ಜಾತ್ಯತೀತತೆ ಮತ್ತು ಲಿಂಗ ಸಮಾನತೆ – ಈ ಎರಡು ಪದಗಳು ದೇಶ, ಕಾಲ, ಸಂಸ್ಕೃತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಅದರಲ್ಲೂ ಲಿಂಗ ಸಮಾನತೆ ಸಾಕಷ್ಟು ಚರ್ಚೆಗೆ ಒಳಗಾಗಿರುವ ಪದ. ಹಿಂದುಧರ್ಮ ಪುರುಷರಿಗಿಂತ ಹೆಚ್ಚು ಗೌರವವನ್ನು, ಸ್ವಾತಂತ್ರ್ಯವನ್ನು ಸ್ತ್ರೀಯರಿಗೆ ನೀಡಿರುವುದು ಅನಾದಿಕಾಲದಿಂದಲೂ ಕಂಡುಬಂದಿರುವ ವಾಸ್ತವ. ಆಕೆಯನ್ನು ದೇವತೆಯೆಂದೂ ಮನೆಯ ಲಕ್ಷ್ಮಿಯೆಂದೂ ವ್ಯಾಖ್ಯಾನಿಸಿರುವ ಹಿಂದುಧರ್ಮ, ಕೆಲವು ಸ್ತ್ರೀ ವಾದಿಗಳು ಆಗಾಗ ಆರೋಪಿಸುವಂತೆ ಮಹಿಳೆಗೆ ಯಾವುದೇ ಕಾರಣಕ್ಕೂ ಯಾವುದೇ ನಿರ್ಬಂಧ ಹೇರಿಲ್ಲ. ಪುರುಷರಿಗಿಂತ ಕೀಳಾಗಿ ಆಕೆಯನ್ನು ಕಂಡ ನಿದರ್ಶನಗಳಿಲ್ಲ. ಹಾಗೇನಾದರೂ ಇದ್ದಿದ್ದರೆ ಆದಿಶಂಕರಾಚಾರ್ಯರೊಂದಿಗೆ ಮಂಡನಮಿಶ್ರರು ಗಂಭೀರವಾದ ಚರ್ಚೆ ನಡೆಸುವ ಸಂದರ್ಭದಲ್ಲಿ ಮಂಡನಮಿಶ್ರರ ಪತ್ನಿ ಉಭಯಭಾರತಿ ಎಂಬ ಮಹಿಳೆ ತೀರ್ಪುಗಾರಳ ಪಾತ್ರ ನಿರ್ವಹಿಸಲು ಸಾಧ್ಯವಿತ್ತೇ? ಕಿತ್ತೂರು ಚೆನ್ನಮ್ಮ, ಝಾನ್ಸಿ ಲಕ್ಷ್ಮಿಭಾಯಿ, ಅಹಲ್ಯಭಾಯಿ ಹೋಳ್ಕರ್ ಮೊದಲಾದ ವೀರ ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಧೈರ್ಯದಿಂದ ದೇಶ ಧರ್ಮಗಳ ಉಳಿವಿಗಾಗಿ ಹೋರಾಡಲು ಸಾಧ್ಯವಿರುತ್ತಿತ್ತೇ?
