ಬೆಳ್ತಂಗಡಿ : ಜನಪ್ರತಿನಿಧಿಗಳು ಅಭಿವೃದ್ದಿಯ ಭರವಸೆ ನೀಡಿ ಮತ್ತೆ ಅದರ ಬಗ್ಗೆ ಮರೆಗುಳಿತನ ಪ್ರದರ್ಶಿಸುವ ಸಂದರ್ಭಗಳು ಮಾಮೂಲಾಗಿಬಿಟ್ಟಿವೆ. ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ಎಷ್ಟೇ ಬಾರಿ ಬಂದರೂ ಅಧಿಕಾರಿಗಳ, ಜನಪ್ರತಿನಿಧಿಗಳ ದಪ್ಪಚರ್ಮಕ್ಕೆ ತಾಕುವುದೇ ಇಲ್ಲ. ಅದಕ್ಕೊಂದು ನಿದರ್ಶನ ತಾಲೂಕಿನ ಸವಣಾಲಿನಲ್ಲಿ ಕಾಣಸಿಕ್ಕಿದೆ.
ತಾಲೂಕಿನ ಸವಣಾಲು ಗ್ರಾಮದ ಇತ್ತಿಲ, ಪೇಲ ಪ್ರದೇಶಗಳಲ್ಲಿ ಕುದುರೇ ಮುಖ್ಯರಾಷ್ಟ್ರೀಯ ಉದ್ಯಾನವನದ ಒಳಗೆ ಕಳೆದ ಮೂರು ತಲೆಮಾರುಗಳಿಂದ ವಾಸಿಸುತ್ತಿರುವ 10 ಮಲೆಕುಡಿಯ ಕುಟುಂಬಗಳು ಕಂದಾಯ ಭೂಮಿಯಲ್ಲಿ ಕೃಷಿ ಮಾಡಿ ಬದುಕನ್ನು ನಡೆಸುತ್ತಿವೆ. ಆದರೆ ಸುತ್ತಅರಣ್ಯದ ನಡುವೆ ಇವರ ವಾಸಸ್ಥಳವಿದ್ದು ಅರಣ್ಯ ಕಾಯ್ದೆಯಿಂದಾಗಿ ರಸ್ತೆ, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಿಂದ ಇವರು ಸದಾ ವಂಚಿತರಾಗುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸದಾ ಭರವಸೆ ನೀಡುತ್ತಾರೆ. ಆದರೆ ಯಾರೂ ಮತ್ತೆ ಇತ್ತತಲೆ ಹಾಕಿ ಜನರ ಸಮಸ್ಯೆಗಳಿಗೆ ಪರಿಹಾರಕಾಣಲು ಮುಂದಾಗುತ್ತಿಲ್ಲ ಅಭಿವೃದ್ದಿಯೆಂಬುದು ಇಲ್ಲಿನ ಜನರ ಪಾಲಿಗೆ ಸದಾ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.
