
ಬೆಂಗಳೂರು: ನಿನ್ನೆ ಮಂಡಿಸಿದ ರಾಜ್ಯ ಬಜೆಟ್ ನ ಮೂಲಕ ಇಡೀ ರಾಜ್ಯದ ಜನರಿಗೆ ಮೂಗಿಗೆ ತುಪ್ಪ ಸವರುವುದು ಉಚಿತ, ತಲೆ ಮೇಲೆ ಸಾಲ ಎಲ್ಲರ ಖಚಿತ, ರಾಜ್ಯದ ಜನರಿಗೆ ಸಂಕಷ್ಟ ನಿಶ್ಚಿತ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರದ 2026-27ರ ಆಯವ್ಯಯ ಪತ್ರವನ್ನು ನಿನ್ನೆ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವ ಸಿದ್ದರಾಮಯ್ಯನವರು ಮಂಡಿಸಿದ್ದಾರೆ ಎಂದ ಅವರು, ರಾಜ್ಯ ಸರಕಾರವು ಉಚಿತ, ಖಚಿತ, ನಿಶ್ಚಿತ ಎಂಬ ಘೋಷವಾಕ್ಯದಡಿ ಅಧಿಕಾರಕ್ಕೆ ಬಂದಿತ್ತು ಎಂದು ಗಮನ ಸೆಳೆದರು.
ಪರಿಶಿಷ್ಟ ಜಾತಿ-ವರ್ಗಗಳಿಗೆ ವಿಶೇಷಗಳಿವೆ. ಅವರಿಗೆ ಘೋಷಣೆಗಳು ಉಚಿತ, ದೋಖಾ ಖಚಿತ, ನಂಬಿದವರ ಸರ್ವನಾಶ ನಿಶ್ಚಿತ ಎಂದು ವಿಶ್ಲೇಷಿಸಿದರು. ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕÀ ಪರಿಶಿಷ್ಟ ಜಾತಿ-ವರ್ಗಗಳಿಗೆ ಎಸ್ಇಪಿ, ಟಿಎಸ್ಪಿ ಅಡಿ ಎಷ್ಟು ಹಣ ಮೀಸಲಿಟ್ಟಿದ್ದರೋ, ಅದರ ವಿವರ ನೀಡುವುದಾಗಿ ಹೇಳಿದರು. 2023-24ರಲ್ಲಿ 30,930 ಕೋಟಿ ಹಣ ಮೀಸಲಿಟ್ಟಿದ್ದರು. 2024-25ರಲ್ಲಿ 39,122 ಕೋಟಿ ಇಟ್ಟಿದ್ದರು. 2025-26ರಲ್ಲಿ 42,017 ಕೋಟಿ, ಈ ಬಾರಿ 44,632 ಕೋಟಿ ಇಟ್ಟಿದ್ದಾಗಿ ಘೋಷಿಸಿದ್ದಾರೆ.
4 ವರ್ಷಗಳಲ್ಲಿ 1,56,701 ಕೋಟಿ ರೂ. ಕೊಟ್ಟ ಘೋಷಣೆ ಮಾಡಿದ್ದಾರೆ. ಜನರು ಬಹಳ ಖುಷಿ ಆಗಬಹುದು. ಇದರಲ್ಲಿ ಶೇ 50 ಹಣವನ್ನು 7 ಸಿ ಅಡಿಯಲ್ಲಿ 78,350 ಕೋಟಿ ರೂಪಾಯಿಯನ್ನು ಪಿಡಬ್ಲ್ಯುಡಿ, ನೀರಾವರಿ ಮತ್ತಿತರ ಇಲಾಖೆಗಳಿಗೆ ಹಂಚಿದ್ದಾರೆ. ಉಳಿದ 78,350 ಕೋಟಿ ರೂಪಾಯಿಯಡಿ ಗ್ಯಾರಂಟಿಗಳಿಗೆ 53,059 ಕೋಟಿ ಹಣವನ್ನು ಇವತ್ತಿನವರೆಗೆ ತೆಗೆದಿದ್ದಾರೆ ಎಂದು ಟೀಕಿಸಿದರು.
ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 25,291 ಕೋಟಿ
4 ವರ್ಷಗಳಲ್ಲಿ 1,56,701 ಕೋಟಿ ರೂ. ಪೈಕಿ ಎಸ್ಸಿ, ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 25,291 ಕೋಟಿ ಮಾತ್ರ ಉಳಿದಿದೆ. 1,56,701 ಕೋಟಿ ರೂ. ಘೋಷಿಸಿ ಈ ಜನಾಂಗಗಳ ಅಭಿವೃದ್ಧಿಗೆ ನೀವು ಕೊಟ್ಟದ್ದು ಕೇವಲ 25,291 ಕೋಟಿ ಆಗಿದ್ದರೆ, ಎಸ್ಇಪಿ ಟಿಎಸ್ಪಿ ಹಣವನ್ನು 1,56,701 ಕೋಟಿ ರೂ. ಎಂದು ಮುಖ್ಯಮಂತ್ರಿಗಳು ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.
ನಮ್ಮನ್ನು ಜನರ ಮುಂದೆ ಯಾಕೆ ಹರಾಜು ಹಾಕುತ್ತೀರಿ?
ಎಸ್ಸಿ, ಎಸ್ಟಿ ಜನಾಂಗಕ್ಕೆ ಸೇರಿದ ನಮ್ಮನ್ನು ಜನರ ಮುಂದೆ ಯಾಕೆ ಹರಾಜು ಹಾಕುತ್ತೀರಿ ಎಂದು ಕೇಳಿದರು. ಎಸ್ಸಿ, ಎಸ್ಟಿ ಜನಾಂಗಕ್ಕೆ ಯಾಕೆ ಇಷ್ಟೊಂದು ವಂಚನೆ ಮಾಡುತ್ತೀರಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಯಾಕೆ ಅವರಿಗೆ ಅಪಮಾನ ಮಾಡುತ್ತೀರಿ ಎಂದು ಕೇಳಿದರು.
ದಲಿತ ಹೋರಾಟಗಾರರು, ದಲಿತ ಸಂಘಟನೆಗಳು ಪ್ರಶ್ನಿಸಲು ಸಲಹೆ
ದಲಿತ ಹೋರಾಟಗಾರರು, ದಲಿತ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಂಡು ಸರಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಪ್ರಶ್ನೆ ಕೇಳದೇ ಇದ್ದಲ್ಲಿ ನಿಮ್ಮ ತಲೆಯ ಮೇಲೆ ನೀವೇ ಬಂಡೆ ಹಾಕಿಕೊಂಡಂತೆ ಎಂದು ತಿಳಿಸಿದರು. 2025-26ರಲ್ಲಿ ಅಂಬೇಡ್ಕರ್ ನಿಗಮಕ್ಕೆ 125 ಕೋಟಿ, ತಾಂಡಾ ನಿಗಮ- 75 ಕೋಟಿ, ಆದಿ ಜಾಂಬವ ನಿಗಮ- 62 ಕೋಟಿ, ಬೋವಿ ನಿಗಮ- 68 ಕೋಟಿ, ಸಫಾಯಿ ಕರ್ಮಚಾರಿ ನಿಗಮ- 31 ಕೋಟಿ, ವಾಲ್ಮೀಕಿ ನಿಗಮ- 156 ಕೋಟಿ, ಲಿಡ್ಕರ್ ನಿಗಮ- 43 ಕೋಟಿ ಸೇರಿ 562 ಕೋಟಿ ಕೊಡುವುದಾಗಿ ತಿಳಿಸಿದ್ದರು. 2025-26ರಲ್ಲಿ 42,017 ಕೋಟಿ ಪೈಕಿ 14 ಸಾವಿರ ಕೋಟಿ ಗ್ಯಾರಂಟಿಗೆ ಹೋಗಿದೆ. ಕೇವಲ 7 ಸಾವಿರ ಕೋಟಿ ಸಮಾಜ ಕಲ್ಯಾಣಕ್ಕೆ ಕೊಟ್ಟಿದ್ದೀರಿ. ಅದರಲ್ಲಿ ನಿಗಮಗಳಿಗೆ ನೀವು ಕೊಟ್ಟಿದ್ದು ಕೇವಲ 562 ಕೋಟಿ ಎಂದು ಗಮನ ಸೆಳೆದರು.
ಅಂಬೇಡ್ಕರ್ ನಿಗಮಕ್ಕೆ 50 ಕೋಟಿಯೂ ತಲುಪಿಲ್ಲ ಎಂದು ವಿವರಿಸಿದರು. ಶೇ 50ರಷ್ಟು ಹಣವೂ ತಲುಪಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಷ್ಟು ವಂಚನೆ ಮಾಡುತ್ತೀರಿ. ಎಷ್ಟು ಮೋಸ ಮಾಡುತ್ತೀರಿ? ಎಂದು ಕೇಳಿದರು.
ದಲಿತರನ್ನು ಬಿಟ್ಟು ಗ್ಯಾರಂಟಿಗೆ ಹಣ ಇಟ್ಟಿದ್ದೀರಾ?