ಈಗ ವಿಷಯ ಅದಲ್ಲ. ಲಿಂಗ ಸಮಾನತೆಯ ಕುರಿತಂತೆ ವೈರುಧ್ಯಗಳಾಚೆಗೆ ಸುಧಾರಿತ ವಿಧಾನವನ್ನು ಪ್ರಸ್ತುತ ಪಡಿಸಿದೆ ಎಂದು ಹೇಳಿಕೊಳ್ಳುವ ಇಸ್ಲಾಂ ಸ್ತ್ರೀಯರ ವಿಷಯದಲ್ಲಿ ನಿಜವಾಗಿ ತಾರತಮ್ಯ ಭಾವದಿಂದ ನಡೆದುಕೊಳ್ಳುತ್ತಿರುವುದೇಕೆ? ಈ ಪ್ರಶ್ನೆ ಈಗಲೂ ಪ್ರಜ್ಞಾವಂತರನ್ನು ಕಾಡುತ್ತಿದೆ. ಪ್ರಾಕೃತಿಕ ವೈಶಿಷ್ಟ್ಯವನ್ನು ಮಾನ್ಯ ಮಾಡುತ್ತಲೇ ಹೆಣ್ಣು-ಗಂಡಿನ ನಡುವೆ ಸಮಾನ ನ್ಯಾಯವನ್ನು ಇಸ್ಲಾಂ ಎತ್ತಿಹಿಡಿದಿದೆ ಎಂದು ಹೇಳಲಾಗುತ್ತಿದೆ. ಹೆಣ್ಣಿಗೆ ಗಂಡಿಗಿಂತ ಹೆಚ್ಚು ಆಸ್ತಿ, ತಾಯಿಗೆ-ತಂದೆಗಿಂತ ಮೂರುಪಟ್ಟು ಹೆಚ್ಚು ಸ್ಥಾನಮಾನ, ಹೆಣ್ಣಿಗೆ ವಿವಾಹಧನ ಇತ್ಯಾದಿ ವಿಶೇಷ ಪರಿಗಣನೆ ಇಸ್ಲಾಂನಲ್ಲಿದೆ ಎಂದು ಮೇಲಿನ ವಾದಕ್ಕೆ ಸಮರ್ಥನೆ ನೀಡಲಾಗುತ್ತದೆ. ಮಹಿಳೆಯನ್ನು ಅಬಲೆಯಾಗಿ ಅಥವಾ ಪತಿ, ತಂದೆ, ಅಣ್ಣ-ತಮ್ಮ ಮುಂತಾದ ಪಾತ್ರಗಳ ಗುಲಾಮನಾಗಿ ಮಾಡಿಲ್ಲ. ಅವರ ನಡುವಿನ ಸಮಾನತೆಯನ್ನು ಕುರ್ಆನ್ ಎತ್ತಿಹಿಡಿದಿದೆ ಎಂದೂ ಹೇಳಲಾಗುತ್ತಿದೆ. ವಾಸ್ತವ ಮಾತ್ರ ಬೇರೆಯೇ ಇದೆ.
ಅತ್ಯಂದ ಸಂಪ್ರದಾಯಶೀಲ, ಕಟ್ಟರ್ ಇಸ್ಲಾಂ ದೇಶವೆನಿಸಿರುವ ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರಿಗೆ ಯಾವುದೇ ಬಗೆಯ ಸ್ವಾತಂತ್ರ್ಯವೂ ಇತ್ತೀಚಿನವರೆಗೆ ಇರಲಿಲ್ಲ ಎನ್ನುವುದು ಕಟು ವಾಸ್ತವ. ಅಲ್ಲಿ ಮುಸ್ಲಿಂ ಮಹಿಳೆಯರು ಕಾರು ಚಲಾಯಿಸುವಂತಿರಲಿಲ್ಲ. ಒಂಟಿಯಾಗಿ ಪೇಟೆಯಲ್ಲಿ ನಡೆದುಕೊಂಡು ಹೋಗುವಂತಿರಲಿಲ್ಲ. ಚುನಾವಣೆಯಲ್ಲಿ ಮತದಾನ ಮಾಡುವಂತಿರಲಿಲ್ಲ. ಚುನಾವಣೆಗೆ ಸ್ಪರ್ಧಿಸುವ ಮಾತಂತೂ ಇರಲೇ ಇಲ್ಲ. ಒಟ್ಟಾರೆ ಆಕೆ ಪುರುಷರ ಗುಲಾಮ ಪಾತ್ರವನ್ನು ಮಾತ್ರ ನಿರ್ವಹಿಸಬೇಕಾಗಿತ್ತು. ‘ಗ್ಲೋಬಲ್ ಜೆಂಡರ್ ಗ್ಯಾಪ್ ರಿಪೋರ್ಟ್’ ಲಿಂಗ ಅಸಮಾನತೆ ರ್ಯಾಂಕಿಂಗ್ ಪಟ್ಟಿಯಲ್ಲಿ ಜಗತ್ತಿನ ಒಟ್ಟು 136 ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾಕ್ಕೆ 127ನೇ ಸ್ಥಾನವನ್ನು ನೀಡಿದ್ದು ಇದೇ ಕಾರಣಕ್ಕಾಗಿ.
