ಕಡಲ ತಡಿಯಲ್ಲೀಗ ಅಕ್ರಮ ಮರಳುಗಾರಿಕೆಯಾದ್ದೇ ಸದ್ದು. ಮಂಗಳೂರಿನ ಮರಳು ಇದೀಗ ರಾಜಾರೋಷವಾಗಿ ಹೊರ ರಾಜ್ಯಗಳಿಗೆ ಸಾಗಾಟವಾಗುತ್ತಿದೆ. ಅದರಲ್ಲೂ ಚಾರ್ಮಾಡಿ ಘಾಟಿಯಲ್ಲಿ ಘನವಾಹನ ಸಂಚಾರ ನಿಷೇಧಿಸಿದರೂ ಮರಳು ತುಂಬಿದ ಘನವಾಹನಗಳು ಎಗ್ಗಿಲ್ಲದೇ ಸಂಚರಿಸುತ್ತಿರುವುದು ಅಪಾಯವನ್ನು ತಂದೊಡ್ಡುತ್ತಿವೆ. ಅದರ್ರೆ ಇದನ್ನು ತಡೆಯಬೇಕಾಗಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿವೆ. ಕಾಯೋ ಪೊಲೀಸರು ಚೆಕ್ ಪೋಸ್ಟ್ನಲ್ಲೇ ನಿದ್ದೆಗೆ ಜಾರಿದ್ದಾರೆ.
ಶಿರಾಡಿ ಘಾಟಿ ಹಾಗೂ ಆಗುಂಬೆ ಘಾಟಿ ದುರಸ್ಥಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸುವ ಚಾರ್ಮಾಡಿಯಲ್ಲೀಗ ವಾಹನ ಸಂಚಾರ ದುಪ್ಪಟ್ಟಾಗಿದೆ. ಹೀಗಾಗಿಯೇ ಜಿಲ್ಲಾಡಳಿತ ಚಾರ್ಮಾಡಿ ಘಾಟಿಯಲ್ಲಿ ಘನವಾಹನ ಸಂಚಾರಕ್ಕೆ ನಿಷೇಧವನ್ನು ಹೇರಿದೆ. ಆದರೆ ಮಂಗಳೂರಿನಿಂದ ಹೊರ ರಾಜ್ಯಕ್ಕೆ ಸಾಗಾಟವಾಗುತ್ತಿರುವ ಮರಳು ಲಾರಿಗಳು ಚಾರ್ಮಾಡಿ ಘಾಟಿಯನ್ನು ಆಶ್ರಯಿಸಿರುವುದರಿಂದಾಗಿ ಚಾರ್ಮಾಡಿ ಘಾಟಿ ಕುಸಿಯುವ ಭೀತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೇತ್ರಾವತಿ, ಕುಮಾರಧಾರ ನದಿಗಳಲ್ಲೀಗ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲೂ ಜಿಲ್ಲೆಯ ನದಿಗಳಲ್ಲಿ ಜೆಸಿಬಿ ಸೇರಿದಂತೆ ವಿವಿಧ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ.
ಮಾತ್ರವಲ್ಲದೇ ಹೀಗೆ ತೆಗೆದ ಮರಳನ್ನು ಕೇರಳ ರಾಜ್ಯ ಸೇರಿದಂತೆ ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಅದರಲ್ಲೂ ಬೆಂಗಳೂರು, ಮೈಸೂರು ಹಾಗೂ ಹಾಸನಕ್ಕೆ ಸಾಗಾಟ ಮಾಡುವ ಮರಳು ಲಾರಿಗಳು ಚಾರ್ಮಾಡಿ ಮೂಲಕ ಹಾದು ಹೋಗುತ್ತಿದೆ. ಹಗಲು ರಾತ್ರಿಯೆನ್ನದೇ ಸಾವಿರಾರು ಮರಳು ತುಂಬಿದ ಲಾರಿಗಳು ಘಾಟಿಯಲ್ಲಿ ಸಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಅಲ್ಲದೇ ಲಾರಿಗಳಿಗೆ ಅಧಿಕ ಭಾರದ ಮರಳನ್ನು ತುಂಬಿದ ಲಾರಿಗಳು ಚಾರ್ಮಾಡಿ ಘಾಟಿಯಲ್ಲಿ ಸಾಗುತ್ತಿರುವುದರಿಂದಾಗಿ ಘಾಟಿ ಅಪಾಯನ್ನು ಆಹ್ವಾನಿಸುತ್ತಿದೆ.
