ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ವತಿಯಿಂದ ಬೆಳಗಾವಿಯಲ್ಲಿ ಡಿ. 6 ರಂದು ಡಾ| ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಪ್ರಯುಕ್ತ ನಡೆಯಲಿರುವ ಮೂಢನಂಬಿಕಾ ವಿರೋಧಿ ಪರಿವರ್ತನಾ ದಿನಾಚರಣೆಯ ಪ್ರಚಾರಾರ್ಥ ರಾಜ್ಯದಾದ್ಯಂತ ಸಂಚರಿಸುತ್ತಿರುವ ಮೂಡನಂಬಿಕೆ ವಿರೋಧಿ ಜನಜಾಗೃತಿ ಜಾಥಾಕ್ಕೆ ಸೋಮವಾರ ಬೆಳ್ತಂಗಡಿಯಲ್ಲಿ ಸ್ವಾಗತ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಅವರು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ನಿರಂತರವಾಗಿ ಶೋಷಿಸುವ ಕಾರ್ಯ ನಡೆಯುತ್ತಿದೆ. ಆಚರಣೆಗಳ ಹೆಸರಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಬಡವರ, ಶೋಷಿತರ ಮೇಲೆ ಮೂಢ ನಂಬಿಕೆಗಳನ್ನು ಹೇರಲಾಗುತ್ತಿದೆ. ಎಲ್ಲ ಧರ್ಮಗಳ ಪುರೋಹಿತಶಾಹಿಗಳು ಮೂಢ ನಂಬಿಕೆಗಳನ್ನು ಹೇರಿ ಜನರನ್ನು ಶೋಷಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಅಪಾಯಗಳಿಂದ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದ ಅವರು, ಈ ಶೋಷಕ ಶಕ್ತಿಗಳು ಜನರ ದೌರ್ಬಲ್ಯಗಳನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸುತ್ತಿದ್ದಾರೆ. ಜನರನ್ನು ಮೌಢ್ಯದ ಬಲೆಯಿಂದ ಮುಕ್ತಗೊಳಿಸಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಮೂಢ ನಂಬಿಕೆಗಳ ವಿರುದ್ದ ಜನಜಾಗೃತಿ ಮೂಡಿಸುವ ಪರಿವರ್ತನಾ ದಿನವನ್ನು ವಿಶಿಷ್ಟವಾಗಿ ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿರುವ ಪ್ರಗತಿಪರ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತಂದು ಮೌಢ್ಯದ ವಿರುದ್ದ ಶೋಷಿತರ ಪರವಾದ ಹೋರಾಟಗಳನ್ನು ರೂಪಿಸುವ ಕಾರ್ಯವನ್ನು ವೇದಿಕೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್, ಸಿಪಿಐಎಂ ಮುಖಂಡ ಬಿ.ಎಂ. ಭಟ್, ಕೆ.ಡಿ.ಪಿ ಸದಸ್ಯ ಶೇಖರ ಕುಕ್ಕೇಡಿ, ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ಮುಖಂಡರುಗಳಾದ ಚಂದು ಎಲ್, ರಮೇಶ್ ಆರ್., ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ್ ಎಲ್., ಜನಾರ್ಧನ ಬಂಗೇರ ಮೂಡಾಯಿಗುತ್ತು, ಪ್ರಸಾದ್ ಶೆಟ್ಟಿ, ದಮ್ಮಾನಂದ, ಚೆನ್ನಕೇಶವ ಮತ್ತಿತರರು ಉಪಸ್ಥಿತರಿದ್ದರು. ಸುದಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಬಿ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ವಸಂತ ಸ್ವಾಗತಿಸಿದರು. ಚಂದು ಎಲ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.