ಬೆಂಗಳೂರು : ದೇಶದ ಮೂಲೆ ಮೂಲೆಗಳ ಹಾಗೂ ನಾಲ್ಕಕ್ಕೂ ಅಧಿಕ ದೇಶಗಳ ಜ್ಯೋತಿಷಿಗಳನ್ನು ಒಂದೆಡೆ ಸೇರಿಸಿ ನಡೆಸುವ 6 ನೇ ಅಂತರರಾಷ್ಟ್ರೀಯ ಜ್ಯೋತಿಷ ಸಮ್ಮೇಳನ ಡಿಸೆಂಬರ್ 23, 24, ಮತ್ತು 25 ರಂದು 3 ದಿನಗಳ ಕಾಲ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿದೆ. ವ್ಯಕ್ತಿಯ ‘ಜಾತಕದ ಆಧಾರದ ಮೇಲೆ ಆತನ ಆರೋಗ್ಯದ ಸ್ಥಿತಿಗತಿ’ ಎಂಬುದು ಸಮ್ಮೇಳನದಲ್ಲಿ ಈ ಬಾರಿಯ ಚರ್ಚೆಯ ಪ್ರಮುಖ ವಿಷಯವಾಗಿರುತ್ತದೆ.
ವ್ಯಕ್ತಿಯ ಜಾತಕದಲ್ಲಿ ಸೂಚಿಸುವಂತಹ ರೋಗಗಳನ್ನು ನಿಖರವಾಗಿ ವಿಮರ್ಶೆ ಮಾಡಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾವ ಕಾಯಿಲೆ ಯಾರಿಗೆ ಯಾವಾಗ ಯಾಕೆ ಬರುತ್ತದೆ ಹಾಗೂ ಅದಕ್ಕೆ ಸೂಕ್ತ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ವಿವಿಧ ಗಣ್ಯ ಜ್ಯೋತಿಷಿಗಳ ವಿಚಾರಧಾರೆಗಳು ಈ ಬಾರಿಯ ಸಮ್ಮೇಳನದಲ್ಲಿ ಗಹನವಾಗಿ ಚರ್ಚಿಸಲಾಗುವುದು ಎಂದು ಸಮ್ಮೇಳನದ ಸಂಘಟಕರೂ ಆಗಿರುವ ದಿವ್ಯಜ್ಯೋತಿ ಜ್ಯೋತಿಷ್ಯ ಮಹಾವಿದ್ಯಾಲಯದ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲ ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.
ಜ್ಯೋತಿಷ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಶ್ರೀಬೇಲಿಮಠದ ಶಿವರುದ್ರ ಮಹಾ ಸ್ವಾಮೀಜಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಜಯನಗರ ಶಾಸಕರಾದ ಶ್ರೀ ವಿಜಯ ಕುಮಾರ್, ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ವೆಂಕಟಾಚಲಯ್ಯ ಸಹಿತ ಹಲವು ಗಣ್ಯರು ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಅಧಿಕ ಜ್ಯೋತಿಷಿಗಳು ಹಾಜರಿರುವರು. ಮಲೇಷ್ಯ, ಸಿಂಗಾಪುರ, ನೇಪಾಳ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾದಲ್ಲಿರುವ ಜ್ಯೊತಿಷಿಗಳು ಪಾಲ್ಗೊಳ್ಳುವರು. ಜ್ಯೋತಿಷದಲ್ಲಿನ ಹಲವು ವಿಭಾಗಗಳ ಜ್ಯೋತಿಷಿಗಳು ಒಂದೆಡೆ ಸೇರುವ ಅಪರೂಪದ ವಿದ್ಯಮಾನವೂ ಇದಾಗಿರುತ್ತದೆ.
ಸನ್ಮಾನ : ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನೂರಾರು ಗಣ್ಯಮಾನ್ಯರಿಗೆ, ಜೋತಿಷ್ಯ ವಿದ್ವಾಂಸರಿಗೆ ಈ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಪ್ರತಿನಿಧಿಗಳಿಗೆ ಬೆಳಗ್ಗಿನ ಕಾಫಿ, ತಿಂಡಿ, ಮಧ್ಯಾಹ್ನದ ಊಟ, ಸಂಜೆ ಕಾಫಿ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ದೂರದಿಂದ ಬಂದವರಿಗೆ ರಾತ್ರಿ ಊಟ ಸಹಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಗಂಭೀರ ಸಮಸ್ಯೆ : ಶಾಸ್ತ್ರಬದ್ಧವಾಗಿ ಜ್ಯೋತಿಷ ವ್ಯಾಸಂಗ ಮಾಡಿದ್ದೇ ಆದರೆ ಅದೊಂದು ಅದ್ಭುತ ವಿಜ್ಞಾನ. ಜಗತ್ತಿನ ಈಗಿನ ಯಾವ ವೈಜ್ಞಾನಿಕ ಸಂಶೋಧನೆಯೂ ಜ್ಯೊತಿಷದಲ್ಲಿ ಹೇಳದೆ ಇರುವ ವಿಶಿಷ್ಟ ಸಂಶೋಧನೆಯಲ್ಲ. ಜ್ಯೋತಿಷದ ಬಗ್ಗೆ ಎಲ್ಲರಲ್ಲೂ ಗೌರವ ಮೂಡಿಸುವುದು, ಜ್ಯೋತಿಷದ ಬಗ್ಗೆ ಇರುವ ತಪ್ಪು ಗ್ರಹಿಕೆಗಳನ್ನು ಕಳೆಯುವುದು, ಆಧುನಿಕ ಜೀವನ ಕ್ರಮದಲ್ಲಿ ಸಾಂಸಾರಿಕ ತಾಪತ್ರಯಗಳನ್ನು ಶುದ್ಧ ಜ್ಯೋತಿಷದ ಮೂಲಕ ಬಗೆಹರಿಸುವುದು ಸಹಿತ ಹಲವು ವಿಚಾರಗಳನ್ನು 6ನೇ ಅಂತರರಾಷ್ಟೀಯ ಜ್ಯೊತಿಷ ಸಮ್ಮೇಳನ ನಡೆಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.