ಅಕ್ರಮ ಮರಳುಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಚಾರ್ಮಾಡಿ ಘಾಟಿಯ ಬಳಿಯಲ್ಲಿಯೇ ಪೊಲೀಸ್ ಚೆಕ್ ಪೋಸ್ಟ್ ತೆರೆಯಲಾಗಿದೆ. ಆದರೆ ಚೆಕ್ ಪೋಸ್ಟ್ನಲ್ಲಿ ಯಾವುದೇ ಲಾರಿಗಳನ್ನು ತಪಾಸಣೆಗೆ ಒಳಪಡಿಸುತ್ತಿಲ್ಲ. ಇನ್ನು ಚೆಕ್ ಪೋಸ್ಟ್ನಲ್ಲಿರುವ ಪೊಲೀಸರು ಲಾರಿಗಳನ್ನು ತಡೆಯುವ ಬದಲು ಗಾಢ ನಿದ್ದೆಗೆ ಜಾರುತ್ತಿದ್ದಾರೆ. ಅಲ್ಲದೇ ಜಿಲ್ಲೆಯ ಪ್ರತೀ ಪೊಲೀಸ್ ಠಾಣೆಗೂ ಮರಳು ಲಾರಿಗಳಿಂದ ಮಾಮೂಲಿ ಸಂದಾಯವಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮರಳಿನ ಅಭಾವವಿರುವುದರಿಂದ ಸರಕಾರವೇ ಮಂಗಳೂರಿನಿಂದ ನಿತ್ಯವೂ ನೂರಾರು ಲೋಡ್ ಮರಳನ್ನು ಬೆಂಗಳೂರಿಗೆ ಸಾಗಾಟ ಮಾಡುವಂತೆ ಆದೇಶಿಸಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸುಮಾರು 108 ಮಂದಿಗೆ ಹೊಸದಾಗಿ ಮರಳು ತೆಗೆಯೋದಕ್ಕೆ ಅನುಮತಿಯನ್ನು ನೀಡಿದೆ. ಆದರೆ ಇದರ ಲಾಭ ಪಡೆದ ಮರಳು ಮಾಫಿಯಾದ ದೊರೆಗಳು ಜೆಸಿಬಿ ಹಾಗೂ ಯಂತ್ರಗಳನ್ನು ಬಳಸಿ ಅಗತ್ಯಕ್ಕಿಂತಲೂ ಹೆಚ್ಚಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದರೆ ಅಸಹಾಯಕತೆಯನ್ನು ತೋರಿಸುತ್ತಾ ಎಲ್ಲದಕ್ಕೂ ಸರಕಾರವೇ ಕಾರಣ ಅಂತಾ ಬೊಟ್ಟು ತೋರಿಸುತ್ತಿದ್ದಾರೆ. ಅಲ್ಲದೇ 10 ಚಕ್ರದ ಲಾರಿಗಳಲ್ಲಿ ಮರಳು ಸಾಗಾಟ ಮಾಡುತ್ತಿರೋದಕ್ಕೆ ನಿಷೇಧ ಹೇರುತ್ತೇವೆ ಅಂತಿದ್ದಾರೆ.
ಸರಕಾರದ ಆದೇಶ ಇದೀಗ ಮಂಗಳೂರಿನ ಮರಳು ಮಾಫಿಯಾ ದೊರೆಗಳಿಗೆ ಲಾಭದಾಯಕವಾಗಿ ಪರಿಣಮಿಸುತ್ತಿದೆ. ಮಾತ್ರವಲ್ಲ ಬೆಂಗಳೂರಿಗೆ ಮರಳು ಪೂರೈಕೆ ಮಾಡುವ ಸಲುವಾಗಿ ಒಂದೆಡೆ ಜಿಲ್ಲೆಯ ಜೀವ ನದಿಗಳ ಒಡಲು ಬರಿದಾಗುತ್ತಿದ್ದರೆ, ಇನ್ನೊಂದೆಡೆ ಚಾರ್ಮಾಡಿ ಘಾಟಿ ಅಪಾಯದಂಚಿಗೆ ಸರಿದಿದೆ. ಇನ್ನಾದರೂ ಸರಕಾರ ಎಚ್ಚೆತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ನಿಯಂತ್ರಣ ಹೇರಬೇಕಾದ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.