ಕಳೆದ ನ.14ರಂದು ಸಂಜೆ ವೇಳೆ ಇಡೀ ಪ್ಯಾರಿಸ್ ನಗರ ಸಂತಸ ಸಡಗರದಲ್ಲಿದಾಗ ಐಸಿಎಸ್ ಉಗ್ರರು ಸರಣಿ ಸ್ಫೋಟ ನಡೆಸಿ 129 ಅಮಾಯಕ ಜನರ ಬಲಿಪಡೆದ ಕೃತ್ಯವನ್ನು ಇಡೀ ಜಗತ್ತು ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಿದೆ. ಟರ್ಕಿಯ ಅಂಟಾಲ್ಯದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡ ರಾಷ್ಟ್ರಗಳು ಕೂಡ ಭಯೋತ್ಪಾದನೆ ವಿರುದ್ಧ ಸಂಘಟಿತವಾಗಿ ಸಮನ್ವಯದಿಂದ ಹೋರಾಡಲು ಒಮ್ಮತದ ನಿರ್ಧಾರ ಕೈಗೊಂಡವು. ಆ ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿ ಪೋಷಿಸುತ್ತಿರುವ ರಾಷ್ಟ್ರಗಳ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕಬೇಕೆಂದು ಅದೇ ವೇದಿಕೆಯಲ್ಲಿ ದಿಟ್ಟತನದ ಕರೆ ನೀಡಿದರು. ಜಿ-20 ಶೃಂಗಸಭೆ ಮುಕ್ತಾಯವಾಗುತ್ತಿದ್ದಂತೆಯೇ ಫ್ರಾನ್ಸ್ ಹಾಗೂ ರಷ್ಯಾ ದೇಶಗಳು ಐಸಿಸ್ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿವೆ. ಅಮೆರಿಕಾ ಕೂಡ ರಷ್ಯಾದ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಐಸಿಸ್ ಉಗ್ರರ ದಮನಕ್ಕೆ ಮುಂದಾಗಿದೆ. ಈ ಮೊದಲು ಅಮೆರಿಕಾ ಮತ್ತು ರಷ್ಯಾ ನಡುವೆ ಐಸಿಸ್ ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಆದರೀಗ ಆ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಈ ವಿಚಾರದಲ್ಲಿ ಒಂದಾಗಿರುವುದು ಆಶಾದಾಯಕ ಬೆಳವಣಿಗೆ. ಕಳೆದ ವಾರದ ತನಕವು ಅಮೆರಿಕಾ ಸಿರಿಯಾ ಬಂಡುಕೋರರ ಪರ ವಹಿಸಿದ್ದರೆ, ರಷ್ಯಾ ಅಲ್ಲಿನ ಸೇನೆಗೆ ಬೆಂಬಲ ನೀಡಿತ್ತು. ಸಿರಿಯಾ ಅಧ್ಯಕ್ಷ ಅಸದ್ ವಿರುದ್ಧ ಬಂಡಾಯವೆದ್ದ ಸಂಘಟನೆಗಳಿಗೆ ಸೌದಿ ಅರೇಬಿಯಾ, ಕತಾರ್ ಮತ್ತು ಟರ್ಕಿ ಶಸ್ತ್ರಾಸ್ತ್ರ ಸೇರಿದಂತೆ ವಿವಿಧ ಬಗೆಯ ನೆರವನ್ನು ನೀಡಿದ್ದವು. ಆದರೆ ಈಗ ಅಮೆರಿಕಾ ಮತ್ತು ರಷ್ಯಾ ಉಗ್ರರ ದಮನಕ್ಕಾಗಿ ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬದಿಗೊತ್ತಿವೆ. ಹೊಸದೊಂದು ಇತಿಹಾಸ ಬರೆಯಲು ಹೊರಟಿವೆ.
