ಕಾರ್ಕಳ: ಕಳೆದ ನವೆಂಬರ್ ತಿಂಗಳಿನಿಂದ ಗ್ರಾ.ಪಂ.ಗಳು ಯಾವುದೇ ಕಟ್ಟಡ ಪರವಾನಿಗೆಯನ್ನು ನೀಡಿಲ್ಲ. ಇದರ ಪರಿಣಾಮ ಜನತೆ ಮನೆ ಹಾಗೂ ಇನ್ನಿತರ ಕಟ್ಟಡ ನಿರ್ಮಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೊಂದು ಗಂಭೀರ ಸಮಸ್ಯೆಯು ಕಣ್ಣಮುಂದಿದ್ದರೂ ಸರಕಾರ ಆ ಬಗ್ಗೆ ಯಾವುದೇ ಪರಿಹಾರ ಸೂತ್ರವನ್ನು ಕಂಡುಕೊಳ್ಳುತ್ತಿಲ್ಲ ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಬಿಜೆಪಿ ಕಚೆರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಡಿತರ ಚೀಟಿ ಗೊಂದಲವು ಮುಂದುವರೆದಿದ್ದು, ಹಳೆಯ ಬಿಪಿಎಲ್ ಮತ್ತು ಎಪಿಎಲ್ ಗೊಂದಲ ಇನ್ನೂ ಬಗೆಹರಿದಿಲ್ಲ. ಹೊಸ ರೇಶನ್ ಕಾರ್ಡ್ಗೂ ಅರ್ಜಿ ಸ್ವೀಕರಿಸುತ್ತಿಲ್ಲ ಎಂದರು. ಗ್ರಾಮೀಣ ರಸ್ತೆ ದುರಸ್ಥಿಗೆ ಸರಕಾರ ಅನುದಾನ ಮಂಜೂರು ಮಾಡುತ್ತಿಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ ಈ ಸರಕಾರ ಒಂದು ಕಿ.ಮೀ. ರಸ್ತೆಯನ್ನು ಕೂಡಾ ನಿರ್ಮಾಣ ಮಾಡಿಲ್ಲ. ಕಳೆದ ಮೂರು ಬಜೆಟ್ಗಳಲ್ಲಿ ರಸ್ತೆಯ ಬಗ್ಗೆ ಯೋಜನೆ ಪ್ರಕಟವಾಗಿದ್ದು, ಅದು ಕಾರ್ಯರೂಪಕ್ಕೆ ಬಂದಿಲ್ಲ. ಆಶ್ರಯ ಮನೆಗಳ ಗೋಳು ಮುಂದುವರೆದಿದ್ದು, ಈಗಾಗಲೇ ಮಂಜೂರುಗೊಂಡ ಆಶ್ರಯ ಮನೆಗಳಿಗೆ ತಾಂತ್ರಿಕ ಕಾರಣವನ್ನು ನೆಪವೊಡ್ಡಿ ಎರಡು ಅಥವಾ ಮೂರನೇ ಕಂತನ್ನು ಬಾಕಿ ಇಡಲಾಗಿದೆ. ಜೊತೆಗೆ ಹೊಸ ಮನೆ ನಿರ್ಮಾಣಕ್ಕೂ ಅನುದಾನ ಮಂಜೂರಾತಿ ನೀಡುತ್ತಿಲ್ಲ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಂದುವರೆದಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಪಕ್ಷಭೇದ ಮರೆತು ಪ್ರತಿಭಟನೆ ನಡೆಸಿದ್ದೇವೆ. ಸರಕಾರ ಈ ಬಗ್ಗೆ ಪ್ರಸ್ತಾವನೆಯನ್ನು ಸ್ವೀಕರಿಸಿದರೂ, ಕಾರ್ಯಪ್ರವೃತ್ತವಾಗಿಲ್ಲ. 94ಸಿ ಅಡಿಯಲ್ಲಿ ಕಾರ್ಕಳ ತಾಲೂಕಿನಲ್ಲಿ 5 ಸಾವಿರ ರೂ. ಅರ್ಜಿ ಸ್ವೀಕರಿಸಲಾಗಿದ್ದು, ಒಂದೇ ಒಂದು ಅರ್ಜಿ ವಿಲೇವಾರಿಯಾಗಿಲ್ಲ. ಪರಿಣಾಮ ಸರಕಾರಿ ಭೂಮಿಯಲ್ಲಿ ಕುಳಿತ ಫಲಾನುಭವಿಗಳು ಸರಕಾರಿ ಸವಲತ್ತು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದರು.
ಎ.27ಕ್ಕೆ ಪ್ರತಿಭಟನೆ: ರಾಜ್ಯ ಸರಕಾರದ ವೈಫಲ್ಯವನ್ನು ಖಂಡಿಸಿ ಕಾರ್ಕಳ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆಯು ತಾಲೂಕು ಕಚೆರಿಯ ಮುಂಭಾಗದಲ್ಲಿ ಎ.೨೭ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬೊಳ ಸದಾಶಿವ ಶೆಟ್ಟಿ, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಮಹಾವೀರ ಹೆಗ್ಡೆ, ರವೀಂದ್ರ ಕುಮಾರ್, ತಾ.ಪಂ.ಸದಸ್ಯ ಬೋಳ ಜಯರಾಮ ಸಾಲ್ಯಾನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.