ಆದರೆ 2011 ರಲ್ಲಿ ಅಲ್ಲಿನ ದೊರೆ ಅಬ್ದುಲ್ಲಾ ಮುಸ್ಲಿಂ ಮಹಿಳೆಯರಿಗೆ ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿದರು. ಅನಂತರ ಇದೀಗ ಅಲ್ಲಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಸೌದಿ ಮಹಿಳೆಯರ ಪಾಲಿಗೆ ನಿಜಕ್ಕೂ ಇದೊಂದು ಬದಲಾವಣೆಯ ಪರ್ವ. ಹಾಗಾಗಿಯೇ ಕಳೆದ ವಾರ ಸೌದಿ ಅರೇಬಿಯಾದಲ್ಲಿ ನಡೆದ ಮುನ್ಸಿಪಲ್ ಮಂಡಳಿ ಚುನಾವಣೆ ಜಗತ್ತಿನ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಸೌದಿ ಮಹಿಳೆಯರಿಗೆ ಮತದಾನದ ಹಕ್ಕಿನ ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ಒದಗಿತ್ತು. ಡಿ.12ರಂದು ನಡೆದ ಈ ಚುನಾವಣೆಯಲ್ಲಿ 2106 ಸ್ಥಾನಗಳಿಗೆ 5398 ಪುರಷರ ಜೊತೆಗೆ 978 ಮಹಿಳೆಯರೂ ಸ್ಪರ್ಧಿಸಿದ್ದರು. ಮೊದಲ ಬಾರಿಗೆ 20 ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಗೆದ್ದ ಪುರುಷರ ಸಂಖ್ಯೆಗೆ ಹೋಲಿಸಿದರೆ ಮಹಿಳೆಯರ ಪಾಲು ತೀರಾ ಕಡಿಮೆ. ಆದರೆ ಈವರೆಗೆ ಇದ್ದಂತಹ ಒಂದು ಗಡಿರೇಖೆ ದಾಟಲಾಗಿದೆ ಎಂಬುದು ಮಹತ್ವದ ಅಂಶ. ಇದೊಂದು ಹೊಸ ಮೈಲುಗಲ್ಲು.
ಸೌದಿಯಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ಕೊನೇ ಕ್ಷಣದಲ್ಲಿ. ಇಲ್ಲದಿದ್ದರೆ ಇನ್ನಷ್ಟು ಮಹಿಳೆಯರು ಅಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರೇನೋ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿತ್ತಾದರೂ ಹಲವು ಬಗೆಯ ನಿರ್ಬಂಧಗಳಿದ್ದವು. ಪುರುಷರು ಪಾಲ್ಗೊಳ್ಳುವ ರ್ಯಾಲಿಗಳಲ್ಲಿ ಮಹಿಳಾ ಅಭ್ಯರ್ಥಿಗಳು ಪ್ರಚಾರ ಮಾಡುವಂತಿರಲಿಲ್ಲ. ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ಮಹಿಳಾ ಅಭ್ಯರ್ಥಿ ಮಾತನಾಡುವಂತಿರಲಿಲ್ಲ. ಬಹುತೇಕ ಮಹಿಳೆಯರಿಗೆ ಕುಟುಂಬ ಸದಸ್ಯರ ಸಹಕಾರವೂ ಸಿಕ್ಕಿರಲಿಲ್ಲ. ಜೊತೆಗೆ ಪುರುಷರಂತೆ ಇವರಿಗೆ ಆರ್ಥಿಕ ಬೆಂಬಲವೂ ಲಭಿಸಿರಲಿಲ್ಲ. ಹೀಗಾಗಿ ಕೆಲವು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಿಂದ ಅನಿವಾರ್ಯವಾಗಿ ಹಿಂದೆ ಸರಿದದ್ದೂ ಉಂಟು. ಸರಿಯಾದ ಕಾರಣವನ್ನು ನೀಡದೆ ಕೆಲವು ಸುಪ್ರಸಿದ್ಧ ಲೇಖಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಪಾಲ್ಗೊಳ್ಳದಿರುವಂತೆ ಅಲ್ಲಿನ ಚುನಾವಣಾ ಆಡಳಿತ ವ್ಯವಸ್ಥೆ ಅನರ್ಹಗೊಳಿಸಿತ್ತು. ಹೀಗೆ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವುದಕ್ಕೆ ಅನೇಕ ಬಗೆಯ ಅಡೆತಡೆಗಳು. ಚುನಾವಣಾ ಕ್ಷೇತ್ರದಲ್ಲಿ ಅಲ್ಲಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎಂಬುದಂತೂ ನಿಜ. ಹೀಗಾಗಿ ಗೆದ್ದಿರುವ ಬೆರಳೆಣಿಕೆಯಷ್ಟು ಮಹಿಳೆಯರು ಅಲ್ಲಿ ಬದಲಾವಣೆ ತರಬಲ್ಲರೆಂದು ಹೇಳಲಾಗದು.
