ಕಾರ್ಕಳ: ತಾಲೂಕಿನ ಅಜೆಕಾರು ವಲಯದ ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭವು ಭಾನುವಾರ ನಡೆಯಿತು.
ಕಾರ್ಕಳ ಶಾಸಕ ವಿ.ಸುನಿಲ್ಕುಮಾರ್ ನೂತನ ಸಮುದಾಯ ಭವನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮಠಾಠಿ ಸಮುದಾಯ ನಾಯಕನಾಗಿದ್ದ ಹೋರಾಟಗಾರ ಶಿವಾಜಿಯ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಶ್ರಮಜೀವಿಗಳು, ಕೃಷಿಕರೂ ಆಗಿರುವ ಮರಾಠಿ ಸಮುದಾಯದ ಜನರು ಸಮಾಜದ ಶೈಕ್ಷಣಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಬೆಳೆಯಬೇಕಾಗಿದೆ ಎಂದರು. ಸಮುದಾಯವನ್ನು ಸಂಘಟನೆಯ ಮೂಲಕ ಒಗ್ಗೂಡಿಸಿ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸಲು ಸಮುದಾಯ ಭವನಗಳ ನಿರ್ಮಾಣವಾಗಬೇಕಿದೆ ಎಂದರು.
ನೂತನ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ೫ ಲಕ್ಷ ಮಂಜೂರಾತಿಯಾಗಿದ್ದು, ಕಟ್ಟಡದ ಮುಂದುವರಿದ ಕಾಮಗಾರಿಗೆ ಇನ್ನಷ್ಟು ಹೆಚ್ಚುವರಿ ಅನುದಾನವನ್ನು ನೀಡುವುದಾಗಿ ಅವರು ಘೋಷಿಸಿದರು.
ಮುಖ್ಯ ಅತಿಥಿಯಾಗಿ ತಾ.ಪಂ ಸದಸ್ಯೆ ಜ್ಯೋತಿ ಸುವರ್ಣ ಮಾತನಾಡಿ, ಸಮುದಾಯಗಳ ಹಿಂದುಳಿದ ಹಾಗೂ ದುರ್ಬಲರ ಏಳಿಗೆಗಾಗಿ ಸಂಘಟನೆಗಳು ಅನಿವಾರ್ಯವೆಂದರು. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾಜಿ ಸದಸ್ಯ ನಂದಕುಮಾರ್ ಹೆಗ್ಡೆ, ಗ್ರಾ.ಪಂ ಸದಸ್ಯರಾದ ಸುಧೀಂದ್ರ ನಾಯ್ಕ್, ಕೃಷ್ಣಮೂರ್ತಿ, ಸಂಘದ ಸ್ಥಾಪಕಾಧ್ಯಕ್ಷ ರಾಜು ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಮೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪತಹಶೀಲ್ದಾರ್ ಕೆ.ಪಿ ನಾಯ್ಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕರಾದ ಶೇಖರ ಕಡ್ತಲ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ನಾಯ್ಕ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.