ತೆಳ್ಳನೆಯ ಪುಟ್ಟ ಶರೀರ. ಆ ಪುಟ್ಟ ಶರೀರದಲ್ಲೊಂದು ಬೆಟ್ಟದಂತಹ ವ್ಯಕ್ತಿತ್ವ. ವಯಸ್ಸು 85. ಆದರೆ ಅವರ ಕ್ರಿಯಾಶೀಲತೆ, ದೈನಂದಿನ ಚಟುವಟಿಕೆ, ನಡೆದಾಡುವ ವೇಗ ಗಮನಿಸಿದವರಿಗೆ ಅವರಿಗೆ 85 ಅಗಿದೆ ಎನಿಸುವುದಿಲ್ಲ. ಮಠೀಯ ಕರ್ಮಠತೆ ಜೊತೆಗೇ ಸಾಮಾಜಿಕ ಸುಧಾರಣೆಯ ಕೈಂಕರ್ಯಕ್ಕೆ ತುಡಿಯುತ್ತಿರುವ ತಪಸ್ವಿ. ರಾಷ್ಟ್ರಪ್ರಜ್ಞೆಯ ಪ್ರಖರ ದೀವಿಗೆ ಕೂಡ.
ಇಂತಹ ಸಾಮಾಜಿಕ ಸುಧಾರಣೆಗೆ ಅವರು ತೊಡಗಿ ನಾಲ್ಕೈದು ದಶಕಗಳೇ ಸಂದಿವೆ. ದಲಿತ ಕೇರಿಗಳಿಗೆ 50ರ ದಶಕದಲ್ಲಿ ತೆರಳಿದಾಗ ದಲಿತ ಸಮೂಹದಲ್ಲಿ ಸಂಭ್ರಮ, ಬೆರಗು ಸೃಷ್ಟಿಯಾದಷ್ಟೇ ಮಾಧ್ವ ಸಮೂಹದಲ್ಲಿ ಗೊಂದಲ, ಗಾಬರಿಯ ಸಂಚಲನವಾದದ್ದೂ ಹೌದು. ಆದರೆ ಈ ಪ್ರತಿಕ್ರಿಯೆಗಳಿಗೆ ಶರಣಾಗಿ ತಮ್ಮ ಸಾಮಾಜಿಕ ಸುಧಾರಣೆಯ ಪ್ರಕ್ರಿಯೆಗೆ ವಿರಾಮ ನೀಡಲಿಲ್ಲ ಎಂಬುದೇ ಇವರ ವಿಶೇಷತೆ. ಸಾಮಾಜಿಕ ಅಸಮಾನತೆ ನಿವಾರಣೆಗೆ ಮೊದಲಿಗಿಂತ ಈಗ ಇನ್ನಷ್ಟು ಹೆಚ್ಚು ಒತ್ತು. ಸಾಮಾಜಿಕ ಸಮಾನತೆಯ ತಮ್ಮ ಕೈಂಕರ್ಯಕ್ಕೆ ಸಾಥ್ ನೀಡಿದ ಮಾದಿಗ ಮಠಾಧೀಶರನ್ನು ಸಂಭ್ರಮದಿಂದ ಸ್ವಾಗತಿಸಿ ಸುಧಾರಣೆಯ ಕಾರ್ಯಕ್ಕೆ ಇನ್ನಷ್ಟು ರಭಸ ತಂದುಕೊಟ್ಟರು.
ದಲಿತ ಕೇರಿಗಳಿಗೆ ತೆರಳುವ ಸ್ವಾಮೀಜಿಯವರ ಸದಾಶಯವನ್ನು ಅರ್ಥಮಾಡಿಕೊಳ್ಳದೆ ಕೆಲವರು ಇದು ಶಾಸ್ತ್ರಸಮ್ಮತವಲ್ಲವೆಂದು ವಿರೋಧದ ಧ್ವನಿಯೆತ್ತಿದಾಗ, ಸ್ವಾಮೀಜಿ ಶಾಸ್ತ್ರದ ಮಥಿತಾರ್ಥ ಬಿಡಿಸಿಟ್ಟು ಪಂಥಾಹ್ವಾನ ನೀಡಿದರು. ಅಸ್ಪೃಶ್ಯರೆನಿಸಿದ ದಲಿತರನ್ನು ಮುಟ್ಟಿದಾಗ ನಾಲ್ಕು ಬಾರಿ ಸ್ನಾನ ಮಾಡಿದರೆ ಶಾಪ ಕಳೆಯುತ್ತದೆ. ಮ್ಲೇಂಛರನ್ನು ಮುಟ್ಟಿದರೆ ಪಾಪ ಪರಿಹಾರಕ್ಕೆ ಅಂಗಛೇದನ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಇದಕ್ಕೆ ನೀವೆಲ್ಲರೂ ಸಮ್ಮತಿಸುತ್ತೀರಾ? ಎಂದು ಶಾಸ್ತ್ರದ ರಕ್ಷಾಕವಚ ಹಿಡಿದವರಿಗೆ ಸವಾಲೆಸೆದರು. ಅಲ್ಲಿಂದಾಚೆಗೆ ಶಾಸ್ತ್ರದ ರಕ್ಷಾಕವಚದ ಹಿಂದೆ ಅಡಗಿಕೊಳ್ಳುವ ಧೈರ್ಯ ಯಾರಿಗೂ ಬರಲಿಲ್ಲ.
