ನವದೆಹಲಿ : ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವ ಸಂಚನ್ನು ಲಷ್ಕರ್ -ಎ-ತೊಯ್ಬಾ ಉಗ್ರಗಾಮಿ ಸಂಘಟನೆಯವರು ರೂಪಿಸಿದ್ದಾರೆ ಎಂಬ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ಥಾನದ ಇಬ್ಬರು ಲಷ್ಕರ್ ಉಗ್ರರು ಜಮ್ಮು ಕಾಶ್ಮೀರದಲ್ಲಿ ಈ ಕುರಿತು ಸಂಚು ರೂಪಿಸುತ್ತಿದ್ದು, ದೆಹಲಿಗೆ ಆಗಮಿಸಿ ದಾಳಿ ನಡೆಸಬಹುದು. ಈಗಾಗಲೇ ನುಮಾನ್, ಜೈದಿ ಹಾಗೂ ಖುರ್ಷಿದ್ ಜೊತೆ ಚರ್ಚಿಸಿರುವ ಸಾಧ್ಯತೆ ಕೂಡಾ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಇಸಿಸ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಸಂದೇಶವನ್ನು ಗೃಹ ಇಲಾಖೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಭದ್ರತಾ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಉಗ್ರರು ಪ್ರಧಾನಮಂತ್ರಿ ಗೃಹ, ಗೃಹ ಸಚಿವರು, ರಾಷ್ಟ್ರಪತಿ, ಉಪ ರಾಷ್ಟ್ರಪತಿಯವರ ಮನೆ, ರಾಷ್ಟ್ರಪತಿ ಭವನ, ರಾಜಪಥ್, ಇಂಡಿಯಾ ಗೇಟ್, ಸಿಬಿಐ, ಸಿಐಎಸ್ಎಫ್, ಬಿಎಸ್ಎಫ್ ಪ್ರಧಾನ ಕಚೇರಿಗಳಿರುವ ಸಿಜಿಒ ಕಾಂಪ್ಲೆಕ್ಸ್ಗಳು ಇಂತಹವುಗಳನ್ನು ಗುರಿಯಾಗಿಸಿ ಡ್ರೋಣ್ ಮುಖಾಂತರ ಕೂಡಾ ದಾಳಿ ನಡೆಸಬಹುದೆಂದು ಮಾಹಿತಿ ನೀಡಿತ್ತು. ಈ ಕುರಿತಂತೆ ಭಯೋತ್ಪಾದಕ ವಿರೋಧಿ ನಿಗ್ರಹ ದಳ ಡಿಸೆಂಬರ್ 1 ರಂದು ಎಫ್ಐಆರ್ ಕೂಡಾ ದಾಖಲಿಸಿಕೊಂಡಿತ್ತು.
ಹೆಸರಾಂತ ವ್ಯಕ್ತಿಗಳು, ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿಯಾಧಾರದಲ್ಲಿ ಭಾರತದೊಳಕ್ಕೆ ನುಸುಳಿರುವ ಇಬ್ಬರು ಉಗ್ರರಿಗಾಗಿ ತೀವ್ರ ಶೋಧಕಾರ್ಯ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.