ಬೆಳಂಗಡಿ : ವಿದೇಶಿ ವೈದ್ಯಕೀಯ ಪದ್ಧತಿಗಳ ಮೇಲೆ ಇರುವ ಅಂಧಾಭಿಮಾನ ತೊಲಗಬೇಕು. ಭಾರತೀಯ ವೈದ್ಯಕೀಯ ಪದ್ಧತಿಗಳ ಸದುಪಯೋಗ ಪಡೆಯಬೇಕು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಶಿಸಿದರು.
ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ವೈದ್ಯ ಪದ್ಧತಿಗಳ ಮಹತ್ವದ ಬಗ್ಗೆ ರಾಜ್ಯಾದ್ಯಂತ ಅರಿವು ಮೂಡಿಸುವ ರಥಯಾತ್ರೆಯು ಆದಿತ್ಯವಾರ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಜ್ಯೋತಿ ಬೆಳಗಿಸಿ ಆಶೀರ್ವದಿಸಿದರು.
ಆಯುಷ್ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ, ಯೋಗ ಹಾಗೂ ಹೋಮಿಯೋಪತಿ ಪದ್ಧತಿಗಳಲ್ಲಿ ಜನರಿಗೆ ಇನ್ನೂ ಹೆಚ್ಚಿನ ಭರವಸೆ ಹಾಗೂ ವಿಶ್ವಾಸ ಮೂಡಿ ಬರಲಿ ಎಂದು ಅವರು ಸಲಹೆ ನೀಡಿದರು. ಫೆಬ್ರವರಿ ತಿಂಗಳಿನಲ್ಲಿ ನಡೆಯುವ ವಿಶ್ವ ಸಮ್ಮೇಳನದಲ್ಲಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಹೆಗ್ಗಡೆಯವರು ಹಾರೈಸಿದರು.
ಆಯುರ್ಜ್ಯೋತಿ ರಥ ಮಂಗಳೂರಿನಿಂದ ಉಜಿರೆಯ ಪ್ರಕೃತಿ ಚಿಕಿತ್ಸೆ ಕಾಲೇಜಿಗೆ ಬಂದಾಗ ಅಲ್ಲಿ ಅದನ್ನು ಕಾಲೇಜು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಳು ಗೌರವ ಪೂರ್ವಕವಾಗಿ ಸ್ವಾಗತಿಸಿದರು. ಡಾ. ಮದನ್ ನಾಡಿಗ ಆಯುರ್ಜ್ಯೋತಿ ರಥದ ಮಹತ್ವವನ್ನು ವಿವರಿಸಿದರು.
ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪ್ಪಾಡಿತ್ತಾಯ, ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ, ಕೆ.ವಿ.ಯು.ಪಿ. ಬೋರ್ಡ್ನ ಅಧ್ಯಕ್ಷರಾದ ಡಾ. ಸತ್ಯಮೂರ್ತಿ ಭಟ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.