ಅಂತಹ ಸಾಮಾಜಿಕ ಸುಧಾರಣೆಯ ಹರಿಕಾರ, ಮಹಾನ್ ಸಂತಶ್ರೇಷ್ಠ ಉಡುಪಿಯ ಪೂಜ್ಯ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಲ್ಲದೆ ಮತ್ತಾರು? ಇಂದು 5ನೇ ಬಾರಿಗೆ ಪರ್ಯಾಯಪೀಠವೇರುತ್ತಿರುವ ಪೇಜಾವರ ಶ್ರೀಗಳ ದೀರ್ಘ ಬದುಕಿನ ಪುಟಗಳನ್ನು ತಿರುವಿ ಹಾಕಿದಾಗ ಅಲ್ಲಿ ಕಣ್ಣಿಗೆ ಢಾಳಾಗಿ ಗೋಚರಿಸುವುದು ಅವರ ರಾಷ್ಟ್ರೀಯ ಪ್ರಜ್ಞೆಯ ಪ್ರಖರ ದೀವಿಗೆ. ಆದಿಶಂಕರಾಚಾರ್ಯರು ದೇಶದ ಅಖಂಡತೆಯ ಅರಿವು ಮೂಡಿಸಲು ದೇಶದ ಉದ್ದಗಲಕ್ಕೆ ಕಾಲ್ನಡಿಗೆಯಲ್ಲಿ ಆ ಕಾಲದಲ್ಲಿ ಸಂಚರಿಸಿದ್ದರಂತೆ. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನೂ ಸ್ಥಾಪಿಸಿದ್ದರು. ಪೇಜಾವರ ಶ್ರೀಗಳು ಕೂಡ ಆದಿಶಂಕರರಂತೆಯೇ ದೇಶದುದ್ದಗಲಕ್ಕೆ ಸದಾಕಾಲ ಸಂಚರಿಸುತ್ತಿರುವ ಒಬ್ಬ ಅಪರೂಪದ ಸಂತ. ದೇಶದುದ್ದಗಲಕ್ಕೆ ಅವರು ಹೀಗೆ ಸಂಚರಿಸುತ್ತಿರುವುದು ತಮ್ಮ ಪೇಜಾವರ ಮಠದ ಸಂವರ್ಧನೆಗಾಗಿ ಅಲ್ಲ ಅಥವಾ ಇನ್ನಾವುದೇ ಸ್ವಹಿತಾಸಕ್ತಿಯೂ ಇದರಲ್ಲಿಲ್ಲ. ದೇಶದಾದ್ಯಂತ ರಾಷ್ಟ್ರಪ್ರಜ್ಞೆಯ, ದೇಶಭಕ್ತಿಯ ಪ್ರಖರ ಬೆಳಕನ್ನು ಬೀರಿ, ಆ ಹಾದಿಯಲ್ಲಿ ಎಲ್ಲರೂ ಮುನ್ನಡೆಯಬೇಕು ಎಂಬ ಘನ ಉದ್ದೇಶವೊಂದೇ ಇದರ ಹಿಂದಿರುವುದು. ಹಾಗೆಂದೇ ಅವರು ನಾಲ್ಕು ಗೋಡೆಗಳ ನಡುವೆ ಇತರ ಸ್ವಾಮೀಜಿಗಳಂತೆ ಬಂಧಿತರಾಗದೆ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಈ ಕ್ಷಣದಲ್ಲಿ ಉಡುಪಿಯಲ್ಲಿದ್ದರೆ ಸಂಜೆಯಾಗುವ ವೇಳೆಗೆ ಬೆಂಗಳೂರಿನಲ್ಲಿ, ಅನಂತರ ಅಲ್ಲಿಂದ ಮುಂಬೈಗೆ, ಮರುದಿನ ದಿಲ್ಲಿಯಲ್ಲಿ, ಅದರ ಮರುದಿನ ಆಂಧ್ರದಲ್ಲಿ… ಹೀಗೆ ನಿತ್ಯನಿರಂತರ ಸಂಚಾರ ಅವರದು. ಪರ್ಯಾಯದ ಜವಾಬ್ದಾರಿ ಹೊತ್ತ ಅವಧಿ ಹೊರತುಪಡಿಸಿದರೆ ಪೇಜಾವರ ಶ್ರೀಗಳು ಊರಿಂದೂರಿಗೆ ಸಂಚರಿಸದ ದಿನಗಳೇ ಬಹುಶಃ ಇರಲಿಕ್ಕಿಲ್ಲ. ಅವರ ಈ ನಿರಂತರ ಸಂಚಾರಕ್ಕೆ ಪ್ರಾಂತ, ಭಾಷೆ, ಜಾತಿಮತಗಳ ಗೊಡವೆ ಇಲ್ಲ. ಉಳಿದುಕೊಳ್ಳಲು ಇಂತಹದೇ ಮಠ, ದೇವಸ್ಥಾನ ಬೇಕೆಂದಿಲ್ಲ. ಶ್ರೀಮಂತ ಭಕ್ತರ ಮನೆಯೇ ಆಗಬೇಕೆಂದಿಲ್ಲ. ಜೋಪಡಿಗಳಲ್ಲಿ ಉಳಿದುಕೊಂಡದ್ದೂ ಇದೆ. ನಕ್ಸಲ್ಪೀಡಿತ ಮುಂಡಗಾರು ಎಂಬ ಕುಗ್ರಾಮಕ್ಕೆ ಬಂದಾಗ ಅಲ್ಲಿನ ಗಿರಿಜನನೊಬ್ಬನ ಗುಡಿಸಲಿನಲ್ಲಿ ತಂಗಿದ್ದರು. ಅಲ್ಲಿ ಪೂಜೆಗೆ ಅವರಿಗೆ ನೀರೇ ಸಿಕ್ಕಿರಲಿಲ್ಲ. ಹಾದಿಬದಿಯ ನದಿಯೊಂದರ ದಡದಲ್ಲೇ ಸ್ನಾನಮಾಡಿ ಕೃಷ್ಣ ಪೂಜೆ ನೆರವೇರಿಸಿದ್ದರು. ಪೂಜೆ ಅಲ್ಲಾಗಬೇಕು, ಇಲ್ಲಿಯೇ ಆಗಬೇಕು ಎಂಬ ಕಟುನಿಯಮಕ್ಕೆ ಅವರು ಕಟ್ಟುಬಿದ್ದವರಲ್ಲ. ಶ್ರೀಕೃಷ್ಣ ಎಲ್ಲೆಡೆ ಇದ್ದಾನೆ. ಹೀಗಿರುವಾಗ ಪೂಜೆ ಎಲ್ಲಾದರೇನು ಎಂಬ ಉದಾತ್ತ ಚಿಂತನೆ ಅವರದು.
ಮಠಾಧಿಪತಿಗಳೆಂದರೆ ಪಾದಪೂಜೆ, ಭಿಕ್ಷೆ, ಶಿಷ್ಯರಿಗೆ ಅನುಗ್ರಹ, ಪೂಜೆ ಪುನಸ್ಕಾರದ ಕೈಂಕರ್ಯ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಆದರೆ ಪೇಜಾವರ ಶ್ರೀಗಳ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಅವರು ಇದೆಲ್ಲವನ್ನೂ ಮಾಡಿದರು. ಆದರೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅದರಾಚೆಗೆ ಬಂದರು. ಬೀದಿಗೆ ಇಳಿದರು. ಜನಸೇವೆಯೇ ಜನಾರ್ದನ ಸೇವೆ ಎಂದು ಪರಿಗಣಿಸಿದರು. ನಿರ್ಲಕ್ಷಿತರತ್ತ ಲಕ್ಷ್ಯ ಹರಿಸಿದರು. ಶೋಷಿತರತ್ತ ಕೃಪಾದೃಷ್ಟಿ ಬೀರಿದರು. ಆದರೆ ಅದು ಅವರ ಬಗೆಗಿನ ತೋರುಗಾಣಿಕೆಯ ಅನುಕಂಪವಾಗಿರಲಿಲ್ಲ. ಅಂತಹವರನ್ನೂ ಸಮಾಜದ ಮುಖ್ಯ ವಾಹಿನಿಗೆ ಜೋಡಿಸಬೇಕೆಂಬ ತಹತಹ ಅದರಲ್ಲಿತ್ತು. ಅಸ್ಪೃಶ್ಯತೆ ಧರ್ಮ ಸಮ್ಮತವಲ್ಲ ಎಂದು ದಿಟ್ಟತನದಿಂದ ಎದೆ ಎತ್ತಿ ಸಾರಿದ ಸಂತರ ಮಾಲಿಕೆಯಲ್ಲಿ ಪೇಜಾವರ ಶ್ರೀಗಳದು ಬಹುಶಃ ಮೊದಲನೆಯ ಹೆಸರು. ಉಡುಪಿಯಲ್ಲಿ ವಿಶ್ವಹಿಂದು ಪರಿಷತ್ತಿನ ಸಮ್ಮೇಳನ ಜರುಗಿದಾಗ ಅಸ್ಪೃಶ್ಯತೆಯ ವಿರುದ್ಧ ನೆರೆದಿದ್ದ ಬೃಹತ್ ಜನಸ್ತೋಮಕ್ಕೆ ದಿವ್ಯ ಸಂದೇಶ ನೀಡಿದ್ದು ಇದೇ ಪೇಜಾವರ ಶ್ರೀಗಳು. ’ನ ಹಿಂದು ಪತಿತೋ ಭವೇತ್’, ’ಹಿಂದವಃ ಸೋದರಾ ಸರ್ವೇ’ ಎಂಬ ಉದ್ಘೋಷ ಮೊದಲು ಹೊರಟಿದ್ದು ಶ್ರೀಗಳ ಬಾಯಿಯಿಂದ. ಅದು ಕೇವಲ ಘೋಷಣೆಯಾಗಿ ಉಳಿಯಲಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೂ ಇಳಿಯಿತು. ಅನೇಕ ಮಡಿವಂತ ಮಠಾಧಿಪತಿಗಳು ಕೂಡ ಪೇಜಾವರ ಶ್ರೀಗಳ ಹಾದಿ ಅನುಸರಿಸಿದರು.
ಮೊದಲೆಲ್ಲ ಮಠಾಧಿಪತಿಗಳಿದ್ದಲ್ಲಿಗೆ ದಲಿತರು ಬರಬೇಕಿತ್ತು. ಹಾಗೆ ಬಂದಾಗಲೂ ದೂರದಲ್ಲೆಲ್ಲೋ ನಿಂತು ಅವರ ಆಶೀರ್ವಾದ ಪಡೆಯಬೇಕಿತ್ತು. ಪೇಜಾವರ ಶ್ರೀಗಳು ಈ ಅನಿಷ್ಟ ಜಾಯಮಾನಕ್ಕೆ ಮಂಗಳ ಹಾಡಿ, ಹೊಸದೊಂದು ಕ್ರಾಂತಿ ಮಾಡಿದರು. ದಲಿತರ ಕೇರಿಗಳಿಗೇ ಭೇಟಿ ನೀಡಿ, ಕರುಣೆ-ಪ್ರೀತಿಯಿಂದ ಅನುಗ್ರಹಿಸಿದರು. ಪೇಜಾವರ ಶ್ರೀಗಳ ಇಂತಹ ದಿಟ್ಟತನ ಬ್ರಾಹ್ಮಣ ವಲಯದಲ್ಲಿ ದಿಗ್ಭ್ರಮೆ ಉಂಟು ಮಾಡಿದ್ದೂ ಇದೆ. ದಲಿತ ಕೇರಿಗಳಿಗೆ ಭೇಟಿ ನೀಡಿದ ಪೇಜಾವರ ಶ್ರೀಗಳ ಈ ನಡೆ ಬರಿದೇ ಪ್ರದರ್ಶನವಾಗಿರಲಿಲ್ಲ. ಅದರ ಹಿಂದೆ ನೈಜ ಕಾಳಜಿ ಹುದುಗಿತ್ತು. ಹಾಗೆಂದೆ ಕಳೆದ ನಾಲ್ಕು ದಶಕಗಳಿಂದ ಅವರು ದಲಿತೋದ್ದಾರದ ಇಂತಹ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬಂದಿದ್ದಾರೆ. ಕೇವಲ ದಲಿತ ಕೇರಿಗಳಿಗೆ ಭೇಟಿ ನೀಡಿದ್ದಷ್ಟೇ ಅಲ್ಲ, ದಲಿತ ಮಠಾಧಿಪತಿಗಳ ಜೊತೆ ಒಟ್ಟಾಗಿ ಬೆರೆತು, ಅವರನ್ನು ಬ್ರಾಹ್ಮಣ ಕೇರಿಗಳಿಗೂ ಬರಮಾಡಿಕೊಂಡು ಆದರಿಸಿ ಸಮಾನತೆಯ ದಿವ್ಯ ಸಂದೇಶ ನೀಡಿದ ಮಹಾನ್ ಸಂತರಾದರು.
