ಉಡುಪಿ : ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ವಿಮಾನ ದುರಂತದಲ್ಲಿ ಮೃತಪಟ್ಟರು ಎನ್ನಲಾದ 1945ರ ಆಗಸ್ಟ್ 18ರಂದು ತೈವಾನ್ನಲ್ಲಿ ವಿಮಾನ ಸಂಚರಿಸಲೇ ಇಲ್ಲ. ಅದಕ್ಕೂ ಹಿಂದೆ ಒಂದು ವಾರದಿಂದ ವಿಮಾನ ಸಂಚಾರವಿರಲಿಲ್ಲ ಎಂಬುದನ್ನು 1999ರಲ್ಲಿ ತನಿಖೆ ನಡೆಸಿದ ನ್ಯಾ| ಮುಖರ್ಜಿ ಆಯೋಗ ತಿಳಿಸಿದೆ ಎಂದು ಬೋಸ್ ಮೊಮ್ಮಗ ಚಂದ್ರಕುಮಾರ್ ಬೋಸ್ ಹೇಳಿದರು.
ಯುವ ಬ್ರಿಗೇಡ್ ಶನಿವಾರ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ “ಪ್ರೇಮಿಗಳ ದಿನ’ ಬದಲು “ದೇಶಪ್ರೇಮಿಗಳ ದಿನ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೇತಾಜಿ ಕಣ್ಮರೆ ಕುರಿತು ಸ್ವಾತಂತ್ರ್ಯ ಸಿಕ್ಕಿದ ದಿನದಿಂದ ಇದುವರೆಗೆ ಇದ್ದ ಕಾಂಗ್ರೆಸ್ ಸರಕಾರ ಸತ್ಯವನ್ನು ತಿರುಚಿದೆ. ಸಂವಿಧಾನ “ಸತ್ಯಮೇವ ಜಯತೆ’ ಎಂದು ಹೇಳಿದ್ದರೂ ಸತ್ಯವನ್ನು ಹತ್ತಿಕ್ಕಲಾಯಿತು. 1857ರಲ್ಲಿ ಸಿಪಾಯಿ ದಂಗೆಯಾದಂದಿನಿಂದ ಮಂಗಲ್ಪಾಂಡೆ, ಭಗತ್ ಸಿಂಗ್, ಕುದಿರಾಂ ಬೋಸ್ರಂತಹ ಅಸಂಖ್ಯ ಜನರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿತು. ಆದರೆ ಇದಾವುದನ್ನೂ ವೈಭವೀಕ ರಿಸಲಿಲ್ಲ ಎಂದು ಆರೋಪಿಸಿದರು.
ನೇತಾಜಿ ಸಾವಿನ ಕುರಿತು ಮೊದಲು ನಿಯುಕ್ತಿಗೊಂಡದ್ದು ಶಾನ್ವಾಜ್ ಖಾನ್ ಆಯೋಗ. ಇವರು ಕೇವಲ 15 ತಿಂಗಳು ಐಎನ್ಎಯಲ್ಲಿದ್ದರು. ಅನಂತರ ನೆಹರೂ ಸರಕಾರದಲ್ಲಿ ಸಚಿವರಾಗಿದ್ದರು. ಈ ಸಮಿತಿಯಲ್ಲಿದ್ದ ಸದಸ್ಯ ಬೋಸ್ ಸೋದರ ಸುರೇಶಚಂದ್ರ ಬೋಸ್ ಆಯೋಗದ ವರದಿಯನ್ನು ಒಪ್ಪಿರಲಿಲ್ಲ ಎಂದರು.
ತೈವಾನ್ಗೆ ಹೋಗದ ಶಾನ್ವಾಜ್ : ಶಾನ್ವಾಜ್ ತೈವಾನ್ಗೆ ಭೇಟಿ ನೀಡಲಿಲ್ಲ. ಎರಡನೆಯ ಆಯೋಗದ ಮುಖ್ಯಸ್ಥರಾಗಿದ್ದ ಕೋಸ್ಲ ತೈವಾನ್ಗೆ ಹೋದರೂ ಸ್ಥಳಕ್ಕೆ ಹೋಗದೆ ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. 1999ರಲ್ಲಿ ಎನ್ಡಿಎ ಸರಕಾರ ನೇಮಿಸಿದ ಮುಖರ್ಜಿಯವರು ಭೇಟಿ ನೀಡಿದರು. ಆಗಲೂ ಮುಖರ್ಜಿಯವರಿಗೆ ಪೂರ್ಣ ಬೆಂಬಲ ಸಿಕ್ಕಿರಲಿಲ್ಲ. ಆಗಲೇ ವಿಮಾನ ನಿಲ್ದಾಣದಲ್ಲಿ ಆ ಸಮಯ ವಿಮಾನ ಹಾರಾಡದ ವಿಷಯ ಬೆಳಕಿಗೆ ಬಂತು. ಶ್ಮಶಾನಕ್ಕೆ ಭೇಟಿ ಕೊಟ್ಟಾಗ ಅದು ಇಚಿರೋ ಒಕುರಾ ಅವರದ್ದು ಎಂದು ತಿಳಿಯಿತು. ಇವರು ಜಪಾನ್ ಸೈನಿಕ. ಹೃದಯಾಘಾತದಿಂದ ಸತ್ತದ್ದಾಗಿತ್ತು. ಇದರ ಕುರಿತು ತೈವಾನ್ ಸರಕಾರ ಕೊಟ್ಟ ಪತ್ರವೂ ಇದೆ. ಸಂಸತ್ತಿನಲ್ಲಿ 2005ರಲ್ಲಿ ಸುಬ್ರತೋ ಬೋಸ್ ಅವರು ಈ ವರದಿ ಕುರಿತು ಚರ್ಚೆ ಆರಂಭಿಸಲು ಒತ್ತಾಯಿಸಿದಾಗ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ತಿರಸ್ಕರಿಸಿದರು. ಈಗ ಎನ್ಡಿಎ ಸರಕಾರ ಚರ್ಚೆಗೆ ಒಪ್ಪಿದೆ ಎಂದರು.
