ನಿತೀಶ್-ಲಾಲೂ ದರ್ಬಾರಿನಲ್ಲೀಗ ಗೂಂಡಾಗಳದ್ದೇ ಪಾರುಪತ್ಯ
ಜೆಡಿಯು – ಆರ್ಜೆಡಿ – ಕಾಂಗ್ರೆಸ್ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಬಿಹಾರದಲ್ಲಿ ಜಂಗಲ್ರಾಜ್ ಮರುಕಳಿಸುತ್ತದೆ. ಕ್ರಿಮಿನಲ್ಗಳ ಹಾವಳಿ ಹೆಚ್ಚುತ್ತದೆ ಎಂದು ಕಳೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಪದೇಪದೇ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಬಿಹಾರಿಗಳು ಗಂಭೀರವಾಗಿ ಕೇಳಿಸಿಕೊಳ್ಳಲೇ ಇಲ್ಲ. ಅವರೆಲ್ಲ ಬಹುತೇಕವಾಗಿ ತಮ್ಮ ಸಮ್ಮತಿಯ ಮುದ್ರೆ ಒತ್ತಿದ್ದು ಅದೇ ಮಹಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ. ಪರಿಣಾಮವಾಗಿ ನಿತೀಶ್-ಲಾಲೂ ಮೈತ್ರಿಕೂಟ ಅಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ಬಿಜೆಪಿ ವಿರೋಧ ಪಕ್ಷಕ್ಕೆ ಸೀಮಿತವಾಗಿ ಉಳಿದಿತ್ತು.
ಮೋದಿ ಹೇಳಿದ ಮಾತು ಮಾತ್ರ ಸುಳ್ಳಾಗಲಿಲ್ಲ. ನಿತೀಶ್-ಲಾಲೂ ಜೋಡಿಯ ಮೈತ್ರಿಕೂಟ ಅಧಿಕಾರಕ್ಕೇರಿದ ಒಂದೇ ವಾರದಲ್ಲಿ ಬಿಹಾರದಾದ್ಯಂತ ಕೊಲೆ, ಸುಲಿಗೆ, ಲೂಟಿ, ಅತ್ಯಾಚಾರದಂತಹ ಅದೇ ಹಿಂದಿನ ಬರ್ಬರ ಘಟನೆಗಳು ಮರುಕಳಿಸಿವೆ. ಚುನಾವಣಾ ಸಂದರ್ಭದಲ್ಲಿ ಮೋದಿ ಹೇಳಿದ ಎಚ್ಚರಿಕೆಯ ಮಾತುಗಳೆಲ್ಲವೂ ನಿಜವಾಗತೊಡಗಿವೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಘಟಿಸಿದ ಈ ಕೆಲವು ಘಟನೆಗಳನ್ನು ಸುಮ್ಮನೆ ಓದುತ್ತಾ ಹೋಗಿ. ಡಿ.2-ನಲಂದಾದಲ್ಲಿ ಹಾರ್ಡ್ವೇರ್ ವ್ಯಾಪಾರಿಯ ಕೊಲೆ. ಡಿ.4- ಮೊಕಮಾದಲ್ಲಿ ಅಪರಿಚಿತ ಗೂಂಡಾಗಳಿಂದ ತಂದೆ ಮತ್ತು ಮಗನ ಕೊಲೆ. ಡಿ.7-ಪಾಟ್ನಾದಲ್ಲಿ ಟ್ರಾಕ್ಟರ್ ಏಜೆನ್ಸಿಯ ಮಾಲೀಕನ ಅಪಹರಣ ಹಾಗೂ ಕೊಲೆ. ಡಿ.9 – ಗೋಪಾಲ್ ಗಂಜ್ನಲ್ಲಿ ವ್ಯಾಪಾರಿಯೊಬ್ಬರ ಕೊಲೆ. ಡಿ.10-ಪಾಟ್ನಾದಲ್ಲಿ 60 ವರ್ಷ ವಯೋವೃದ್ಧ ಬ್ಯಾಂಕ್ ಗಾರ್ಡ್ ಕೊಲೆ. ಡಿ.11-ಪಾಟ್ನಾದಲ್ಲಿ ಮೀನು ವ್ಯಾಪಾರಿಯ ಕೊಲೆ. ಡಿ.12-ಪಾಟ್ನಾದಲ್ಲಿ ಕಾರಿನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ. ಡಿ.13-ಮಧುಬನಿಯಲ್ಲಿ ಸರ್ಕಾರಿ ನೌಕರನೊಬ್ಬನಿಂದ 15 ಲಕ್ಷ ರೂ. ಸುಲಿಗೆ. ಅದೇ ದಿನ ಪಾಟ್ನಾದಲ್ಲಿ ರೈತನೊಬ್ಬನ ಶಂಕಾಸ್ಪದ ಸಾವು. ಡಿ.15-ರೋಥಾಸ್ನಲ್ಲಿ ೮ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ. ಡಿ.20-ವೈದ್ಯರೊಬ್ಬರ ಸಹಾಯಕರನ್ನು ಗುಂಡಿಟ್ಟು ಕೊಲೆ. ಡಿ.26-ದರ್ಭಾಂಗದಲ್ಲಿ ಇಬ್ಬರು ಇಂಜಿನಿಯರ್ಗಳ ಅಪಹರಣ. 75 ಕೋಟಿ ಹಣಕ್ಕೆ ಆಗ್ರಹ. ಹಣ ಕೊಡದಿದ್ದಕ್ಕೆ ಅವರಿಬ್ಬರ ಹತ್ಯೆ. ಡಿ.29-ಪಾಟ್ನಾದ ಎನ್ಐಟಿ ವಿದ್ಯಾರ್ಥಿಯ ಅಪಹರಣ. 5 ಲಕ್ಷ ಹಣಕ್ಕೆ ಬೇಡಿಕೆ. ಡಿ.30-ಪಾಟ್ನಾದ ಫತುವಾದಲ್ಲಿ ಸ್ಥಳೀಯ ಯುವಕನ ಕೊಲೆ. ವಸ್ತು ಪ್ರದರ್ಶನ ರಸ್ತೆಯಲ್ಲಿರುವ ಅಂಗಡಿಯಲ್ಲಿ ದರೋಡೆ.
ಇದು ನಿತೀಶ್-ಲಾಲೂ ಮೈತ್ರಿಕೂಟ ಅಧಿಕಾರಕ್ಕೆ ಬಂದ ಕೇವಲ ಒಂದೇ ತಿಂಗಳಿನಲ್ಲಿ ನಡೆದ ಘಟನೆಗಳ ಒಂದು ಸಣ್ಣ ಚಿತ್ರಣ! ನಿತೀಶ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಕಳೆದ ನ.20ರಂದು. ಇನ್ನು ಮುಂದಾದರೂ ಬಿಹಾರದಲ್ಲಿ ಎಲ್ಲರೂ ನಿರ್ಭಯವಾಗಿ ಬದುಕಬಹುದು. ಒಳ್ಳೆಯ ದಿನಗಳನ್ನು ಕಾಣಬಹುದೆಂದು ಆಗ ಜನರು ಭರವಸೆ ತಾಳಿದ್ದರು. ಆದರೆ ಇದಾಗಿ ಕೇವಲ ಮೂರು ದಿನಗಳಲ್ಲೇ, ಅಂದರೆ ನ.೨೩ರಂದೇ ಕೆಲವು ಕ್ರಿಮಿನಲ್ಗಳು ಸೀತಾಮಡಿ ಜಿಲ್ಲೆಯಲ್ಲಿರುವ ಮಾಜಿ ಸಂಸದರೊಬ್ಬರಿಗೆ ಸೇರಿದ ಪೆಟ್ರೋಲ್ ಬಂಕ್ ಅನ್ನು ಲೂಟಿ ಮಾಡಿದರು. ಬೈಕ್ನಲ್ಲಿ ಬಂದ ರೌಡಿಗಳು ಪೆಟ್ರೋಲ್ ಬಂಕ್ನಿಂದ ೧೨.೩೦ ಲಕ್ಷ ರೂ. ದರೋಡೆ ಮಾಡಿದ್ದಲ್ಲದೆ ಅಲ್ಲಿದ್ದ ಸಿಬ್ಬಂದಿಗಳನ್ನು ಹೊಡೆದು ಗಾಯಗೊಳಿಸಿದರು. ಅದೇ ದಿನ ಬಿಡಿಓ ಸಂಜೀವ್ಕುಮಾರ್ ಅವರ ಸ್ಕಾರ್ಪಿಯೋ ಕಾರನ್ನು ದುರುಳರು ಅಪಹರಿಸಿದರು. ಎಲ್ಲಕ್ಕಿಂತ ಅತ್ಯಂತ ಗಂಭೀರವಾದ ಘಟನೆಯೆಂದರೆ ಕೇವಲ ಒಂದೇ ವಾರದಲ್ಲಿ ಮೂವರು ಇಂಜಿನಿಯರ್ಗಳ ಬರ್ಬರ ಹತ್ಯೆ. ಈ ಪೈಕಿ ಒಬ್ಬ ಇಂಜಿನಿಯರ್ ಹತ್ಯೆಯಾಗಿದ್ದು ಉಪಮುಖ್ಯಮಂತ್ರಿಯಾಗಿರುವ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಸ್ವಕ್ಷೇತ್ರ ರಘೋಪುರ್ನಲ್ಲಿ!
