ಕಾರ್ಕಳ: ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದಾಗ ಅದೊಂದು ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯತ್ ಅಗಲು ಸಾಧ್ಯವಿದೆ. ಕ್ರಿಯಾಶೀಲ ಗ್ರಾಮ ಪಂಚಾಯತ್ ತಂಡ ಅಧಿಕಾರಕ್ಕೆ ಬಂದರೆ ಮಾದರಿ ಆಡಳಿತವನ್ನು ಕೊಡಲು ಸಾಧ್ಯ ಎನ್ನುವುದಕ್ಕೆ ಸಾಣೂರು ಗ್ರಾಮ ಪಂಚಾಯತ್ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಸಾಣೂರಿನ ನವೀಕೃತ ವಿಕಾಸಸೌಧ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಗೊಂಡ ಸಾಣೂರು-ಕುಂಟಲ್ಪಾಡಿ ರಸ್ತೆ ಲೋಕಾರ್ಪಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಸಾಣೂರು ಗ್ರಾಮ ಪಂಚಾಯತ್ ಈ ಬಾರಿಯೂ ಯಶಸ್ವಿ ಆಡಳಿತ ನಡೆಸಿದೆ.
ಒಂದೇ ತಂಡವಾಗಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ಹತ್ತಾರು ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಾಗ್ದಾನ ನೀಡಿರುವಂತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಸಾಣೂರು-ಕುಂಟಲ್ಪಾಡಿ ರಸ್ತೆಯ ಅಭಿವೃದ್ಧಿ ಕಂಡಿದೆ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷ ಮುಖ್ಯಸಚೇತಕ ಗಣೇಶ್ ಕಾರ್ಣಿಕ್ ರಸ್ತೆಯ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿ, ದೂರಾದೃಷ್ಠಿಯನ್ನು ಇಟ್ಟುಕೊಂಡು ಅಭಿವೃದ್ಧಿಗೆ ಮುಂದಾದಾಗ ಅದು ಹಲವು ವರ್ಷಗಳ ತನಕ ಪ್ರಯೋಜನಕ್ಕೆ ಬರುತ್ತದೆ. ಇಂತಹ ಯೋಜನೆ ಹಾಕಿಕೊಂಡಿರುವ ಸಾಣೂರು ಗ್ರಾಮ ಪಂಚಾಯತ್ನ ಕಾರ್ಯದಕ್ಷತೆಯನ್ನು ಇದೇ ಸಂದರ್ಭದಲ್ಲಿ ಅವರು ಕೊಂಡಾಡಿದರು.
ಪಂಚಾಯತ್ ವಿಕಾಸ ಸಂಚಿಕೆಯನ್ನು ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆ ಮಾಡಿ ಮಾತನಾಡಿ, ಅಧಿಕಾರ ಇರುವುದು ದೆಹಲಿಯಿಂದಲ್ಲ. ಗ್ರಾಮ ಅಭಿವೃದ್ಧಿ ಹೊಂದಿದಲ್ಲಿ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವಿದೆ. ತಾಲೂಕಿನಿಂದ-ಜಿಲ್ಲೆ- ರಾಜ್ಯ- ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಆಡಳಿತದಲ್ಲಿ ವಿಕೇಂದ್ರೀಕರಣ ಆಗಬೇಕು. ಅಭಿವೃದ್ಧಿ ಹೊಂದಿದ್ದ ಗ್ರಾಮ ಪಂಚಾಯತ್ ಗಳು ಹೆಚ್ಚಿದಾಗ ನಿಷ್ಕ್ರಿಯೆ ಹೊಂದಿದ ಗ್ರಾಮ ಪಂಚಾಯತ್ ಚೇತರಿಕೆಯಾಗಲು ಸಾಧ್ಯವಿದೆ.
ಕೆಂಗಲು ಹನುಮಂತಯ್ಯ ಕಟ್ಟಿರುವಂತಹ ಕರ್ನಾಟಕ ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಮುಂದೆ ಲಂಚರಹಿತವಾಗಿ ಕೆಲಸ ಕಾರ್ಯಗಳು ಸರಕಾರಿ ಇಲಾಖೆಯಲ್ಲಿ ನಡೆಯುತ್ತದೆ ಎಂಬ ನಾಮಫಲಕ ಹಾಕಲು ಇದುವರೆಗೆ ಆಡಳಿತ ನಡೆಸಿದ ಘಟಾನುಘಟಿ ಮುಖ್ಯಮಂತ್ರಿಗಳಿಂದ ಸಾಧ್ಯವಾಗಿಲ್ಲ. ಅದನ್ನು ನನಸು ಮಾಡಬೇಕಾದ ಹೊಣೆಗಾರಿಕೆ ಗ್ರಾಮ ಪಂಚಾಯತ್ನಿಂದ ಅಗಬೇಕು ಎಂದರು.
ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ರಾಮ್ ಭಟ್ ಶುಭಾಶಂಸನೆ ವ್ಯಕ್ತಪಡಿಸಿ ಈಶಾವಾಸ್ಯಂ ಟ್ರಸ್ಟ್ ರೂಪುಗೊಂಡಿರುವುದು ಯಾವುದೇ ರಾಜಕೀಯ ಬೆಂಬಲಿಸುವುದಕ್ಕಲ್ಲ. ಗ್ರಾಮ ಅಭಿವೃದ್ಧಿ ಸೇರಿದಂತೆ ಸಮಾಜ ಸೇವೆಗಾಗಿ ಹುಟ್ಟಿಕೊಂಡಿರುವ ಈ ಸಂಸ್ಥೆಯ ವತಿಯಿಂದ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ಆಸ್ಪತ್ರೆಯೊಂದನ್ನು ನಿರ್ಮಿಸುವ ಮೂಲಕ ಜನತೆಯ ಆರೋಗ್ಯವನ್ನು ಕಾಪಾಡುವ ಸೇವೆಯಲ್ಲಿ ನಿರತವಾಗಲಿದೆ ಎಂದರು.
ವಿವಿಧ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿಲಾಯಿತು. ಸಾಣೂರು-ಕುಂಟಲ್ಪಾಡಿ ರಸ್ತೆ ಅಗಲೀಕರಣಕ್ಕೆ ಸ್ಥಳ ದಾನ ಮಾಡಿದವರಿಗೆ ಹಾಗೂ ಸಮಾಜ ಸೇವಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಣೂರು ಗ್ರಾಮ ಪಂಚಾಯತ್ ಕರುಣಾಕರ ಎಸ್.ಕೋಟ್ಯಾನ್ ಪ್ರಾಸ್ತಾಪಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪಾಧ್ಯಕ್ಷೆ ಉಷಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸವಿತಾ ಕೋಟ್ಯಾನ್, ತಾಲೂಕು ಪಂಚಾಯತ್ ಅಧ್ಯಕ್ಷೆ ವಿಜಯಕುಮಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಸುನೀತಾ ಶೆಟ್ಟಿ , ತಹಶೀಲ್ದಾರ್ ರಾಘವೇಂದ್ರ, ಸಾಣೂರು ನರಸಿಂಹ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಉದ್ಯಮಿ ಭಾಸ್ಕರ್ ಕೋಟ್ಯಾನ್, ಸಾಣೂರು ಗಣೇಶ್ ಕಾಮತ್, ಕಾಂತಾವರ ಉದಯಶೆಟ್ಟಿ, ಪ್ರಣೇಶ್ ಇವರು ವಿಶೇಷ ಆಹ್ವಾನಿತರಾಗಿದ್ದರು. ಸಚ್ಚರಿಪೇಟೆ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ದತ್ತಾತ್ರೇಯ ರಾವ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.