ಬ್ರಿಟಿಷರು ಹೋದರೇಕೆ? : 1956ರಲ್ಲಿ ಕ್ಲೆಮೆಂಟ್ ಆಟಿಯವರು ಕೋಲ್ಕತಾಕ್ಕೆ ಬಂದಾಗ ಆಗಿನ ರಾಜ್ಯಪಾಲ ನ್ಯಾ| ಫಣಿಭೂಷಣ ಚಕ್ರವರ್ತಿಯವರು “ನೀವು ಏಕೆ ಭಾರತ ಬಿಟ್ಟಿರಿ?’ ಎಂದು ಪ್ರಶ್ನಿಸಿದಾಗ “ಬೋಸ್ ಅವರ ಐಎನ್ಎ ಸೈನಿಕರ ವಿಚಾರಣೆ (1945) ಸಂದರ್ಭ ಜನಮಾನಸ ಐಎನ್ಎ ಸೈನಿಕರ ಪರವಾಗಿತ್ತು. ಇದುವೇ ಮುಖ್ಯ ಕಾರಣ’ ಎಂದರು. ಕೊನೆಯ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಕೂಡ ಬ್ರಿಟಿಷ್ ಸರಕಾರದ ಭಾರತೀಯ ಸೈನಿಕ ಮುಖ್ಯಸ್ಥರು ದಂಗೆ ಏಳುವ ಸಂಭವವಿತ್ತು ಎಂದು 1976ರಲ್ಲಿ ಹೇಳಿದ್ದರು ಎಂದರು.
ಪ್ರತಿ ತಿಂಗಳೂ ಕಡತ ಬಹಿರಂಗ : ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮ ಕುಟುಂಬದ ಪ್ರಶ್ನೆಯಲ್ಲ. ರಾಷ್ಟ್ರದ ಪ್ರಶ್ನೆ. ಇದೇ ಜನವರಿ 23ರಂದು ಕೇಂದ್ರ ಸರಕಾರ ಬೋಸ್ ಕಣ್ಮರೆ ಕುರಿತ ಕಡತಗಳನ್ನು ಬಹಿರಂಗಪಡಿಸಲು ಆರಂಭಿಸಿದೆ. ಸುಮಾರು 1,000 ಕಡತಗಳಿವೆ. ಪ್ರತಿ ತಿಂಗಳು 25 ಕಡತಗಳಂತೆ ಬಹಿರಂಗಪಡಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ ಎಂದರು.
ಮಮತಾ ಕಡತ : 2012 ಡಿಸೆಂಬರ್ನಲ್ಲಿ ಓಪನ್ ಫ್ಲಾಟ್ಫಾರಂ ಫಾರ್ ನೇತಾಜಿ ಸಂಘಟನೆ ಮೂಲಕ ಪಶ್ಚಿಮ ಬಂಗಾಳ ಸರಕಾರದಲ್ಲಿದ್ದ 64 ಕಡತಗಳನ್ನು ಬಹಿರಂಗಪಡಿಸಲು ಮನವಿ ಮಾಡಿದ್ದೇವು. ಗುಜರಾತ್ ಸಿಎಂ ಆಗಿದ್ದ ಮೋದಿ, ಒಡಿಶಾದ ಸಿಎಂ ನವೀನ್ ಪಟ್ನಾಯಾಕ್ ಅವರಿಗೂ ಮನವಿ ಮಾಡಿದ್ದೆವು. ಬ್ಯಾನರ್ಜಿ ರಾಜ್ಯ ಸರಕಾರದ ವಶದಲ್ಲಿದ್ದ ಕಡತಗಳನ್ನು ಬಹಿ ರಂಗಪಡಿಸಲು ಸಹಕರಿಸಿದರು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.