ಸ್ವಾತಂತ್ರ್ಯಪೂರ್ವಕಾಲದಲ್ಲೇ ದಟ್ಟಕಾಡಿನ ನಡುವೆ ಈ ಕುಟುಂಬಗಳು ವಾಸಿಸುತ್ತಿದ್ದರು. ಯಾವುದೇ ಮೂಲ ಸೌಲಭ್ಯಗಳಿಲ್ಲದೆ, ಕಾಡು ಪ್ರಾಣಿಗಳ ಭಯ ಸಾಂಕ್ರಮಿಕ ರೋಗಗಳ ಭಯದಲ್ಲಿಯೂ ನೆಮ್ಮದಿಯ ಬದುಕು ನಡೆಸುತ್ತಿದ್ದ ಈ ಜನರಿಗೆ ಸ್ವಾತಂತ್ರ ದೊರೆತು ಆರು ದಶಕಗಳು ಕಳೆದರೂ ಇನ್ನೂ ಆ ಬದುಕಿನಿಂದ ಮುಕ್ತಿ ದೊರೆತಿಲ್ಲ ಎಂಬುದು ವಿಶೇಷ. ತಾಲೂಕು ಕೇಂದ್ರವಾದ ಬೆಳ್ತಂಗಡಿಯಿಂದ 7 ಕಿ.ಮೀ. ದೂರವಿರುವ ಸವಣಾಲುವಿನಿಂದ 7. ಕಿ.ಮೀ. ಅಂತರದಲ್ಲಿ ದಟ್ಟ ಕಾಡುಗಳ ಮದ್ಯೆ ಇತ್ತಿಲ ಪೇಲ ಪ್ರದೇಶವಿದೆ. ಸುಮಾರು 4 ಕಿಲೋಮೀಟರ್ರಸ್ತೆ ಕಾಡಿನ ನಡುವಿನಲ್ಲಿ ಹಾದುಹೋಗುತ್ತಿದ್ದು ಇಲ್ಲಿಗೆ ನಡೆದುಕೊಂಡೇ ಹೋಗಬೇಕಾಗಿದೆ.
ಅರಣ್ಯದ ನಡುವೆ ಜೀವನ ನಡೆಸುತ್ತಿರುವ ಈ ಜನರು ತಮ್ಮ ಅಗತ್ಯಕ್ಕಾಗಿ ಮರಗಿಡಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿದ್ದಾರೆ. ಇದು ಕಾಲ್ನಡಿಗೆಗೆ ಮಾತ್ರ ಸೀಮಿತವಾಗಿತ್ತು. ರಾಷ್ಟ್ರೀಯ ಉದ್ಯಾನವನ ಘೋಷಣೆಯಾಗುವುದಕ್ಕಿಂತ ಮೊದಲು ಜನರು ಇಲ್ಲಿ ಜೀಪು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಯೋಗ್ಯವಾದಂತಹ ರಸ್ತೆಯನ್ನು ನಿರ್ಮಿಸಿದ್ದರು. ಆದರೆ ಅದರ ಸರಿಯಾದ ದುರಸ್ತಿಗೂ ಇದೀಗ ಅವಕಾಶ ನೀಡಲಾಗುತ್ತಿಲ್ಲ. ಆದರೂ ಆಧುನಿಕವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಕೆಲವು ಕುಟುಂಬದ ಸದಸ್ಯರು ದ್ವೀಚಕ್ರ ವಾಹನಗಳನ್ನು ಖರೀಸಿದ್ದು ಇದು ಹೋಗುವಂತೆ ಇಲ್ಲಿನ ಜನರು ಸೇರಿ ಸ್ವತಃ ಶ್ರಮದಾನ ಮಾಡುವ ಮೂಲಕ ಕಲ್ಲು ಬಂಡೆಗಳ ಮದ್ಯೆ ಮಣ್ಣುತುಂಬಿಸಿ ರಸ್ತೆ ಮಾಡುತ್ತಿದ್ದಾರೆ. ಆದರೆ ಇದು ಕೇವಲ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತ, ಮಳೆಗಾಲ ಬರುವ ಮುನ್ಸೂಚನೆ ಬರುವಾಗ ತಮ್ಮ ದ್ವೀಚಕ್ರವಾಹನಗಳನ್ನು ಸಮೀಪದ ಸವಣಾಲು ಎಂಬಲ್ಲಿ ತಮ್ಮ ಪರಿಚಯಸ್ಥರ ಮನೆಯಲ್ಲಿಇಡುವ ಪರಿಸ್ಥಿತಿ ಇವರದ್ದಾಗಿದೆ.