ದೇಶ ಯಾವುದೇ ಸಂದರ್ಭದಲ್ಲಿ ವಿಪತ್ತಿಗೆ ಸಿಲುಕಿದಾಗ ಅದಕ್ಕೆ ತಕ್ಷಣ ತುಡಿಯುತ್ತಿದ್ದ ಸಂತರಲ್ಲಿ ಪೇಜಾವರ ಶ್ರೀಗಳು ಪ್ರಥಮ ಪಂಕ್ತಿಯವರು. ಸಂಕಟವಿದ್ದಲ್ಲಿ ಪೇಜಾವರ ಶ್ರೀಗಳಿದ್ದಾರೆ ಎಂಬ ಮಾತು ಜನಜನಿತವಾಗುವಷ್ಟು ಅವರು ಶ್ರಮಿಸಿದರು. 1975 ರಲ್ಲಿ ಗುಲ್ಬರ್ಗಾದಲ್ಲಿ ಬರ ಆಗಮಿಸಿದಾಗ ಸರ್ಕಾರಕ್ಕಿಂತ ಮೊದಲು ಜನ ಜಾನುವಾರುಗಳ ಸೇವೆಗೆ ಧಾವಿಸಿದ ಸಂತ ಪೇಜಾವರ ಶ್ರೀಗಳೇ. ಅಲ್ಲಿ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ಆರಂಭಿಸಿದರು. 1978 ರಲ್ಲಿ ಆಂಧ್ರದಲ್ಲಿ ಚಂಡಮಾರುತ ಅಪ್ಪಳಿಸಿದಾಗ ಅಲ್ಲಿಗೂ ನೆರವಿನ ಹಸ್ತ ಚಾಚಿದರು. ಒಂದು ಇಡೀ ಗ್ರಾಮ ದತ್ತು ಪಡೆದು ಪುನರ್ ನಿರ್ಮಿಸಿ ಕೊಟ್ಟರು. ಮಹಾರಾಷ್ಟ್ರದ ಲಾತೂರಿನಲ್ಲಿ ಭೂಕಂಪವಾದಾಗ ಅಲ್ಲಿಗೂ ಧಾವಿಸಿ ಮತ್ತೊಂದು ಗ್ರಾಮ ಮರು ನಿರ್ಮಿಸಿದರು. 1967 ರಲ್ಲಿ ದೂರದ ಬಿಹಾರದಲ್ಲಿ ಬರದಿಂದ ಜನ ತತ್ತರಿಸಿದಾಗ ಪೇಜಾವರ ಶ್ರೀಗಳು ಪರಿಹಾರ ನಿಧಿ ಸಂಗ್ರಹಕ್ಕಾಗಿ ಉರಿಬಿಸಿಲಿನಲ್ಲೂ ಊರೂರು ಸುತ್ತಿ ಪಾದಯಾತ್ರೆ ಮಾಡಿದರು. ಗಯಾದಲ್ಲಿ ವೈದ್ಯ ಕೇಂದ್ರ ಸ್ಥಾಪಿಸಿ ಸುತ್ತಲಿನ ಹಳ್ಳಿಗಳಿಗೆ ನಿರಂತರ ಔಷಧ, ಚಿಕಿತ್ಸೆ ಕೊಡಿಸಿದರು. ಕಳೆದ ವರ್ಷ ಕೇದಾರ, ಬದರಿನಾಥದಲ್ಲಿ ಜಲಪ್ರಳಯವಾದಾಗಲೂ ತುರ್ತು ಸಹಾಯ ಒದಗಿಸುವಲ್ಲಿ ಪೇಜಾವರ ಮಠ ಮುಂದಾಗಿತ್ತು. ಈಚೆಗೆ ತಮಿಳುನಾಡಿನಲ್ಲಿ ಭಾರೀ ಮಳೆ ಬಂದು ಜನಜೀವನ ಅಸ್ತವ್ಯಸ್ತಗೊಂಡಾಗಲೂ ಸಂತ್ರಸ್ತರೆಡೆಗೆ ಪೇಜಾವರ ಶ್ರೀಗಳದು ಅದೇ ನೋಟ, ಅದೇ ಕಾಳಜಿ.
