ಪುತ್ತೂರು: ಕೊಂಕಣಿ ಒಂದು ಸಮೃದ್ದ ಭಾಷೆಯಾಗಿದ್ದು, ಉತ್ತಮ ಇತಿಹಾಸ ಹೊಂದಿದೆ. ಈ ಸಮುದಾದಯದ ಜನ ಕರ್ನಾಟಕ ಕರಾವಳಿಯ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಹೇಳಿದರು.
ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಫಿಲೋಮಿನಾ ಕಾಲೇಜಿನ ಸಿಲ್ವರ್ ಜುಬಿಲಿ ಸ್ಮಾರಕ ಸಭಾಂಗಣದಲ್ಲಿ ನಡೆದ ಕೊಂಕಣಿ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಉತ್ತರ ಮಲಬಾರ್ನಿಂದ ಗೋವಾ ತೀರದವರೆಗೆ ಹಬ್ಬಿರುವ ಕೊಂಕಣ ಕರಾವಳಿಯಲ್ಲಿ ಕೊಂಕಣಿ ಪ್ರಧಾನ ಭಾಷೆಯಾಗಿದ್ದು, ಸುಮಾರು 40 ಕ್ಕಿಂತಲೂ ಅಧಿಕ ಸಮುದಾಯ ಈ ಭಾಷೆ ಮಾತನಾಡುತ್ತಿದ್ದಾರೆ. ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಕೊಂಕಣಿ ಸಮುದಾಯಗಳ ಕೊಡುಗೆ ಅನನ್ಯ ಎಂದರು.
ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ರಿತೇಶ್ ರೋಡ್ರಿಗಸ್ ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ “ಕೊಂಕಣಿ ಸಿರಿ ಸಂಪದ’ದ ಜುಲೈ- ಸೆಪ್ಟೆಂಬರ್ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ನಿಟ್ಟಿನಲ್ಲಿ ಅಕಾಡೆಮಿ ಮಹತ್ವದ ಕೆಲಸ ಮಾಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೊಂಕಣಿ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ ಎಂದರು. ಇಂದಿನ ಆಧುನಿಕ ಕಾಲದಲ್ಲಿ ಮಕ್ಕಳು ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ತುತ್ತಾಗಿದ್ದಾರೆ. ರಕ್ತದಲ್ಲಿ ಕೊಂಕಣಿ ಸಂಸ್ಕೃತಿ ಹೊಂದಿರುವ ಮಕ್ಕಳು ವ್ಯಾವಹಾರಿಕವಾಗಿ ಇಂಗ್ಲೀಷ್ ಬಳಸಿದರೂ ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗದಂತೆ ತಡೆಯುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಪೂರಕ ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ತುಳು, ಕೊಂಕಣಿ, ಬ್ಯಾರಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ನಾಡಾದ ಕರಾವಳಿ ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೋ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ನವೀನ್ ಸ್ಟೀಫನ್ ವೇಗಸ್, ಶಿಕ್ಷಣ ಸಂಯೋಜಕ ಲೋಕಾನಂದ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಯ್ ಕ್ಯಾಸ್ತೆಲಿನೋ ಸ್ವಾಗತಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ದೇವದಾಸ ಪೈ ವಂದಿಸಿದರು. ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಮುಖ್ಯಸ್ಥ ಚಿದಾನಂದ ಕಾಮತ್ ಕಾಸರಗೋಡು ಮತ್ತು ಸುಲತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.