ಬೆಳ್ತಂಗಡಿ: 20 ವರ್ಷಗಳಿಂದ ದುರಸ್ತಿಯಾಗದೇ ನೆನೆಗುದಿಗೆ ಬಿದ್ದಿರುವ ಮುಂಡಾಜೆ-ಕಲ್ಮಂಜ-ಸತ್ಯನಪಲ್ಕೆ-ಧರ್ಮಸ್ಥಳ ಸಂಪರ್ಕಿಸುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಭಾನುವಾರ ಸಮಾನ ಮನಸ್ಕರ ವೇದಿಕೆಯಡಿ ಈ ಪ್ರದೇಶದ ನೂರಾರು ಸಂಖ್ಯೆಯಲ್ಲಿ ಜನ ರಸ್ತೆಗಾಗಿ ಹಕ್ಕೊತ್ತಾಯ ಕಾಲ್ನಡಿಗೆ ಜಾಥ ನಡೆಸಿ, ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿದರು.
ಕಳೆದ 20 ವರ್ಷಗಳಿಂದ ಎಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಸ್ಥಳಿಯವಾಗಿ ಆಯ್ಕೆಗೊಂಡ ಜಿ. ಪಂ., ತಾ. ಪಂ., ಹಾಗೂ ಗ್ರಾ. ಪಂಚಾಯತ್ ಸದಸ್ಯರಿಗೆ ಮನವಿ ನೀಡಿದ್ದೇವೆ. ಆದರೆ ಇದುವರೆಗೆ ಭರವಸೆಗಳಾಗಿಯೇ ಉಳಿದಿದೆ ಹೊರತು ನಮ್ಮ ರಸ್ತೆ ಅಭಿವೃದ್ಧಿಗೊಂಡಿಲ್ಲ ಎಂದು ಪ್ರತಿಭಟನಾಗಾರರು ಆರೋಪಿಸಿದರು. ಇದು ಯಾವುದೇ ಪಕ್ಷಗಳ ವಿರುದ್ಧ ಹೋರಾಟ ಅಲ್ಲ. ಅವರಿಗೆ ನಮ್ಮ ಸಹಕಾರವಿದೆ. ರಸ್ತೆ ಅಭಿವೃದ್ಧಿಯಾಗುವವರೆಗೆ ಮತದಾನ ಮಾಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಮಾಹಿತಿ ಪಡೆದ ಶಾಸಕ ಕೆ. ವಸಂತ ಬಂಗೇರ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಪ್ರತಿಭಟನಾಕಾರರ ಒಂದು ಗುಂಪು ಶಾಸಕರ ಮಾತನ್ನು ಕೇಳಲು ಮನವಿ ಮಾಡುತ್ತಿದ್ದರೆ ಇನ್ನೊಂದು ಗುಂಪು ಭರವಸೆ ಅಗತ್ಯವಿಲ್ಲ. ರಸ್ತೆ ಅಭಿವೃದ್ಧಿಯಾಗಬೇಕು ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಂಗೇರ ಅವರು, ಈ ಭಾಗದ ಜನರು ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದು ಬಂದಿದ್ದೇನೆ. ಇಲ್ಲಿಯವರೆಗೆ ಈ ರಸ್ತೆ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದು ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಚುನಾವಣೆ ಬಹಿಷ್ಕರಿಸದೆ ಮತದಾನದಲ್ಲಿ ಭಾಗವಹಿಸುವಂತೆ ಮತದಾರರನ್ನು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.