ಈ ರಸ್ತೆ ಮಧ್ಯದಲ್ಲಿ ದೊಡ್ಡತೊರೆಯೊಂದು ಹರಿಯುತ್ತಿದ್ದು ಮಳೆಗಾಲದಲ್ಲಿ ಇದನ್ನು ದಾಟುವುದು ಅಸಾಧ್ಯದ ವಿಚಾರ. ಮಳೆಗಾಲದ ಆರು ತಿಂಗಳು ಇವರಿಗೆ ಕಾಲ್ನಡಿಗೆಯೇಗತಿಯಾಗಿದೆ. ಇಲ್ಲಿ ತಾತ್ಕಾಲಿಕವಾಗಿ ಮರದ ಸೇತುವೆಯನ್ನು ಜನರೇ ನಿರ್ಮಿಸಿದ್ದು ಅದೇ ಜನರಿಗೆ ಆಧಾರವಾಗಿದೆ. ಯಾವುದೇ ರೀತಿಯ ಅನಾರೋಗ್ಯ ಎದುರಾದರೂ ರೋಗಿಗಳನ್ನು ಹೊತ್ತುಕೊಂಡೇ ಬರಬೇಕಾದ ಸ್ಥಿತಿ ಇವರದ್ದಾಗಿದೆ. ಇಲ್ಲಿಗೆ ಶಾಶ್ವತ ಸೇತುವೆ ನಿರ್ಮಿಸಿ ಎಂದು ಕಳೆದ ೩೦ ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡುತ್ತಾ ಬಂದಿದ್ದಾರೆ. ಆದರೆ ಈ ಬೇಡಿಕೆ ಇನ್ನು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಸೇತುವೆಗೆ ಯಾರಾದರೂ ಅನುದಾನ ಒದಗಿಸಿದರೂ ಅದಕ್ಕೆ ಅರಣ್ಯಇಲಾಖೆಯ ಅನುಮತಿ ಸಿಗುವುದಂತೂ ದೂರದ ವಿಚಾರ.
ನಕ್ಸಲ್ ಪ್ರಭಾವಿತ ಪ್ರದೇಶ ಎಂದು ಘೋಷಿಸಿದರೂ ಇದೂವರೆಗೆ ಸೋಲಾರ್ ಲೈಟ್ ಮಾತ್ರ ನೀಡಿದ್ದಾರೆಯೇ ಹೊರತು ಇನ್ನಿತರಯಾವುದೇ ಸೌಲಭ್ಯವನ್ನು ನೀಡಲು ಅಧಿಕಾರಿಗಳು ಮುಂದೆ ಬಂದಿಲ್ಲ. ನಕ್ಸಲ್ ಪ್ರಭಾವಿತ ಪ್ರದೇಶದ ಅಭಿವೃದ್ದಿಗೆಂದು ಬರುವ ಅನುದಾನದಲ್ಲಿ ಅರಣ್ಯದ ಹೊರಗೆ ಕಾಮಗಾರಿಗಳು ನಡೆಯುತ್ತಿದೆಯೇ ಹೊರತು ಮೂಲನಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಿಗೆ ಅಭಿವೃದ್ದಿಯ ಚಟುವಟಿಕೆಗಳು ಇನ್ನೂ ತಲುಪಿಲ್ಲ. ಕಾಡಿನ ನಡುವಿನ ಇವರ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು, ಇರುವ ರಸ್ತೆಯನ್ನು ಒಂದಿಷ್ಟು ದುರಸ್ತಿ ಪಡಿಸುವುದು, ಹಾಗೂ ತೊರೆಗೆ ಅಡ್ಡಲಾಗಿ ಒಂದು ಸೇತುವೆ ಇಲ್ಲಿನ ಜನರ ಮುಖ್ಯ ಬೇಡಿಕೆಗಳಾಗಿವೆ. ಈ ಬೇಡಿಕೆಗಳ ಈಡೇರಿಸುವಿಕೆಗೆ ಯಾವುದೇ ಹೆಚ್ಚಿನ ಅರಣ್ಯ ನಾಶದ ಅಗತ್ಯವಿಲ್ಲ ಈಗ ಇರುವ ಸೌಲಭ್ಯಗಳಲ್ಲಿಯೇ ಇದನ್ನು ಮಾಡಬಹುದಾಗಿದೆ.ಅರಣ್ಯಕಾಯ್ದೆಯಲ್ಲಿಯೂ ಇದಕ್ಕೆ ಅವಕಾಶವಿದೆ. ಆದರೆ ಅಧಿಕಾರಿಗಳು ಮಾತ್ರಇದರತ್ತ ಗಮನವನ್ನೇ ಹರಿಸುತ್ತಿಲ್ಲ. ರಾಜೀವಗಾಂಧಿ ವಿದ್ಯುದೀಕರಣ ಯೋಜನೆಯಲ್ಲಿ ಇಲ್ಲಿಗೆ ಮಂಜೂರಾಗಿದ್ದ ವಿದ್ಯುತ್ ಸಂಪರ್ಕ ಯೋಜನೆಯೂ ಅರಣ್ಯಇಲಾಖೆಯ ವಿರೋಧದಿಂದಾಗಿ ರದ್ದಾಗಿದೆ.
