ಕಳೆದ 5 ದಶಕಗಳಿಂದ ಮೈ ತುಂಬಾ ರಾಮನ ಹೆಸರಿನ ಟ್ಯಾಟೋ ಹಾಕಿಕೊಂಡು ಬದುಕುತ್ತಿರುವ ಮಹೆತ್ತರ್ ರಾಮ್ ಟಂಡನ್ ಅವರಿಗೆ ತಮ್ಮ ಬಗ್ಗೆ ಅದೇನೋ ಹೆಮ್ಮೆ. ಬಿಳಿ ಲುಂಗಿ, ತಲೆಯಲ್ಲೊಂದು ನವಿಲುಗರಿಯ ಕಿರೀಟ ತೊಟ್ಟು ಓಡಾಡುವ ಇವರನ್ನು ಕಂಡರೆ ಎಲ್ಲರಿಗೂ ಅದೇನೋ ಗೌರವ.
ಛತ್ತೀಸ್ಗಢದ ಪೂರ್ವ ಭಾಗದಲ್ಲಿ ಅತೀ ಹಿಂದುಳಿದ ಗ್ರಾಮದಲ್ಲಿ ವಾಸಿಸುವ ಇವರು, ರಾಮ್ನಾಮಿ ಸಮಾಜ್ ಎಂಬ ಧಾರ್ಮಿಕ ಚಳುವಳಿಯ ಭಾಗವೂ ಹೌದು. ರಾಮನ ಹೆಸರನ್ನು ಮೈತುಂಬಾ ಬರೆಸಿಕೊಂಡ ಬಳಿಕ ನನಗೆ ಹೊಸ ಜನ್ಮ ಸಿಕ್ಕಿತು, ಹಳೆಯ ನಾನು ಸತ್ತು ಹೋದೆ ಎನ್ನುತ್ತಾರೆ ಟಂಡನ್.
ಇವರು ಮತ್ತು ಇವರ ಸಮುದಾಯದವರು ರಾಮನ ಹೆಸರನ್ನು ಮೈತುಂಬಾ ಹಚ್ಚೆ ಹಾಕಿಸಲು ಒಂದು ಕಾರಣವೂ ಇದೆ. ಹಿಂದೆ ಹಿಂದುಳಿದ ವರ್ಗದವರನ್ನು ದೇಗುಲದೊಳಕ್ಕೆ ಪ್ರವೇಶಿಸಲು, ಬಾವಿ ಮುಟ್ಟಲು, ಹೋಟೆಲ್ನಲ್ಲಿ ಊಟ ಮಾಡಲು ಮೇಲ್ಜಾತಿಯವರು ಬಿಡುತ್ತಿರಲಿಲ್ಲ. ಇದರಿಂದ ಮುಕ್ತಿ ಪಡೆಯಲೆಂದೇ ಇವರು ರಾಮನ ಹೆಸರನ್ನು ಹಚ್ಚೆ ಹಾಕಿಸುತ್ತಿದ್ದರು. ಅದೊಂದು ಸಂಪ್ರದಾಯವಾಗಿಯೇ ಮುಂದುವರೆಯಿತು.
ಇದೇ ರೀತಿ ಟಂಡನ್ ಕೂಡ ಮೈತುಂಬಾ ರಾಮ ನಾಮ ಬರೆಸಿಕೊಂಡರು. ತಲೆಯಲ್ಲಿ ನವಿಲುಗರಿಯನ್ನು ತೊಟ್ಟು ಓಡಾಡ ತೊಡಗಿದರು. ದೇವರು ಎಲ್ಲರಲ್ಲೂ ಇದ್ದಾನೆ, ದೇವರು ಕೇವಲ ಒಂದು ವರ್ಗಕ್ಕೆ ಸೇರಿದವನಲ್ಲ ಎಂಬ ಸಂದೇಶ ಸಾರುವುದು ಇವರ ಉದ್ದೇಶವಾಗಿತ್ತು.
18 ವರ್ಷದವರಿದ್ದಾಗ ಹಚ್ಚೆ ಹಾಕಿಸಿಕೊಂಡ ಟಂಡನ್ ಅವರಿಗೆ ಈಗ 78 ವಯಸ್ಸು. ಹಚ್ಚೆ ಮಾಸಿದೆ ಆದರೆ ಇವರ ಸ್ಫೂರ್ತಿ, ರಾಮನೆಡೆಗಿನ ಭಕ್ತಿ ಮಾಸಿಲ್ಲ.
ಅವರ ಗ್ರಾಮದಲ್ಲಿ 10 ಸಾವಿರ ಮಂದಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇತ್ತೀಚಿನ ಯುವಕರು ಮೈತುಂಬಾ ದೊಡ್ಡ ದೊಡ್ಡ ಹಚ್ಚೆ ಹಾಕಿಸಿಕೊಳ್ಳದಿದ್ದರೂ ಸಂಪ್ರದಾಯ ಎಂಬಂತೆ ಚಿಕ್ಕ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.
ಬದಲಾದ ಕಾಲದಲ್ಲಿ ಜಾತಿ ಪದ್ಧತಿ ಮಂಕಾಗುತ್ತಿದೆ, ಕೆಳವರ್ಗದವರ ಬದುಕು ಪ್ರಗತಿಯಾಗುತ್ತಿದೆ. ಹೀಗಾಗೀ ಮೈತುಂಬಾ ರಾಮನ ಹೆಸರನ್ನು ಹಾಕಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುತ್ತಾರೆ ಟಂಡನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.