ಅದೇನೇ ಇರಲಿ, ಮನೆಯಿಂದ ಹೊರಗೇ ಬರಲಾರದಂತಹ, ಬಂದರೂ ಬುರ್ಖಾ ಧರಿಸಿ ಜೊತೆಗೊಬ್ಬ ಪುರುಷನೊಂದಿಗೇ ಬರಬೇಕಾದಂತಹ ಕಠಿಣ ನಿರ್ಬಂಧವಿದ್ದ ಕಟ್ಟಾ ಸಂಪ್ರದಾಯವಾದಿ ದೇಶವೊಂದರಲ್ಲಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವ ಸನ್ನಿವೇಶ ನಿರ್ಮಾಣವಾಗಿರುವುದು ಬದಲಾವಣೆಯ ಪರ್ವವೊಂದಕ್ಕೆ ಸಂಕೇತ. ಹಾಗೆ ನೋಡಿದರೆ ಸೌದಿ ಅರೇಬಿಯಾದ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಪದವೀಧರರಾಗಿ ಹೊರಬರುತ್ತಿರುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಮಹಿಳೆಯರ ಸಾಕ್ಷಾರತಾ ಪ್ರಮಾಣ ಅಲ್ಲಿ ಶೇ.91. ಇಂತಿಪ್ಪ ಸೌದಿಯಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಹಾಕಲು ಹಾಗೂ ಸ್ಪರ್ಧಿಸಲು ಈಗ ತಾನೇ ಅವಕಾಶ ಪ್ರಾಪ್ತವಾಗಿದೆ ಎಂದರೆ ಇಸ್ಲಾಂ ಮಹಿಳೆಯರಿಗೆ ಸಮಾನತೆಯನ್ನು ಎಷ್ಟರಮಟ್ಟಿಗೆ ಕಲ್ಪಿಸಿದೆ ಎಂಬುದಕ್ಕೆ ಬೇರೆ ವ್ಯಾಖ್ಯಾನದ ಅಗತ್ಯವಿಲ್ಲ!
ಅಧಿಕೃತ ಅಂಕಿ ಅಂಶಗಳ ಪ್ರಕಾರ, 2004 ರಲ್ಲಿ ಸೌದಿ ಉದ್ಯೋಗ ವಲಯದಲ್ಲಿ ಇದ್ದ ಮಹಿಳೆಯರ ಸಂಖ್ಯೆ ೨೩ ಸಾವಿರ. ೨೦೧೫ರಲ್ಲಿ ಈ ಸಂಖ್ಯೆ ೪ ಲಕ್ಷಕ್ಕೆ ಏರಿಕೆಯಾಗಿದೆ. ಇದೊಂದು ಮಹಿಳೆಯರ ಪಾಲಿಗೆ ಭರವಸೆಯ ಆಶಾಕಿರಣ.