ಹೊಸ ಸರ್ಕಾರ ಬಂದ ಬಳಿಕ ರೌಡಿಗಳ, ಕ್ರಿಮಿನಲ್ಗಳ ಭಂಡಧೈರ್ಯ ಮತ್ತಷ್ಟು ಹೆಚ್ಚಿದೆ. ಕಳೆದ 10 ವರ್ಷಗಳಿಂದ ಕೈಗೆ ಕೆಲಸವಿಲ್ಲದೇ, ಕಮಕ್ಕಿಮಕ್ ಎನ್ನದೇ ಎಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿದ್ದ ಈ ಕ್ರಿಮಿನಲ್ಗಳು ಈಗ ರಾಜಾರೋಷವಾಗಿ ಎಗ್ಗಿಲ್ಲದೇ ತಮ್ಮ ಕೈಚಳಕ ತೋರಿಸತೊಡಗಿದ್ದಾರೆ. ಪಾಟ್ನಾ ನಗರದಲ್ಲಿ ಹಾಡಹಗಲೇ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆದಿದೆ. ದಲಿತರ ಕೇರಿಯೊಂದರಲ್ಲಿ ಅಲ್ಲಿದ್ದ ಜನರನ್ನು ಥಳಿಸಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನ.8ರ ಮರುದಿನ 12 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸೋನು ಎಂಬಾತನನ್ನು 11 ದಿನಗಳ ಬಳಿಕ ಬಂಧಿಸಲಾಗಿದೆ. ಆದರೆ ಉಳಿದ ಆರೋಪಿಗಳು ಈಗಲೂ ತಲೆ ತಪ್ಪಿಸಿಕೊಂಡಿದ್ದಾರೆ. ಆ ನತದೃಷ್ಟ ಬಾಲಕಿಯ ತಂದೆಗೆ ಈಗಲೂ ಬೆದರಿಕೆಯ ಕರೆಗಳು ಬರುತ್ತಿವೆ. ಡಿ.16ರಂದು ರೋಥಾಸ್ ಎಂಬಲ್ಲಿ 8ನೇ ತರಗತಿಯ ಬಾಲಕಿಯ ಮೇಲೆ ಇದೇ ರೀತಿಯ ಸಾಮೂಹಿಕ ಅತ್ಯಾಚಾರ ನಡೆಯಿತು. ಡಿ.12 ರಂದು ಫುಲ್ವಾರಿ ಎಂಬಲ್ಲಿ 28 ವರ್ಷದ ಯುವತಿ ಮೇಲೆ ಕಾರಿನಲ್ಲೇ ಅತ್ಯಾಚಾರವೆಸಗಲಾಯಿತು.
