News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕ್ರಿಸ್ಮಸ್ ಹಬ್ಬ ಮತ್ತು ತ್ಯಾಜ್ಯ: ಆಘಾತ ಸೃಷ್ಟಿಸುವ ಸತ್ಯ

ನಾವೀಗ 2025ರ ಡಿಸೆಂಬರ್ ಅಂತ್ಯದಲ್ಲಿದ್ದೇವೆ, ಅಂದರೆ ಕ್ರಿಸ್‌ಮಸ್  ಹಬ್ಬದ ಋತು. ಮಿನುಗುವ ದೀಪಗಳು, ಬಗೆಬಗೆಯ ತಿಂಡಿತಿನಿಸುಗಳು ಮತ್ತು ರಾಶಿ ರಾಶಿ ಉಡುಗೊರೆಗಳ ಚಿತ್ರಣಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ನೃತ್ಯ ಮಾಡಲಾರಂಭಿಸಿವೆ. ಆದರೆ ಈ ಸಂತೋಷದ ಹಿಂದಿರುವ ಕರಾಳ ಸತ್ಯವೆಂದರೆ, ಕ್ರಿಸ್ಮಸ್ ಪ್ರಪಂಚದ ಅತ್ಯಂತ ಪರಿಸರ ವಿನಾಶಕಾರಿ ಹಬ್ಬಗಳಲ್ಲಿ ಒಂದು ಎಂಬುದು. ತುಂಬಿ ತುಳುಕುವ ತ್ಯಾಜ್ಯ ತೊಟ್ಟಿಗಳಿಂದ ಹಿಡಿದು ಕಡಿದು ಹಾಕಿದ ಮರಗಳು, ಎಸೆಯಲ್ಪಟ್ಟ ಪ್ಲಾಸ್ಟಿಕ್‌ಗಳ ದೊಡ್ಡ ಪರ್ವತಗಳು ಸಂತೋಷದಾಯಕ ಆಚರಣೆಯ ಹಿಂದಿನ ಕಹಿಯನ್ನು ಅನಾವರಣಗೊಳಿಸುತ್ತದೆ. ಒಲಿಂಪಿಕ್ ಗಾತ್ರದ ಈಜುಕೊಳಗಳನ್ನು ತುಂಬಿಸುವಷ್ಟು, ಭೂಮಿಯನ್ನು ಹಲವು ಬಾರಿ ಸುತ್ತುವಷ್ಟು ಅಥವಾ ಎವರೆಸ್ಟ್ ಪರ್ವತದಷ್ಟು ಎತ್ತರ ರಾಶಿ ಹಾಕುವಷ್ಟು ತ್ಯಾಜ್ಯವನ್ನು ಕ್ರಿಸ್‌ಮಸ್‌ ಹಬ್ಬವೊಂದೇ ಸೃಷ್ಟಿಸುತ್ತದೆ.

ಕಾಗದದ ರಾಶಿ: ಉಡುಗೊರೆಗಳಿಂದ ಮಾಲಿನ್ಯ ಸೃಷ್ಟಿ

ಗ್ರೀಟಿಂಗ್ ಕಾರ್ಡ್‌ಗಳು ಮತ್ತು ಪ್ಯಾಕ್‌ ಮಾಡಿದ ಉಡುಗೊರೆಗಳಿಲ್ಲದೆ ಕ್ರಿಸ್ಮಸ್ ಸಂಪೂರ್ಣವಾಗದು. ಆದರೆ ಇದಕ್ಕೆ ಬಳಸಲಾಗುವ ಕಾಗದದ ಪ್ರಮಾಣ ಮಾತ್ರ ಆಘಾತಕಾರಿಯಾಗಿದೆ! ಯುಕೆವೊಂದರಲ್ಲೇ ವಾರ್ಷಿಕ 1 ಬಿಲಿಯನ್ ಕಾರ್ಡ್‌ಗಳು ಮಾರಾಟವಾಗುತ್ತವೆ. ಆ ದೇಶದ ಪ್ರತಿ ವ್ಯಕ್ತಿಗೆ ಸರಾಸರಿ 17 ಕಾರ್ಡ್‌ಗಳನ್ನು ಕಳುಹಿಸುವಷ್ಟಿದೆ ಇದರ ಪ್ರಮಾಣ. ಆದರೆ ಆಚರಣೆಗಳ ನಂತರ ಇವೆಲ್ಲವೂ ಹೋಗಿ ಸೇರುವುದು ಕಸದ ತೊಟ್ಟಿಯನ್ನು. ಜಾಗತಿಕವಾಗಿ 33 ಮಿಲಿಯನ್ ಗಿಡಗಳು ಕೇವಲ ಕಾರ್ಡ್‌ಗಳಿಗಾಗಿ ಕಡಿದುಹಾಕಲ್ಪಡುತ್ತವೆ.