ಮುಸ್ಲಿಂ ದೇಶಗಳಿಗಿಂತಲೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಭಾರತವೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಭಾರತದಲ್ಲಿರುವ ಮುಸ್ಲಿಮರು ನಿಜಕ್ಕೂ ಅದೃಷ್ಟವಂತರು. ಅವರಿಗೆ ಇಲ್ಲಿ ಅವರ ಸಂಪ್ರದಾಯಗಳನ್ನು ಪಾಲಿಸಲು ಮುಕ್ತ ಅವಕಾಶವಿದೆ. ಸೌದಿಯಲ್ಲಿರುವಂತೆ ಯಾವುದೇ ನಿರ್ಬಂಧಗಳಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿ ಮುಸ್ಲಿಂ ಮಹಿಳೆಯರು ಮುಕ್ತವಾಗಿ ಮತದಾನ ಮಾಡಬಹುದು. ಚುನಾವಣೆಗೂ ಸ್ಪರ್ಧಿಸಬಹುದು. ಆದ್ದರಿಂದಲೇ ಇಲ್ಲಿನ ಹಲವು ರಾಜ್ಯಗಳಲ್ಲಿ ಮುಸ್ಲಿಂ ಮಹಿಳಾ ಜನಪ್ರತಿನಿಧಿಗಳಿದ್ದಾರೆ. ರಾಜ್ಯಸಭೆಯಲ್ಲಿ ಮಹಿಳಾ ಮುಸ್ಲಿಂ ಸಂಸದರೂ ಇದ್ದಾರೆ. ಮುಸ್ಲಿಂ ಮಹಿಳೆಯರಿಗೆ ಇಲ್ಲಿ ಎಲ್ಲ ಬಗೆಯ ಮುಕ್ತ ಅವಕಾಶ ಹಾಗೂ ಸ್ವಾತಂತ್ರ್ಯ ಇರುವುದರಿಂದಲೇ ಫಾತಿಮಾ ಬೀವಿ ಎಂಬ ಮುಸ್ಲಿಂ ಮಹಿಳೆ ಸುಪ್ರಿಂ ಕೋರ್ಟ್ನ ನ್ಯಾಯಾಧೀಶೆಯಾಗಿ (1989) ನೇಮಕಗೊಳ್ಳಲು ಸಾಧ್ಯವಾಗಿದೆ. ಸಾನಿಯಾ ಮಿರ್ಜಾ ಎಂಬ ಪ್ರತಿಭಾವಂತ ಟೆನಿಸ್ ಪ್ರತಿಭೆ ಕ್ರೀಡಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟಕ್ಕೇರಲು ಸಾಧ್ಯವಾಗಿದೆ. ಫಾತಿಮಾ ಬೀವಿ, ಸಾನಿಯಾ ಮಿರ್ಜಾ ಒಂದು ವೇಳೆ ಸೌದಿ ಅರೇಬಿಯಾದಲ್ಲಿ ಅಥವಾ ಇನ್ನಿತರ ಅಷ್ಟೇ ಕಟ್ಟರ್ ಸಂಪ್ರದಾಯಶೀಲ ಮುಸ್ಲಿಂ ದೇಶದಲ್ಲಿ ಜನಿಸಿದ್ದರೆ ಅವರು ಆ ಮಟ್ಟಕ್ಕೇರುವುದು ಕನಸಿನ ಮಾತಾಗಿರುತ್ತಿತ್ತು.
