ಉಡುಪಿ : ಜಾಗತೀಕರಣ, ಉದಾರೀ ಕರಣಗಳ ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರುವ ನಾವು ಮಾನವೀಕರಣ ಮರೆಯುತ್ತಿದ್ದೇವೆ. ಮಾನವೀಯ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನಗುಂದ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಗುರುವಾರ ಮಣಿಪಾಲ ರಜತಾದ್ರಿ ಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಧರ್ಮ, ಜಾತಿ, ಭಾಷೆಗಳ ಬಗ್ಗೆ ಅಭಿಮಾನ ಇರಬೇಕೇ ಹೊರತು ದುರಭಿಮಾನ ಇರಬಾರದು. ಅಸಹಿಷ್ಣುತೆ ನಮ್ಮಲ್ಲಿ ಇರುವುದು ನಿಜ. ಸಹಿಷ್ಣುತೆ ಪ್ರಮಾಣ ನಮ್ಮಲ್ಲಿ ಕಡಿಮೆ ಇದ್ದರೂ ಅಸಹಿಷ್ಣುತೆ ಎಂಬುದು ಕೆಲವರಲ್ಲಿ ಜಾಸ್ತಿ ಇದೆ ಎಂದ ಅವರು, ಪ್ರಾಥಮಿಕ ಶಿಕ್ಷಣದಲ್ಲೇ ಮಾನವ ಹಕ್ಕುಗಳ ಪರಿಕಲ್ಪನೆ ಹಾಗೂ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸ ಹೊಂದಲು ಮಾನವ ಹಕ್ಕುಗಳು ಅತ್ಯವಶ್ಯಕ ಎಂದರು. ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ವಕೀಲರ ಸಂಘದ ಅಧ್ಯಕ್ಷ ದಯಾನಂದ ಉಪಸ್ಥಿತರಿದ್ದರು.ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಸ್ವಾಗತಿಸಿದರು. ಯೋಜನಾ ನಿರ್ದೇಶಕ ಪ್ರಸನ್ನ ವಂದಿಸಿದರು. ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು.
ಶೇ.70ರಷ್ಟು ಮಾನವ ಹಕ್ಕು ಉಲ್ಲಂಘನೆ ಸರಕಾರದಿಂದ :ಮಾನವ ಹಕ್ಕು ಎಂಬುದು ಯಾವುದೇ ಪಕ್ಷಗಳ ಸರಕಾರ ನಮಗೆ ಕೊಟ್ಟದ್ದಲ್ಲ. ಜನ್ಮತಃ ಪ್ರಕೃತಿದತ್ತ ವಾಗಿ ದೊರೆತ ಹಕ್ಕಾಗಿದೆ. ಇದನ್ನು ಯಾರೂ ಕಸಿದುಕೊಳ್ಳುವಂತೆ ಇಲ್ಲ. ಮಾನವ ಹಕ್ಕುಗಳ ಘೋಷಣೆ ಮಾಡಿದರೆ ಸಾಲದು ಅದರ ಸಮರ್ಪಕ ಅನುಷ್ಠಾನ ಕೂಡ ಆಗುವಂತೆ ನೋಡಿಕೊಳ್ಳಬೇಕು. ಇಂದು ಪ್ರತಿನಿತ್ಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಶೇ.70ರಷ್ಟು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಸರಕಾರಗಳಿಂದ. ಇದಕ್ಕೆಲ್ಲ ಪರೋಕ್ಷವಾಗಿ ಸರಕಾರ, ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. -ಸಿ.ಜಿ ಹುನಗುಂದ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.