ಪ್ಯಾರಿಸ್ ಹತ್ಯಾಕಾಂಡದ ನೆನಪು ಮಾಸುವ ಮುನ್ನವೇ ಫ್ರೆಂಚ್ ವಸಾಹತು ಆಗಿರುವ ಪಶ್ಚಿಮ ಆಫ್ರಿಕಾದ ಮಾಲಿ ದೇಶದ ರಾಜಧಾನಿ ಬಮಾಕೋದ ಐಷಾರಾಮಿ ಹೊಟೇಲೊಂದರ ಮೇಲೆ ಇದೇ ಇಸ್ಲಾಮಿಕ್ ಉಗ್ರರು ದಾಳಿ ನಡೆಸಿ ೨೭ ಮಂದಿಯನ್ನು ಕೊಂದು ಹಾಕಿರುವ ಘಟನೆ ಜಗತ್ತಿನಾದ್ಯಂತ ಮತ್ತಷ್ಟು ತಲ್ಲಣ ಸೃಷ್ಟಿಸಿದೆ. ಅಲ್ ಕೈದಾ ಬೆಂಬಲಿತ ಅಲ್-ಮೊರಾಬಿತೂನ್ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಇನ್ನೀಗ ಐಸಿಸ್ ಉಗ್ರರು ಅಮೆರಿಕಾದ ಶ್ವೇತಭವನವನ್ನೂ ಸ್ಫೋಟಿಸುವ ಬೆದರಿಕೆ ಹಾಕಿದ್ದಾರೆ. ‘ಪ್ಯಾರಿಸ್ ಬಿಫೋರ್ ರೋಮ್’ ಎಂಬ ಹೆಸರಿನ ೬ ನಿಮಿಷಗಳ ವೀಡಿಯೋದಲ್ಲಿ ಫ್ರಾನ್ಸ್ ಮೇಲೆ ಇನ್ನಷ್ಟು ದಾಳಿ ನಡೆಸುವ ಎಚ್ಚರಿಕೆಯನ್ನು ಉಗ್ರರು ಹಾಕಿದ್ದಾರೆ.
ಐಸಿಸ್ ಉಗ್ರರ ಈ ಭಯೋತ್ಪಾದನೆ ಅಸಹಿಷ್ಣುತೆಯ ಪರಾಕಾಷ್ಠೆ ಎನ್ನುವುದನ್ನು ಯಾರು ಬೇಕಾದರೂ ಒಪ್ಪುತ್ತಾರೆ. ತಮ್ಮನ್ನು ವಿರೋಧಿಸಿದವರನ್ನು, ತಮಗೆ ಸಹಕಾರ ನೀಡದ ದೇಶಗಳನ್ನು ಗುರಿಯಾಗಿಸಿ ಭಯೋತ್ಪಾದನೆ ನಡೆಸಿದರೆ ಅದು ಅಸಹಿಷ್ಣುತೆಯ ಪರಾಕಾಷ್ಠೆಯಲ್ಲದೆ ಮತ್ತೇನು? ಇಡೀ ಜಗತ್ತೇ ಐಸಿಸ್ ಉಗ್ರರ ಈ ಅಸಹಿಷ್ಣುತೆ ಕಂಡು ತಲ್ಲಣಗೊಂಡಿದೆ. ಆದರೆ ದೇಶದಲ್ಲಿ ಅಸಹಿಷ್ಣುತೆ ಹೆಪ್ಪುಗಟ್ಟಿದೆ ಎಂದು ಚೀರಾಡುವ, ಪ್ರಶಸ್ತಿಗಳನ್ನು ಹಿಂದುರುಗಿಸಿ ತಾವೇನೋ ಘನಾಂದಾರಿ ಕೆಲಸ ಮಾಡಿದ್ದೇವೆಂದು ಬೀಗುತ್ತಿರುವ ಎಡಪಂಥೀಯ ಬುದ್ಧಿಜೀವಿಗಳು, ಚಿಂತಕರು ಮಾತ್ರ ಪ್ಯಾರಿಸ್ನ ಬರ್ಬರ ಕೃತ್ಯಕ್ಕಾಗಲೀ, ಮಾಲಿಯ ಉಗ್ರರ ಇನ್ನೊಂದು ಘೋರ ಕೃತ್ಯಕ್ಕಾಗಲೀ ಸೊಲ್ಲೇ ಎತ್ತಲಿಲ್ಲ. ಅಮಾಯಕರನ್ನು ಕೊಲ್ಲುವುದು ತಪ್ಪು ಎಂಬ ಹೇಳಿಕೆ ಈ ಮಂದಿಯಿಂದ ಹೊರಬರಲೇ ಇಲ್ಲ. ದಾದ್ರಿಯಲ್ಲಿ ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ ಯಾವುದೋ ಕಾರಣಕ್ಕಾಗಿ ಹತ್ಯೆಗೀಡಾದರೆ ಇದೇ ಬುದ್ಧಿಜೀವಿಗಳು ಆಕಾಶ-ಭೂಮಿ ಒಂದಾಗುವಂತೆ ಬೊಬ್ಬೆ ಹೊಡೆದರು. ಆದರೆ ಪ್ಯಾರಿಸ್ನಲ್ಲಿ ಇಸ್ಲಾಮಿಕ್ ಉಗ್ರರ ಕೃತ್ಯಕ್ಕೆ 129 ಅಮಾಯಕರು ಬಲಿಯಾದರೂ ಅವರಿಗೆ ಅದೊಂದು ಉಗ್ರವಾಗಿ ಖಂಡಿಸಬೇಕಾದ ಘಟನೆ ಎನಿಸುವುದೇ ಇಲ್ಲ! ಈ 129 ಮಂದಿ ಅಮಾಯಕರು ಹಾಗಿದ್ದರೆ ಮನುಷ್ಯರೇ ಅಲ್ಲವೇ? ಅವರ ಸಾವಿಗೆ ಬೆಲೆಯೇ ಇಲ್ಲವೇ?
ಇಸ್ಲಾಮಿಕ್ ಉಗ್ರರ ಇಂತಹ ಬರ್ಬರ ಕೃತ್ಯಗಳು ಎಲ್ಲೇ ನಡೆಯಲಿ, ಜಗತ್ತಿನ ಪ್ರಜ್ಞಾವಂತರೆಲ್ಲರೂ ಆ ಘಟನೆಗಳನ್ನು ಖಂಡಿಸಿದರೂ ನಮ್ಮ ಈ ಎಡಪಂಥೀಯ, ಪ್ರಗತಿಪರ ಬುದ್ಧಿಜೀವಿಗಳು ಮಾತ್ರ ಖಂಡಿಸುವ ಗೋಜಿಗೇ ಹೋಗುವುದಿಲ್ಲ! ಹಿಂದುಗಳು ಕೆಮ್ಮಿದರೂ, ಎಲ್ಲೋ ಒಂದು ಕಡೆ ಯಾರೋ ಒಬ್ಬ ಮುಸ್ಲಿಮನಿಗೆ ಎರಡು ತದುಕಿದರೂ ಈ ಬುದ್ಧಿಜೀವಿಗಳ ರಕ್ತ ಕೊತಕೊತ ಕುದಿಯುತ್ತದೆ. ಹೇಳಿಕೆಗಳು ಪುಂಖಾನುಪುಂಖವಾಗಿ ಮಾಧ್ಯಮಗಳಲ್ಲಿ ತೇಲಾಡುತ್ತವೆ. ಮುಸ್ಲಿಂ ಉಗ್ರರು ನೂರರ ಸಂಖ್ಯೆಯಲ್ಲಿ ಅಮಾಯಕರನ್ನು ಬರ್ಬರವಾಗಿ ಸಾಯಿಸಿದ ಘಟನೆಗೆ ಮಾತ್ರ ಇವರ ರಕ್ತ ಕುದಿಯುವುದೇ ಇಲ್ಲ. ಇವರದೆಂತಹ ಮಾನವೀಯತೆ!