ಭಾರತದಲ್ಲಿ ಮುಲ್ಲಾಗಳು, ಮೌಲ್ವಿಗಳು ತಮ್ಮ ಮತಾಂಧತೆ ಮನೋಭಾವವನ್ನು ಬದಿಗಿಟ್ಟು, ಒಂದಿಷ್ಟು ಉದಾರವಾಗಿ ಚಿಂತಿಸಿದ್ದರೆ ಇನ್ನಷ್ಟು ಮುಸ್ಲಿಂ ಮಹಿಳಾ ಪ್ರತಿಭೆಗಳು ಬೇರೆಬೇರೆ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಬಹುದಿತ್ತು. ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಲೆ.ಜ. (ನಿವೃತ್ತ) ಜಮೀರ್ ಉದ್ದೀನ್ ಶಹಾ ಈ ಕುರಿತು ಮುಸ್ಲಿಂ ಮುಖಂಡರಿಗೆ ಹೇಳಿರುವ ಮಾತುಗಳು ಹೀಗಿವೆ : ‘ನೀವು ನಿಮ್ಮ ಜನಸಂಖ್ಯೆಯ ಅರ್ಧದಷ್ಟನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿಲ್ಲ. ಮಹಿಳೆಯರನ್ನು ನೀವು ಈಗಲೂ ಗುಲಾಮರನ್ನಾಗಿ ಮನೆಯ ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದೀರಿ. ಅವರನ್ನು ಗುಲಾಮರನ್ನಾಗಿ ಇಟ್ಟಿರುವುದರಿಂದಲೇ ನೀವು ಕೂಡ ಗುಲಾಮರಾಗಿದ್ದೀರಿ’. ಜಮೀರ್ ಉದ್ದೀನ್ ಈ ಮಾತು ಹೇಳಿದ್ದು ಇತ್ತೀಚೆಗೆ ನಡೆದ ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ. ‘ನಾನು ಸೌದಿಯಲ್ಲೂ ನೆಲೆಸಿದ್ದೆ. ಅಲ್ಲೂ ಇದೇ ಸ್ಥಿತಿ. ಟರ್ಕಿ ಮತ್ತು ಇರಾನ್ ಹೊರತು ಪಡಿಸಿದರೆ ಇಡೀ ಮುಸ್ಲಿಂ ಜಗತ್ತಿನಲ್ಲಿ ಮಹಿಳೆಯರು ಈಗಲೂ ಗುಲಾಮರಂತೆಯೇ ಬದುಕುತ್ತಿದ್ದಾರೆ. ಅವರು ಹಿಂದುಳಿದಿರುವುದಕ್ಕೆ ಇದೇ ಕಾರಣ’ ಎಂದೂ ಜಮೀರ್ ಉದ್ದೀನ್ ಅದೇ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಸೌದಿ ಅರೇಬಿಯಾದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ದೊರಕುವ ಮೂಲಕ ಅಲ್ಲಿನ ಮುಸ್ಲಿಂ ಮಹಿಳೆಯರಿಗೆ ಸಾಂಕೇತಿಕ ವಿಜಯ ದೊರಕಿದಂತಾಗಿದೆ. ಮಹಿಳೆಯೆಂದರೆ ಕೇವಲ ಪುರುಷರ ವಿಲಾಸಿ ತೊತ್ತಲ್ಲ. ಮನೆಯ ಚಾಕರಿ ಮಾಡುವ, ಅಥವಾ ಹೆರಿಗೆಯ ಯಂತ್ರವಾಗಿರುವುದಕ್ಕೆ ಬದುಕು ಸೀಮಿತವಾಗಿಲ್ಲ. ಆಕೆಗೂ ಪುರುಷರಷ್ಟೇ ಹೊರ ಜಗತ್ತಿನ ಸ್ವಾತಂತ್ರ್ಯವಿದೆ. ಪುರುಷರಂತೆಯೇ ಆಕೆಯೂ ಸಾರ್ವಜನಿಕ ಅಧಿಕಾರ ಸ್ಥಾನಮಾನಗಳಲ್ಲಿ ಕರ್ತವ್ಯ ನಿಭಾಯಿಸಬಹುದೆಂಬ ವಾತಾವರಣ ಸೃಷ್ಟಿಯಾಗಬೇಕು. ಮುಸ್ಲಿಂ ಮಹಿಳೆಯರಿಗೆ ಇಂತಹದೊಂದು ಅವಕಾಶ ದೊರೆತರೆ ಅದು ಧನಾತ್ಮಕ ಬದಲಾವಣೆಗೆ ನಾಂದಿಯಾಗಬಹುದು. ಮುಸ್ಲಿಮರನ್ನು ಈಗ ಜಗತ್ತು ನೋಡುತ್ತಿರುವ ದೃಷ್ಟಿಯೂ ಆಗ ಬದಲಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.