ಬೆಳ್ತಂಗಡಿ : ಇಂದು ಪರಿಸರ ಸ್ವಚ್ಚತೆ ಇಲ್ಲದೆ ಹಾಗೂ ಯೋಗ್ಯ ಆಹಾರ ಪದ್ದತಿ ಪಾಲನೆ ಇಲ್ಲದೆ ಅನಾರೋಗ್ಯ ಉಂಟಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಅಪಘಾತಗಳಿಂದ ಜೀವ ಹಾನಿಯೂ ನಡೆಯುತ್ತಿದೆ. ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿದರೆ ಹಾಗೂ ಆರೋಗ್ಯ ಶಿಬಿರದ ಮೂಲಕ ನೀಡುವ ಆರೋಗ್ಯ ಮಾಹಿತಿಯನ್ನು ಸರಿಯಾಗಿ ಪಾಲಿಸಿದರೆ ಅನಾರೋಗ್ಯದಿಂದ ದೂರ ಉಳಿಯಬಹುದು ಎಂದು ಒಮೆಗಾ ಆಸ್ಪತ್ರೆ ಮಂಗಳೂರು ಮತ್ತು ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಶನ್ನ ಖ್ಯಾತ ಹೃದಯ ತಜ್ಞ ಡಾ| ಮುಕುಂದ್ ಸುವರ್ಣ ಹೇಳಿದ್ದಾರೆ.
ಅವರು ಭಾನುವಾರ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶಾ ಸಾಲಿಯಾನ್ ಸಭಾ ಭವನದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಜೆಸಿಐ ಮಂಜುಶ್ರೀ ಬೆಳ್ತಂಗಡಿ, ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಒಮೇಗಾ ಆಸ್ಪತೆ ಮಂಗಳೂರು ಮತ್ತು ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಹೃದಯರೋಗ ತಪಾಸಣಾ ಶಿಬಿರ, ಉಚಿತ ಮಧುಮೇಹ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ರಕ್ತವರ್ಗೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ದುಬಾರಿ ವೈದ್ಯಕೀಯ ವೆಚ್ಚವಾಗುತ್ತಿರುವುದರಿಂದ ರೋಗ ಬಾರದಂತೆ ತಡೆಯಬೇಕು. ಆಕಸ್ಮಿಕವಾಗಿ ರೋಗ ಬಂದರೆ ಇದರ ಚಿಕಿತ್ಸೆಗಾಗಿ ಸರಕಾರದ ಹಾಗೂ ವಿವಿಧ ವಿಮೆಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತಿಸಬೇಕು ಎಂದರು.
ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಒಮೇಗಾ ಆಸ್ಪತ್ರೆ ಮಂಗಳೂರು ಕಳೆದ ೧೧ ವರ್ಷಗಳಿಂದ ಉಚಿತ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಉಚಿತ ಶಿಬಿರದೊಂದಿಗೆ ರಕ್ತದಾನ ಹಾಗೂ ರಕ್ತವರ್ಗೀಕರಣ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು ಎಂದರು.
ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್, ಹೃದಯರೋಗ ತಜ್ಞ ಡಾ| ಸರ್ಫಾಝ್ ಉಪಸ್ಥಿತರಿದ್ದರು. ಒಮೇಗಾ ಆಸ್ಪತ್ರೆ ಮಂಗಳೂರು ಇದರ ಆಡಳಿತಾಧಿಕಾರಿ ಎಸ್. ಎಲ್. ಭಾರಧ್ವಜ್ ಆರೋಗ್ಯ ಶಿಬಿರದ ಮಾಹಿತಿಯನ್ನು ನೀಡಿದರು. ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆರೋಗ್ಯ ಸಮಿತಿ ಅಧ್ಯಕ್ಷ ಡಿ. ಜಗದೀಶ್ ಸ್ವಾಗತಿಸಿ, ಜೆಸಿಐ ಮಂಜುಶ್ರೀಯ ನಿಯೋಜಿತ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ವಂದಿಸಿದರು. ಜೆಸಿಐ ಮಂಜುಶ್ರೀ ಅಧ್ಯಕ್ಷ ಚಿದಾನಂದ ಇಡ್ಯಾ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.