2024ರಲ್ಲಿ ಯುಕೆಯಲ್ಲಿ 108 ಮಿಲಿಯನ್ ರೋಲ್‌ಗಳಷ್ಟು ಉಡುಗೊರೆ ಸುತ್ತುವ ಕಾಗದಗಳು ತ್ಯಾಜ್ಯವಾಗಿದೆ. ಯುಎಸ್‌ಎಯಲ್ಲಿ ಇದರ ಪ್ರಮಾಣ ಎಷ್ಟಿದೆ ಎಂದರೆ ಪುನರ್ಬಳಕೆ ಮಾಡಿದರೆ ಸಾವಿರಾರು ಫುಟ್‌ಬಾಲ್ ಮೈದಾನಗಳಷ್ಟು ಕಾಗದವನ್ನು ಉಳಿಸುವಷ್ಟು.

ಉಡುಗೊರೆಗಳನ್ನು ಸುಂದರವಾಗಿ ಪ್ಯಾಕ್‌ ಮಾಡುವುದರಿಂದ ಸರಳ ವಸ್ತುಗಳನ್ನು ಆಕರ್ಷಣೀಯಗೊಳಿಸಬಹುದು, ಆದರೆ ನಂತರ ಅದು ತ್ಯಾಜ್ಯದ ಸಮುದ್ರವನ್ನೇ ಸೃಷ್ಟಿಸಿ ಬಿಡುತ್ತದೆ. ಯುಕೆಯಲ್ಲಿ ವಾರ್ಷಿಕ ಸುಮಾರು 365,000 ಕಿ.ಮೀ ಉಡುಗೊರೆಗಳನ್ನು ಸುತ್ತುವ ಕಾಗದ ಬಳಕೆಯಾಗುತ್ತದೆ. ಅಂದರೆ ಭೂಮಿಯ ಸುತ್ತಳತೆಯನ್ನು 9 ಬಾರಿ ಸುತ್ತುವಷ್ಟು! ಆಸ್ಟ್ರೇಲಿಯಾದಲ್ಲಿ ಇದರ ಪ್ರಮಾಣ 150,000 ಕಿ.ಮೀ. ಈ ಹೊಳಪುಳ್ಳ ಫಾಯಿಲ್ ಕಾಗದಗಳಲ್ಲಿ ಹೆಚ್ಚಿನವು ಪುನರ್ಬಳಕೆಯಾಗದು, ಶತಮಾನಗಳವರೆಗೆ ತ್ಯಾಜ್ಯ ತೊಟ್ಟಿಗಳಲ್ಲೇ ಇದು ಉಳಿದು ಬಿಡುತ್ತವೆ. 2024ರಲ್ಲಿ ಆಸ್ಟ್ರೇಲಿಯಾದಲ್ಲಿ $1 ಬಿಲಿಯನ್‌ಗಿಂತ ಹೆಚ್ಚು ಅನಾವಶ್ಯಕ ಉಡುಗೊರೆಗಳು ತ್ಯಾಜ್ಯಕ್ಕೆ ಹೋಗಿವೆ.

ತ್ಯಾಜ್ಯದ ತೊಟ್ಟಿಗಳಲ್ಲಿ ತುಂಬಿ ತುಳುಕುವ ಆಹಾರಗಳು

ಕ್ರಿಸ್ಮಸ್ ಮೃಷ್ಟಾನ್ನಗಳಿಗೆ ಪ್ರಸಿದ್ಧ, ಆದರೆ ಎಷ್ಟು ಪ್ರಮಾಣದಲ್ಲಿ ಆಹಾರ ತಯಾರಾಗುತ್ತದೆಯೋ ಅದರ ಅರ್ಧದಷ್ಟು ಆಹಾರ ಕಸದ ತೊಟ್ಟಿಯನ್ನು ಸೇರುತ್ತವೆ. ಯುಕೆಯಲ್ಲಿ ಹಬ್ಬದ ಋತುವಿನಲ್ಲಿ ತಿನ್ನಲು ಯೋಗ್ಯವೇ ಆಗಿರುವ ಸ್ಥಿತಿಯಲ್ಲಿನ  270,000 ಟನ್ ಆಹಾರವನ್ನು ತ್ಯಾಜ್ಯಕ್ಕೆ ಹಾಕಲಾಗುತ್ತದೆ. ಯುಎಸ್‌ಎಯಲ್ಲಿ ಹಬ್ಬದ ವೇಳೆ ಉತ್ಪತ್ತಿಯಾಗುವ ಆಹಾರ ತ್ಯಾಜ್ಯ 25 ಮಿಲಿಯನ್ ಟನ್‌ಗಳಿಗಿಂತಲೂ ಹೆಚ್ಚು. ಎಸೆಯಲಾದ ಆಹಾರ ಮೀಥೇನ್ ಅನಿಲ ಬಿಡುಗಡೆ ಮಾಡಿ ಹವಾಮಾನ ಬದಲಾವಣೆಯನ್ನು ವೇಗಗೊಳಿಸುತ್ತದೆ.