ಟಿಪ್ಪು ಜಯಂತಿಯಂದು ಮಡಿಕೇರಿಯಲ್ಲಿ ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತ ಕುಟ್ಟಪ್ಪ ಅವರನ್ನು ಹಾಡಹಗಲೇ ಸಾಯಿಸಿದ ಸುದ್ಧಿ ನಮ್ಮ ಬುದ್ಧಿಜೀವಿಗಳ ಪಾಲಿಗೆ ಖಂಡಿಸಬೇಕಾದ ಘಟನೆಯೇ ಆಗಲಿಲ್ಲ. ಏಕೆಂದರೆ ಹತ್ಯೆಗೀಡಾದವರು ಹಿಂದು ವ್ಯಕ್ತಿ. ಹತ್ಯೆ ಮಾಡಿದವರು ಮುಸ್ಲಿಂ. ದಾದ್ರಿಯಲ್ಲಿ ಹತ್ಯೆಗೀಡಾದ ವ್ಯಕ್ತಿ ಮುಸ್ಲಿಂ. ಹತ್ಯೆ ಮಾಡಿದವರು ಹಿಂದು ಸಮುದಾಯಕ್ಕೆ ಸೇರಿದವರು. ಹಾಗಾಗಿ ಆ ಘಟನೆ ಖಂಡನೆಗೆ ಅರ್ಹ ಎಂದು ಇವರಿಗನಿಸಿದೆ. ಅದೇ ಘಟನೆಯನ್ನು ವೈಭವೀಕರಿಸಿ ದೇಶದಲ್ಲಿ ಕೋಮು ಅಸಹಿಷ್ಣುತೆ ಭುಗಿಲೆದ್ದಿದೆ ಎಂದು ಬೊಬ್ಬೆ ಹೊಡೆದರು.
ಶೃಂಗೇರಿ ಜಗದ್ಗುರು ಭಾರತಿತೀರ್ಥ ಸ್ವಾಮೀಜಿ ಅವರನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಮುನ್ನಾ ಹಜರ್ ಎಂಬಾತ ಅವಹೇಳನ ಮಾಡಿದ. ಅನಂತರ ಆತನನ್ನು ಚಿಕ್ಕಮಗಳೂರು ಪೊಲೀಸರು ಧಾರವಾಡ ಸಮೀಪದ ನವಲೂರಿನಲ್ಲಿ ಬಂಧಿಸಿದ್ದೂ ಆಗಿದೆ. ಈ ಘಟನೆಯನ್ನು ಹಿಂದು ಸಂಘಟನೆಗಳು ವ್ಯಾಪಕವಾಗಿ ಖಂಡಿಸಿದವು. ಆದರೆ ಯಾವೊಬ್ಬ ಎಡಪಂಥೀಯ ಬುದ್ಧಿಜೀವಿಯೂ ಇದನ್ನು ಖಂಡಿಸುವ ಗೋಜಿಗೆ ಹೋಗಿಲ್ಲ. ಒಬ್ಬ ಮೌಲ್ವಿಗೆ ಅಥವಾ ಇಮಾಂಗೆ ಫೇಸ್ಬುಕ್ನಲ್ಲಿ ಇಂತಹದೇ ಅವಮಾನ ಆಗಿದ್ದರೆ ಪ್ರಗತಿಪರರ ದಂಡೇ ಅದನ್ನು ಖಂಡಿಸಲು ಟೊಂಕಕಟ್ಟಿ ನಿಲ್ಲುತ್ತಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಖಂಡನಾ ಸಭೆ ನಡೆಯುತ್ತಿತ್ತು.
