ಪುತ್ತೂರು: ಶಾರೀರಿಕ, ಮಾನಸಿಕ, ಬೌದ್ಧಿಕ ಮಾತ್ರವಲ್ಲ ದೇಶ ಪ್ರೇಮ ಹಾಗೂ ಸೇವಾಭಾವ ಬೆಳೆಸಿಕೊಳ್ಳಲು ಯೋಗ ಉಪಯುಕ್ತ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲೇ ಯೋಗ ಕಲಿತುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲೇ ಯೋಗ ಹಾಸುಹೊಕ್ಕಾಗಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರ, ಯೋಗ ವಿವಿ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಹೇಳಿದರು.
ಅವರು ಭಾನುವಾರ ಪುತ್ತೂರು ಯೋಗ ಕೇಂದ್ರವು ನೆಹರುನಗರ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪದಲ್ಲಿ ಹಮ್ಮಿಕೊಂಡ “ಆಧ್ಯಾತ್ಮ ಸೌರಭ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಸಮರ್ಥ ಯೋಗ ಗುರುಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಗ ವಿವಿ ಮೂಲಕ ಪಠ್ಯಕ್ರಮ ತಯಾರಿಸಲಾಗಿದೆ. ಇದನ್ನು ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು. ಇಂದು ಯೋಗದ ಬಗ್ಗೆ ಜನ ಆಸಕ್ತರಾಗುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಮಂದಿ ಯೋಗ ಗುರುಗಳಾಗುತ್ತಾರೆ. 4 ದಿನ ಕಲಿತವರು ಯೋಗ ಗುರು ಎಂದೆನಿಸಿಕೊಳ್ಳುತ್ತಾರೆ. ಸರಿಯಾದ ಗುರುಗಳನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ಯೋಗ ವಿವಿ ಮೂಲಕ ಪಠ್ಯಕ್ರಮ ತಯಾರಿಸಲಾಗಿದೆ. ಯೋಗ ಶಿಕ್ಷಣ ಪಡೆದು ಗುರುವಾಗಲು ಯಾವುದೇ ಅರ್ಹತೆ ಬೇಕಾಗಿಲ್ಲ ಎಂದರು.
ಯೋಗವನ್ನು ವಿಶ್ವಾದ್ಯಂತ ಪಸರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮವಿದೆ. ಆದ್ದರಿಂದಲೇ ಪ್ರತಿ ಶಾಲೆಯಲ್ಲೂ ಇಂದು ಯೋಗ ತರಬೇತಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯೋಗ ಪುಸ್ತಕವನ್ನೂ ರಚಿಸಲಾಗಿದೆ. ಆಯ್ದ ವಿದ್ಯಾರ್ಥಿಗಳ ತಂಡಕ್ಕೆ ಜಿಲ್ಲೆ, ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತದೆ. ಇದರಲ್ಲಿ ೮೦೦ ಮಂದಿಗೆ ದೆಹಲಿಯಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದರು.
ಯೋಗ ಗುರು ಮೋಹನ್, ಪುತ್ತೂರು ಯೋಗ ಕೇಂದ್ರದ ಕಾರ್ಯದರ್ಶಿ ಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.
ಅಧ್ಯಕ್ಷ ಗಿರೀಶ ಮಳಿ ಸ್ವಾಗತಿಸಿ, ಡಾ.ಶ್ರೀಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಮಾತಾಜಿ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಡಾ. ಎಚ್.ಆರ್.ನಾಗೇಂದ್ರ ಮತ್ತು ತಂಡದವರು ಸೂಕ್ಷ್ಮ ವ್ಯಾಯಾಮ, ಸರಳ ಯೋಗಾಸನ, ಪ್ರಾಣಾಯಾಮ, ಧ್ಯಾನ, ಆವರ್ತನ ಧ್ಯಾನ, ಆಧ್ಯಾತ್ಮ ವಿಚಾರಗಳ ಕುರಿತು ತಿಳಿಸಿದರು. ನೂರಾರು ಮಂದಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.