ನವದೆಹಲಿ: ದೇಶದಲ್ಲಿ ಯುವಜನತೆಯನ್ನು ಅಡ್ಡದಾರಿಗೆ ಎಳೆಯುತ್ತಿರುವ ಬೆಟ್ಟಿಂಗ್, ಮನಿ ಗೇಮ್ಸ್ ಸೇರಿದಂತೆ ಹಣಕಾಸು ಆಧಾರಿತ ಎಲ್ಲ ಆನ್ಲೈನ್ ಮನಿ ಗೇಮಿಂಗ್ಸ್ ನಿಷೇಧಿಸುವುದಕ್ಕೆ ಹೊರ ತಂದಿರುವ ’ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ- 2025ʼನ್ನು ಸಂಸತ್ತು ಅಂಗೀಕರಿಸಿದೆ. ಆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯುವ ಸಮುದಾಯದ ಹಿತಕಾಪಾಡುವಲ್ಲಿ ದಿಟ್ಟ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಗೇಮಿಂಗ್ ನಿಯಂತ್ರಣ ಮಸೂದೆ ಅಂಗೀಕಾರವಾದ ಹಿನ್ನಲೆ ಪ್ರತಿಕ್ರಿಯಿಸಿರುವ ಸಂಸದರು, ಆನ್ ಲೈನ್ ಮನಿ ಗೇಮಿಂಗ್ ಜಾಲದೊಳಗೆ ಸಿಲುಕಿಕೊಂಡ ಸಾವಿರಾರು ಅಮಾಯಕರ ಬದುಕು ಬೀದಿಗೆ ಬಂದಿದೆ. ಪ್ರತಿನಿತ್ಯವೂ ಜನರು ಆನ್ಲೈನ್ ಗೇಮಿಂಗ್ ದುಷ್ಪಟಕ್ಕೆ ಬಲಿಯಾಗಿ ಹಣದ ಜತೆಗೆ ನೆಮ್ಮದಿಯನ್ನೂ ಕಳೆದುಕೊಂಡು ಒದ್ದಾಡುವ ಅತ್ಯಂತ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ, ಈ ಆನ್ಲೈನ್ ಜೂಜಾಟ, ಗೇಮಿಂಗ್ಸ್ ಗಂಭೀರತೆಯನ್ನು ಅರಿತು ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಕೇಂದ್ರ ಸರ್ಕಾರವು ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತಂದಿರುವುದು ಅತ್ಯಂತ ಸಮಯೋಚಿತ ಹಾಗೂ ತುರ್ತು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಯುವ ಸಮುದಾಯವನ್ನು ಈ ರೀತಿಯ ಮಾಯಾಜಾಲದ ದುಷ್ಪಟಗಳಿಂದ ಪಾರು ಮಾಡುವುದಕ್ಕೆ ಮಸೂದೆ ತಂದಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜನತೆ ಪರವಾಗಿ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.
ಯುವ ಸಮೂಹದ ಬದುಕನ್ನೇ ದುಸ್ತರಗೊಳಿಸಿದ್ದ ಈ ಆನ್ ಲೈನ್ ಮನಿ ಗೇಮಿಂಗ್ ನಿಷೇಧದಿಂದ ಕೋಟ್ಯಾಂತರ ಕುಟುಂಬಗಳು ಇನ್ನುಮುಂದೆ ನಿಟ್ಟುಸಿರು ಬಿಡುವಂತಾಗಿದೆ. ಅದರಲ್ಲೂ ಮನಿ ಗೇಮಿಂಗ್ ಹಾವಳಿಯಿಂದ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಯುವಜನತೆ ಹೆಚ್ಚು ಹಾನಿ ಅನುಭವಿಸುತ್ತಿದ್ದು ಕೇಂದ್ರ ಸರ್ಕಾರ ಈ ದಿಟ್ಟ ನಿರ್ಧಾರದಿಂದ ಇದಕ್ಕೆಲ್ಲಾ ಅಂಕುಶ ಹಾಕಿದಂತಾಗಿದೆ. ಏಕೆಂದರೆ, ಹಣಕಾಸು ಆಧಾರಿತ ಆನ್ಲೈನ್ ಗೇಮಿಂಗ್ಸ್ ವ್ಯಸನಕ್ಕೊಳಗಾದ ಜನರು ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಮನಿ ಗೇಮಿಂಗ್ನಲ್ಲಿ ಹಣ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿರುವ ಸಾಕಷ್ಟು ನಿದರ್ಶನಗಳಿವೆ. ಈ ಹಿನ್ನಲೆಯಲ್ಲಿ ಹಣಕಾಸು ಆಧಾರಿತ ಎಲ್ಲ ಆನ್ಲೈನ್ ಗೇಮ್ಗಳನ್ನು ಈ ಮಸೂದೆಯಲ್ಲಿ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಈ ರೀತಿ ಯುವ ಮನಸ್ಸುಗಳನ್ನು ಹಾಳುಮಾಡುವ ಮೋಸದಾಟಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದರು.