ಪೇಜಾವರ ಶ್ರೀಗಳ ಸೇವಾಕಾರ್ಯ ಅವರ ಬದುಕಿನ ಒಂದು ಭಾಗ. ಅದೊಂದೇ ಚಟುವಟಿಕೆಯಲ್ಲ. ಹಿಂದು ಧರ್ಮದ ಮೇಲೆ ದೇಶದ ಯಾವ ಮೂಲೆಯಲ್ಲಿ ದಾಳಿ ನಡೆದರೂ ಅದಕ್ಕೆ ತಡೆಗೋಡೆಯಂತೆ ನಿಂತವರು ಪೇಜಾವರ ಶ್ರೀಗಳು. ಮೀನಾಕ್ಷಿಪುರಂ ಮತಾಂತರ, ತಿರುಪತಿಯಲ್ಲಿ ಕ್ರೈಸ್ತೀಕರಣ, ಅಯೋಧ್ಯಾ ವಿವಾದ, ರಾಮಸೇತು ಭಂಗ, ನಂದಿಕೂರು ಉಷ್ಣ ವಿದ್ಯುತ್ಸ್ಥಾವರ ವಿವಾದ, ಶೃಂಗೇರಿ ಸುತ್ತಮುತ್ತ ನಕ್ಸಲ್ರ ಹಾವಳಿ, ಬುದ್ಧಿಜೀವಿಗಳಿಂದ ಭಗವದ್ಗೀತೆಯ ಖಂಡನೆಯ ಸಂದರ್ಭ… ಹೀಗೆ ಎಲ್ಲ ಸಂದರ್ಭಗಳಲ್ಲೂ ಸತ್ಯ, ನ್ಯಾಯದ ಪರವಾಗಿ ಧ್ವನಿ ಎತ್ತಿದ ದಿಟ್ಟ ಸಂತ ಇವರು. ನನಗೇಕೆ ಇಲ್ಲದ ಉಸಾಬರಿ ಎಂದು ತಣ್ಣಗೆ ಕೃಷ್ಣ ಪೂಜೆಯಲ್ಲಿ ನಿರತರಾದವರಲ್ಲ. ಹಾಗೆ ಮಾಡಲು ಅವರ ಮನಸ್ಸು ಒಪ್ಪುತ್ತಲೂ ಇರಲಿಲ್ಲ. ಹಿಂದು ಸಮಾಜಕ್ಕೆ ಹಾನಿ ಎಸಗುವ ಇಂತಹ ಪ್ರಸಂಗಗಳು ಎದುರಾದಾಗ ಶ್ರೀಗಳ ಜೀವ ಚಡಪಡಿಸುತ್ತಿತ್ತು. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ನಕ್ಸಲರ ಪಿಡುಗು ತಾರಕಕ್ಕೇರಿದಾಗ, ಸರ್ಕಾರ ಅಸಹಾಯಕ ಸ್ಥಿತಿಯಲ್ಲಿದ್ದಾಗ, ಆ ಪಿಡುಗನ್ನು ಬಹುತೇಕ ಶಮನಗೊಳಿಸಿದ್ದು ಪೇಜಾವರ ಶ್ರೀಗಳ ಮಾರ್ಗದರ್ಶನದ ಸೇವಾಕಾರ್ಯ. ನಕ್ಸಲ್ ಚಳುವಳಿ ಪ್ರಖರವಾಗಿದ್ದಾಗ ಸಶಸ್ತ್ರ ಪೊಲೀಸರೇ ಹೋಗಲು ಭಯ ಪಡುತ್ತಿದ್ದ ಕುಗ್ರಾಮಗಳಿಗೆ ೮೫ರ ಈ ವಯೋವೃದ್ಧ ಸಂನ್ಯಾಸಿ ನಿರ್ಭಯವಾಗಿ ತೆರಳಿ, ಅಲ್ಲಿನ ಗಿರಿಜನರ ಮನಸ್ಸುಗಳಿಗೆ ಸಾಂತ್ವನ, ಅಭಯ ಹೇಳಿದರು. ನಕ್ಸಲ್ ಚಳುವಳಿ ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ ಎಂದು ಅರಿವು ಮೂಡಿಸಿದರು. ಶಸ್ತ್ರಗಳಿಂದ ಅಲ್ಲ, ಆದರೆ ಸೇವೆಯ ಮೂಲಕವೇ ಇಂತಹ ಚಳುವಳಿಯನ್ನು ಶಮನಗೊಳಿಸಬಹುದೆಂದು ಅಕ್ಷರಶಃ ತೋರಿಸಿಕೊಟ್ಟರು. ನಕ್ಸಲರ ಕಬಂಧ ಹಿಡಿತದಲ್ಲಿದ್ದ ಸಾವಿರಾರು ಗಿರಿಜನರ ಮನೆಗಳಿಗೆ ವಿದ್ಯುತ್, ನೀರು, ರಸ್ತೆ, ಮಕ್ಕಳಿಗೆ ವಿದ್ಯೆ… ಹೀಗೆ ಹಲವು ಬಗೆಯ ಸೇವಾ ಚಟುವಟಿಕೆ ಒದಗಿಸಿ ಗಿರಿಜನರ ಹೃದಯ ಗೆದ್ದರು.