ಅಲಂಕರಿತ ಕ್ರಿಸ್ಮಸ್ ಟ್ರಿಗಳಿಗಾಗಿ ಧರೆಗುರುಳುತ್ತವೆ ಸಾವಿರಾರು ಮರಗಳು

ಕ್ರಿಸ್ಮಸ್ ಗಿಡವಿಲ್ಲದೆ ಹಬ್ಬ ಅಪೂರ್ಣ. ಆದರೆ ಜಾಗತಿಕವಾಗಿ ವಾರ್ಷಿಕ 120 ಮಿಲಿಯನ್ ಗಿಡಗಳು ಕಡಿದುಹಾಕಲ್ಪಡುತ್ತವೆ, 2-3 ಬಿಲಿಯನ್ ಕೆಜಿ CO₂ ಉತ್ಪಾದಿಸುತ್ತವೆ. ಯುಕೆಯಲ್ಲಿ 8 ಮಿಲಿಯನ್ ಗಿಡಗಳನ್ನು ಖರೀದಿಸಲಾಗುತ್ತದೆ ಜನವರಿ ವೇಳೆಗೆ ಇದರಿಂದ 12,000 ಟನ್ ತ್ಯಾಜ್ಯಸೃಷ್ಟಿಯಾಗುತ್ತದೆ. ಇನ್ನೊಂದು ಪ್ಲಾಸ್ಟಿಕ್ ಗಿಡಗಳು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಹೆಚ್ಚು ಮಾಡುತ್ತವೆ.

ದೀಪಗಳು, ಗ್ಯಾಜೆಟ್‌ಗಳು ಮತ್ತು ಪ್ಲಾಸ್ಟಿಕ್‌ಗಳು

ಫೇರಿ ದೀಪಗಳು ಹಬ್ಬಕ್ಕೆ ಮಾಂತ್ರಿಕತೆ ಸೇರಿಸುತ್ತವೆ, ಆದರೆ ಯುಕೆಯಲ್ಲಿ ಎಸೆಯಲಾದ ದೀಪಗಳು 70,000 ಮೈಲ್‌ಗಳಷ್ಟು ಪ್ರದೇಶದಲ್ಲಿ ವಿಸ್ತರಣೆಗೊಂಡಿವೆ. 2024ರಲ್ಲಿ 500 ಟನ್‌ಗಳಿಗಿಂತ ಹೆಚ್ಚು ದೀಪಗಳು ಇ-ತ್ಯಾಜ್ಯಕ್ಕೆ ಹೋಗಿವೆ. ಪ್ಲಾಸ್ಟಿಕ್ ತ್ಯಾಜ್ಯ 114,000 ಟನ್‌ಗಳು!

ಸುಸ್ಥಿರ ಕ್ರಿಸ್ಮಸ್‌ಗೆ ಕರೆ: ಪರಿಸರಕ್ಕೆ ಸ್ನೇಹಿ ಆಚರಣೆಯ ಆಶಯ

ಹಾಗಾದರೆ ಕ್ರಿಸ್ಮಸ್‌ ಅನ್ನು ಹೇಗೆ ಪರಿಸರ ಸ್ನೇಹಿಯನ್ನಾಗಿ ಪರಿವರ್ತಿಸಬಹುದು? ಡಿಜಿಟಲ್ ಕಾರ್ಡ್‌ಗಳು, ಪುನರ್ಬಳಕೆಯ ಉಡುಗೊರೆ ಕಾಗದಗಳು, ಪಾಟ್‌ನಲ್ಲಿ ಬೆಳೆಯುವ ಗಿಡಗಳು, ಸೆಕೆಂಡ್‌ಹ್ಯಾಂಡ್ ಉಡುಗೊರೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ. ಉಳಿದ ಆಹಾರವನ್ನು ದಾನ ಮಾಡಿ, ದೀಪಗಳನ್ನು ಪುನರ್ಬಳಕೆ ಮಾಡುವ ಮೂಲಕ ಹಬ್ಬವನ್ನು ಮಾಲಿನ್ಯ ಮುಕ್ತಗೊಳಿಸಬಹುದು. ಹಬ್ಬಗಳನ್ನು ಕೇವಲ ಸಂತೋಷಕ್ಕಾಗಿ ಆಚರಿಸಬೇಕೇ ಹೊರತು ತ್ಯಾಜ್ಯದ ಮೂಲಕ ಭವಿಷ್ಯವನ್ನು ಕತ್ತಲಿಗೆ ದೂಡಲು ಅಲ್ಲ. ಏಕೆಂದರೆ, ಮಾಲಿನ್ಯ ಮುಕ್ತ ಪರಿಸರವೇ ನಾವು ಈ ಭೂಮಿಗೆ ನೀಡುವ ಉತ್ತಮ ಉಡುಗೊರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top