ಇಂತಹ ಅಪರಾಧ ಕೃತ್ಯದ ಹೆಚ್ಚಳದ ಜೊತೆಗೆ ಪ್ರಾಚೀನ ಸ್ಮಾರಕಗಳಲ್ಲಿರುವ ದೇವದೇವತೆಗಳ ವಿಗ್ರಹಗಳ ಅಪಹರಣ ಕೂಡ ಎಗ್ಗಿಲ್ಲದೇ ನಡೆದಿದೆ. ಡಿ.27ರಂದು ಜಮೂರಿಯಲ್ಲಿರುವ ಭಗವಾನ್ ಮಹಾವೀರ ಅವರ ಐತಿಹಾಸಿಕ ಮಹತ್ವದ ವಿಗ್ರಹವೊಂದನ್ನು ಅಪಹರಿಸಲಾಗಿದೆ. ಅನಂತರ ಅದು ಪತ್ತೆಯಾಗಿದೆ. ದರೋಡೆಕೋರರು ಆ ವಿಗ್ರಹದ ಭಾರ ತಾಳಲಾರದೆ ಅದನ್ನು ದಾರಿಯಲ್ಲೇ ಎಸೆದು ಹೋಗಿದ್ದರು. ಡಿ.10 ರಂದು ಮುಜಫರ್ಪುರದಲ್ಲಿರುವ ಬ್ರಹ್ಮಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಭಾಗಲ್ಪುರದ ಕಹಲ್ಗಾಂವ್ ದೇವಾಲಯದ ಪ್ರಾಚೀನ ಮೂರ್ತಿಯನ್ನು ಅದೇ ರೀತಿ ಕದ್ದೊಯ್ಯಲಾಗಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಕೇವಲ 72 ಗಂಟೆಯೊಳಗೇ ಅಪರಾಧ ಕೃತ್ಯಗಳು ವಿಜೃಂಭಿಸಿವೆ. ಮುಖ್ಯಮಂತ್ರಿಗಳ ನಿವಾಸದ ಬಳಿಯೇ ಸ್ಕಾರ್ಪಿಯೊ ಕಾರೊಂದನ್ನು ಅಪಹರಿಸಲಾಗಿದೆ. ನಿತೀಶ್-ಲಾಲೂ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದು ಕ್ರಿಮಿನಲ್ಗಳಿಗೆ ಪುನರ್ವಸತಿ ಕಲ್ಪಿಸಿಕೊಟ್ಟಂತಾಗಿದೆ ಎಂದು ಪಾಟ್ನಾ ಮೂಲದ ಪತ್ರಕರ್ತ ಪ್ರಶಾಂತ್ರಂಜನ್ ಅಭಿಪ್ರಾಯ ಪಡುತ್ತಾರೆ. ಕ್ರಿಮಿನಲ್ಗಳಿಗೆ ಲಾಲೂ ಕುಟುಂಬ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿರುವುದು ಹಾಸಿಗೆ ಹಾಕಿಕೊಟ್ಟಂತಾಗಿದೆ.
ಇಷ್ಟೆಲ್ಲಾ ಕ್ರಿಮಿನಲ್ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ ನಿತೀಶ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದಿರುವುದು ಆಶ್ಚರ್ಯವೆನಿಸುತ್ತದೆ. ಕೇವಲ ಆದೇಶಗಳನ್ನು ನೀಡುವಷ್ಟಕ್ಕೇ ಮುಖ್ಯಮಂತ್ರಿ ನಿತೀಶ್ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಆ ಆದೇಶಗಳು ಜಾರಿಗೊಂಡವೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ವ್ಯವಧಾನ ಇದ್ದಂತಿಲ್ಲ. ಹೊಸದಾಗಿ ಆಯ್ಕೆಯಾಗಿರುವ ಶಾಸಕರಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ತಮಗೆ ಸಿಗಬೇಕಾದ ಸರ್ಕಾರಿ ಸವಲತ್ತು, ಬಂಗಲೆ, ಐಶಾರಾಮಿ ಕಾರುಗಳ ಬಗ್ಗೆಯೇ ಆಸಕ್ತಿ ವಹಿಸಿದ್ದಾರೆ. 9ನೇ ತರಗತಿಯಷ್ಟೇ ಓದಿರುವ, ಈಗ ಉಪಮುಖ್ಯಮಂತ್ರಿಯಾಗಿರುವ ಲಾಲೂ ಪುತ್ರ ತೇಜ್ ಪ್ರತಾಪ್ ಅವರಿಗೆ ರಾಜ್ಯದಾದ್ಯಂತ ನಡೆಯುತ್ತಿರುವ ಈ ಅಪರಾಧ ಕೃತ್ಯಗಳನ್ನು ತಡೆಗಟ್ಟದಿದ್ದರೆ ಸರ್ಕಾರದ ಮರ್ಯಾದೆ ಹರಾಜಾಗುತ್ತದೆಂದು ಅನಿಸುತ್ತಿಲ್ಲ.