ಅಸ್ಪೃಶ್ಯತೆ, ಪ್ರಕೃತಿ ವಿಕೋಪ, ನಕ್ಸಲ್ ಚಳುವಳಿಯಂತಹ ವಿದ್ಯಮಾನಗಳಷ್ಟೇ ಅಲ್ಲ, ದೇಶದಲ್ಲಿ ಸರ್ವಾಧಿಕಾರದ ಕರಿನೆರಳು ಆವರಿಸಿ, ಪ್ರಜಾತಂತ್ರ ಹಳಿತಪ್ಪಿದಾಗಲೂ ಪೇಜಾವರ ಶ್ರೀಗಳದ್ದು ಮತ್ತೆ ಅದೇ ಬಗೆಯ ಧನಾತ್ಮಕ ಚಿಂತನೆ. ಪ್ರಜಾತಂತ್ರಕ್ಕೊದಗಿದ ಈ ಗಂಡಾಂತರವನ್ನು ಪರಿಹರಿಸಲು ಬಗೆಬಗೆಯ ಪ್ರಯತ್ನ. 1975 ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ತನ್ನ ಅಧಿಕಾರ ಉಳಿಸಿಕೊಳ್ಳಲು ದೇಶದ ಮೇಲೆ ಅನ್ಯಾಯವಾಗಿ ಸರ್ವಾಧಿಕಾರ ಹೇರಿದಾಗ, ಪೇಜಾವರ ಶ್ರೀಗಳು ಉಳಿದವರಂತೆ ಹೆದರಿ ಸುಮ್ಮನಾಗಲಿಲ್ಲ. 1975 ರ ಜುಲೈ 12 ರಂದು ಇಂದಿರಾಗಾಂಧಿಗೆ ಒಂದು ಹೃದಯಸ್ಪರ್ಶಿಯಾದ ಪತ್ರ ಬರೆದು, ’ಪ್ರಜಾಪ್ರಭುತ್ವದ ಆಚರಣೆಯಲ್ಲಿ ಅಹಿತಕರವಾದ ಘಟನೆಗಳು ನಡೆಯುವುದುಂಟು. ಆದರೆ ಅದನ್ನು ನೆಪಮಾಡಿಕೊಂಡು, ಪ್ರಜಾಪ್ರಭುತ್ವವನ್ನೇ ಕೊನೆಗಾಣಿಸುವುದು ಯುಕ್ತವಾಗದು… ಆಳುವ ಪಕ್ಷ, ವಿರೋಧ ಪಕ್ಷ ಎರಡಕ್ಕೂ ಸಮಾನವಾಗಿ ಅನ್ವಯಿಸುವ ಆಚಾರಸಂಹಿತೆಯನ್ನು ರೂಪಿಸುವುದು ಅವಶ್ಯಕ. ಈ ಸಲಹೆ ತಮಗೆ ಸಮ್ಮತವಾದಲ್ಲಿ ಮಧ್ಯಸ್ಥಿಕೆ ವಹಿಸಿ ಸೌಹಾರ್ದ ಉಂಟುಮಾಡಲು ಶಕ್ತಿಮೀರಿ ಶ್ರಮಿಸಲು ನಾವು ಸಿದ್ಧ… ನಾವು ಸಂನ್ಯಾಸಿಗಳು, ಭಿಕ್ಷೆ ಬೇಡುವುದೇ ನಮ್ಮ ಧರ್ಮ. ನಿಮ್ಮಲ್ಲಿ ನಾವು ಬೇಡುವುದು ಇದನ್ನೇ – ನಮ್ಮ ಜನಕ್ಕೆ ಸ್ವಾತಂತ್ರ್ಯ ಮರಳಿ ಕೊಡಿ, ಪ್ರಜಾಪ್ರಭುತ್ವವನ್ನು ಉಳಿಸಿ…’ ಎಂದು ವಿನಂತಿಸಿದ್ದರು. ಆದರೆ ಈ ಪತ್ರಕ್ಕೆ ಉತ್ತರ ಬರಲಿಲ್ಲ. ಆಗಸ್ಟ್ನಲ್ಲಿ ಮತ್ತೊಂದು ಪತ್ರವನ್ನು ಇನ್ನಷ್ಟು ಪ್ರಖರ ಮಾತುಗಳಲ್ಲಿ ಸ್ವಾಮೀಜಿ ಬರೆದಿದ್ದರು : ’… ಮುಖದೆದುರಿಗೆ ಸಿಹಿಯಾಗಿ ಮಾತನಾಡುವಂತಹವರು ಹೇರಳವಾಗಿ ಸಿಗುತ್ತಾರೆ. ಆದರೆ ಕಹಿಯಾದರೂ ವಿಹಿತವಾದುದನ್ನು ಹೇಳುವವರಾಗಲಿ, ಕೇಳುವವರಾಗಲಿ ಸಿಗುವುದು ಕಷ್ಟ. ಭಗವಂತ ನಿಮ್ಮನ್ನು ಅನುಗ್ರಹಿಸಲಿ. ಉಚಿತವಾದ ಮಾರ್ಗ ತೋರಲಿ. ಪ್ರಜಾಪ್ರಭುತ್ವದ ವಿಡಂಬನೆಯನ್ನು ಈಗಲಾದರೂ ಅಂತ್ಯಗೊಳಿಸಿ’. ಈ ಪತ್ರಕ್ಕೂ ಇಂದಿರಾಗಾಂಧಿ ಉತ್ತರಿಸಲಿಲ್ಲ ಎಂಬುದು ಬೇರೆ ಮಾತು. ಆದರೆ ಹೀಗೆ ಖಾರವಾಗಿ ಪತ್ರಗಳನ್ನು ಬರೆದ ಪೇಜಾವರ ಶ್ರೀಗಳನ್ನು ಬಂಧಿಸುವ ಧೈರ್ಯ ಮಾತ್ರ ಆಕೆಗೆ ಇರಲಿಲ್ಲ. ಪೇಜಾವರ ಶ್ರೀಗಳಂತೂ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸುಮ್ಮನಿರಲಿಲ್ಲ. ಪ್ರವಾಸ ಹೋದಲ್ಲೆಲ್ಲಾ ತುರ್ತುಪರಿಸ್ಥಿತಿ ವಿರುದ್ಧ ತಮ್ಮ ಧ್ವನಿ ಮೊಳಗಿಸದೆ ಬಿಡಲಿಲ್ಲ. ’ಇಂದು ಸಮಾಜದಲ್ಲಿ ಎರಡು ವರ್ಗಗಳಿವೆ. ಒಂದು ರಾವಣ ವರ್ಗ, ಇನ್ನೊಂದು ಕುಂಭಕರ್ಣ ವರ್ಗ. ಆದರೆ ಈಗ ಬೇಕಾಗಿರುವುದು ವಿಭೀಷಣ ವರ್ಗ. ಕೆಟ್ಟ ಆಡಳಿತ ನಡೆಸುತ್ತಿರುವ ರಾವಣ ವರ್ಗಕ್ಕೆ ವಿವೇಕದ ಮಾತು ಹೇಳುವ ವಿಭೀಷಣ ವರ್ಗ ತಯಾರಾಗಬೇಕು’ ಎಂದು ಜನತೆಯಲ್ಲಿ ಜಾಗೃತಿ ಮೂಡಿಸಿದರು.
ಈಗಲೂ ಅಷ್ಟೆ, ರಾಷ್ಟ್ರೀಯತೆ, ಹಿಂದು ಧರ್ಮ, ದೇಶದ ಅಖಂಡತೆ, ಶ್ರದ್ಧಾ ಕೇಂದ್ರ ಇತ್ಯಾದಿ ವಿಷಯಗಳಿಗೆ ಅಪಚಾರವಾದಾಗ ಪೇಜಾವರ ಶ್ರೀಗಳದು ಸಿಡಿದೇಳುವ ಪ್ರವೃತ್ತಿ. ಅದಕ್ಕೇ ಅವರೊಬ್ಬ ರಾಷ್ಟ್ರಪ್ರಜ್ಞೆಯ ದೀವಿಗೆಯಾದ ಸಂತಶ್ರೇಷ್ಠ. ಪೇಜಾವರ ಶ್ರೀಗಳಂತಹ ಬ್ರಹ್ಮತೇಜ – ಕ್ಷಾತ್ರತೇಜ ಮಿಳಿತಗೊಂಡ ಸಂತರ ಸಂತತಿ ಸಾವಿರವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.