
ಬೆಂಗಳೂರು: ಪಾಕಿಸ್ತಾನ, ಬಾಂಗ್ಲಾ ಪ್ರಜೆಗಳು ನಮ್ಮ ಮತದಾರರ ಪಟ್ಟಿಗೆ ಸೇರಿದರೆ ಅದು ದೇಶದ ಭದ್ರತೆಗೆ ಅಪಾಯಕಾರಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಕಳ್ಳ ಓಟುಗಳನ್ನು ಸೇರಿಸಲು ಅವಕಾಶ ನೀಡಬಾರದು. ಪಾಕಿಸ್ತಾನ, ಬಾಂಗ್ಲಾ ದೇಶದವರು ಬಹಳಷ್ಟು ಜನರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ಈ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ಖಾಯಂ ನಾಗರಿಕರಾಗುತ್ತಾರೆ. ಇದು ದೇಶದ ಭದ್ರತೆಗೆ ಅಪಾಯಕಾರಿ ಎಂದು ತಿಳಿಸಿದರು. ಇದರ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಕಾರ್ಯಾಗಾರದಲ್ಲಿ ಚರ್ಚೆ ಆಗಿದೆ. ನಾನು ಕೂಡ ಪಾಲ್ಗೊಂಡಿದ್ದೇನೆ ಎಂದರು.
ನಿನ್ನೆ ಸಿದ್ದರಾಮಯ್ಯನವರು ನಾನು ಸಮಾಜವಾದಿ, ಜಾತಿವಾದಿ ಅಲ್ಲ; ಕುಟುಂಬವಾದಿ ಅಲ್ಲ ಎಂದು ದೊಡ್ಡ ಭಾಷಣ ಮಾಡಿದ್ದಾರೆ. ನನ್ನ ಮಗನನ್ನೂ ಸ್ವಲ್ಪ ನೋಡ್ಕೊಳ್ರಿ ಎಂದಿದ್ದಾರೆ. ಇಷ್ಟು ದಿನ ಇವರನ್ನು ನೋಡಿಕೊಂಡಿದ್ದಾಗಿದೆ. ಇನ್ನು ಇವರ ಮಗನನ್ನೂ ನೋಡಿಕೊಳ್ಳಬೇಕು. ಇನ್ನೊಂದು ಆರು ತಿಂಗಳ ಬಳಿಕ ನನ್ನ ಮೊಮ್ಮಗನನ್ನೂ ನೋಡಿಕೊಳ್ರಿ ಎಂದರೆ, ರಾಜಕೀಯ ವ್ಯವಸ್ಥೆಯಲ್ಲಿ ಇದು ರಾಜರ ಆಡಳಿತವೇ ಎಂದು ಪ್ರಶ್ನಿಸಿದರು.
ಹಿಂದೆ ರಾಜರು ನಾನಾದ ಬಳಿಕ ನನ್ನ ಮಗ ಉತ್ತರಾಧಿಕಾರಿ, ಯುವರಾಜ ಎನ್ನುತ್ತಿದ್ದರು. ಈಗ ರಾಜ ಯುವರಾಜನ ಪಟ್ಟಾಭಿಷೇಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಡಾ. ಅಂಬೇಡ್ಕರ್ ಅವರು ಈ ರಾಜರ ಆಡಳಿತ ರದ್ದು ಮಾಡಿ ಮತದಾನ- ಪ್ರಜಾಪ್ರಭುತ್ವ ವ್ಯವಸ್ಥೆ ತಂದರು. ಡಾ. ಅಂಬೇಡ್ಕರ್ ಅವರ ತತ್ವಕ್ಕೆ ಸಿದ್ದರಾಮಯ್ಯನವರು ತಿಲಾಂಜಲಿ ಇಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ; ಮತದಾನದ ಮೂಲಕ ಗೆದ್ದು ಬರಬೇಕು; ಅದನ್ನು ಬಿಟ್ಟು ನನ್ನ ಮಗನನ್ನು ಬೆಳೆಸಿ; ಮೊಮ್ಮಗನನ್ನು ಬೆಳೆಸಿ ಎನ್ನುವುದು ಡಾ. ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಅಪಚಾರ ಎಂದು ತಿಳಿಸಿದರು.
ಎಲ್ಪಿಜಿ ಸಿಲಿಂಡರ್ ದುರುಪಯೋಗ ತಡೆಗೆ ಎಸ್ಮಾ ಜಾರಿಗೊಳಿಸಲಾಗಿದೆ. ಕಾಳಸಂತೆಯನ್ನು ತಡೆಗಟ್ಟುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಇದು ಯುದ್ಧದ ಸಂದರ್ಭ. ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಿದ್ದರಾಮಯ್ಯನವರು ಯುದ್ಧದ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಗ್ಯಾಂಗ್ ಪ್ರತಿದಿನ ಡಿನ್ನರ್ ಮಾಡಿಸಲು ಆದೇಶ ನೀಡಿದೆಯಂತೆ. ಇದು ನನಗಿರುವ ಮಾಹಿತಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ರಾಜ್ಯದ ಜನರು ಗೊಜ್ಜನ್ನ, ಅನ್ನ ಸಾಂಬಾರ್ ತಿನ್ನುತ್ತಿದ್ದಾರೋ ಗೊತ್ತಿಲ್ಲ; ಈ ಡಿನ್ನರಂತೂ ಸಕಲ ಪದಾರ್ಥ ಸಿಗುವಂತೆ ಮಾಡುತ್ತಿದ್ದಾರೆ. ಇದು ಡಿನ್ನರ್ ಪಾರ್ಟಿ ಸರಕಾರ ಎಂದು ಆಕ್ಷೇಪಿಸಿದರು. ಇವರಿಗೆ ಜನರ ಕಷ್ಟಗಳ ಬಗ್ಗೆ ಗಮನವೇ ಇಲ್ಲ ಎಂದು ದೂರಿದರು. ಬಜೆಟ್ ಸರಿ ಇಲ್ಲವೆಂದು ಕಾಂಗ್ರೆಸ್ಸಿನವರೆಲ್ಲ ಲಾಂಜ್ನಲ್ಲಿ ಹೇಳುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


