ಬೆಳ್ತಂಗಡಿ : ಯಾವುದೇ ಧರ್ಮ ಅನ್ಯಾಯ, ವಿನಾಶವನ್ನು ಬಯಸುವುದಿಲ್ಲ. ಆದರೆ ನಾವು ಇಡುವ ಹೆಜ್ಜೆ ತಪ್ಪಿದಾಗ ನಮ್ಮನ್ನು ತಿದ್ದಿ ರಕ್ಷಣೆ ಮಾಡುವ ಶಕ್ತಿ ಧರ್ಮದಲ್ಲಿದೆ ಎಂದು ಎಸ್ಕೆಡಿಆರ್ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಹೆಚ್. ಮಂಜುನಾಥ ಹೇಳಿದರು.
ಅವರು ಮಂಗಳವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಜೀವನ ಆಧುನಿಕ ಶೈಲಿಗೆ ಬಂದಿದ್ದರೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಬದಲಾಗಿಲ್ಲ. ಧರ್ಮ, ಸಂಸ್ಕೃತಿ ಉಳಿಸಿ, ಬೆಳೆಸಲು ದೇವಸ್ಥಾನಗಳು ಶಕ್ತಿ, ಪ್ರೇರಣೆಯನ್ನು ನೀಡುತ್ತವೆ. ದೇವರ ಮುಂದೆ ನಾವು ಸಂಪೂರ್ಣ ಶರಣಾಗತಿಯನ್ನು ವ್ಯಕ್ತಪಡಿಸಿದಾಗಲೇ ನಮ್ಮ ಯಶಸ್ಸು ಸಾಧ್ಯ ಎಂದ ಅವರು ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರದ ವತಿಯಿಂದ ಪುರಾತನ ದೇವಾಲಯಗಳ ಪುನರುತ್ಥಾನಕ್ಕೆ ಶ್ರಮಿಸುತ್ತಿದ್ದಾರೆ. ಅದೇ ರೀತಿ ಈ ದೇವಾಲಯಕ್ಕೂ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಮಂಗಳೂರು ಶ್ರೀನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಅವರು, ದೇವಸ್ಥಾನಗಳು ಶ್ರದ್ಧಾಕೇಂದ್ರಗಳು. ಇದೊಂದು ಶಕ್ತಿ ಕೇಂದ್ರ. ಕಾಲ ಬದಲಾಗಿಲ್ಲ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಕಾಲಗರ್ಭದಲ್ಲಿ ಹೂತು ಹೋಗುತ್ತಿದ್ದಂತೆ ಕಂಡರೂ ಧಾರ್ಮಿಕ ಜಿಜ್ಞಾಸೆ ಇನ್ನು ಉಳಿದುಕೊಂಡಿದೆ. ಬುದ್ಧಿಜೀವಿಗಳು ದೇವರಿಲ್ಲ, ಭಗವಧ್ಗೀತೆ ಧರ್ಮ ಗ್ರಂಥವಲ್ಲ ಎಂದು ಎಷ್ಟೇ ಹೇಳಿದರೂ ಸಂಸ್ಕಾರದ ಹಿನ್ನಲೆಯಿಂದ ಬಂದ ಧರ್ಮ ಜಿಜ್ಞಾಸುಗಳಿಂದ ನಂಬಿಕೆ, ಶ್ರದ್ಧೆ, ಆಚರಣೆಯನ್ನು ವಿಭಜಿಸಲು ಸಾಧ್ಯವಿಲ್ಲ. ಕೃಷ್ಣ ಎಲ್ಲಾ ಕ್ಷೇತ್ರದಲ್ಲೂ ಸವ್ಯಸಾಚಿ. ಬಾಲಲೀಲೆಯಲ್ಲಿ ಮುಗ್ಧ ಮನಸ್ಸಿನ ಮಗುವಾಗಿ, ಯೌವ್ವನದ ತುಂಟಾಟಿಕೆಯ ಯುವಕನಾಗಿ, ಶತ್ರುಗಳಿಗೆ ಸಿಂಹ ಸಪ್ನನಾಗಿ, ರಾಜಕೀಯದ ಮುತ್ಸದ್ಧಿಯಾಗಿ, ಆಡಳಿತ ಚತುರನಾಗಿ ಹಿಂದೂ ಸಮಾಜದ ಯುವಕರ ಶಕ್ತಿ, ಸಾಮರ್ಥ್ಯದ ಪ್ರತೀಕವಾಗಿ ಪರಿಪೂರ್ಣ ವ್ಯಕ್ತಿಯಾಗಿ ಪೂಜಿಸಲ್ಪಡುತ್ತಾನೆ ಎಂದ ಅವರು ಮಕ್ಕಳಿಗೆ ಮನೆಯಲ್ಲಿ ಧರ್ಮದ ಸಂಸ್ಕೃತಿ, ಸಂಸ್ಕಾರ ಸಿಗಬೇಕು. ನಮ್ಮ ಬದುಕಿನ ಜತೆಯಲ್ಲಿ ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಪ್ರೀತಿಸಬೇಕು. ಅದರೊಂದಿಗೆ ನಾವು ಮಾಡುವ ಯಾವುದೇ ಕಾಯಕದಲ್ಲೂ ಹನುಮ ನಿಷ್ಠೆಯನ್ನು ಬೆಳೆಸಿಕೊಳ್ಳೋಣ ಎಂದರು.