ಇನ್ನು ಕ್ರಿಮಿನಲ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿಹಾಕಲಾಗಿದೆ. ವಿಶೇಷವಾಗಿ ಆರ್ಜೆಡಿ ಶಾಸಕರು ಕ್ರಿಮಿನಲ್ಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ತಾಕೀತು ಮಾಡುತ್ತಿದ್ದಾರೆ. ಅಸಲಿಗೆ ಪೊಲೀಸರು ಕೂಡ ಗೂಂಡಾಗಳಿಂದ ಸುರಕ್ಷಿತರಾಗಿಲ್ಲ. ನ.೧೮ರಂದು ಲಾಲ್ಗಂಜ್ ಠಾಣಾದಲ್ಲಿರುವ ಬೆಲ್ಸಾರ್ ಔಟ್ಪೋಸ್ಟ್ನ ಪೊಲೀಸ್ ಅಧಿಕಾರಿಯನ್ನು ಸಿಟ್ಟಿಗೆದ್ದ ಒಂದು ಕ್ರಿಮಿನಲ್ ಗ್ಯಾಂಗ್ ಹೊಡೆದುರುಳಿಸಿ ಸಾಯಿಸಿತು. ಪರಿಸ್ಥಿತಿಯನ್ನು ತಹಬಂದಿಗೆ ತರಲು ಪೊಲೀಸರು ಗುಂಡು ಹಾರಿಸಬೇಕಾಯಿತು. ಆಗ ಒಬ್ಬ ಚಿಕ್ಕ ಹುಡುಗ ಸಾವಿಗೀಡಾದ. ಇಂತಹದೇ ಘಟನೆ ಬೇಗುಸರಾಯ್ ಮತ್ತು ದರ್ಭಾಂಗ ಜಿಲ್ಲೆಗಳಲ್ಲೂ ನಡೆದಿದೆ. ಕಾನೂನುಕ್ರಮ ಕೈಗೊಳ್ಳಬೇಕಾದ ಪೊಲೀಸರೇ ಈಗ ಗೂಂಡಾಗಳಿಗೆ ಅಂಜಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಿತೀಶ್-ಲಾಲೂ ಮೈತ್ರಿಕೂಟ ಸರ್ಕಾರದ ಬಗ್ಗೆ ಬಿಹಾರದ ಮುಸ್ಲಿಮರಿಗೂ ಅಸಮಾಧಾನವಿದೆ. ಇತ್ತೀಚೆಗೆ ಬಿಹಾರ ಅಸೆಂಬ್ಲಿಯಲ್ಲಿ ರಚಿಸಲಾದ 21 ಸಮಿತಿಗಳಲ್ಲಿ ಮುಸ್ಲಿಮರಿಗೆ ನಿರೀಕ್ಷಿಸಿದಷ್ಟು ಪ್ರಾತಿನಿಧ್ಯ ನೀಡಿಲ್ಲ. ಈ ಕಮಿಟಿಗಳಲ್ಲಿ ಕೇವಲ ಮೂವರು ಮುಸ್ಲಿಂ ಶಾಸಕರಿದ್ದಾರೆ. ಇದಕ್ಕೆಲ್ಲಾ ಲಾಲೂ ಅವರ ತಾರತಮ್ಯ ನೀತಿಯೇ ಕಾರಣ ಎಂಬುದು ಮುಸ್ಲಿಂ ಮುಖಂಡರ ಆಕ್ರೋಶ. ಬಿಹಾರದ ಜನಸಂಖ್ಯೆಯಲ್ಲಿ ಶೇ.೧೮ರಷ್ಟು ಮುಸ್ಲಿಮರಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ಮುಸ್ಲಿಮರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಿಲ್ಲ ಎಂದು ಅಲಾಮೀ ಸಹಾರಾ ಎಂಬ ಉರ್ದು ಪತ್ರಿಕೆ ಟೀಕಿಸಿದೆ. ಉಪಮುಖ್ಯಮಂತ್ರಿಯಾಗಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ೯ನೇ ತರಗತಿ ಪಾಸಾದ ಲಾಲೂ ಮಗ ತೇಜ್ ಪ್ರತಾಪ್ನನ್ನು ಉಪಮುಖ್ಯಮಂತ್ರಿ ಮಾಡಿದ್ದು ಸರಿಯಲ್ಲ. ಹಿರಿಯ ಮುಸ್ಲಿಂ ಮುಖಂಡರನ್ನು ದೂರವಿಡಲಾಗಿದೆ ಎಂದು ಅದೇ ಪತ್ರಿಕೆ ದೂರಿದೆ. ಅಬ್ದುಲ್ ಬಾರೀ ಸಿದ್ಧಿಕಿಯಂತಹ ಹಿರಿಯ ಮುಸ್ಲಿಂ ನಾಯಕರನ್ನು ಕಡೆಗಣಿಸಿರುವುದರ ಬಗ್ಗೆಯೂ ಅಲಾಮಿ ಸಹಾರಾ ಪತ್ರಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಬಿಹಾರದಲ್ಲಿ ನಿತೀಶ್-ಲಾಲೂ ಜೋಡಿ ಹಿಂದೆಂದಿಗಿಂತ ಭರ್ಜರಿ ಬಹುಮತ ದೊಂದಿಗೆ ಗದ್ದುಗೆ ಹಿಡಿದಿದೆ. ಹಾಗಿರುವಾಗ ಇಂತಹ ಸರ್ಕಾರಕ್ಕೆ ಕ್ರಿಮಿನಲ್ಗಳ ವಿರುದ್ಧ ದಿಟ್ಟ ಕ್ರಮ ಜರುಗಿಸಲು ಇರುವ ಅಡ್ಡಿಯಾದರೂ ಏನು? ಮುಖ್ಯಮಂತ್ರಿ ನಿತೀಶ್ಗೆ ಯಾರ ಭಯ? ಇದು ಪ್ರಜ್ಞಾವಂತರ ಪ್ರಶ್ನೆ.