ಈ ಮಸೂದೆ ಪ್ರಕಾರ, ಆನ್ಲೈನ್ ಗೇಮ್ಗೆ ಸಂಬಂಧಿಸಿದ ಯಾವುದೇ ಹಣ ವರ್ಗಾವಣೆ ಮಾಡುವುದಕ್ಕೂ ಇನ್ನು ಬ್ಯಾಂಕ್ಗಳಿಗೆ ಅವಕಾಶವಿರುವುದಿಲ್ಲ. ಜತೆಗೆ, ಗೇಮಿಂಗ್ ಜಾಹೀರಾತು, ಪ್ರಮೋಷನ್ಸ್ಗಳಿಗೂ ಕಡಿವಾಣ ಹಾಕಲಾಗಿದೆ. ಈ ಹಿನ್ನಲೆಯಲ್ಲಿ ಇನ್ನುಮುಂದೆ ಯಾವುದೇ ರೀತಿ ಹಣ ವರ್ಗಾಯಿಸಿ ಆನ್ಲೈನ್ನಲ್ಲಿ ಆಟವಾಡಿ ಎಲ್ಲವನ್ನೂ ಕಳೆದುಕೊಳ್ಳುವುದಕ್ಕೂ ಅವಕಾಶ ನೀಡದಂತೆ ಅತ್ಯಂತ ಕಠಿಣ ನಿಯಮಗಳನ್ನು ಈ ಮಸೂದೆಯಲ್ಲಿ ರೂಪಿಸಲಾಗಿದೆ ಎಂದು ಸಂಸದ ಕ್ಯಾ. ಚೌಟ ತಿಳಿಸಿದ್ದಾರೆ.
ಇನ್ನೊಂದೆಡೆ ಈ ಮಸೂದೆಯಲ್ಲಿ ಇ-ಸ್ಪೋರ್ಟ್ಸ್ ಹಾಗೂ ಸೋಷಿಯಲ್ ಗೇಮ್ಸ್ಗಳನ್ನು ಉತ್ತೇಜಿಸುವುದಕ್ಕೂ ನಿರ್ಧರಿಸಲಾಗಿದೆ. ಈ ಮಸೂದೆ ಭಾರತದ ಡಿಜಿಟಲ್ ಪ್ರಯಾಣದಲ್ಲಿ ಒಂದು ನಿರ್ಣಾಯಕ ಹೆಜ್ಜೆಗುರುತಾಗಿದ್ದು, ಆ ಮೂಲಕ ನಮ್ಮ ದೇಶ ಗೇಮಿಂಗ್ನ ಸಕಾರಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವ ವೇದಿಕೆಯನ್ನೂ ಕಲ್ಪಿಸಲಿದೆ. ಭಾರತವನ್ನು ಜಾಗತಿಕವಾಗಿ ಸೃಜನಶೀಲ ಹಾಗೂ ಹೊಸ ಗೇಮಿಂಗ್ ಕ್ಷೇತ್ರದತ್ತ ಅಭಿವೃದ್ಧಿಪಡಿಸುವ ಗುರಿಯನ್ನೂ ಹೊಂದಿದೆ. ನಿರ್ದಿಷ್ಟ ನಿಯಮ ಮತ್ತು ಮಾನದಂಡಗಳ ಮೂಲಕ ಕೌಶಲ್ಯ ಆಧಾರಿತ ಕ್ರೀಡೆಗಳನ್ನು , ವೃತ್ತಿಪರ ಟೂರ್ನಮೆಂಟ್ ಗಳು, ಸಂಘಟಿತ ಸ್ಪರ್ಧೆಗಳು ಮತ್ತು ಗೇಮಿಂಗ್ ಗಳನ್ನು ಕ್ರೀಡೆ ಎಂದು ಪರಿಗಣಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದೆ. ಇದರೊಂದಿಗೆ ರಾಷ್ಟ್ರೀಯ ಆನ್ಲೈನ್ ಗೇಮಿಂಗ್ ಪ್ರಾಧಿಕಾರಕ್ಕೆ ಇದರ ನಿರ್ವಹಣೆ ಹೊಣೆಯನ್ನು ನೀಡಲಿದೆ. ಈ ಮಸೂದೆ ಮೂಲಕ ಆನ್ ಲೈನ್ ಗೇಮಿಂಗ್ ನಲ್ಲಿ ಹೊಸ ಶಕೆ ಮೂಡಲಿದ್ದು, ಜಾಗತಿಕ ಟೂರ್ನಿಗಳು ಮತ್ತು ಗೇಮರ್ ಗಳಿಗೆ ಹೆಚ್ಚಿನ ವೃತ್ತಿಪರ ಅವಕಾಶ ಸೃಷ್ಟಿಸಲಿದೆ ಎಂದು ಕ್ಯಾ. ಚೌಟ ಅವರು ಅಭಿಪ್ರಾಯಪಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.