ತೀವ್ರ ಅನಾರೋಗ್ಯಕ್ಕೋಳಗಾದರೆ ಸಾವೇ ಗತಿ : ಇಲ್ಲಿನ ಕುಟುಂಬಗಳಿಗೆ ಸಣ್ಣಪುಟ್ಟ ಖಾಯಿಲೆ ಬಂದರೆ ಸಮೀಪದ ಬೆಳ್ತಂಗಡಿ ಕೇಂದ್ರ ಪ್ರದೇಶಕ್ಕೆ ಬಂದು ಚಿಕಿತ್ಸೆ ಪಡೆಯಬಹುದು. ಆದರೆ ಮಳೆಗಾಲದಲ್ಲಿ ರಾತ್ರಿಹೊತ್ತು ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಸಾವೇ ಗತಿ. ಹಿಂದೆ ಇದೇ ಪರಿಸರದ ವ್ಯಕ್ತಿಯೊಬ್ಬರಿಗೆ ರಾತ್ರಿ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಹೆಗಲಿನಲ್ಲಿ ಹೊತ್ತುಕೊಂಡು ಬರುತ್ತಿರುವಾಗಕಾಡಿನ ಮದ್ಯದಲ್ಲೇ ಸಾವನ್ನಪ್ಪಿದ್ದು ನಂತರ ಹೆಣವನ್ನು ಹೊತ್ತುಕೊಂಡು ಮರಳಿ ಮನೆ ಹೋಗಬೇಕಾಯಿತು ಎಂದು ಸ್ಥಳಿಯ ನಿವಾಸಿ ಡೊಂಬಯ್ಯ ಮಾಹಿತಿ ನೀಡಿದರು.