ಆದರೆ ಮುಸಲ್ಮಾನ ಬಂಧುಗಳು ಮಾತ್ರ ಈ ಘಟನೆ ನಡೆದ ತಕ್ಷಣ ಶೃಂಗೇರಿ ಜಗದ್ಗುರುಗಳ ನಿವಾಸಕ್ಕೆ ತೆರಳಿ, ಯಾರೋ ಕಿಡಿಕೇಡಿ ಮಾಡಿರುವ ಈ ಕೃತ್ಯಕ್ಕೆ ವಿಷಾದ ಸೂಚಿಸಿದ್ದಾರೆ. ಶೃಂಗೇರಿ ಶ್ರೀಗಳು ಕೂಡ ಮುಸಲ್ಮಾನ ಬಂಧುಗಳಿಗೂ ಶ್ರೀಮಠಕ್ಕೂ ಅನಾದಿ ಕಾಲದಿಂದಲೂ ಉತ್ತಮ ಬಾಂಧವ್ಯವಿದೆ ಎಂದು ಮುಸಲ್ಮಾನ ಬಂಧುಗಳಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ನ.14ರಂದು ಇಂಗ್ಲೆಂಡ್ನ ಲ್ಯಾಂಬೆತ್ ನಗರದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಿದ ಸುದ್ಧಿ ಎಡಪಂಥೀಯ ಮಾಧ್ಯಮಗಳಿಗೆ ಒಂದು ಮಹತ್ವದ ವಿಷಯವೇ ಆಗದಿದ್ದುದು ಎಂತಹ ವಿಪರ್ಯಾಸ. ಹುಚ್ಚ ವೆಂಕಟ್ ಎಂಬ ಮತಿಹೀನ ವ್ಯಕ್ತಿಯ ಹೇಳಿಕೆಗಳಿಗೆ ಮುಖಪುಟದಲ್ಲಿ ಪ್ರಚಾರ ನೀಡುವ ಮಾಧ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ, ಗೌರವ ತರುವ ಈ ಸುದ್ಧಿಯನ್ನು ಮಾತ್ರ ಬೇಕೆಂದೇ ಗೌಣವಾಗಿಸಿದವು. ಪತ್ರಿಕೆಯ ಒಳಪುಟದಲ್ಲಿ ಕಂಡೂ ಕಾಣದಂತೆ ಈ ಸುದ್ಧಿ ಪ್ರಕಟವಾಯಿತು. ಹಿಂದು ಹೆಸರನ್ನೇ ಇಟ್ಟುಕೊಂಡಿರುವ ಖಿhe ಊiಟಿಜu ಇಂಗ್ಲಿಷ್ ಪತ್ರಿಕೆ ಮೋದಿ, ಅಮಿತ್ ಷಾ ವಿರುದ್ಧದ ಟೀಕೆಗಳಿಗೆ ಮೊದಲ ಪುಟದಲ್ಲೇ ಆದ್ಯತೆ ನೀಡುತ್ತದೆ. ಆದರೆ ಲ್ಯಾಂಬೆತ್ ನಗರದಲ್ಲಿ ಬಸವೇಶ್ವರರ ಪ್ರತಿಮೆಯ ಅನಾವರಣ ಸುದ್ಧಿಗೆ ಮಾತ್ರ ಒಳಪುಟದಲ್ಲಿ ಜಾಗ ಮೀಸಲಾಗಿರಿಸುತ್ತದೆ! ಖಿhe ಊiಟಿಜu ಪತ್ರಿಕೆಯ ಸಹಿಷ್ಣುತಾಭಾವ ಯಾವ ಮಟ್ಟದ್ದು ಎಂಬುದು ಇದೊಂದರಿಂದಲೇ ಅಳೆಯಬಹುದು.