ಬಿಹಾರದ ಜನತೆ ಒಂದು ವೇಳೆ ಬಿಜೆಪಿ ಮೈತ್ರಿಕೂಟವನ್ನು ಅಧಿಕಾರದ ಗದ್ದುಗೆಗೇರಿಸಿದ್ದರೆ ಇಂತಹ ದುಃಸ್ಥಿತಿ ಖಂಡಿತ ಬರುತ್ತಿರಲಿಲ್ಲ. ಕ್ರಿಮಿನಲ್ಗಳ ಈ ಪರಿಯ ಅಟ್ಟಹಾಸಕ್ಕೆ ಅವಕಾಶವಿರುತ್ತಿರಲಿಲ್ಲ. ಆದರೆ ಈಗ ಯಾರನ್ನೂ ದೂರಿ ಪ್ರಯೋಜನವಿಲ್ಲ. ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯ ಮಾತಿನಂತೆ, ತಾವೇ ಆರಿಸಿದ ಸರ್ಕಾರವನ್ನು ಇನ್ನು 5 ವರ್ಷ ಕಾಲ ಸಹಿಸಿಕೊಳ್ಳಲೇಬೇಕು. ಜಂಗಲ್ ರಾಜ್ ಆಡಳಿತವನ್ನು ಅನುಭವಿಸಲೇಬೇಕು! ಆದರೆ ಅಲ್ಲಿಯವರೆಗೆ ಇನ್ನು ಏನೇನು ಅನಾಹುತಗಳು ನಡೆಯಲಿವೆಯೋ ಆ ಭಗವಾನ್ ಬುದ್ಧನಿಗೂ ಗೊತ್ತಿರಲಿಕ್ಕಿಲ್ಲ. ‘ಯಥಾ ಪ್ರಜಾ ತಥಾ ರಾಜಾ’ ಎಂಬ ಮಾತಿಗೆ ಈಗಿನ ಬಿಹಾರ ಒಂದು ನಿದರ್ಶನವೇ?
ಬಿಹಾರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೇರಿದ ಒಂದೇ ತಿಂಗಳಿನಲ್ಲಿ ಈ ಪರಿಯ ಕ್ರಿಮಿನಲ್ ಕೃತ್ಯಗಳು ವಿಜೃಂಭಿಸಿದ್ದರೂ ನಮ್ಮ ಪ್ರಗತಿಪರ ಮಾಧ್ಯಮಗಳು ಅದನ್ನು ವರದಿ ಮಾಡಲಿಲ್ಲ. ಬಿಜೆಪಿ ಆಡಳಿತದ ರಾಜ್ಯದಲ್ಲಿ ಸಣ್ಣದೊಂದು ಘಟನೆ ಜರುಗಿದರೂ ಅದಕ್ಕೆ ಭೂತಗನ್ನಡಿ ಹಿಡಿಯುವ ಅರ್ನಾಬ್ ಗೋಸ್ವಾಮಿ, ರಾಜ್ದೀಪ್ ಸರ್ದೇಸಾಯಿ, ಬರ್ಖಾದತ್, ಸಾಗರಿಕಾ ಘೋಷ್ ಮೊದಲಾದ ಮಾಧ್ಯಮ ಮಹನೀಯರು ಬಿಹಾರದ ಪ್ರಸಕ್ತ ವಿದ್ಯಮಾನಗಳಿಗೆ ಏಕೆ ಕನ್ನಡಿ ಹಿಡಿಯುತ್ತಿಲ್ಲ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.