ಮೊದಲ 3 ವರ್ಷ ಎಸ್ಇಪಿ, ಟಿಎಸ್ಪಿ ಹಣ ತೆಗೆದಿದ್ದೀರಿ. ಕಾಂಗ್ರೆಸ್ಸಿನ ಒಬ್ಬ ನಾಯಕರೂ ಅದನ್ನು ಪ್ರಶ್ನೆ ಮಾಡಿಲ್ಲ ಎಂದು ದೂರಿದರು. ಕೇವಲ ಬಿಜೆಪಿ ನಾಯಕರು ಮಾತ್ರ ಆರಂಭದಿಂದಲೇ ಹೋರಾಟ ಮಾಡುತ್ತ ಬಂದಿದ್ದಾರೆ. ಈ ಬಜೆಟ್ ಮಂಡಿಸುವುದಕ್ಕೆ ಮುಂಚೆ ಕ್ಯಾಬಿನೆಟ್ನಲ್ಲಿ ದಲಿತ ಸಮುದಾಯದ ಸಚಿವರು, ಶಾಸಕರು ಎಲ್ಲರೂ ಮುಖ್ಯಮಂತ್ರಿಗಳ ಗಮನ ಸೆಳೆದು ಯಾವುದೇ ಕಾರಣಕ್ಕೂ ಎಸ್ಇಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿಗೆ ಬಳಸಬಾರದು; ಇದು ತಪ್ಪಾಗುತ್ತಿದೆ, ಜನರು ಛೀಮಾರಿ ಹಾಕುತ್ತಿದ್ದಾರೆ. ಇದನ್ನು ತಪ್ಪಿಸಿ ಎಂದು ಕೇಳಿಕೊಂಡರು. ಅವರ ಮಾತಿಗೆ ಬೆಲೆ ಕೊಟ್ಟು ಹಣ ವರ್ಗಾವಣೆ ನಿಲ್ಲಿಸಬಹುದೆಂದು ಭಾವಿಸಿದ್ದೆವು ಎಂದರು. ಬಜೆಟ್ನಲ್ಲೇ 52 ಸಾವಿರ ಕೋಟಿಯನ್ನು ಗ್ಯಾರಂಟಿಗೆ ತೋರಿಸಿದ್ದರು. ಈ 52 ಸಾವಿರ ಕೋಟಿ ಯಾವ ಜಾತಿಗೆ, ಯಾವ ಧರ್ಮಕ್ಕೆ ಎಂಬುದಿಲ್ಲ; ಹಾಗಿದ್ದರೆ ದಲಿತರಿಗೆ ಅದರಲ್ಲಿ ಯಾಕೆ ಪಾಲಿರಲಿಲ್ಲ ಎಂದು ಕೇಳಿದರು. ನೀವು ದಲಿತರನ್ನು ಬಿಟ್ಟು ಗ್ಯಾರಂಟಿಗೆ ಹಣ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದರು.
52 ಸಾವಿರ ಕೋಟಿ ಹಣ ಪ್ರತ್ಯೇಕವಾಗಿ ನೀಡಿದ ಮೇಲೆ 14 ಸಾವಿರ ಕೋಟಿ ಮತ್ತೆ ಎಸ್ಸಿ, ಎಸ್ಟಿ ಮೊತ್ತದಿಂದ ಯಾಕೆ ತೆಗೆದಿರಿ? ಈ ಹಣ ಎಲ್ಲಿ ಹೋಗಿದೆ ಎಂದು ಕೇಳಿದರು.
ಈಗ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು..
ಏನು ಕೇಳಿದರೂ ಉತ್ತರ ಇಲ್ಲವೆಂದರೆ, ನೀವೆಲ್ಲ ಲೂಟಿ ಮಾಡಿ ತಿಂದಿದ್ದೀರಿ ಎನ್ನಬೇಕೇ ಎಂದು ಪ್ರಶ್ನಿಸಿದರು. ಇದರ ಕುರಿತು ಮುಖ್ಯಮಂತ್ರಿಗಳು ವಿವರ ನೀಡಿಲ್ಲ ಎಂದು ತಿಳಿಸಿದರು. ಈಗ ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದು ದಲಿತರಿಗೆ ತಾವು ಮಾಡುತ್ತಿರುವ ದೋಖಾ ಎಂದು ಆಕ್ಷೇಪಿಸಿದರು.
ಬಿಜೆಪಿ ಮುಖಂಡ ರುದ್ರಯ್ಯ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