ಐಸಿಸ್ ಉಗ್ರರು ಯುರೋಪ್ ದೇಶಗಳನ್ನು ಗುರಿಯಾಗಿಟ್ಟುಕೊಂಡಿರುವಂತೆ ಇಲ್ಲಿ ನಮ್ಮ ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐನಂತಹ ಮುಸ್ಲಿಂ ಸಂಘಟನೆಗಳು ಕರಾವಳಿ ಜಿಲ್ಲೆಗಳು ಹಾಗೂ ಕೊಡಗನ್ನು ಗುರಿಯಾಗಿಟ್ಟುಕೊಂಡು ರಹಸ್ಯ ಕಾರ್ಯಾಚರಣೆ ನಡೆಸುತ್ತಿವೆ. ಟಿಪ್ಪು ಜಯಂತಿಯಂದು ಮಡಿಕೇರಿಯಲ್ಲಿ ನಡೆದ ಕುಟ್ಟಪ್ಪ ಹತ್ಯೆ ಇದಕ್ಕೊಂದು ನಿದರ್ಶನ. ಯಾವುದೇ ಪ್ರಚೋದನೆ ಇಲ್ಲದೆ ದಿಢೀರನೆ ಇಂತಹದೊಂದು ಘಟನೆ ನಡೆಯಲು ಸಾಧ್ಯವಿಲ್ಲ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವುದು ಸ್ಪಷ್ಟ. ಸಾಕಷ್ಟು ದಿನಗಳಿಂದಲೇ ತಯಾರಿ ನಡೆದಿತ್ತು. ಎಲ್ಲೆಡೆ ಇದಕ್ಕಾಗಿ ರಹಸ್ಯ ಕಾರ್ಯಾಚರಣೆ, ಮೀಟಿಂಗ್ಗಳೂ ನಡೆದಿದ್ದವು. ಸರ್ಕಾರದ ಗುಪ್ತಚರ ಇಲಾಖೆಯ ಗಮನಕ್ಕೆ ಮಾತ್ರ ಇದು ಏಕೆ ಬರಲಿಲ್ಲ? ಅಥವಾ ಗಮನಕ್ಕೆ ಬಂದಿದ್ದರೂ ಅಲಕ್ಷ್ಯ ವಹಿಸಲಾಯಿತೇ? ಸರ್ಕಾರವೇ ಉತ್ತರಿಸಬೇಕಾದ ಪ್ರಶ್ನೆ ಇದು.
ಜಗತ್ತಿನಾದ್ಯಂತ ಪ್ರಬಲಶಕ್ತಿ ಪಡೆದುಕೊಳ್ಳುತ್ತಿರುವ ಐಸಿಸ್ ಸಂಘಟನೆಗೆ ಭಾರತದಿಂದಲೂ ಸಾಕಷ್ಟು ಸಂಖ್ಯೆಯು ಮುಸ್ಲಿಮರು ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಿಂದ ಹೆಚ್ಚುಸಂಖ್ಯೆಯ ಮುಸ್ಲಿಂ ಯುವಕರು ಸೇರುತ್ತಿದ್ದಾರೆನ್ನುವುದು ಇನ್ನಷ್ಟು ಆತಂಕದ ಸಂಗತಿ. ಭಾರತದ ಪ್ರಜ್ಞಾವಂತ ಮುಸ್ಲಿಮರು ಈ ವಿದ್ಯಮಾನದ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ. ಮೌಲ್ವಿಗಳು, ಇಮಾಂಗಳು ಎಂದಿನಂತೆ ಮತಾಂಧತೆಯಲ್ಲೇ ಮುಳುಗಿದ್ದರೆ ಅವರಿಗೂ ತೊಂದರೆ ತಪ್ಪಿದ್ದಲ್ಲ. ಏಕೆಂದರೆ ಐಸಿಸ್ಗೆ ಸೇರುವ ಮತಾಂಧ ಯುವಕರು ಮುಂದೊಂದು ದಿನ ಭಾರತದ ಮೇಲೂ ದಾಳಿ ನಡೆಸುವುದು ನಿಶ್ಚಿತ. ಆಗ ಆ ದಾಳಿಯಲ್ಲಿ ಇಲ್ಲಿಯ ಮುಸ್ಲಿಮರೂ ಸಾಯಬಹುದು. ಮತಾಂಧತೆಗೆ, ಭಯೋತ್ಪಾದನೆಗೆ ದೇಶ, ಜಾತಿ, ಬಾಂಧವರು ಇತ್ಯಾದಿ ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಅದು ಯಾರನ್ನು ಬೇಕಾದರೂ ಆಹುತಿ ಪಡೆದುಕೊಳ್ಳಬಹುದು.