ಧರ್ಮಸ್ಥಳ ಜಮಾ ಉಗ್ರಾಣದ ಭುಜಬಲಿ ಧರ್ಮಸ್ಥಳ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಇರ್ತಿಲಾಲ್, ಮಾಜಿ ಜಿಪಂ ಸದಸ್ಯ ಸುಂದರ ಗೌಡ ಇಚ್ಚಿಲ, ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ, ಉದ್ಯಮಿ ದೇವೇಂದ್ರ ಹೆಗ್ಡೆ, ಮುಂಡಾಜೆ ಸಿ.ಎ ಬ್ಯಾಂಕಿನ ಅಧ್ಯಕ್ಷ ಎನ್.ಎಸ್. ಗೋಖಲೆ, ನಾವೂರು ಗ್ರಾಪಂ ಅಧ್ಯಕ್ಷೆ ಲಲಿತ, ತಾಪಂ ಮಾಜಿ ಉಪಾಧ್ಯಕ್ಷೆ ತನುಜಾಶೇಖರ್ ನಾವೂರು, ನಾವೂರು ಗ್ರಾಪಂ ಸದಸ್ಯೆ ಶೋಭಾ, ಎಲ್ಐಸಿ ಪ್ರತಿನಿಧಿ ಪ್ರಕಾಶ್ ಅಭ್ಯಂಕರ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಕುಮಾರ್ ಜೈನ್, ಅಧ್ಯಕ್ಷ ಎ.ಬಿ. ಉಮೇಶ್ ಅತ್ಯಡ್ಕ ಉಪಸ್ಥಿತರಿದ್ದರು.
ಉಜಿರೆಯ ಹಿರಿಯ ಜ್ಯೋತಿಷಿ ಜಯಶ್ರೀ ಎಸ್. ಐತಾಳ ಅವರನ್ನು ಗೌರವಿಸಲಾಯಿತು. ಬ್ರಹ್ಮ ಕಲಶ ಸಮಿತಿ ಕಾರ್ಯಾಧ್ಯಕ್ಷ ಡಾ| ಪ್ರದೀಪ್ ನಾವೂರು ಪ್ರಸ್ತಾವಿಸಿದರು. ಅಧ್ಯಕ್ಷ ಹರೀಶ್ ಪೂಂಜ ಸ್ವಾಗತಿಸಿದರು, ಸತೀಶ್ ಸಾಲಿಯಾನ್ ಹಾಗೂ ಮೋಹನ್ ಬಂಗೇರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ನಾವೂರು ಹೊಡಿಕ್ಕಾರು, ಕುಂಡಡ್ಕ ಅಂಗನವಾಡಿ ಮಕ್ಕಳಿಂದ, ಡಾ| ಸುಶೀಲ ವಿದ್ಯಾರಣ್ಯ ಇವರ ನಿರ್ದೇಶನದ ‘ಹಂಸಿಕ ಮೆಲೋಡಿಸ್’ ಮಂಗಳೂರು ಇವರಿಂದ ಭಕ್ತಿಭಾವ ರಸಮಂಜರಿ ನಡೆಯಿತು. ಮಧ್ಯಾಹ್ನ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಮ್ಮುಖದಲ್ಲಿ ಶ್ರೀ ಗಣಪತಿ ದೇವರು ಮತ್ತು ಶ್ರೀ ಗೋಪಾಲಕೃಷ್ಣ ದೇವರ ನೂತನ ಬಿಂಬದೊಂದಿಗೆ ಮೆರವಣಿಗೆ, ಪೂರ್ಣಕುಂಭ ಸ್ವಾಗತ, ಅಚಾರ್ಯವರಣ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸುದರ್ಶನ ಹೋಮ, ಆವಾಹನೆ, ಉಚ್ಛಾಟನೆ, ಪುಣ್ಯಾಹವಾಚನೆ, ಅಂಕುರಾರೋಪಣ, ಪ್ರಾಸಾದಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶ, ವಾಸ್ತುಬಳಿ, ವಾಸ್ತುಕಲಶಾಭಿಷೇಕ, ರಾತ್ರಿ ಪೂಜೆ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.