ಮಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾದರೂ ಇನ್ನೂ ನಮ್ಮ ರೈತರಿಗೆ ತಮ್ಮ ಜಮೀನುಗಳ ಪಹಣಿ (ಆರ್.ಟಿ.ಸಿ.) ಸಮರ್ಪಕವಾಗಿ ಸಿಕ್ಕಿಲ್ಲ, ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕಂದಾಯ ಅದಾಲತ್ಗಳನ್ನು ಮಾಡುವ ಮೂಲಕ ರೈತರ ಮನೆಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸುವ ಮೂಲಕ ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ರೂ.10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ 1.62 ಕೋಟಿ ರೈತರಿಗೆ ಆರ್.ಟಿ.ಸಿ. ನೀಡಬೇಕಿದ್ದು, ಈಗಾಗಲೇ 7711 ಕಂದಾಯ ಅದಾಲತ್ಗಳ ಮೂಲಕ 7,94,000 ರೈತರ ಮನೆ ಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸಲಾಗಿದೆ, ಇದೇ ರೀತಿ ಪೋಡಿ ಕೆಲಸ ಬಾಕಿ ಇದ್ದು, ಪೋಡಿ ಕೆಲಸ ನಿರ್ವಹಿಸಲು ಸರ್ವೇಯರ್ಗಳ ಕೊರತೆ ಇತ್ತು ,ಸರ್ಕಾರ ಪೋಡಿ ಕೆಲಸ ನಿರಂತರವಾಗಿ ನಡೆದು ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 1769 ಸರ್ವೇಯರ್ಗಳನ್ನು ನೇಮಕ ಮಾಡಿಕೊಂಡು, ಅವರಿಗೆ ಸೂಕ್ತ ತರಬೇತಿ ನೀಡುತ್ತಿದ್ದು, ನಿಗದಿತ ಕಾಲ ಮಿತಿಯಲ್ಲಿ ರಾಜ್ಯದಲ್ಲಿ ಪೋಡಿ ಕಾರ್ಯ ಪೂರ್ಣಗೊಳಿಸಲು ಸಂಕಲ್ಪಿಸಿದೆ. ಈ ನಿಟ್ಟಿನಲ್ಲಿ ಇನ್ನೂ 720 ಸರ್ವೇಯರ್ಗಳನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವರು ಈ ಸಂಧರ್ಭದಲ್ಲಿ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು 3705 ಪಿಂಚಿಣಿ ಅದಾಲತ್ಗಳ ಮೂಲಕ 1,39,000 ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯಗಳನ್ನು ವಿತರಿಸಲಾಗಿದೆ, ಪ್ರತಿ ವರ್ಷ ರಾಜ್ಯ ಸರ್ಕಾರ ರೂ.1600 ಕೋಟಿಗಳನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ವೆಚ್ಚ ಮಾಡುತ್ತಿದೆ . ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರಕಲಿ ಎಂಬುದೇ ಉದ್ದೇಶ ಅಂತ್ಯೋದಯದಿಂದ ಸರ್ವೋದಯವೇ ಸರ್ಕಾರದ ಗುರಿ ಎಂದು ಸಚಿವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನುವಹಿಸಿದ್ದ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಕೆ.ವಸಂತ ಬಂಗೇರ ಅವರು ಮಾತನಾಡಿ ರಾಜೀವಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಅನ್ವಯ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ 5000ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, ತಾಲೂಕಿನ ನಕ್ಸಲ್ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಹೆಚ್ಚುವರಿ ರೂ.5ಕೋಟಿಗಳನ್ನು ಬಿಡುಗಡೆ ಮಾಡುವಂತೆ ಸಚಿವರಲ್ಲಿ ವಿನಂತಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ,ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ಪಾಲೇದು,ಪಟ್ಟಣ ಪಂಚಾಯತ್ ಅಧ್ಯಕ್ಷ ಮುಸ್ತರ್ ಜನ್ ಮೆಹಬೂಬ್ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.