
ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಉದ್ಯಮಶೀಲತೆಯತ್ತ ಸೆಳೆಯುವ ಹಾಗೂ ಅವರಿಗೆ ಭವಿಷ್ಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಬೇಕಾಗುವ ಅಗತ್ಯ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಮಂಗಳೂರಿನಲ್ಲಿ ಫೆ.28ರಂದು ‘ಪ್ರೇರಣಾ-2026’ ಉದ್ಯಮಶೀಲತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನ ಎಸ್ಡಿಎಂ ಕಾನೂನು ಪದವಿ ಕಾಲೇಜಿನಲ್ಲಿ ಈ ಸಮಾವೇಶ ನಡೆಯಲಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ SC/ST ಯುವ ಸಮುದಾಯದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ಕನಸು, ಕೌಶಲ್ಯ, ಸಾಮರ್ಥ್ಯ ಹೊಂದಿರುವ ಅನೇಕ ಐಟಿಐ, ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅಂಥವರಿಗೆ ಉದ್ಯಮ ಸ್ಥಾಪಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಯೋಜನೆ-ಸವಲತ್ತುಗಳು ಲಭ್ಯವಿದೆ. ಈ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ, ಬ್ಯಾಂಕ್ನಿಂದ ಲಭ್ಯವಿರುವ ಸಾಲ-ಸೌಲಭ್ಯಗಳ ಬಗ್ಗೆ ಪ್ರೇರಣಾ ಸಮಾವೇಶದಲ್ಲಿ ಮಾರ್ಗದರ್ಶನ ನೀಡಲಾಗುವುದು. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯ ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ದ ಕನಸಿನಿಂದ ಪ್ರೇರಿತರಾಗಿ, ನಮ್ಮ ನೆಲದ ಉದ್ಯಮಶೀಲತೆಯ ಉತ್ಸಾಹಕ್ಕೆ ಮರುಜೀವ ನೀಡುವ ನಮ್ಮ ಹೆಮ್ಮೆಯ ಪ್ರಯತ್ನವಾಗಿರುವ ‘ಬೊಲ್ಪು’ ಮತ್ತು SC/ST ಅಧ್ಯಯನ ಹಾಗೂ ಅಭಿವೃದ್ಧಿ ಟ್ರಸ್ಟ್ ಸಹಯೋಗದೊಂದಿಗೆ ಈ ಪ್ರೇರಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಮ್ಮ ಊರಿನ ಯುವಕರು ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗದಾತರನ್ನಾಗಿ ರೂಪಿಸುವುದು ಈ ಸಮಾವೇಶದ ಪ್ರಮುಖ ಗುರಿ. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಎಸ್ ಸಿ- ಎಸ್ಟಿ ಸಮುದಾಯದ ವಿದ್ಯಾರ್ಥಿಗಳಲ್ಲಿಯೂ ಉದ್ಯಮಶೀಲತೆಯ ಮನೋಭಾವ ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಅವರ ಆಶಯದಂತೆ ಈ ಪ್ರೇರಣಾ ಉದ್ಯಮಶೀಲತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.
ಯುವ ಉದ್ಯಮಿಗಳ ಹೊಸ ಆಲೋಚನೆಗಳಿಗೆ ‘ಬೊಲ್ಪು’ ನೀಡುವ ಈ ಸಮಾವೇಶದ ಪ್ರಯೋಜನವನ್ನು ದಕ್ಷಿಣ ಕನ್ನಡದ ಎಲ್ಲ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಆ ಮೂಲಕ, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ದಕ್ಷಿಣ ಕನ್ನಡದ ಯಶಸ್ವಿ ಉದ್ಯಮಿಗಳಾಗಿ ಬೆಳೆಯುವುದಕ್ಕೆ ಇದೊಂದು ಅಮೂಲ್ಯ ಅವಕಾಶ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಈ ಪ್ರೇರಣಾ ಸಮಾವೇಶವನ್ನು ಮಂಗಳೂರು ವಿ.ವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಎಸ್ಡಿಎಂ ವಿದ್ಯಾ ಸಂಸ್ಥೆ ಸಿಇಒ ಪೂರಣ್ ವರ್ಮಾ, ಎಸ್ ಸಿ ಎಸ್ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ವಾದಿರಾಜ್ ಸಾಮರಸ್ಯ, ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿಜಿ ಶ್ರೀನಿವಾಸ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು 91414 41144 ಅಥವಾ 97431 20044 ಮೊಬೈಲ್ಗೆ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