ಸೌಲಭ್ಯ ಒದಗಿಸಿ ಕಾಡುಬಿಟ್ಟು ಹೊರಗೆ ಬರಲಾರೆವು : ನಾವುಅಜ್ಜ ಮುತ್ತಾತನ ಕಾಲದಿಂದಇಲ್ಲೇ ವಾಸಮಾಡುತ್ತಿದ್ದು ಕಷ್ಟಕರವಾದರೂ ಬದುಕು ಇಲ್ಲಿನ ಬದುಕಿನಲ್ಲಿ ನಮಗೆ ನೆಮ್ಮದಿ ಇದೆ. ಇಲ್ಲಿಂದ ಹೊರಬರಲು ನಾವು ಸಿದ್ದರಿಲ್ಲ ಕೃಷಿ ಮಾಡಿಜೀವನ ಮಾಡುತ್ತಿದ್ದೇವೆ. ನಮ್ಮ ಸುತ್ತಲಿನ ಅರಣ್ಯ ಸಂಪತ್ತನ್ನುರಕ್ಷಣೆ ಮಾಡುತ್ತಿದ್ದೇವೆ. ನಾಶ ಮಾಡುತ್ತಿಲ್ಲ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಇದೀಗ ನಕ್ಸಲ್ ಪೀಡಿತ ಪ್ರದೇಶವೆಂದು ಈ ಪ್ರದೇಶವನ್ನು ಘೊಷಿಸಿದ್ದು ಕೋಟಿಗಟ್ಟಲೆ ರೂ.ಅನುದಾನ ಬರುತ್ತಿದೆ ಎಂದು ಕೆಲವು ಸಭೆಗಳಲ್ಲಿ ತಿಳಿಸಿದ್ದಾರೆ. ಆದರೆ ಇದುವರೆಗೆ ನಮಗೆ ಈ ಅನುದಾನ ಬರುತ್ತಿಲ್ಲ. ನಮಗೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ನಮ್ಮನ್ನು ಅರಣ್ಯದಿಂದ ಹೊರ ಹೀಗಿ ಎಂದು ಒತ್ತಾಯಿಸಬೇಡಿ ಎಂದು ಅಂಗಲಾಚಿಕೊಳ್ಳುತ್ತಿದ್ದಾರೆ ಈ ಜನರು. ಇಲ್ಲಿ ಒಂದೆರಡು ಕುಟುಂಬಗಳು ಪ್ರಕೃತಿದತ್ತವಾದ ನೀರಿನಿಂದತಮ್ಮ ಸ್ವಂತಖರ್ಚಿನಿಂದ ವಿದ್ಯುತ್ಉತ್ಪಾದನಾ ಯಂತ್ರವನ್ನು ಖರೀದಿಸಿ ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸಿದ್ದಾರೆ ಆದರೆ ಎಲ್ಲರಿಗೂ ಅದು ಸಾಧ್ಯವಾಗಿಲ್ಲ.
ಕಳೆದ 6 ವರ್ಷಗಳ ಹಿಂದೆ ಯಾವುದೋ ಯೋಜನೆಯಲ್ಲಿ ಸೇತುವೆ ನಿರ್ಮಿಸಲು ದೊಡ್ಡ ಸಿಮೆಂಟ್ ಪೈಪ್ (ಮೋರಿ) ಗಳನ್ನು ಇಲ್ಲಿತಂದು ಹಾಕಿದ್ದು ಈ ವರೆಗೆ ಯಾವುದೇ ಕಾಮಗಾರಿಗಳು ನಡೆದಿರುವುದು ಕಾಣುತ್ತಿಲ್ಲ. ಇದು ಯಾರನ್ನು ವಂಚಿಸುವ ಪ್ರಯತ್ನ ಎಂದು ಪ್ರಶ್ನಿಸುತ್ತಿದ್ದಾರೆ ಇಲ್ಲಿನ ಜನರು. ಆದರೆ ಇದುವರೆಗೂ ಸೇತುವೆ ನಿರ್ಮಿಸಿಲ್ಲ. ಸಿಮೆಂಟ್ ಪೈಪ್ಗಳು ಮಾತ್ರಕಾಡಿನ ಮದ್ಯೆ ಅನಾಥವಾಗಿ ಬಿದ್ದುಕೊಂಡಿದೆ. ಇದೀಗ ಮತ್ತೊಂದು ಚುನಾವಣೆ ಎದುರಾಗಿದೆ ಜನಪ್ರತಿನಿಧಿಗಳು ರಾಜಕಾರಣಿಗಳು ಭರವಸೆಗಳ ಮೂಟೆಹೊತ್ತು ಇವರಲ್ಲಿಗೆ ಬರಲಿದ್ದಾರೆ. ಆದರೆ ಚುನಾವಣೆ ಮುಗಿದ ಬಳಿಕ ಇವರತ್ತ ಗಮನಿಸುವವರು ಯಾರು ಎಂಬುದೇ ಮುಖ್ಯ ಪ್ರಶ್ನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.