ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ‘ನಿನಾದ’ ಕ್ಕೆ ಹೇಮಾವತಿ ಹೆಗ್ಗಡೆಯವರು ಶನಿವಾರ ಚಾಲನೆ ನೀಡಿದರು.
ಬಳಿಕ ಶುಭ ಹಾರೈಸಿ ಮಾತನಾಡಿದ ಅವರು ನಾವು ಇಂದು ಮಾಹಿತಿ ಯುಗದಲ್ಲಿದ್ದೇವೆ. ಅನಕ್ಷರಸ್ಥರಿಗೂ, ಗ್ರಾಮೀಣ ಪ್ರದೇಶದವರಿಗೂ ಸಹ ಮಾಧ್ಯಮಗಳ ಮೂಲಕ ದೇಶ- ವಿದೇಶಗಳ ಸುದ್ದಿ ತಲುಪುತ್ತಿದೆ. ಹಿಂದಿನ ಕಾಲದಲ್ಲಿ ಮನೆಯ ಯಜಮಾನರು ಕಾಫಿ ಕುಡಿಯುತ್ತಾ ರೇಡಿಯೋದಲ್ಲಿ ನ್ಯೂಸ್ ಕೇಳ್ತಾ ಇದ್ರೆ, ಮಕ್ಕಳು ಹಿಂದಿ ಚಿತ್ರಗೀತೆ, ಮನೆಯ ಮಹಿಳೆಯರು ಅಡುಗೆ ಕಾರ್ಯಕ್ರಮಗಳನ್ನು ಕೇಳಲು ಹವಣಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಪಾಕಿಸ್ತಾನ- ಭಾರತ ಯುದ್ಧ ಹಾಗೂ ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ಮನೆಯಲ್ಲಿ ಕಾರ್ಯಕ್ರಮಗಳನ್ನು ಎಲ್ಲರೂ ಕುಳಿತು ಕೇಳುತ್ತಿದ್ದೆವು. ಈಗ ರೈತರಿಗೆ ಹೈನುಗಾರಿಕೆ, ಕೃಷಿಯ ಬಗ್ಗೆ ಮಾಹಿತಿ ನೀಡಲು ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೇಡಿಯೋಗಳನ್ನು ವಿತರಿಸುತ್ತಿದ್ದೆವು. ಮಹಿಳೆಯರು ಕೂಡಾ ಸಂತಸದಿಂದ ರೇಡಿಯೊಗಾಗಿ ಕಾರ್ಯಕ್ರಮ ನೀಡುತ್ತಿದ್ದರು. ಇದು ಅವರ ಅಭಿವೃದ್ಧಿಗೆ ಇಂಬು ನೀಡುತ್ತದೆ ಎಂದರು.
ಬೀಜ ಬೆಳೆದು ಮರವಾಗುವಾಗ ಫಲವತ್ತತೆಯನ್ನು ಪಡೆದು ಉತ್ತಮ ಫಲವನ್ನು ಸಮಾಜಕ್ಕೆ ನೀಡುವ ಛಲ ಇರುವಂತಾಗಬೇಕು. ಈ ರೇಡಿಯೋ ಕೇಂದ್ರದಲ್ಲಿ ಕಾಲೇಜಿನ ಕೋರ್ಸ್ಗಳು, ಸಾಧನೆಗಳ ಬಗ್ಗೆ, ಪ್ರವಾಸಿ, ಧಾರ್ಮಿಕ ಕೇಂದ್ರಗಳ ಮಾಹಿತಿ, ಕೃತಿ- ಕಾವ್ಯ ವಿಮರ್ಶೆಗಳನ್ನು ಬಿತ್ತರಿಸುವಂತಾಗಬೇಕು. ನಮ್ಮ ಸಂಸ್ಕೃತಿಯನ್ನು ಪಸರಿಸುವ ಕಾರ್ಯವಾಗಬೇಕು ಎಂದು ಹೇಳಿ ಅವರು ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆಗಳಿರುತ್ತವೆ ಅದನ್ನು ಹೊರತೆಗೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಧ.ಮಂ.ಶಿ. ಸಂಸ್ಥೆ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ಛಲ ಬಿಡದ ತ್ರಿವಿಕ್ರಮನಂತೆ ಕೆಲಸ ಮಾಡಿದ್ದರಿಂದ ಇಂದು ಬಾನುಲಿ ಕೇಂದ್ರ ಉದ್ಘಾಟನೆಗೊಂಡಿದೆ. ಇತರ ಕೆಲಸಗಳೊಂದಿಗೆ ಮಾಹಿತಿ, ಸುದ್ದಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವ ಏಕೈಕ ಮಾಧ್ಯಮ ರೇಡಿಯೋ. ಎಲ್ಲರೂ ಇದರ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಮೋಹನನಾರಾಯಣ. ಸೋನಿಯಾ ಯಶೋವರ್ಮ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೃತೀಯ ಬಿ.ಎ. ವಿದ್ಯಾರ್ಥಿ ಪ್ರಶಾಂತ್ ದಿಡುಪೆ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.