡಿರುವ ಸ್ಪಷ್ಟ ಭರವಸೆಯಂತೆ ಈ ಹಿಂದಿನ ವ್ಯತ್ಯಾಸ ಹಾಗೂ ಪ್ರಸ್ತುತ ಕೇಂದ್ರ ಸರಕಾರದ ೭ನೇ ವೇತನ ಆಯೋಗವು ನೀಡಿರುವ ಶಿಫಾರಸ್ಸುಗಳನ್ವಯ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲಿರುವ ವೇತನ ಹಾಗೂ ಭತ್ಯೆಗಳ ಹೆಚ್ಚಳವನ್ನು ಅವಲೋಕಿಸಿ, ರಾಜ್ಯ ಸರ್ಕಾರಿ ನೌಕರರಿಗೂ ಸರಿ ಸಮಾನವಾದ ವೇತನ ಹಾಗೂ ಭತ್ಯೆಗಳನ್ನು ೨೦೧೬-೧೭ನೇ ಸಾಲಿ ಆಯವ್ಯಯದಲ್ಲಿ ಘೋಷಿಸಬೇಕು ಎಂದರು.
ಬೆಳ್ತಂಗಡಿ ತಾಲೂಕು ಕಛೇರಿಯ ಮುಂಭಾಗದಲ್ಲಿ ತಾಲೂಕಿನ ಸರ್ಕಾರಿ ನೌಕರರು ತಮ್ಮ ಬೇಡಿಕೆಯನ್ನು ಮನವಿಯನ್ನು ತಹಶೀಲ್ದಾರ್ ಪ್ರಸನ್ನ ಮೂರ್ತಿ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರೀಷತ್ ಸದಸ್ಯ ಧರಣೇಂದ್ರ ಕೆ., ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಕೊಕ್ರಾಡಿ, ಸಂಘದ ಸಂಚಾಲಕ ಸುಭಾಶ್ಚಂದ್ರ, ಉಪಾಧ್ಯಕ್ಷ ಡಿ. ಆನಂದ್, ಕಾರ್ಯದರ್ಶಿ ಪ್ರಕಾಶ್, ಕೋಶಾಧಿಕಾರಿ ಸಿದ್ದೇಶ್ ಮತ್ತು ಎಲ್ಲಾ ಪದಾಧಿಕಾರಿಗಳು, ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು, ಸದಸ್ಯರುಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.