ದೇಶದಾದ್ಯಂತ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ನೆಪವೊಡ್ಡಿ ಪ್ರಶಸ್ತಿ ವಾಪಸಿ ಅಭಿಯಾನ ನಡೆಸುತ್ತಿರುವ ಸಾಹಿತಿಗಳ ವಿರುದ್ಧವೇ ವಾಪಸಿ ಅಭಿಯಾನ ಶುರುವಾಗಿರುವುದು ಇನ್ನೊಂದು ಹೊಸ ಬೆಳವಣಿಗೆ. ಪ್ರಶಸ್ತಿ ಹಿಂದಿರುಗಿಸುವ ಸಾಹಿತಿಗಳ ಪುಸ್ತಕಗಳನ್ನು ಅವರಿಗೇ ಹಿಂದಿರುಗಿಸುವ ವಿನೂತನ ಅಭಿಯಾನ ಇದು. ಸಾಹಿತಿಗಳಿಗೆ ಸಾಹಿತಿಗಳಿಂದಲೇ ತಿರುಮಂತ್ರ. ಮೊದಲ ಹಂತದಲ್ಲಿ ಸಾಹಿತಿ ಅಶೋಕ್ ವಾಜಪೇಯಿ ಅವರಿಗೆ ಸುಮಾರು 20 ಸಾಹಿತಿಗಳು ಹಾಗೂ ಓದುಗರ ತಂಡವೊಂದು ಪುಸ್ತಕಗಳನ್ನು ವಾಪಸ್ ಮಾಡಿದೆ. ಈ ಹೊಸ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಆದರೆ ಇದು ಸೇಡಿನ ಅಭಿಯಾನವಲ್ಲ, ಬದಲಿಗೆ ಸೌಹಾರ್ದಯುತ ಅಭಿಯಾನ. ಪ್ರಶಸ್ತಿಯನ್ನು ಲೇಖಕರಿಗಾಗಿ ನೀಡಿದ್ದಲ್ಲ, ಅವರ ಸಾಹಿತ್ಯವನ್ನು ಓದುಗರು ಮೆಚ್ಚಿದ್ದ ಕಾರಣಕ್ಕಾಗಿ ನೀಡಿದ್ದು. ಹೀಗಾಗಿ ಪ್ರಶಸ್ತಿಯನ್ನು ವಾಪಸ್ ಮಾಡುವುದರಿಂದ ಓದುಗರಿಗೆ ಅವಮಾನ ಮಾಡಿದಂತೆ ಎಂದು ಅಭಿಯಾನದ ಆಯೋಜಕ ವಿನೀತ್ ಪಾಂಡೆಯವರ ಹೇಳಿಕೆ ಪ್ರಶಸ್ತಿ ವಾಪಸಿ ಸಾಹಿತಿಗಳಿಗೆ ಒಂದು ಎಚ್ಚರಿಕೆಯ ಗಂಟೆಯೇ ಸರಿ. ಇನ್ನಾದರೂ ಈ ಮಂದಿ ಅಸಹಿಷ್ಣುತೆ ಕುರಿತು ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಅಸಹಿಷ್ಣುತೆ ಇರುವುದು ಭಾರತದಲ್ಲಲ್ಲ. ಹಿಂದುಗಳಲ್ಲೂ ಅಲ್ಲ. ಅಸಹಿಷ್ಣುತೆ ಎಲ್ಲಿದೆ, ಹೇಗಿದೆ, ಯಾರಲ್ಲಿದೆ ಎಂಬುದು ಈಗ ಜಗತ್ತಿಗೇ ವೇದ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.